ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಸ್ತರಣೆ’: ಮೋದಿ ಟೀಕೆಗೆ ಚೀನಾ ಆಕ್ಷೇಪ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ಕೆಲ ರಾಷ್ಟ್ರಗಳು ‘ವಿಸ್ತರಣೆ’ ಮಾಡುವುದನ್ನೇ ಪ್ರವೃತ್ತಿಯ­ನ್ನಾಗಿ ಮಾಡಿಕೊಂಡಿವೆ ಎಂಬ ಪ್ರಧಾನ­ಮಂತ್ರಿ ನರೇಂದ್ರ ಮೋದಿ ಅವರ ಟೀಕೆಗೆ   ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಕಿನ್ ಗಾಂಗ್, ‘ಅವರು (ಮೋದಿ) ಯಾವ ವಿಷಯ­ವನ್ನು ಉಲ್ಲೇಖಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಭಾರತ–ಚೀನಾ ಸಾಂಪ್ರ­ದಾ­ಯಿಕ ಪಾಲುದಾರರೆಂದು ಈ ಹಿಂದೇ ಅವರೇ ಹೇಳಿದ್ದರು. ಅದನ್ನು ಮರೆಯಬಾರದು’ ಎಂದರು.

‘ನಾವು ನೆರೆಹೊರೆಯ ಉತ್ತಮ ಮಿತ್ರರು. ಅಭಿವೃದ್ಧಿ ವಿಷಯದಲ್ಲಿ ಎರಡೂ ದೇಶಗಳ ಆಶಯ ಒಂದೇ ಆಗಿದೆ. ಚೀನಾ-–ಭಾರತ ಸಹಕಾರದಿಂದ ಇರುವುದು ಜಾಗತಿಕ ಮತ್ತು ಇಡೀ ಮಾನವ ಕುಲದ ಅಭ್ಯುದಯದ ದೃಷ್ಟಿಯಿಂದ ಮಹತ್ವದ್ದು’ ಎಂದು ಜಪಾನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ  ಅವರ ‘ವಿಸ್ತರಣೆ’ ಟೀಕೆ ಕುರಿತ ಪ್ರಶ್ನೆಗೆ ಕಿನ್‌ ಉತ್ತರಿಸಿದರು.

ಮೋದಿ ಅವರು ‘ವಿಸ್ತರಣೆ’ ಪದ ಬಳಸಿದಾಗ ಯಾವುದೇ ದೇಶವನ್ನು ಪ್ರಸ್ತಾಪಿಸಿಲ್ಲ. ಆದರೆ, ಅವರ ನೇರ ಗುರಿ ಚೀನಾವೇ ಆಗಿದೆ ಎನ್ನಲಾಗಿದೆ.

ಭಾರತ, ಜಪಾನ್‌, ವಿಯೆಟ್ನಾಂ ಮತ್ತಿತರ ದೇಶಗಳೊಂದಿಗೆ ಪದೇ ಪದೇ ಗಡಿ ತಕರಾರು ಎತ್ತಿ ಜಗಳ ಕಾಯುವ ಪ್ರವೃತ್ತಿಯ ಚೀನಾ, ಮೋದಿ ಅವರ ಗುರಿಯಾಗಿತ್ತು ಎಂದು ಹೇಳಲಾಗಿದೆ.

ಟೋಕಿಯೊದಲ್ಲಿ ಸೋಮವಾರ ಮಾತನಾಡಿದ ಮೋದಿ, ‘ವಿಕಾಸವಾ­ದವೇ (ಅಭಿವೃದ್ಧಿ) ಅಥವಾ ‘ವಿಸ್ತಾರ­ವಾ­ದವೇ (ಗಡಿ ವಿಸ್ತರಣೆ) ಎಂಬುದನ್ನು ನಾವು ಮೊದಲು ಸ್ಪಷ್ಟಮಾಡಿಕೊಳ್ಳ­ಬೇಕು. ವಿಸ್ತಾರವಾದವು ಸಮಗ್ರತೆಗೆ ಭಂಗ ತರುವಂತಹದ್ದು. ಬುದ್ಧನನ್ನು ಅನು­ಸರಿಸುವವರು ವಿಕಾಸವಾದದಲ್ಲಿ ನಂಬಿಕೆ ಇರಿಸಿಕೊಳ್ಳಬೇಕು. ಆದರೆ, 18ನೇ ಶತಮಾನದ ಚಿಂತನೆಗಳನ್ನೇ ಈಗಲೂ ಹೊಂದಿ­ರುವವರು ಗಡಿ ಒತ್ತುವರಿ, ಸಮುದ್ರದ ಸರಹದ್ದಿಗೆ ಲಗ್ಗೆ ಹಾಕುವ ಕಾರ್ಯದಲ್ಲೇ ತೊಡಗಿ­ದ್ದಾರೆ’ ಎಂದಿದ್ದಾರೆ.

ಶಾಲಾ ಮಕ್ಕಳಿಗೆ ಕೃಷ್ಣನ ಕಥೆ!
ಟೋಕಿಯೊ (ಪಿಟಿಐ): ಇಲ್ಲಿನ 136 ವರ್ಷಗಳಷ್ಟು ಹಳೆಯದಾದ ತೈಮೀ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮಕ್ಕಳೊಂದಿಗೆ ಬೆರೆತು ಅವರಿಗೆ ಶ್ರೀ ಕೃಷ್ಣನ ಕಥೆ ಹೇಳಿದರು.

ಸಂಗೀತ ತರಗತಿಯಲ್ಲಿ ಮಕ್ಕಳು ತಮಗಾಗಿ ಹಾಡಿದ ಹಾಡನ್ನು ಆಲಿಸಿದ ಅವರು, ಕೆಲವು ಮಕ್ಕಳು ಕೊಳಲು ನುಡಿಸುವುದನ್ನು ಕಂಡು ಸಂಗೀತದಿಂದ ಪ್ರಾಣಿಗಳನ್ನು ಆಕರ್ಷಿಸಬಹುದು ಎಂದು ಗೋವುಗಳನ್ನು ಕಾಯುತ್ತಿದ್ದ ಕೃಷ್ಣನ ಕಥೆಯನ್ನು ಹೇಳಿದರು.

ವಿದ್ಯಾರ್ಥಿ ಮೋದಿ!: ಮೋದಿ ಅವರು ಜಪಾನಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ‘ವಿದ್ಯಾರ್ಥಿ’ಯಾಗಿ ಶಾಲೆಗೆ ಭೇಟಿ ನೀಡಿದರು. ಭಾರತಕ್ಕೆ ಬಂದು ಜಪಾನಿ ಭಾಷೆ ಬೋಧಿಸುವಂತೆ ಇಲ್ಲಿನ ಬೋಧಕರನ್ನು ಆಹ್ವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT