ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಪ ದೋಷ ತಿದ್ದುವ ಸಂಶೋಧಕರ ಕೊರತೆ’

ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಲಕ್ಷ್ಮಣ ತೆಲಗಾವಿ
Last Updated 25 ಏಪ್ರಿಲ್ 2014, 6:57 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಚಿತ್ರದುರ್ಗದ ಇತಿಹಾಸ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಅವುಗಳಲ್ಲಿರುವ ಲೋಪ ದೋಷಗಳನ್ನು ಗುರುತಿಸಿ, ತಿದ್ದುಪಡಿ ಮಾಡಿ ನಿರೂಪಿಸುವಂತಹ ಸಂಶೋಧಕರ ಕೊರತೆ ಕಾಡುತ್ತಿದೆ’ ಎಂದು ಖ್ಯಾತ ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿ ಅಭಿಪ್ರಾಯಪಟ್ಟರು.

ನಗರದ ಐಎಂಎ ಸಭಾಂಗಣದಲ್ಲಿ ಪೂಜಾ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಇತಿಹಾಸ ಪ್ರಾಧ್ಯಾಪಕ ಲೆಫ್ಟಿನೆಂಟ್‌ ಡಾ.ಎಚ್‌.ಗುಡ್ಡದೇಶ್ವರಪ್ಪ ಅವರ ‘ಚಿತ್ರದುರ್ಗದ ಐತಿಹಾಸಿಕ ಸ್ಮಾರಕಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕಿರಿಯರ ಸಂಶೋಧನಾ ಪ್ರಬಂಧಗಳು, ಲೇಖನಗಳಲ್ಲಾಗುವ ತಪ್ಪುಗಳನ್ನು ಗುರುತಿಸಿ, ತಿದ್ದುಪಡಿ ಮಾಡಲು ಹಿರಿಯ ಸಂಶೋಧಕರು ಇರುತ್ತಾರೆ. ಆದರೆ, ಹಿರಿಯ ವಿದ್ವಾಂಸರ ಸಂಶೋಧನೆಗಳಲ್ಲಾಗುವ ತಪ್ಪುಗಳನ್ನು ತಿದ್ದುವವರು ಪ್ರಸ್ತುತದಲ್ಲಿ ಇಲ್ಲವಾಗಿದ್ದಾರೆ.

ಸಂಶೋಧನೆ ಗಳಲ್ಲಾಗುವ ಗಂಭೀರ ಲೋಪಗಳನ್ನೇ ಗುರುತಿಸುವವರು ಇಲ್ಲದಂತಾಗಿದ್ದಾರೆ. ಚಿತ್ರದುರ್ಗದ ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ಇಂಥದ್ದೊಂದು ನಿರ್ವಾತ ನಿರ್ಮಾಣವಾಗಿದೆ’ ಎಂದು ಅವರು ವಿಷಾದಿಸಿದರು.

‘ಐದು ದಶಕಗಳಿಂದ ಸಂಶೋಧಕರ ತಂಡದೊಂದಿಗೆ ಚಿತ್ರದುರ್ಗ ನೆಲದ ಇತಿಹಾಸವನ್ನು ತಲಸ್ಪರ್ಷಿಯಾಗಿ ಅಧ್ಯಯನ ಮಾಡಿದ್ದೇವೆ. ಆ ಅಧ್ಯಯನ ಮುಂದುವರಿದಿದೆ. ನಮ್ಮ ಸಂಶೋಧನೆಯ ಎದುರಿಗೆ ಚಿತ್ರದುರ್ಗದ ಬೆಟ್ಟ, ಬಯಲು, ಕೋಟೆ, ಕೊತ್ತಲು, ಬುರುಜು ಬತ್ತೇರಿಗಳೆಲ್ಲ ಬೆತ್ತಲಾಗಿಬಿಟ್ಟಿವೆ. ಅಂಥ ಸಂಶೋಧನೆಯ ಫಲವಾಗಿ ಸಾಲು ಸಾಲು ಕೃತಿಗಳು ಹೊರ ಬಂದಿವೆ. ಅವುಗಳ ಸಾಲಿನಲ್ಲಿ ಇಂದು ಬಿಡುಗಡೆಯಾದ ಎಚ್.ಗುಡದೇಶ್ವರಪ್ಪ ಅವರ ಕೃತಿಯೂ ಸೇರುತ್ತದೆ. ಈ ಕೃತಿ ಸಂದರ್ಶಕರು, ಇತಿಹಾಸ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಲಿದೆ’ ಎಂದು ತೆಲಗಾವಿ ಹೇಳಿದರು.

‘ದುರ್ಗದ ಹಳೆಯ ಇತಿಹಾಸಕಾರರು ನಿವೃತ್ತಿ ಹೊಂದಿಲ್ಲ. ಬದಲಿಗೆ ಈಗಲೂ ಕ್ರಿಯಾಶೀಲ ರಾಗಿದ್ದಾರೆ. ಅವರಿವರ ಸಹಾಯಹಸ್ತ ಪಡೆದು ಬೆಟ್ಟ ಹತ್ತುವ ಶಕ್ತಿ ಬೆಳೆಸಿಕೊಂಡಿದ್ದೇವೆ. ಆ ಉತ್ಸಾಹ ಯುವ ಇತಿಹಾಸಕಾರರಲ್ಲಿ ಬರಬೇಕಿದೆ. ಗುಡ್ಡದೇಶ್ವರಪ್ಪ ಅವರ ಈ ಕೃತಿ ಸದ್ಯದ ಮಟ್ಟಿಗೆ ಅಂಥದ್ದೊಂದು ಉತ್ಸಾಹ ನೀಡಲು ಮುಂದಾಗಿದೆ.

ನಮ್ಮ ಚಿತ್ರದುರ್ಗದ ಸಂಶೋಧನಾ ತೋಟಕ್ಕೆ ಹೊಸ ಹೂವೊಂದು ಸೇರ್ಪಡೆಯಾಗಿದೆ. ಸಂಶೋಧನೆಯ ಆಗಸದಲ್ಲಿ ಹೊಸ ತಾರೆಯೊಂದು ಉದಯಿಸಿದೆ. ಈ ಪ್ರವೃತ್ತಿ ಹೀಗೆ ಮುಂದುವರೆಯಲಿ’ ಎಂದು ಆಶಿಸಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಯಾವುದೇ ಕೃತಿ ಸಂಪೂರ್ಣವಾಗಿ ಸರ್ವಶ್ರೇಷ್ಠ ಆಗಲಿಕ್ಕೆ ಸಾಧ್ಯವಿಲ್ಲ. ಆದರೆ, ಗುಡ್ಡದೇಶ್ವರಪ್ಪ ಅವರು ಈವರೆಗೆ ನಡೆದಿರುವ ಸಂಶೋಧನೆ ಯನ್ನು ಬಳಸಿಕೊಂಡು ಕೃತಿ ರಚಿಸಿದ್ದಾರೆ. ಪುಸ್ತಕ ಪರಿಪೂರ್ಣವಾಗಿ ಸ್ವಂತವಿಲ್ಲದಿದ್ದರೂ ಸಂಯೋಜಿತ ರೂಪ ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಚಿತ್ರದುರ್ಗದ ಐತಿಹಾಸಕ ಸ್ಮಾರಕ ಪುಸ್ತಕ ಕೇವಲ ಕೋಟೆಯ ಸ್ಮಾರಕಗಳಿಗಷ್ಟೇ ಸೀಮಿತವಾಗಿಲ್ಲ. ಬದಲಿಗೆ ದುರ್ಗದ ದೇವತೆಗಳು, ನಾಯಕರ ಆಳ್ವಿಕೆ, ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳು, ಹೊಂಡ, ಪುಷ್ಕರಣಿ, ಬತೇರಿಗಳು ಹಾಗೂ ಏಳು ಸುತ್ತಿನ ಕೋಟೆಯ ಕುರಿತ ಮಾಹಿತಿಯು ಓದುಗರ ವೇಗಕ್ಕೆ ತಡೆಯಾಗದೆ, ಕುತೂಹಲ ಮೂಡಿಸುವಂತಿದೆ ಎಂದು ತಿಳಿಸಿದರು.

ಇತಿಹಾಸ ಸಂಶೋಧಕ ಪ್ರೊ.ಎಚ್‌. ಶ್ರೀಶೈಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪರಿಚಾರಕ ಕೆ.ವೆಂಕಣ್ಣಾಚಾರ್‌, ಪ್ರೊ.ಎಚ್‌.ಲಿಂಗಪ್ಪ, ಕೃತಿಕಾರ ಡಾ.ಎಚ್‌. ಗುಡ್ಡದೇಶ್ವರಪ್ಪ ಇದ್ದರು. ಪ್ರಾಧ್ಯಾಪಕ ಎಸ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಆರ್. ಶಿವಪ್ಪ ಸ್ವಾಗತಿಸಿ ದರು. ಎಚ್‌.ಜಿ.ಭರತ್ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT