ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಎಫ್‌ಸಿ ಮೂಲಕ ಸ್ವಸಹಾಯ ಸಂಘಕ್ಕೆ ಸಾಲ’

Last Updated 20 ಡಿಸೆಂಬರ್ 2014, 9:34 IST
ಅಕ್ಷರ ಗಾತ್ರ

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯ ಸಸ್ಯ ಬಳಕೆ ಜ್ಞಾನದ ಆಧಾರದಲ್ಲಿ ಉದ್ಯೋಗ ಸೃಷ್ಟಿಸಲು ವಿಶೇಷ ಅವಕಾಶಗಳಿವೆ. ಕಿರು ಅರಣ್ಯ ಉತ್ಪನ್ನ ಸಂಗ್ರಹ, ಮೌಲ್ಯವರ್ಧನೆ, ಮಾರುಕಟ್ಟೆಯಿಂದ ಗ್ರಾಮೀಣ ಜನಜೀವನಕ್ಕೆ ನೆರವಾಗುವ ಕಾರ್ಯ ಮಾಡಬಹುದಾಗಿದೆ’ ಎಂದು ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಜಿ.ಆರ್‌.ಚಿಂತಾಲ್‌ ಹೇಳಿದರು.

ಶುಕ್ರವಾರ ತಾಲ್ಲೂಕಿನ ಕಳವೆಯ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ವೀಕ್ಷಿಸಿದ ನಂತರ ಸ್ಥಳೀ­ಯರೊಂದಿಗೆ ಅರಣ್ಯ ಆದಾಯ ಚಟುವಟಿಕೆಗಳ ಕುರಿತು ಅವರು ಅಭಿಪ್ರಾಯ ಹಂಚಿಕೊಂಡರು.

‘ನಬಾರ್ಡ್‌ ಕರ್ನಾಟಕ ವಿಭಾಗವು ಈಗಾಗಲೇ ಗ್ರಾಮ ಅರಣ್ಯ ಸಮಿತಿಗಳ ಮೂಲಕ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಕಾರ್ಯವನ್ನು ಚಿಕ್ಕದಾಗಿ ಆರಂಭಿಸಿದೆ. ಅನುಭವದ ಯಶಸ್ಸಿನ ಆಧಾರದಲ್ಲಿ ಯೋಜನೆಯನ್ನು ಇತರೆಡೆ ವಿಸ್ತರಿಸುವ ಉದ್ದೇಶವಿದೆ. ಗ್ರಾಮ ಅರಣ್ಯ ಸಮಿತಿಗಳ ರಚನಾತ್ಮಕ ಕಾರ್ಯಗಳಿಗೆ ನಬಾರ್ಡ್ ಅರಣ್ಯ ಇಲಾಖೆ ಜೊತೆ ಸೇರಿ ಅಗತ್ಯ ಕಾರ್ಯಯೋಜನೆ ರೂಪಿಸಲಿದೆ’ ಎಂದರು.

‘ಅಣಲೆ, ತಾರೆ, ಮುರುಗಲು ಸೇರಿದಂತೆ ವಿಶೇಷ ಕಿರು ಅರಣ್ಯ ಉತ್ಪನ್ನಗಳನ್ನು ಗ್ರಾಮಸ್ಥರು ಸಂಗ್ರಹಿಸುತ್ತಿದ್ದಾರೆ. ಇವುಗಳ ಸರಿಯಾದ ಮೌಲ್ಯ­ವರ್ಧನೆ­ಯಿಂದ ಅರಣ್ಯ ಸಮಿತಿ, ಸ್ವಸಹಾಯ ಸಂಘಗಳನ್ನು ಇನ್ನಷ್ಟು ಸುಸ್ಥಿರಗೊಳಿಸಲು ಸಾಧ್ಯವಿದೆ.

ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗೆ ನಬಾರ್ಡ್‌ ನೆರವು ಅಗತ್ಯವಿದೆ’ ಎಂದು ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಶಿವಾನಂದ ಕಳವೆ ವಿವರಿಸಿದರು. ‘ಜಿಲ್ಲೆಯ ವಿಶೇಷ ಕೃಷಿ ಉತ್ಪನ್ನಗಳನ್ನು ಪ್ರವಾಸಿ ತಾಣಗಳಲ್ಲಿ ಪರಿಚಯಿಸುವ ಕಾರ್ಯ ನಡೆದಾಗ ಬೆಳೆಗಾರರಿಗೆ ಅನುಕೂಲವಾಗುತ್ತದೆ.

ಮೌಲ್ಯವ­ರ್ಧನೆಯ ಯಶೋಗಾಥೆಯ ಚಿಕ್ಕ ಚಿಕ್ಕ ಪಾಠಗಳಿಂದ ಭವಿಷ್ಯದ ನಿಶ್ಚಿತ  ಕಾರ್ಯಯೋಜನೆ ರೂಪಿಸುವ ಪ್ರಯತ್ನಕ್ಕೆ ನಬಾರ್ಡ್‌ ನೆರವು ನೀಡಬೇಕು’ ಎಂದರು. ಚಿಂತಾಲ್‌ ಅವರು ಕಳವೆಯ ಕೆರೆ, ನೈಸರ್ಗಿಕ ಸಸ್ಯಗಳ ನೆಡುತೋಪು, ಕಾನ್ಮನೆ ಕಟ್ಟಡ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ, ನಬಾರ್ಡ್‌ನ ಜಿಲ್ಲಾ ಪ್ರಬಂಧಕ ಯೋಗೀಶ ಉಪಸ್ಥಿತರಿದ್ದರು. ಕಳವೆಯ ಹಿರಿಯ ಸಾಮಾಜಿಕ ಕಾರ್ಯಕರ್ತ ಜಿ.ಜಿ. ದೀಕ್ಷಿತ್ ಅವರು ಚಿಂತಾಲ್‌ ಅವರನ್ನು ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT