ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಾಪಂ’ ಹಗರಣಕ್ಕೆ ಡೀನ್ 46ನೇ ಬಲಿ

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ನವದೆಹಲಿ/ಭೋಪಾಲ್‌ (ಪಿಟಿಐ): ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ನೇಮಕಾತಿ ಹಗರಣದ ವರದಿ ಮಾಡುತ್ತಿದ್ದ ಪತ್ರಕರ್ತ ನಿಗೂಢವಾಗಿ ಸಾವನ್ನಪ್ಪಿದ ಬೆನ್ನಲ್ಲೇ, ಇದೇ ಪ್ರಕರಣದೊಂದಿಗೆ ತಳುಕು ಹಾಕಿಕೊಂಡಿದ್ದ ಮಧ್ಯಪ್ರದೇಶ ವೈದ್ಯಕೀಯ ಕಾಲೇಜಿನ ಡೀನ್‌ವೊಬ್ಬರು ದೆಹಲಿಯ ಹೋಟೆಲ್‌ನಲ್ಲಿ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಜಬಲ್‌ಪುರದ ಸುಭಾಸಚಂದ್ರ ಬೋಸ್‌ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅರುಣ್‌ ಶರ್ಮಾ ಮೃತದೇಹ ಭಾನುವಾರ ಇಲ್ಲಿಯ ದ್ವಾರಕಾದ ಹೋಟೆಲ್‌ನಲ್ಲಿ  ಪತ್ತೆಯಾಗಿದೆ. ಶರ್ಮಾ ತಂಗಿದ್ದ ಕೋಣೆಯ ಒಳಗಿಂದ ಉತ್ತರ ಬಾರದ ಕಾರಣ ಅನುಮಾನಗೊಂಡ ಹೋಟೆಲ್‌ ಸಿಬ್ಬಂದಿ ನಕಲಿ ಬೀಗ ಬಳಸಿ ಬಾಗಿಲು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸಾಯುವ ಮುನ್ನ ಶರ್ಮಾ ಕೋಣೆಯಲ್ಲಿ ವಾಂತಿ ಮಾಡಿಕೊಂಡಿದ್ದು, ಖಾಲಿ ಮದ್ಯದ ಸೀಸೆ ಮತ್ತು ಕೆಲವು ಔಷಧಿಗಳು ಕಂಡುಬಂದಿವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಸದಸ್ಯರೂ ಆಗಿದ್ದ ಶರ್ಮಾ ಅಗರ್ತಲಾಕ್ಕೆ ತೆರಳಬೇಕಿತ್ತು. ಹೀಗಾಗಿ ಅವರು ಶನಿವಾರ  ದೆಹಲಿಗೆ ಬಂದಿದ್ದರು.

ಮುಂದುವರಿದ ಸಾವಿನ ಸರಣಿ ಇದರೊಂದಿಗೆ ‘ವ್ಯಾಪಂ’ ಸಾವಿನ ಸರಣಿ ಮುಂದುವರೆದಿದ್ದು  ಈ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಿಗೂಢವಾಗಿ ಸಾವನ್ನಪ್ಪಿದವರ ಸಂಖ್ಯೆ 46ಕ್ಕೆ ಏರಿದಂತಾಗಿದೆ. ಮುಂದುವರೆದಿರುವ ‘ವ್ಯಾಪಂ’ ನಿಗೂಢ ಸಾವಿನ ಸರಣಿಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದೆ. ಹಗರಣಕ್ಕೆ ಎರಡು ದಿನಗಳಲ್ಲಿ ಇಬ್ಬರು ಅತ್ಯಂತ ನಿಗೂಢವಾಗಿ ಬಲಿಯಾಗಿರುವುದು ದೇಶವನ್ನು ಬೆಚ್ಚಿ ಬೀಳಿಸಿದ್ದು ಸಿಬಿಐ ತನಿಖೆಯೇ ಸೂಕ್ತ  ಎಂದು ಅಭಿಪ್ರಾಯಪಟ್ಟಿದೆ.

ಪತ್ರಕರ್ತ ಅಕ್ಷಯ್‌ ಸಿಂಗ್‌ ಸಾವಿನ ಬಗ್ಗೆ  ಕೂಲಂಕಷ  ತನಿಖೆ ನಡೆಸುವಂತೆ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆಯಲಾಗುವುದು ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ಭೋಪಾಲ್‌ನಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಹೈಕೋರ್ಟ್‌ ಹಗರಣವನ್ನು ಸಿಬಿಐ ಸೇರಿದಂತೆ ಬೇರೆ ಯಾವುದೇ ತನಿಖಾ ಸಂಸ್ಥೆಗೆ ವಹಿಸಿದರೆ  ಸರ್ಕಾರದ ಅಭ್ಯಂತರ ಇಲ್ಲ ಎಂದಿದ್ದಾರೆ.

ಪತ್ರಕರ್ತ ಅಕ್ಷಯ್‌ ಸಿಂಗ್‌ ಸಾವಿನ ಸುತ್ತ ಸುತ್ತಿಕೊಂಡಿರುವ ಶಂಕೆಗಳನ್ನು ದೂರ ಮಾಡಲು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್‌ ಮಾಡಿದ್ದಾರೆ.

ಮೋದಿ ನಿಲುವಿಗೆ ಟೀಕೆ: ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇಷ್ಟೆಲ್ಲ ಹಗರಣ, ಸಾವು ಸಂಭವಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯುತ್ತಿಲ್ಲ. ಯಥಾರೀತಿ ಈ ಎಲ್ಲ ವಿಷಯಗಳಿಗೆ ಸಂಬಂಧ ಇರದ ವಿಷಯಗಳ ಬಗ್ಗೆ ಟ್ವೀಟ್‌ ಮಾಡುತ್ತ ಹಾಯಾಗಿ ಇದ್ದಾರೆ ಎಂದು ಕಾಂಗ್ರೆಸ್‌ನ ವಕ್ತಾರ ಆರ್‌ಪಿಎನ್‌ ಸಿಂಗ್‌ ಆರೋಪಿಸಿದ್ದಾರೆ.

ತಿಂಗಳ ಹಿಂದೆ ಡೀನ್‌ ಆಗಿದ್ದ ಶರ್ಮಾ
ರೇಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಶರ್ಮಾ ಕಳೆದ ತಿಂಗಳಷ್ಟೇ  ವೈದ್ಯಕೀಯ ಕಾಲೇಜಿನ ಡೀನ್‌ ಆಗಿ ಅಧಿಕಾರ ಸ್ವೀಕರಿಸಿದ್ದರು.ವ್ಯಾಪಂ ಹಗರಣದ ಆರೋಪಿಗಳೊಂದಿಗೆ  ಸಂಪರ್ಕ ಹೊಂದಿದ್ದಾರೆ ಎಂಬ ದೂರು ಅವರ ವಿರುದ್ಧ  ಕೇಳಿ ಬಂದಿತ್ತು.  ಇದೇ ಕಾರಣಕ್ಕಾಗಿ ಡೀನ್‌ ಹುದ್ದೆಯಿಂದ ಅವರನ್ನು ವಜಾಗೊಳಿಸುವಂತೆ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿದ್ದವು.

ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾದ ನಕಲಿ ಅಭ್ಯರ್ಥಿಗಳ ಪ್ರಕರಣದ ಬಗ್ಗೆ ಡಾ. ಶರ್ಮಾ ತನಿಖೆ ನಡೆಸುತ್ತಿದ್ದರು.
ಕಳೆದ ವರ್ಷ ವ್ಯಾಪಂ ಹಗರಣದ ತನಿಖೆ ನಡೆಸುತ್ತಿದ್ದ ಇದೇ ಕಾಲೇಜಿನ  ಡೀನ್ ಡಾ. ಸಕಲೆ ಕೂಡ ಅನುಮಾನಾಸ್ಪದರೀತಿಯಲ್ಲಿ ಮೃತಪಟ್ಟಿದ್ದರು. ಮನೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅವರ ಮೃತದೇಹ ಕಂಡು ಬಂದಿತ್ತು. ಪೊಲೀಸರು ಅದು ಆತ್ಮಹತ್ಯೆ ಎಂದು ಹೇಳಿದ್ದರು.  ಸಕಲೆ  ಆಪ್ತರಾಗಿದ್ದ  ಶರ್ಮಾ ‘ಇದು ಆತ್ಮಹತ್ಯೆ ಅಲ್ಲ, ವ್ಯವಸ್ಥಿತ ಕೊಲೆ’ ಎಂದು ವಾದಿಸಿದ್ದರು.

ಒಳಅಂಗಾಂಗಗಳ ಪರೀಕ್ಷೆ
ವ್ಯಾಪಂ ಹಗರಣದ ಬಗ್ಗೆ ವರದಿ ಮಾಡುತ್ತಿದ್ದಾಗ ನಿಗೂಢವಾಗಿ ಮೃತಪಟ್ಟ ಪತ್ರಕರ್ತ ಅಕ್ಷಯ್‌ ಸಿಂಗ್‌ ಅವರ ಒಳ ಅಂಗಾಂಗಳ ಪರೀಕ್ಷೆಯನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಸಲು ಮಧ್ಯಪ್ರದೇಶ ಸರ್ಕಾರ ಒಪ್ಪಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT