ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯಕೀಯ ಸಂಶೋಧನೆಯಲ್ಲಿ ಹಿಂದುಳಿಯುತ್ತಿದ್ದೇವೆ–ಮೋದಿ

Last Updated 20 ಅಕ್ಟೋಬರ್ 2014, 10:58 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಹಿಂದೆ ಉಳಿಯುತ್ತಿದೆ ಎಂದು ಸೋಮವಾರ ಅಭಿಪ್ರಾಯ ಪಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳಾಗಬೇಕು ಎಂದಿದ್ದಾರೆ.

ಅಖಿತ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌–ಏಮ್ಸ್) 42ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಹಿಂದೆ ಬೀಳುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳಾಗಬೇಕಿದೆ. ನಾವು ಸಂಶೋಧನೆಗೆ ಹೆಚ್ಚಿನ ಗಮನ ನೀಡಬೇಕಿದೆ. ಇದು ಮಾನವಕುಲಕ್ಕೆ ನೀಡುವ ದೊಡ್ಡ ಕೊಡುಗೆಯಾಗಬಲ್ಲದು’ ಎಂದರು.

‘ಸಂಶೋಧನೆ ನಿಟ್ಟಿನಲ್ಲಿ ವೈದ್ಯರು   ರೋಗಿಗಳಿಗೆ  ನೀಡಲಾದ ಚಿಕಿತ್ಸೆ   ವೈಖರಿ ಹಾಗೂ ದಾಖಲೆಗಳನ್ನು ಸಂರಕ್ಷಿಸಿ ಪೋಷಿಸಬೇಕಿದೆ’ ಎಂದ ಪ್ರಧಾನಿ, ವಿಶ್ವದಲ್ಲಿ ಭಾರತೀಯ ವೈದ್ಯರು ಮಾನ್ಯತೆ ಪಡೆದಿರುವುದನ್ನೂ ಒಪ್ಪಿಕೊಂಡರು.

ನವಿಲು ನೀಲಿ ಬಣ್ಣದ ಗೌನು ಹಾಗೂ ಅದೇ ಬಣ್ಣದ ಟೋಪಿ ಧರಿಸಿದ್ದ ಪ್ರಧಾನಿ ಅವರು, ವೈದರು, ವೈದ್ಯಕೀಯ ಸಿಬ್ಬಂದಿಗಳಿಂದ ಕಿಕ್ಕಿರಿದು ತುಂಬಿಕೊಂಡಿದ್ದ ಸಭಾಂಗಣದಲ್ಲಿ ಸ್ಫೂರ್ತಿದಾಯಕ ಭಾಷಣ ಮಾಡಿದರು.

‘ಕೇವಲ ರೋಗದೊಂದಿಗೆ ಮಾತ್ರವಲ್ಲ, ರೋಗಿಗಳೊಂದಿಗೂ ಸ್ನೇಹವಿರಿಸಿಕೊಂಡವರು ಉತ್ತಮ ವೈದ್ಯರು. ಅವರು ರೋಗಿಗಳ ವಿಶ್ವಾಸವನ್ನು ಹೆಚ್ಚಿಸಲು ಯತ್ನಿಸುತ್ತಾರೆ’ ಎಂದು ಉತ್ತಮ ವೈದ್ಯರೊಬ್ಬರ ಗುಣಗಳನ್ನು ವಿವರಿಸಿದರು.

ಅಲ್ಲದೇ, ‘ಉಪದೇಶಿಸುವುದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಆಗ ಮಾತ್ರ ನಿಮ್ಮ ರೋಗಿಗಳು ನಿಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಾರೆ’ ಎಂದು ವೈದ್ಯರಿಗೆ  ಸಲಹೆ ನೀಡಿದ ಮೋದಿ, ‘ನೀವೊಬ್ಬ ಕ್ಯಾನ್ಸರ್‌ ವೈದ್ಯರಾಗಿದ್ದು, ನೀವೇ ಧೂಮಪಾನ ಮಾಡಿದರೇ.. ನೋಡಿ ವೈದ್ಯರು ಕೂಡ ಧೂಮಪಾನ ಮಾಡುತ್ತಾರೆ ಅದು ಹಾನಿಕಾರಕವಲ್ಲ ಎಂದು ಅವರು ಅಂದುಕೊಳ್ಳುತ್ತಾರೆ’ ಎಂದು ಸೋದಾಹರಣವಾಗಿ ವಿಶದಪಡಿಸಿದರು.

ಸಮಾರಂಭದಲ್ಲಿ ಪ್ರಧಾನಿ ಅವರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಸಾಥ್್ ನೀಡಿದ್ದರು. ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT