ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಹನ ಉದ್ಯಮದ ಕ್ಷಿಪ್ರ ಬೆಳವಣಿಗೆ’

ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ 6ನೇ ಘಟಿಕೋತ್ಸವ: 64 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ
Last Updated 4 ಆಗಸ್ಟ್ 2015, 10:05 IST
ಅಕ್ಷರ ಗಾತ್ರ

ರಾಮನಗರ: ದೇಶದಲ್ಲಿ ವಾಹನ ಉದ್ಯಮ ಅತ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ನಿತ್ಯ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿವೆ ಎಂದು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಸಂಸ್ಥೆಯ (ಎನ್‌ಎಸ್‌ಡಿಸಿ) ಪ್ರಧಾನಮಂತ್ರಿ ಅವರ ಸಲಹೆಗಾರ ಸುಬ್ರಹ್ಮಣಿಯನ್ ರಾಮದೊರೈ ತಿಳಿಸಿದರು.

ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಸೋಮವಾರ ಹಮ್ಮಿಕೊಂಡಿದ್ದ 6ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಈ ಹೊಸ ಆವಿಷ್ಕಾರಗಳನ್ನು ವಾಹನ ತಯಾರಿಕಾ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಅಳವಡಿಸಲಾಗುತ್ತಿದೆ. ಆದ್ದರಿಂದ ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ವಾಹನ ತಯಾರಿಕಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯವಿದೆ ಎಂದರು.

‘ಭಾರತದಲ್ಲಿ ತಯಾರಿಸು’ ಮತ್ತು ‘ಕೌಶಲ್ಯ ಭಾರತ’ ಧ್ಯೇಯಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಿದರೆ ಉತ್ಪಾದನೆ ಹೆಚ್ಚಳಗೊಂಡು, ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

‘ಮೇಕ್ ಇನ್ ಇಂಡಿಯಾ’ ಹಾಗೂ ‘ಸ್ಕಿಲ್ ಇಂಡಿಯಾ’ ಧ್ಯೇಯಗಳಿಂದ ದೇಶದಲ್ಲಿ ಉತ್ಪಾದನೆ ಪ್ರಮಾಣ ಅಧಿಕವಾಗಲಿದೆ. ಈ ಧ್ಯೇಯಗಳನ್ನು ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪೆನಿ (ಟಿಕೆಎಂ) ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲರೂ ನಿರಂತರ ಕಲಿಕೆಗೆ ಒತ್ತು ನೀಡಬೇಕು. ಔಪಚಾರಿಕ, ಅನೌಪಚಾರಿಕ ಶಿಕ್ಷಣ ಹಾಗೂ ಆನ್‌ಲೈನ್‌ ಮೂಲಕ ಮಾಹಿತಿಗಳನ್ನು ಪಡೆದು ನಿರಂತರವಾಗಿ ಜ್ಞಾನ ಹಾಗೂ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ನಮೋಮಿ ಇಷಿ ಮಾತನಾಡಿ, ‘ಸಂಸ್ಥೆಯು ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆಗಳಿಗೆ ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೌಶಲ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ಅವರು 2022ರ ವೇಳೆಗೆ ದೇಶದಾದ್ಯಂತ ಸುಮಾರು 40 ಕೋಟಿ ಯುವ ಜನರಿಗೆ ಕೌಶಲ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಸಂಸ್ಥೆಯು ಟಿಟಿಟಿಐ ಮೂಲಕ ಗ್ರಾಮೀಣ ಭಾಗದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಸತಿ ಸಹಿತ, ಮೂರು ವರ್ಷಗಳ ಕಾಲ ಕೈಗಾರಿಕಾ ತರಬೇತಿ ನೀಡಲಾಗುತ್ತಿದೆ ಎಂದರು.

ಸುಮಾರು 64 ವಿದ್ಯಾರ್ಥಿಗಳಿಗೆ ಟಿಟಿಟಿಐ ಕೋರ್ಸ್‌ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಲಾಯಿತು. ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್‌, ಶೇಖರ್ ವಿಶ್ವನಾಥನ್, ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಯೋಷಿಹಿರೋ ಹೊರಿನೋಷಿ, ಮಸನೋರಿ ತಕಹಿಸಿ, ಶೈಲೇಂದ್ರ ಶೆಟ್ಟಿ, ಗೋಪಿನಾಥ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT