ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇಶ್ಯಾವಾಟಿಕೆ ಅಡ್ಡೆ’ಗಳೂ ಸಮಾಜ ಕಲ್ಯಾಣವೂ

Last Updated 20 ಮೇ 2016, 19:41 IST
ಅಕ್ಷರ ಗಾತ್ರ

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನವನ್ನು ಸರ್ಕಾರ ನಿಲ್ಲಿಸಿದ ನಂತರ ಡೊನೇಷನ್‌ ಹೆಸರಿನಲ್ಲಿ ಸುಲಿಗೆಯ ಹೊಸ ರಾಜಮಾರ್ಗ ತೆರೆಯಿತು...

ಖಾಸಗಿ ಶಾಲೆಗಳನ್ನು ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರು ವೇಶ್ಯಾಗೃಹಗಳಿಗೆ ಹೋಲಿಸಿ ಮಾತನಾಡಿದ್ದಾರೆ. ‘ಖಾಸಗಿ ಶಾಲೆಯವರಿಗೆ ದುಡ್ಡು ಮಾಡುವುದೊಂದನ್ನು ಬಿಟ್ಟು ಬೇರಾವ ಗುರಿಯೂ ಇರುವುದಿಲ್ಲ. ಅಂಥ ಸಂಸ್ಥೆಗಳಿಗೂ ವೇಶ್ಯಾವಾಟಿಕೆ ನಡೆಸುವವರಿಗೂ ಯಾವ ವ್ಯತ್ಯಾಸವೂ ಇಲ್ಲ’ ಎಂದಿದ್ದಾರೆ ಸಚಿವರು. ಅವರು ಹೋಲಿಕೆಗೆ ಬಳಸಿರುವ ವಿಷಯ ವಸ್ತುವನ್ನು ಬದಿಗಿಟ್ಟು ನೋಡುವುದಾದರೆ ಸಚಿವರು ಶಿಕ್ಷಣ ಮಾಫಿಯಾದ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.

ಆದರೆ... ಸಚಿವರು ಹೇಳಿದ ‘ವೇಶ್ಯಾವಾಟಿಕೆ ಅಡ್ಡೆ’ಗಳ ಬಹುಪಾಲು ಮಾಲೀಕರು ಯಾರು? ಇದೇ ಖಾದಿ, ಕಾವಿಧಾರಿಗಳಲ್ಲವೇ? ಬೀದಿಬದಿಯ ‘ವೇಶ್ಯಾವಾಟಿಕೆ’ಯಿಂದ ಹಿಡಿದು ಹೈಟೆಕ್ (ಎಂಜಿನಿಯರಿಂಗ್, ಮೆಡಿಕಲ್) ‘ವೇಶ್ಯಾವಾಟಿಕೆ’ಯ ಅಡ್ಡೆಗಳಿರುವುದೂ ಇವರ ಕೈಯಲ್ಲೆ. ಈ ‘ವೇಶ್ಯಾಗೃಹ’ಗಳನ್ನು ಸ್ಥಾಪಿಸಲು ಕುಮ್ಮಕ್ಕು ನೀಡುತ್ತಿರುವುದು ಸರ್ಕಾರಗಳಲ್ಲವೇ? ಹೇಗೆಂದು ವಿಶ್ಲೇಷಿಸೋಣ...

ಹಿಂದೆ ಕರಾವಳಿ ಪ್ರದೇಶದಲ್ಲಿ ಗೋವಾದಿಂದ ಕೇರಳ ತೀರದವರೆಗೆ ಕ್ರೈಸ್ತ ಮಿಷನರಿಗಳು ಧರ್ಮ ಪ್ರಚಾರಕ್ಕಾಗಿ ಬಂದು ಶಿಕ್ಷಣ ಸಂಸ್ಥೆಗಳನ್ನು ತೆರೆದವು. ಮುಂದೆ ಅವು ಪೂರ್ಣ ಪ್ರಮಾಣದಲ್ಲಿ ಶಿಕ್ಷಣ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡವು. ಜತೆಗೆ ಜೈನರು, ಮುಸ್ಲಿಮರ ಸಂಸ್ಥೆಗಳೂ ಕೈಜೋಡಿಸಿದವು. ಮಲೆನಾಡಿನ ಭಾಗಗಳಲ್ಲಿ ಐನೋರ ಮಠಗಳು, ಬ್ರಾಹ್ಮಣರ ಮಠಗಳು, ಮಧ್ಯ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಲಿಂಗಾಯತ ಶಿಕ್ಷಣ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಅಕ್ಷರ ದಾಸೋಹದಲ್ಲಿ ತೊಡಗಿದವು.

ಈ ಎಲ್ಲ ಖಾಸಗಿ ಸಂಘ–ಸಂಸ್ಥೆಗಳ ಸೇವಾ ಫಲದಿಂದಲೇ ರಾಜ್ಯದಲ್ಲಿ ಸುಶಿಕ್ಷಿತರ ಪ್ರಮಾಣ ಏರಿತು. ಒಂದು ವೇಳೆ ಸರ್ಕಾರವೊಂದನ್ನೇ ನಂಬಿ ಕುಳಿತಿದ್ದರೆ ಈ ಮಟ್ಟದ ಶಿಕ್ಷಣ ಪ್ರಸಾರಕ್ಕೆ ಇನ್ನೂ ಒಂದು ಶತಮಾನವೇ ಬೇಕಾಗುತ್ತಿತ್ತೇನೋ? ಆಗ ಈ ಶಿಕ್ಷಣ ಸಂಸ್ಥೆಗಳಲ್ಲಿ ಹಣದಾಹ ಇಲ್ಲದ ನೈಜ ಸೇವೆ  ನಡೆಯಿತು. ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪಿಸಿದವರಂತೂ ಹಿಡಿಗಾಳು ಭಿಕ್ಷೆ ತಂದು ವಿದ್ಯಾರ್ಥಿಗಳಿಗೆ ಅನ್ನ ಬಡಿಸಿದ ದಿನಗಳನ್ನೂ ಈ ನಾಡು ಕಂಡಿತ್ತು. ಆಗ ಇಂಥ ಸಂಸ್ಥೆಗಳ ಸೇವೆ ಮೆಚ್ಚಿದ ಸರ್ಕಾರ ಇವುಗಳಿಗೆ ವೇತನಾನುದಾನ ಒದಗಿಸಿ ಆರ್ಥಿಕ ಬೆಂಬಲ ನೀಡಿತು. 

ಸರ್ಕಾರ ಹೊಸ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನವನ್ನು ಸಂಪೂರ್ಣವಾಗಿ ನಿಲ್ಲಿಸಿದ ನಂತರ ಡೊನೇಷನ್‌ ಹೆಸರಿನಲ್ಲಿ ಸುಲಿಗೆಯ ಹೊಸ ರಾಜಮಾರ್ಗ ತೆರೆಯಿತು. ಈ ಬಗ್ಗೆ ಪ್ರಶ್ನಿಸಿದರೆ, ಶಿಕ್ಷಣ ಸಂಸ್ಥೆಯ ನಿರ್ವಹಣೆ, ಸಿಬ್ಬಂದಿ ವೇತನ, ಮೂಲಸೌಕರ್ಯ, ಸ್ಕೂಲ್‌ಬಸ್, ಸಮವಸ್ತ್ರ ಇತ್ಯಾದಿ ಅಗತ್ಯ– ಅನಗತ್ಯ ವ್ಯವಸ್ಥೆಗಳನ್ನು ಒದಗಿಸುವ ಪಟ್ಟಿಯನ್ನು ಈ ಸಂಸ್ಥೆಗಳ ಮುಖ್ಯಸ್ಥರು ಪೋಷಕರ ಮುಂದಿಡುತ್ತಾರೆ. ಜತೆಗೆ ಪೋಷಕರ ಬದಲಾದ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಪ್ರತಿಷ್ಠೆ, ವಿಚಿತ್ರ ಆಕರ್ಷಣೆಗಳೂ ಖಾಸಗಿ ಶಾಲೆಗಳತ್ತ ಸಾವಿರಾರು ‘ಗಿರಾಕಿ’ಗಳನ್ನು ಸೆಳೆದವು.

ಶಾಲಾ ಅಗತ್ಯಗಳ ಈ ಪಟ್ಟಿ ಮೂಲಕ ಲಕ್ಷಾಂತರ ರೂಪಾಯಿ ಲಾಭ ತೆರಿಗೆ ರಹಿತವಾಗಿ ಬರುತ್ತದೆಂದು ಗೊತ್ತಾಗಿದ್ದೇ ತಡ, ಸರ್ಕಾರದ ವೇತನಾನುದಾನ ಪಡೆಯುವ ಬಗ್ಗೆ ಯಾವ ಆಡಳಿತ ಮಂಡಳಿಯೂ ತಲೆಕೆಡಿಸಿಕೊಳ್ಳಲಿಲ್ಲ. ಒಂದು ವೇಳೆ  ವೇತನಾನುದಾನ ಬಂದರೆ ಪಡೆಯುವ ಶುಲ್ಕಕ್ಕೂ ಇತಿಮಿತಿ ಹಾಕಿಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಅವು ತಲೆಕೆಡಿಸಿಕೊಂಡಿಲ್ಲ. ಸರ್ಕಾರ ಕೇಳುವ ಶೇ 25ರಷ್ಟು ಆರ್‌ಟಿಇ ಸೀಟುಗಳನ್ನು ಸತಾಯಿಸಿಯಾದರೂ ಕೊಟ್ಟು ಕೈತೊಳೆದುಕೊಳ್ಳುತ್ತಿವೆ.

ಈ ನಡುವೆ ಬಹಳ ಹಿಂದೆ ವೇತನಾನುದಾನಕ್ಕೆ ಅರ್ಜಿ ಸಲ್ಲಿಸಿದ ಬೆರಳೆಣಿಕೆಯ ಸಂಸ್ಥೆಗಳಿಗೆ ಅನುದಾನ ಮಂಜೂರಾಯಿತು. ಆಗ ಅಲ್ಲಿ ಶಿಕ್ಷಕರ ಸುಲಿಗೆ ನಡೆಯಿತು. ‘ವೇತನಾನುದಾನ ಬರುತ್ತದೆ. ನಿಮ್ಮ ಸೇವೆ ಕಾಯಂಗೊಳಿಸುತ್ತೇವೆ. ನೀವು ಇದಕ್ಕಾಗಿ  ₹ 5 ಲಕ್ಷ  ಕೊಡಿ’ ಎಂದು ಶಿಕ್ಷಕರಿಂದಲೇ ಸುಲಿಗೆ ಮಾಡಿದ, ಅವರು ಕಣ್ಣೀರು ಹಾಕಿದ ಉದಾಹರಣೆಗಳಿವೆ. ಅತ್ತ ಪೋಷಕರಿಂದಲೂ, ಇತ್ತ ಶಿಕ್ಷಕರಿಂದಲೂ ಅನಾಯಾಸವಾದ ಸುಲಿಗೆಯನ್ನು ಕೆಲವು ಆಡಳಿತ ಮಂಡಳಿಗಳು ಮಾಡಿದವು.

ನಿರ್ದಿಷ್ಟ ಜಾತಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು, ಬರಬೇಕಾದ ಅನುದಾನವೆಲ್ಲಾ ಕೈ ಸೇರಿದ ಮೇಲೆ ಸಂಸ್ಥೆಯನ್ನು ಮುಚ್ಚಿ ಶಿಕ್ಷಕರಿಗೆ ಬಿಡಿಗಾಸೂ ಕೊಡದೆ ಮನೆಗೆ ಕಳುಹಿಸಿದವರಲ್ಲಿ ಶಾಸಕರೂ ಸೇರಿದ್ದಾರೆ. ಈಗ ಸಚಿವರು ಹೇಳಿದ ‘ವೇಶ್ಯಾಗೃಹ’ಗಳ ಮಾಲೀಕರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು. ಇದೇ ವೇಳೆ ಎಲ್ಲ ಸೌಲಭ್ಯ, ನುರಿತ ಶಿಕ್ಷಕರನ್ನು ಹೊಂದಿದ್ದೂ ಸರ್ಕಾರಿ ಶಾಲೆಗಳೇಕೆ ಸೊರಗಿದವು?  ಸುಶಿಕ್ಷಿತರು ಹೆಚ್ಚು ಇರುವ ಕರಾವಳಿ ಪ್ರದೇಶದ ಉತ್ತಮ ಸರ್ಕಾರಿ ಶಾಲೆಗಳಲ್ಲಿ 300ರಿಂದ 450 ಮಕ್ಕಳಿದ್ದ ಸಂಖ್ಯೆ 150ಕ್ಕಿಂತ ಕಡಿಮೆಯಾಗಿದೆ.

ಅದೇ ಶಾಲೆಗಳಿಂದ ಫರ್ಲಾಂಗ್‌ ದೂರದಲ್ಲಿರುವ ಖಾಸಗಿ ಶಾಲೆಗಳಲ್ಲಿ ಮಕ್ಕಳು ತುಂಬಿ ತುಳುಕುತ್ತಿದ್ದಾರೆ. ಅಲ್ಲಿನ ಸ್ಥಿತಿಗತಿಯೇ ಹೀಗಾದರೆ ರಾಜ್ಯದ ಹಿಂದುಳಿದ ಜಿಲ್ಲೆಗಳ ಪರಿಸ್ಥಿತಿಗೆ ಪ್ರತ್ಯೇಕ ವಿವರಣೆ ಬೇಡ. ನನಗೆ ಗೊತ್ತಿದ್ದಂತೆ, ಖಾಸಗಿ ಕಾಲೇಜೊಂದರ ಉಪನ್ಯಾಸಕರು ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮಾರುಕಟ್ಟೆ ಪ್ರತಿನಿಧಿಗಳಾಗಬೇಕಾಗಿತ್ತು. ಸಂಸ್ಥೆ ಹೇಳಿದ್ದಿಷ್ಟೆ: ‘ನೀವು (ಉಪನ್ಯಾಸಕರು)  ಉಳಿಯಬೇಕಾದರೆ ನೀವು ಕಲಿಸುವ ಕೋರ್ಸ್‌ಗೆ ವಿದ್ಯಾರ್ಥಿಗಳು ಬರಬೇಕು. ಅವರು ಬರುವಂತೆ ನೀವು ಮಾಡಲೇಬೇಕು’. ಅಂತೂ 15 ವಿದ್ಯಾರ್ಥಿಗಳನ್ನು ಸೇರಿಸುವಷ್ಟರಲ್ಲಿ ಉಪನ್ಯಾಸಕರು ಹೈರಾಣವಾಗಿದ್ದರು. 

ಇದನ್ನು ಮಾರುಕಟ್ಟೆ ಪರಿಭಾಷೆಯಲ್ಲಿ ಹೇಳುವುದಾದರೆ ಉಪನ್ಯಾಸಕರಿಗಿದ್ದದ್ದು ಟಾರ್ಗೆಟ್. ಗುರಿ ತಲುಪಿದರೆ ಉದ್ಯೋಗದ ಉಳಿವು. ಅಲ್ಲಿ ಗುಣಮಟ್ಟ ಕಾಪಾಡಿಕೊಂಡು ಒಳ್ಳೆಯ ಫಲಿತಾಂಶ ಕೊಟ್ಟು ಟಾರ್ಗೆಟ್‌ ವಿಸ್ತರಿಸಬೇಕು. ಇದು ಖಾಸಗಿ ವಲಯದ ವ್ಯವಸ್ಥೆ. ಅಭದ್ರತೆ ವ್ಯಕ್ತಿಯನ್ನು  ಜಾಗೃತ ಸ್ಥಿತಿಯಲ್ಲಿಡುತ್ತದೆ ಎಂಬ ತಂತ್ರ ಆಡಳಿತ ಮಂಡಳಿಗಳದು. ಸರ್ಕಾರಿ ಶಾಲೆಗಳಲ್ಲಿ ಮೇಲೆ ಹೇಳಿದ್ದರ ತದ್ವಿರುದ್ಧ ಸ್ಥಿತಿ. ಈ ಶಾಲೆಗಳ ಗುರುಗಳಿಗೆ ಗುರಿ ಇಲ್ಲ. ಜವಾಬ್ದಾರಿ ಮೊದಲೇ ಇಲ್ಲ.  ಪಾಠದ ಜತೆಗೆ ಏನೇನೋ ಕೆಲಸಗಳನ್ನು ನಿಭಾಯಿಸಬೇಕಾದ ಅನಿವಾರ್ಯ. ಶಿಕ್ಷಕರ ತೀವ್ರ ಕೊರತೆ.

ಮುಖ್ಯ ಶಿಕ್ಷಕನೊಬ್ಬ ನಿರ್ಧಾರ ಕೈಗೊಳ್ಳಲು ಸಾವಿರ ನಿರ್ಬಂಧಗಳು. ಸರ್ಕಾರಿ ಶಾಲೆಗಳ ಸಾವಿಗೆ ಇವು ಸಾಲದೇ? ಮೊದಲು, ಬಿಟ್ಟಿ ಯೋಜನೆಗಳಿಗೆ ಅಪವ್ಯಯವಾಗುತ್ತಿರುವ ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಕೊಡಬೇಕು.  ಪರಿಣತರ ತಂಡ ರಚಿಸಿ, ಅದರ ಮೂಲಕ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮೀಕ್ಷೆ ನಡೆಸಿ ಅರ್ಹ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು. ವೇತನಾನುದಾನಕ್ಕೆ ಒಳಪಟ್ಟ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಒಂದು ರೂಪಾಯಿಯನ್ನೂ ಹೆಚ್ಚುವರಿಯಾಗಿ ಪಡೆಯಲು ಅವಕಾಶ ಕೊಡಬಾರದು.

ಅನುದಾನದ ವೇತನ ನೀಡುವ ಮೊದಲು ಈ ಸಂಸ್ಥೆಗಳ ಶಿಕ್ಷಕರಿಗಾಗಿ ಅರ್ಹತಾ ಪರೀಕ್ಷೆ ನಡೆಯಲಿ. ಇಲ್ಲವಾದರೆ ಕಾಯಂ  ಉದ್ಯೋಗ ಕೊಡುವ ಹೆಸರಿನಲ್ಲಿ ಶಿಕ್ಷಕರ ಸುಲಿಗೆ ನಡೆಯುವ ಸಾಧ್ಯತೆಯಿದೆ.  ನಿಯಮ ಪಾಲಿಸದ, ಮೂಲ ಸೌಕರ್ಯ ಇಲ್ಲದ ಅಸುರಕ್ಷಿತ ಖಾಸಗಿ ಶಾಲೆಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಬೇಕು.  ಆಗ ಸಚಿವರು ಹೇಳಿದ ‘ವೇಶ್ಯಾವಾಟಿಕೆ ಅಡ್ಡೆ’ಯವರು ತಣ್ಣಗಾಗುತ್ತಾರೆ. ಇನ್ನು ಸರ್ಕಾರಿ ಶಾಲೆಗಳನ್ನು ಬಲಪಡಿಸಲೇಬೇಕು. ಶಿಕ್ಷಕರಿಗೆ ಸರ್ಕಾರಿ ನೌಕರಿ ಎಂಬ ಒಂದೇ ಕಾರಣಕ್ಕೆ ನೀಡುವ ಮಾನಸಿಕ ಹಿಂಸೆಯನ್ನು (ವೇತನ ವಿಳಂಬ, ಬಿಸಿಯೂಟ, ನಾನಾ ಬಗೆಯ ಸಮೀಕ್ಷೆ...)  ಸಂಪೂರ್ಣವಾಗಿ ನಿಲ್ಲಿಸಬೇಕು.

ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಪ್ರದೇಶದ ಮಕ್ಕಳ ಸಂಖ್ಯೆ ಹಾಗೂ ತಮ್ಮ ಶಾಲಾ ಸಾಮರ್ಥ್ಯಕ್ಕನುಗುಣವಾಗಿ ಮಕ್ಕಳನ್ನು ಕರೆತರಲೇಬೇಕು. ಶಿಕ್ಷಕರಿಗೂ ಗುರಿ ಕೊಡಬೇಕು. ಉತ್ತಮ ಫಲಿತಾಂಶ ಇಲ್ಲವಾದರೆ ಅವರ ಕೆಲಸಕ್ಕೇ ಸಂಚಕಾರದ ಆತಂಕವೂ ಇರಬೇಕು.  ಸರ್ಕಾರಿ ಶಾಲೆಗಳು ಜನರ ಪ್ರೀತಿ ವಿಶ್ವಾಸ ಮತ್ತೆ ಗಳಿಸಬೇಕಿದೆ. ಸಚಿವರೇ, ನೀವು ವ್ಯಾಖ್ಯಾನಿಸಿದ ‘ವೇಶ್ಯಾವಾಟಿಕೆ ಅಡ್ಡೆ’ಗಳನ್ನು ಕಟ್ಟಿದವರು ನಿಮ್ಮವರೆ. ಸರಿಪಡಿಸಬೇಕಾದವರೂ ನಿಮ್ಮವರೆ. ಇದು ಸಾಧ್ಯವೇ? ನಿಮ್ಮದು ಸಮಾಜ ಕಲ್ಯಾಣದ ಜವಾಬ್ದಾರಿ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT