ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಸ್ತು’: ಮತಯಂತ್ರದ ದಿಕ್ಕು ಬದಲಿಸಿದ ಮುನಿಯಪ್ಪ

Last Updated 17 ಏಪ್ರಿಲ್ 2014, 14:32 IST
ಅಕ್ಷರ ಗಾತ್ರ

ಕೋಲಾರ (ಪಿಟಿಐ): ರಾಜಕಾರಣಿಗಳು ರಾಹುಕಾಲ ನೋಡಿಕೊಂಡು ನಾಮಪತ್ರ ಸಲ್ಲಿಸುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಮತಹಾಕಲು ‘ವಾಸ್ತು’ವಿಗೆ ಅನುಗುಣವಾಗಿ ಎಲೆಕ್ಟ್ರಾನಿಕ್‌ ಮತಯಂತ್ರದ (ಇವಿಎಂ) ದಿಕ್ಕನ್ನೆ ಬದಲಾಯಿಸಿದ್ದಾರೆ ಕೇಂದ್ರ ಸಚಿವರೂ ಆಗಿರುವ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ ಎಚ್‌ ಮುನಿಯಪ್ಪ.

ಹೌದು. ಗುರುವಾರ ತಮ್ಮ ಹಕ್ಕು ಚಲಾಯಿಸಲು ಮುನಿಯಪ್ಪ ಅವರು ಹಾರೋಹಳ್ಳಿಯ ಮತಗಟ್ಟೆಯ ಕೇಂದ್ರಕ್ಕೆ ಬಂದಾಗ ಇವಿಎಂ ದಕ್ಷಿಣಾಭಿಮುಖವಾಗಿತ್ತು. ಇದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಮುನಿಯಪ್ಪ, ‘ವಾಸ್ತು’ ಪಾಲನೆಗಾಗಿ ಅದನ್ನು ಈಶಾನ್ಯ ದಿಕ್ಕಿಗೆ ಬದಲಾಯಿಸಿದರು ಎನ್ನಲಾಗಿದೆ.

ಮುನಿಯಪ್ಪ ಅವರ ಮನವಿ ಮೇರೆಗೆ ಮತಯಂತ್ರದ ದಿಕ್ಕನ್ನು ಬದಲಾಯಿಸಿದ  ಚುನಾವಣಾ ಅಧಿಕಾರಿಯನ್ನು ವರ್ಗಾಯಿಸಲಾಗಿದೆ.

‘ಮುನಿಯಪ್ಪ ಅವರ ಕೋರಿಕೆ ಮೇರೆಗೆ ಮತಯಂತ್ರದ ದಿಕ್ಕನ್ನು ಬದಲಾಯಿಸಿದ್ದಕ್ಕಾಗಿ ಆ ಅಧಿಕಾರಿಯನ್ನು ಹಾರೋಹಳ್ಳಿ ಮತ ಕೇಂದ್ರದಿಂದ ಸ್ಥಳಾಂತರ ಮಾಡಲಾಗಿದೆ. ಚುನಾವಣಾ ಅಧಿಕಾರಿ ಮುನಿಯಪ್ಪ ಅವರ ನಿರ್ದೇಶನಗಳನ್ನು ಪಾಲಿಸಿದ ಬಗ್ಗೆ ಮಾಹಿತಿ ದೊರೆತ  ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೋಲಾರ ಉಪ ಆಯುಕ್ತ ಹಾಗೂ ಚುನಾವಣಾ ಅಧಿಕಾರಿ ಡಿ ಕೆ  ರವಿ ತಿಳಿಸಿದ್ದಾರೆ.

‘ಮತಯಂತ್ರದ ದಿಕ್ಕು ಅಥವಾ ಸ್ಥಿತಿ ಬದಲಾಯಿಸುವುದು ಕಾನೂನಿಗೆ ವಿರುದ್ಧ’ ಎಂದೂ ರವಿ ತಿಳಿಸಿದ್ದಾರೆ.

ತಮ್ಮ ಹಕ್ಕು ಚಲಾಯಿಸಲು ಮುನಿಯಪ್ಪ ಅವರು ಮತಗಟ್ಟೆ ಪ್ರವೇಶಿಸುತಿದ್ದಂತೆಯೇ ಮತಯಂತ್ರ ದಕ್ಷಿಣ ದಿಕ್ಕಿಗೆ ಇರುವುದನ್ನು ನೋಡಿ ಅಸಮಾಧಾನ ತೋರಿದರು ಹಾಗೂ ತಮ್ಮ ಬೆಂಬಲಿಗರ ಸಹಾಯದೊಂದಿಗೆ ಅದನ್ನು ಈಶಾನ್ಯ ದಿಕ್ಕಿಗೆ ಇರಿಸಿದರು ಎಂದು ರವಿ ಹೇಳಿದ್ದಾರೆ.

ಆದರೆ, ಮತಯಂತ್ರದ ದಿಕ್ಕು ಬದಲಿಸಿದ ಮುನಿಯಪ್ಪ ಅವರ ಬೆಂಬಲಿಗರ ವಿರುದ್ಧ ಕ್ರಮ ಏಕೆ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ರವಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT