ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇಗದ ರಾಣಿ’ ಲೆಲೇ ಇರಾನ್‌ ಮಹಿಳೆಯರ ಸ್ಫೂರ್ತಿ

Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಟೆಹರಾನ್‌ನ ಆಜಾದಿ ಕ್ರೀಡಾಂಗಣದಲ್ಲಿ ಕಾರ್ ರೇಸ್‌ಗೆ ಸಿದ್ಧತೆ ನಡೆದಿತ್ತು. ಸ್ಪರ್ಧಾಳುಗಳಲ್ಲಿ ಒಬ್ಬರಾದ ಲೆಲೇ ಸೆದ್ದಿಗ್ ಇನ್ನೇನು ಟ್ರ್ಯಾಕ್‌ನಲ್ಲಿ ಸಿದ್ಧರಾಗಲು ಒಳಗೆ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಅಲ್ಲಿನ ಬಾಗಿಲು ಮುಚ್ಚಲಾಯಿತು. ಇದಕ್ಕೆ ಕಾರಣ ಪುರುಷರ ಅಹಂಗೆ ಧಕ್ಕೆ ತಂದಿದ್ದು.

ಮಹಿಳಾ ರೇಸರ್‌ ಲೆಲೇ ಅವರಿಗೆ ನೀಡುತ್ತಿರುವ ಮಹತ್ವವನ್ನು ತಮಗೆ ಕೊಡುತ್ತಿಲ್ಲ ಎನ್ನುವುದು ಅನೇಕ ಪುರುಷ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಪುರುಷರ ಉಪಸ್ಥಿತಿಯಲ್ಲಿ ಸಾರ್ವಜನಿಕವಾಗಿ ಮಹಿಳಾ ಕ್ರೀಡಾಸ್ಪರ್ಧಿಗಳು ಭಾಗವಹಿಸಲು ಅಲ್ಲಿನ ಇರಾನ್‌ ಇಸ್ಲಾಮಿಕ್ ಗಣರಾಜ್ಯದ ಕಠಿಣ ಕಾನೂನುಗಳಲ್ಲಿ ಅವಕಾಶವಿಲ್ಲ. ಕಾನೂನು, ಧರ್ಮ, ಲಿಂಗ ಅಸಮಾನತೆಯಂತಹ ಹಲವು ತೊಡಕುಗಳ ನಡುವೆಯೂ ಅವುಗಳನ್ನು ಮೀರಿ ಅಚ್ಚರಿ ಮೂಡಿಸಿದ ಲಲೇ ಸೆದ್ದಿಗ್, ಇರಾನ್‌ನ ಮಹಿಳೆಯರ ಪಾಲಿಗೆ ಸ್ಫೂರ್ತಿ. ಇರಾನ್‌ನ ಇತಿಹಾಸದಲ್ಲಿಯೇ ಕಾರ್‌ ರೇಸ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಆಕೆಗೆ ‘ಲಿಟ್ಲ್‌ ಶುಮಾಕರ್‌’ ಎಂಬ ವಿಶೇಷಣವನ್ನೂ ತಂದುಕೊಟ್ಟಿದೆ. 

1977ರ ಫೆಬ್ರುವರಿಯಲ್ಲಿ ಸಿರಿವಂತ ಕುಟುಂಬದ ನಾಲ್ವರು ಮಕ್ಕಳಲ್ಲಿ ಲೆಲೇ ಮೊದಲನೆಯವರು. ತಂದೆ ಮೋರ್ಸಲ್‌ ಸೆದ್ದಿಗ್ ಸ್ವಿಟ್ಜರ್ಲೆಂಡ್‌ನಲ್ಲಿ ಓದಿದವರು. ಹೀಗಾಗಿ ತಮ್ಮ ಹೆಣ್ಣುಮಕ್ಕಳನ್ನು ಅತಿಯಾದ ಧಾರ್ಮಿಕ ಕಟ್ಟುಪಾಡುಗಳಲ್ಲಿ ಬಂದಿಯಾಗಿಸುವ ಧೋರಣೆ ಅವರಲ್ಲಿ ಇರಲಿಲ್ಲ. ಪಿಯಾನೊ ನುಡಿಸುವುದು, ಚಿತ್ರಕಲೆಯಂತಹ ಹವ್ಯಾಸಗಳನ್ನು ರೂಢಿಸಿಕೊಂಡಿದ್ದ ಹಿರಿಮಗಳು ಲೆಲೇನಲ್ಲಿ ಕಾರಿನ ವ್ಯಾಮೋಹವನ್ನು ಮೋರ್ಸಲ್ ಚಿಕ್ಕಂದಿನಿಂದಲೇ ಗುರುತಿಸಿದ್ದರು.

ಎಂಟು ವರ್ಷದ ಮಗುವಾಗಿದ್ದಾಗ ಮನೆಯಂಗಳದಲ್ಲಿ ಕಾರು ಓಡಿಸುವುದನ್ನು ಅವರು ಕಲಿಸಿಕೊಟ್ಟಿದ್ದರು. ಅಪ್ಪ ಕಾರು ಓಡಿಸುವಾಗಲೆಲ್ಲಾ ತದೇಕಚಿತ್ತದಿಂದ ಅದನ್ನು ಗಮನಿಸುತ್ತಿದ್ದ ಲೆಲೇಗೆ ಅಪ್ಪನೇ ಮೊದಲ ಗುರು. ಗೋಡೆಗೆ ಗುದ್ದಿಸಿ ಕಾರಿಗೆ ಹಾನಿ ಮಾಡಿದ್ದರೂ ಮಗಳ ಆಸೆಯನ್ನು ಅವರು ತಡೆಯುವ ಪ್ರಯತ್ನ ಮಾಡಲಿಲ್ಲ.

11ನೇ ವಯಸ್ಸಿಗೆ ಲೆಲೇ ಮುಖ್ಯ ಬೀದಿಗಳಲ್ಲಿ ಕಾರು ಚಲಾಯಿಸುವಷ್ಟು ಪರಿಣತಳಾಗಿದ್ದರು. ಅಪ್ಪ ಮಲಗಿದ್ದಾಗ ಕೀ ಕದ್ದೊಯ್ದು ಕಾರು ಓಡಿಸುತ್ತಿದ್ದದ್ದೂ ಇತ್ತು. ಒಮ್ಮೆ ರಾತ್ರಿ ವೇಳೆ ಒಬ್ಬಳೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಆಕೆಯನ್ನು ಹಿಡಿದ ಪೊಲೀಸರು, ಏಕೆ ರಸ್ತೆಯಲ್ಲಿ ಕಾರು ಚಾಲನೆ ಮಾಡಲು ಬಿಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ಅಪ್ಪನ ಉತ್ತರ ‘ನನ್ನಿಂದ ಆಕೆಯನ್ನು ತಡೆಯಲು ಸಾಧ್ಯವಿಲ್ಲ’ ಎಂಬುದಾಗಿತ್ತು.

ಇದು ಈಗ ರೇಸ್‌ ಟ್ರ್ಯಾಕ್‌ನಲ್ಲಿ ಲೆಲೇ ಅವರ ವೇಗದ ಚಾಲನೆ ಮತ್ತು ನಿಖರತೆಯನ್ನು ಕಂಡು ನಿಬ್ಬೆರಗಾಗುವ ಅನೇಕ ಸ್ಪರ್ಧಿಗಳ ಮಾತೂ ಹೌದು. ಮಗಳ ಉತ್ಸಾಹ ಮತ್ತು ಗಂಡುಮಕ್ಕಳೊಂದಿಗೆ ಸ್ಪರ್ಧಿಸುವ ಬಯಕೆಯನ್ನು ಪೋಷಕರು ಗುರುತಿಸಿದ್ದರು. ಗಂಡುಮಗುವಿನಂತೆಯೇ ಆಕೆಯನ್ನು ಬೆಳೆಸಿದರು.

ಕಾರ್‌ನೆಡೆಗಿನ ಅತೀವ ಸೆಳೆತ ಅವರನ್ನು ರೇಸ್‌ನತ್ತ ಆಕರ್ಷಿಸಿದೆ. 18ನೇ ವಯಸ್ಸಿನಲ್ಲಿ ಲೆಲೇ ರೇಸ್‌ ವೃತ್ತಿ ಬದುಕಿಗೆ ಕಾಲಿಟ್ಟರು. 2002ರಲ್ಲಿ ಇನ್ನೂ ರೇಸಿಂಗ್‌ ಪರವಾನಗಿ ಪಡೆಯುವ ಮುನ್ನವೇ ಉಂಟಾದ ಭೀಕರ ಅಪಘಾತ ಲೆಲೇ, ವೃತ್ತಿಗೆ ಕಂಟಕ ಉಂಟುಮಾಡುವ ಭಯ ಮೂಡಿಸಿತ್ತು. ರೇಸ್‌ನಲ್ಲಿ ಪುರುಷ ಸ್ಪರ್ಧಿಗಳನ್ನು ಹಿಂದಿಕ್ಕಿ ಅಚ್ಚರಿ ಮೂಡಿಸಿದ ಲೆಲೇ ಅವರಿಗೆ ರೇಸ್‌ ಪರವಾನಗಿ ದೊರೆತದ್ದು ಮೂರು ವರ್ಷದ ಹಿಂದಷ್ಟೇ.

‘ಈ ಕ್ರೀಡೆ ಪುರುಷರದ್ದು. ಇರಾನ್‌ನಲ್ಲಿ ಪುರುಷರೊಂದಿಗೆ ಮಹಿಳೆಯರು ಸ್ಪರ್ಧಿಸುವುದನ್ನು ಹೆಚ್ಚಿನವರು ಒಪ್ಪುವುದಿಲ್ಲ’ ಎನ್ನುವ ಅಲಿ ಕಲ್ಹೋರ್‌, ‘ಚಾಲಕನ ಸೀಟಿನ ಮೇಲೆ ಕುಳಿತ ಮೇಲೆ ಲೆಲೇ ಪುರುಷನಾಗಿ ಪರಿವರ್ತನೆಯಾಗುತ್ತಾರೆ’ ಎಂದಿದ್ದರು. 2013ರಲ್ಲಿ ಲೆಲೇ 1600 ಸಿ.ಸಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆದಾಗ ಅಲಿ ಕಲ್ಹೋರಾ ಕೂಡ ಸ್‍ಪರ್ಧೆಯಲ್ಲಿದ್ದರು.

ಲೆಲೇ ಅವರನ್ನು ಸ್ಪರ್ಧೆಯಿಂದ ದೂರವಿರಿಸುವ ಪ್ರಯತ್ನಗಳು ಸರ್ಕಾರಿ ಮಟ್ಟದಿಂದಲೇ ನಡೆದವು. ‘ಲೆಲೇಗೆ ಅವಕಾಶ ನೀಡದಿದ್ದರೆ ಆಕೆ ಅನಿವಾರ್ಯವಾಗಿ ದೇಶ ತೊರೆಯಬೇಕಾಗುತ್ತದೆ. ಆಕೆಯೊಂದಿಗೆ ನನ್ನಂತಹ ಕೈಗಾರಿಕೋದ್ಯಮಿಯನ್ನೂ ದೇಶ ಕಳೆದುಕೊಳ್ಳಬೇಕಾಗುತ್ತದೆ’ ಎಂದು ರೇಸ್‌ ಫೆಡರೇಷನ್‌ಗೆ ಎಚ್ಚರಿಕೆ ನೀಡುವ ಮೂಲಕ ಮಗಳ ಬೆಂಬಲಕ್ಕೆ ನಿಂತರು ತಂದೆ ಮೋರ್ಸಲ್‌.

ಹಲವು ದೇಶಗಳ ರೇಸ್‌ ಪ್ರಿಯರ ಬಾಯಲ್ಲೂ ಲೆಲೇ ಹೆಸರು ಜನಜನಿತ. ಈ ‘ವೇಗದ ರಾಣಿ’ಯ ಎದೆಗುಂದದ ಉತ್ಸಾಹ, ಛಲ ಮುಖ್ಯವಾಹಿನಿಗೆ ಬರಲು ಹೆದರುವ ಮಹಿಳೆಯರಿಗೆ ಪ್ರೇರಣೆಯಾಗಿದ್ದರೆ, ಪುರುಷರೊಂದಿಗೆ ಮಹಿಳೆಯರು ಸ್ಪರ್ಧಿಸಬಾರದೆಂಬ ಇರಾನ್‌ನ ಕಾನೂನಿಗೆ ಸವಾಲು ಒಡ್ಡುವ ಪರಿವರ್ತನೆಗೂ ಕಾರಣವಾಗಿದೆ. 

ಲೆಲೇ ಸಾಧನೆಗಳು
38 ವರ್ಷದ ಲೆಲೇ ಕೈಗಾರಿಕಾ ಮ್ಯಾನೇಜ್‌ಮೆಂಟ್‌ನ ಪಿಎಚ್‌.ಡಿ ವಿದ್ಯಾರ್ಥಿನಿ. ಕಾರ್‌ ರೇಸಿಂಗ್‌ ಮಾತ್ರವಲ್ಲ, ವಾಲಿಬಾಲ್‌, ಕುದುರೆ ಜಂಪಿಂಗ್, ವೇಗದ ಓಟಗಳಲ್ಲಿಯೂ ಪರಿಣತೆ. ಆಟೊ ತಂತ್ರಜ್ಞಾನ ರಿಪೇರಿ ತರಬೇತಿ, ಪೈಲಟ್‌ ತರಬೇತಿಯನ್ನು ಸಹ ಪಡೆದುಕೊಂಡಿದ್ದಾರೆ.

2002ರಲ್ಲಿ ರೇಸಿಂಗ್‌ ಪ್ರಾರಂಭಿಸಿದ ಅವರು, 2003 ಮತ್ತು 2004ರಲ್ಲಿ ಸತತವಾಗಿ ಮಹಿಳಾ ಚಾಂಪಿಯನ್‌ಷಿಪ್‌ ಗೆದ್ದುಕೊಂಡರು. 28 ರ್‍ಯಾಲಿಗಳಲ್ಲಿ ಸ್ಪರ್ಧಿಸಿ ಮೂರು ಬಾರಿ ಮೊದಲ ಸ್ಥಾನ ಬಂದಿದ್ದಾರೆ. 2004ರಲ್ಲಿ ರಾಷ್ಟ್ರೀಯ ರ್‍ಯಾಲಿ ರೇಸ್‌ ಮಹಿಳಾ ಚಾಂಪಿಯನ್‌, 2005ರಲ್ಲಿ ಪಾರ್ಸ್‌–ಫಾರ್ಸ್‌ ರಾಷ್ಟ್ರೀಯ ರ್‍ಯಾಲಿಯಲ್ಲಿ ಮಹಿಳಾ ಚಾಂಪಿಯನ್‌, ಪ್ರೋರೊಮಾ ಕಪ್‌ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್, ಟೆಹರಾನ್ ಕ್ಲಬ್ಸ್‌ ರ್‍ಯಾಲಿ ಮೊದಲ ಸ್ಥಾನ ಸೇರಿದಂತೆ ದೇಶ ವಿದೇಶಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಲೆಲೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT