ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಷ’ ಬಳಕೆಯೂ ಕೃಷಿ ವಿಜ್ಞಾನವೂ

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕಳೆದ ವಾರ ಆಕಾಶವಾಣಿಯಲ್ಲೊಂದು ಫೋನ್‌–ಇನ್‌ ಕಾರ್ಯಕ್ರಮವಿತ್ತು. ತಜ್ಞರು ಅರ್ಥಾತ್ ಕೃಷಿ ವಿಜ್ಞಾನ ಅಧ್ಯಯನ ಮಾಡಿದವರು ರೈತರ ಸಮಸ್ಯೆಗಳಿಗೆ ಉತ್ತರಿಸು­ತ್ತಿದ್ದರು. ಅರ್ಧ ಗಂಟೆಯ ಆ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳುತ್ತಿದ್ದ ರೈತರಿಗೆ ಸರಿಸುಮಾರು ಎರಡು ಡಜನ್ ಉಗ್ರವಿಷಗಳನ್ನು (ರಾಸಾಯನಿಕ) ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದರು!

ಅವರಿಂದ ಪುಂಖಾನುಪುಂಖವಾಗಿ ಹೊರಬರುತ್ತಿದ್ದ ತೀಕ್ಷ್ಣ ವಿಷಗಳ ಜಪ ಕೇಳುತ್ತಿದ್ದರೆ ತಲೆಸುತ್ತು  ಬರು­ವಂತಿತ್ತು. ಉಗ್ರವಿಷಗಳಿಗೆ ಬಹುಪರಾಕ್‌ ಹೇಳುವ ಅಂಥ ತಜ್ಞರಿಗೆ ಏನು ಲಾಭವಿದೆಯೋ? ಅವರಿಗೆ ಸಿಗುವ ಲಾಭ ಅತ್ತ ಬಿಡಿ... ಇತ್ತ ಪರಿಸರ, ಜೀವ ಸಂಕುಲಕ್ಕೆ ಆಗುವ ಹಾನಿ ಎಂಥ­ದೆಂಬುದು ಎಲ್ಲರಿಗೂ ಗೊತ್ತಾಗಿದೆ. ಅದಕ್ಕೆಂದೇ ಉಗ್ರ ವಿಷಗಳ ವಿರುದ್ಧ ಹೋರಾಟ ನಿಧಾನವಾಗಿ ಬಲ ಪಡೆಯುತ್ತಿದೆ.

ಪಂಜಾಬ್‌ನ ಚಂಡೀಗಡ-ದಲ್ಲಿ ಸೋಮವಾರ ಮುಕ್ತಾಯಗೊಂಡ ಭಾರ­ತೀಯ ಸಾವಯವ ಸಮಾವೇಶದಲ್ಲಿ ಮುಖ್ಯ­ಮಂತ್ರಿ ಪ್ರಕಾಶ ಸಿಂಗ್ ಬಾದಲ್, ‘ದೇಶಕ್ಕೆ ಅನ್ನ ಕೊಟ್ಟ ಪಂಜಾಬ್, ಸಾವಯವ ಆಹಾರ ಉತ್ಪಾ­ದನೆ­ಯಲ್ಲೂ ನಂಬರ್ ಒನ್ ಆಗ­ಲಿದೆ’ ಎಂದು ಪ್ರಕಟಿಸಿದ್ದಾರೆ. ಅಂದ ಹಾಗೆ, ಈ ಸಮಾವೇಶದ ಉದ್ಘಾಟನೆ ದಿನ ಹರಿಯಾಣ ರಾಜ್ಯಪಾಲ ಕಪ್ತಾನ್ ಸಿಂಗ್ ಸೋಳಂಕಿ, ‘ವಿಷ ಬಳಕೆಗೆ ಪ್ರಚೋದಿಸುತ್ತಿರುವ ಕೃಷಿ ವಿಶ್ವವಿದ್ಯಾ­ಲಯ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಮುಚ್ಚಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅವರ ದನಿಗೆ ಪೂರಕವಾಗಿ, ಕೇಂದ್ರ ಸಚಿವೆ ಮೇನಕಾ ಗಾಂಧಿಯವರು ‘ಪೀಡೆ-ನಾಶಕಗಳನ್ನು ನಿಷೇಧಿಸಬೇಕು’ ಎಂದು ಕರೆ ನೀಡಿದ್ದರು.
ಕೀಟನಾಶಕಗಳಿಲ್ಲದೇ ವ್ಯವಸಾಯ ಇಲ್ಲವೇ ಇಲ್ಲ ಎಂದು ರೈತರನ್ನು ಬಲವಾಗಿ ನಂಬಿಸಿರು­ವುದು ಆಧುನಿಕ ಕೃಷಿ ವಿಜ್ಞಾನದ ಬಹುದೊಡ್ಡ ಸಾಧನೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಸ್ಥಳೀಯವಾಗಿ ಸಿಗುವ ಸಸ್ಯಗಳನ್ನು ಬಳಸಿ ಜೈವಿಕ ಕೀಟ-ನಾಶಕ ತಯಾರಿಸು­ವು­­ದನ್ನು ಕಲಿಸುವ ಬದಲಿಗೆ ವಿಷಗಳನ್ನು ಸುರಿಯು­ವಂತೆ ರೈತರನ್ನು ಪ್ರಚೋ-ದಿಸಿ-ರುವುದು ಕೃಷಿ ಸಂಶೋ­ಧನಾ ಸಂಸ್ಥೆಗಳ ಇನ್ನೊಂದು ಸಾಧನೆ.

‘ಹಸಿರು ಕ್ರಾಂತಿ’ಯ ಹಳಿಗಳ ಮೇಲೆ ಕ್ಯಾನ್ಸರ್ ರೈಲು ಓಡುತ್ತಿರುವ ದುರಂತ ಕಥನ ಪಂಜಾಬಿ­ನದು. ಯದ್ವಾತದ್ವಾ ರಾಸಾ­ಯನಿಕ ಬಳಸಿದ್ದರಿಂದ ಅಲ್ಲಿ ಕುಟುಂಬ-ಕ್ಕೊಬ್ಬರು ಕ್ಯಾನ್ಸರ್ ರೋಗಿ ಸೃಷ್ಟಿಯಾಗಿದ್ದಾರೆ. ವಿಷಗಳ ಅನಾಹುತ ಅರಿತ ಪಂಜಾಬ್ ಸರ್ಕಾರ, ಈಗ ಸಾವಯವದತ್ತ ಹೊರಳಲು ಚಿಂತನೆ ನಡೆಸಿದೆ. ದುರದೃಷ್ಟದ ಸಂಗತಿ ಎಂದರೆ, ಹತ್ತು ವರ್ಷಗಳ ಹಿಂದೆಯೇ ಸಾವ­ಯವ ಕೃಷಿ ನೀತಿ ರೂಪಿಸಿದ ಮೊದಲ ರಾಜ್ಯ  ಕರ್ನಾಟಕ ಇನ್ನೂ ಇದ್ದ ಸ್ಥಿತಿಯಲ್ಲೇ ಇದೆ.

ರಾಜ್ಯಪಾಲ ಸೋಳಂಕಿ ಹೇಳಿದ್ದನ್ನು ಸಂಪೂರ್ಣ­ವಾಗಿ ಒಪ್ಪಲು ಸಾಧ್ಯವಿಲ್ಲ. ಸಂಶೋಧನೆ ಎಂಬುದು ನಿರಂತರವಾಗಿ ಹರಿಯುವ ನದಿ­ಯಂತೆ. ಆದರೆ ಅಂತಿಮವಾಗಿ ಅದರ ಲಾಭ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕು. ಕೃಷಿ ಸಂಶೋಧನೆ ನೆಪ­ದಲ್ಲಿ ಕೋಟ್ಯಂತರ ರೂಪಾಯಿ-ಗಳು ವೆಚ್ಚವಾಗು­­ತ್ತಿದ್ದರೂ ರೈತನ ಸ್ಥಿತಿ ಹೀಗೇ-ಕಾಗಿದೆ ಎಂದು ವಿಶ್ಲೇಷಿಸಿದರೆ, ಅದು ಮತ್ತೆ ನಿರರ್ಥಕ ಸಂಶೋಧನೆಗಳತ್ತಲೇ ಬೊಟ್ಟು ಮಾಡುತ್ತದೆ.

‘ಲ್ಯಾಬ್‌ ಟು ಲ್ಯಾಂಡ್’ (ಪ್ರಯೋಗಾಲಯದಿಂದ ಮಣ್ಣಿಗೆ) ಪರಿಕಲ್ಪನೆ ವಾಸ್ತವ ರೂಪಕ್ಕೆ ಇಳಿಯದೇ ಹೋದರೆ, ರಾಜ್ಯಪಾಲರ ಮಾತನ್ನು ಇನ್ನಷ್ಟು ಮತ್ತಷ್ಟು ಮಂದಿ ಹೇಳಬೇಕಾಗುತ್ತದೆ. ಫಲ­ವತ್ತಾದ ಮಣ್ಣಿನಲ್ಲಿ ಸದೃಢವಾಗಿ ಬೆಳೆದ ಸಸ್ಯಕ್ಕೆ ಕೀಟರೋಗ ಬಾಧೆ ಬಾರದು; ಒಂದೊಮ್ಮೆ ಬಾಧೆ ಕಾಣಿಸಿಕೊಂಡರೂ ಕಡಿಮೆ ವೆಚ್ಚದಲ್ಲಿ ಜೈವಿಕ ಔಷಧಿ ಬಳಸಿ ನಿಯಂತ್ರಿಸ-ಬಹುದು ಎಂಬುದನ್ನು ಹಲವು ಸಾವಯವ ಕೃಷಿ-ಕರು ಕಂಡುಕೊಂಡಿದ್ದಾರೆ. ಇಷ್ಟಿದ್ದರೂ ಪದೇ ಪದೇ ವಿಷಗಳನ್ನೇ ‘ಔಷಧಿ’ ಎಂದು ಶಿಫಾರಸು ಮಾಡುವ ಕೃಷಿ ವಿಜ್ಞಾನಿಗಳ ಸಲಹೆ ಹಾಸ್ಯಾಸ್ಪದ ಎನಿಸುವುದಿಲ್ಲವೇ?

ಜಗತ್ತಿನ ಇತರ ದೇಶಗಳಲ್ಲಿ ನಿಷೇಧಕ್ಕೆ ಒಳಗಾದ ಹತ್ತಾರು ಬಗೆಯ ಅಪಾಯಕಾರಿ ಪೀಡೆನಾಶಕಗಳು ಭಾರತದಲ್ಲಿ ಮಾತ್ರ ಎಗ್ಗಿಲ್ಲದೇ ಬಳಕೆಯಾಗುತ್ತಿವೆ. ಸಸ್ಯಗಳ ಎಲೆ ಬಳಸಿ ‘ಪೂಚಿಮರಂದು’ ಎಂಬ ಜೈವಿಕ ಕೀಟನಾಶಕ-ವನ್ನು ತಮಿಳುನಾಡಿನ ಕೃಷಿಕ ಚಲ್ಲಮುತ್ತು ತಯಾರಿಸಿದ್ದರು. ಅದರ ಫಲಿತಾಂಶದ ಬಗ್ಗೆ ಸಾವಿರಾರು ರೈತರು ಶ್ಲಾಘನೆ ಮಾಡಿದ ಬಳಿಕ, ರೈತಪರ ಸಂಘಟನೆಗಳ ಒತ್ತಾಯದ ಮೇರೆಗೆ ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯವೊಂದು ಅಧ್ಯಯನ ನಡೆಸಿ ‘ಹೌದು... ಉತ್ತಮ ಜೈವಿಕ ಕೀಟನಾಶಕವಿದು’ ಎಂದು ಶಿಫಾರಸು ಮಾಡಿತು.

ನೈಸರ್ಗಿಕ ಕೃಷಿ ಪ್ರತಿಪಾದಕ ಸುಭಾಷ ಪಾಳೇಕರ್ ಕೂಡ ಹಲವು ಬಗೆಯ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ ತಗಲುವ ವೆಚ್ಚ ಅತ್ಯಲ್ಪ. ಒಂದು ಚಮಚದಷ್ಟು ಸೇವಿಸಿದರೆ ಪ್ರಾಣಕ್ಕೆ ಎರವಾಗುವ ಅತ್ಯುಗ್ರ ರಸವಿಷಗಳನ್ನು ಶಿಫಾರಸು ಮಾಡದೆ ರೈತರೇ ಖುದ್ದಾಗಿ ತಯಾ-ರಿಸಿ­ಕೊಳ್ಳಬಹುದಾದ ಇಂಥ ಪರಿಸರ ಸ್ನೇಹಿ ಔಷಧಿಗಳ ಬಳಕೆಗೆ ಕೃಷಿ ಸಂಶೋಧನಾ ಕೇಂದ್ರ-ಗಳು ಯಾಕೆ ಉತ್ತೇಜನ ಕೊಡುತ್ತಿಲ್ಲ?

ಇನ್ನು ಕೃಷಿ ವಿಶ್ವವಿದ್ಯಾಲಯಗಳ ಕಥೆಯೋ? ಅದೊಂದು ವ್ಯಥೆ!  ವಿಧಾನಮಂಡಲದ ಕಳೆದ ಅಧಿ-ವೇಶನದಲ್ಲಿ ನಮ್ಮ ರಾಜ್ಯ ಸರ್ಕಾರವೇ ಪ್ರಕಟಿಸಿದಂತೆ, ಕೃಷಿ ವಿ.ವಿ.ಗಳಲ್ಲಿ ರೈತರ ಮಕ್ಕಳಿಗೆ ಶೇ 40ರಷ್ಟು ಮೀಸಲಾತಿ ಕಲ್ಪಿಸಿದ್ದರೂ ಪದವಿ ಪಡೆದವರ ಪೈಕಿ ಶೇ 2ರಷ್ಟು ಮಂದಿ ಮಾತ್ರ ವ್ಯವ-ಸಾಯ ಕ್ಷೇತ್ರ ಆಯ್ದುಕೊಳ್ಳುತ್ತಿದ್ದಾರೆ! ಅಂದರೆ ಉಳಿದವರೆಲ್ಲ ಯಾವುದೋ ಉದ್ಯೋಗಕ್ಕೆ ಸೇರುತ್ತಿದ್ದಾರೆ ಎಂದರ್ಥ ತಾನೇ? ಇನ್ನೂ ಸರಳವಾಗಿ ಹೇಳಬೇಕೆಂದರೆ, ತಾವು ಓದಿರುವು-ದನ್ನು ಲಾಭದಾಯಕ ಕೃಷಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಾದಂತಿದೆ.

ವಿಚಿತ್ರ ಎಂದರೆ, ಐದಾರು ವರ್ಷ ಕೃಷಿ ವಿಜ್ಞಾನ ಅಧ್ಯಯನ ಮಾಡಿದ ಈ ‘ಮಣ್ಣಿನ ಮೂಲದ ಮಕ್ಕಳು’, ತಮ್ಮ ಜಮೀನುಗಳನ್ನು ಹಳ್ಳಿಯಲ್ಲಿ ಬೀಳು ಬಿಟ್ಟು, ಮೂರೂ ಹೊತ್ತು ಬೇಸಾಯ-ದಲ್ಲಿ ಮುಳುಗೇಳುತ್ತಿರುವ ರೈತರಿಗೆ ಲಾಭ-ದಾಯಕ ಕೃಷಿ ಕುರಿತು ಪುಕ್ಕಟೆ ಸಲಹೆ ಕೊಡುತ್ತಾರೆ. ಆಧುನಿಕ ಕೃಷಿ ಲೋಕದ ಈ ಅಧ್ವಾನಕ್ಕೆ ಏನು ಹೇಳುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT