ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನಕ್ಕೂ ನಿಲುಕದ ಚಮತ್ಕಾರ...’

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಯೋಧರು ಬೆನ್ನಿಗೆ ಕಟ್ಟಿಕೊಳ್ಳುವ ಆಕ್ಸಿಜನ್ ಸಿಲಿಂಡರ್ 200 ಲೀಟರ್ ಸಾಮರ್ಥ್ಯದ್ದಾಗಿದ್ದು, 45 ನಿಮಿಷ ಮಾತ್ರ ಅದನ್ನು ಬಳಕೆ ಮಾಡಬಹುದು. ಆದರೆ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ 6 ದಿನಗಳ ಕಾಲ ಹಿಮದ ರಾಶಿಯಡಿ ಬದುಕಿದ್ದು ಮಾತ್ರ ವಿಜ್ಞಾನಕ್ಕೂ ನಿಲುಕದ ಚಮತ್ಕಾರ’...

ಹೀಗೆಂದು ಅಚ್ಚರಿ ವ್ಯಕ್ತಪಡಿಸಿದವರು ಭಾರತೀಯ ಸೇನೆಯಲ್ಲಿ 32 ವರ್ಷ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿರುವ ಕರ್ನಲ್‌ ಎಸ್‌.ಆರ್. ಮಹಾಜನ್‌. 2015 ಆಗಸ್ಟ್ 31ರಂದು ಸೇವೆಯಿಂದ ನಿವೃತ್ತಿಯಾಗಿರುವ ಮಹಾಜನ್‌ ಇಲ್ಲಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಲಡಾಕ್‌ನ ದುರ್ಬುಕ್‌ನಲ್ಲಿ 14,300 ಅಡಿ ಎತ್ತರದ ಸೇನಾ ಕ್ಯಾಂಪ್‌ನಲ್ಲಿ 2.5 ವರ್ಷ ಸೇವೆ ಸಲ್ಲಿಸಿರುವ ಮಹಾಜನ್‌ ಅಲ್ಲಿನ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಸಾಮಾನ್ಯ ವಾತಾವರಣದಲ್ಲಿ ಶೇ 29ರಷ್ಟು ಆಮ್ಲಜನಕ ಇರುತ್ತದೆ. ಆದರೆ ದುರ್ಬುಕ್‌ನಲ್ಲಿ ಈ ಪ್ರಮಾಣ ಶೇ 11ರಷ್ಟು ಇದ್ದು, ಹನುಮಂತಪ್ಪ ಕೆಲಸ ಮಾಡುತ್ತಿದ್ದ ಸಿಯಾಚಿನ್ ಪ್ರದೇಶದ ಸೋನಂ ಪೋಸ್ಟ್‌ನಲ್ಲಿ ಆ ಪ್ರಮಾಣ ಶೇ 9 ರಷ್ಟು ಇರುತ್ತದೆ. ಅಲ್ಲಿ ಮೈನಸ್‌ 40 ಡಿಗ್ರಿ ಉಷ್ಣಾಂಶ ಸಾಮಾನ್ಯ. ಈ ಪ್ರದೇಶಗಳಿಗೆ ಸೈನಿಕರನ್ನು ನಿಯೋಜಿಸುವಾಗ ಅವರಿಗೆ ಮೂರು ಹಂತದ ತರಬೇತಿ ನೀಡಲಾಗುತ್ತದೆ. ಅಲ್ಲಿನ ಹವಾಮಾನಕ್ಕೆ ದೇಹ ತಾಳಿಕೊಳ್ಳುವ ಸಾಮರ್ಥ್ಯವನ್ನು ಆಗ ಪರೀಕ್ಷಿಸಲಾಗುತ್ತದೆ’ ಎಂದು ಮಹಾಜನ್ ಹೇಳುತ್ತಾರೆ.

ಬೆರಳು ಪರೀಕ್ಷೆ:  ‘ದುರ್ಬುಕ್‌ನ ಸೇನಾ ಕ್ಯಾಂಪ್‌ನಲ್ಲಿದ್ದಾಗ ನಿತ್ಯ ಬೆಳಿಗ್ಗೆ ಏಳುತ್ತಿದ್ದಂತೆಯೇ ಎಲ್ಲ ಯೋಧರ ಕೈ ಹಾಗೂ ಕಾಲಿನ ಬೆರಳುಗಳನ್ನು ಪರೀಕ್ಷಿಸುತ್ತಿದ್ದೆವು. ಹಿಮಕಡಿತಕ್ಕೆ (frostbite) ಸಿಲುಕಿ ಬೆರಳು ಉದುರುವ ಸಾಧ್ಯತೆಯ ಕಾರಣ ಕ್ಯಾಂಪ್‌ನಲ್ಲಿರುವ ಎಲ್ಲಾ ಯೋಧರ ಬೆರಳುಗಳು ಸರಿಯಾಗಿವೆಯೇ ಎಂದು ಮೊದಲು ಪರೀಕ್ಷಿಸಿ ಮೇಲಧಿಕಾರಿಗಳಿಗೆ ವರದಿ ನೀಡುತ್ತಿದ್ದೆವು’ ಎಂದು ಮಹಾಜನ್‌ ನೆನಪಿಸಿಕೊಳ್ಳುತ್ತಾರೆ. (ಹಿಮಕಡಿತಕ್ಕೆ ಸಿಲುಕಿದಲ್ಲಿ ಮೊದಲು ಬೆರಳು ದಪ್ಪ ಆಗುತ್ತದೆ. ನಂತರ ಮೋಸಂಬಿ ಸಿಪ್ಪೆ ಸುಲಿದಂತೆ ಚರ್ಮ ಸುಲಿಯುತ್ತದೆ. ನಂತರ ಬೆರಳು ನಿಷ್ಕ್ರಿಯಗೊಂಡು ಹಿಂದೆ ಮುಂದೆ ಆಡಿಸಲು ಅಸಾಧ್ಯವಾಗುತ್ತದೆ. ಕೆಲವೊಮ್ಮೆ ಅದೇ ಉದುರಿ ಬೀಳುತ್ತದೆ ಇಲ್ಲವೇ ಕತ್ತರಿಸಿ ತೆಗೆಯಬೇಕಾಗುತ್ತದೆ ಎಂದು ಅವರು ವಿವರಿಸಿದರು).

ಎಗ್‌ ಪೌಡರ್ ಬಳಕೆ:  ‘ನಾವು ಸಾಮಾನ್ಯವಾಗಿ ಹಾಲಿನ ಪೌಡರ್ ನೋಡಿರುತ್ತೇವೆ. ಆದರೆ ಹಿಮ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಎಗ್‌ ಪೌಡರ್ (ಮೊಟ್ಟೆಯ ಪುಡಿ)ಪೂರೈಸಲಾಗುತ್ತದೆ. ಅಲ್ಲಿನ ಹವೆಗೆ ಮೊಟ್ಟೆ ಗಟ್ಟಿಯಾಗುವುದರಿಂದ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬೇಯಿಸಿದ ಮೊಟ್ಟೆಯನ್ನು ಒಣಗಿಸಿ ಪುಡಿ ಮಾಡಿ ಪೂರೈಸುತ್ತಾರೆ. ಅದನ್ನೇ ಬಳಸಿ ಸೈನಿಕರಿಗೆ ಬ್ರೆಡ್ ಆಮ್ಲೆಟ್ ಸಿದ್ಧಗೊಳಿಸಲಾಗುತ್ತದೆ.

‘ದೈಹಿಕ ಆರೋಗ್ಯದ ಜೊತೆ ಯೋಧರ ಮಾನಸಿಕ ಆರೋಗ್ಯವೂ ಮುಖ್ಯ. ಕ್ಯಾಂಪ್‌ನಲ್ಲಿ ಯಾರಾದರೂ ಊಟ ಮಾಡದೇ ಒಂಟಿಯಾಗಿ ಇರಲು ಪ್ರಯತ್ನಿಸಿದರೆ ಅವರು ಖಿನ್ನತೆಗೆ ಜಾರುವ ಅಪಾಯವಿರುತ್ತಿತ್ತು. ಅವರಿಗೆ ಕೌನ್ಸೆ ಲಿಂಗ್ ಮಾಡುವ ಜೊತೆಗೆ ಕುಟುಂಬ ದವರೊಂದಿಗೆ ಮಾತನಾಡಿಸಿ ಬೇಸರ ಕಳೆಯುವ ಪ್ರಯತ್ನ ಮಾಡುತ್ತಿದ್ದೆವು. ಅಂತಹವರ ಬಗ್ಗೆ ಹೆಚ್ಚಿನ ಕಾಳಜಿ ಮಾಡುತ್ತಿದ್ದೆವು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT