ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶತಕ’ ದಾಟಿದ ಅಮಾನತು!

ಶಿಕ್ಷಕನನ್ನು ಆರಾಧಿಸುವ ಜಿಲ್ಲೆಯಲ್ಲೇ ಶಿಕ್ಷಕರ ದುರ್ನಡತೆ
Last Updated 5 ಸೆಪ್ಟೆಂಬರ್ 2015, 5:31 IST
ಅಕ್ಷರ ಗಾತ್ರ

ವಿಜಯಪುರ: ಗುರುವಿಗೆ ಗುಡಿ ಕಟ್ಟಿ ನಿತ್ಯ ಪೂಜೆ ಸಲ್ಲಿಸುವ ಜಿಲ್ಲೆಯಿದು. ಶಿಕ್ಷಕ ಸಮೂಹ ಎಂದರೇ ಶ್ರದ್ಧಾ–ಭಕ್ತಿಯಿಂದ ಗೌರವಿಸುವ ನೆಲವಿದು... ಸ್ವಾತಂತ್ರ್ಯ ಪೂರ್ವ­ದಿಂದಲೂ ಈ ಪರಂಪರೆ ಜಿಲ್ಲೆಯಲ್ಲಿ ಅನೂಚಾನಾಗಿ ನಡೆದು ಬಂದಿದೆ.

ರೇವಣಸಿದ್ಧೇಶ್ವರ ಮಾಸ್ತರ ಎಂಬ ಒಬ್ಬ ಸಾಮಾನ್ಯ ಶಿಕ್ಷಕ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ದೈವಸ್ವರೂಪಿ­ಯಾಗಿ­ದ್ದಾರೆ. ಇಂದಿಗೂ ಊರ ಜನತೆ ಗುರುವಿನ ಗುಡಿಗೆ ತೆರಳಿ ತ್ರಿಕಾಲ ಪೂಜೆ ಸಲ್ಲಿಸುತ್ತಾರೆ. ಶುಭ ಕಾರ್ಯಗಳಿಗೂ ಮುನ್ನ ಮನೆ ಮಂದಿ ತೆರಳಿ ಆರಾಧಿಸುತ್ತಾರೆ.

ಶಿಕ್ಷಕರ ದಿನಾಚರಣೆಯಾದ ಸೆ 5ರಂದು ವಿಶೇಷ ಕಾರ್ಯಕ್ರಮ ಸಂಘಟಿ­ಸುತ್ತಾರೆ. ಇದು ದಶಕಗಳಿಂದಲೂ ನಡೆದು ಬಂದಿದೆ. ಗ್ರಾಮಸ್ಥರು ಸೇರಿ­ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಚಾಚೂ ತಪ್ಪದೆ ಇಂದಿಗೂ ಪಾಲಿಸುತ್ತಾರೆ.

ಆದರೆ ಈಚೆಗಿನ ವರ್ಷಗಳಲ್ಲಿ ಉಳಿದೆ­ಡೆಯಂತೆ ಜಿಲ್ಲೆಯಲ್ಲೂ ಶಿಕ್ಷಕ ಸಮೂಹದ ಮೇಲೆ ದೂರುಗಳು ಹೆಚ್ಚು­ತ್ತಿವೆ. ಶಿಕ್ಷಕ ವೃತ್ತಿಯೊಂದನ್ನು ಹೊರತು­ಪಡಿಸಿ ಇನ್ನೆಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿರುತ್ತಾರೆ ಎಂಬ ದೂರುಗಳು ಹೆಚ್ಚಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ 2005­ರಿಂದ 2015ರವರೆಗೆ ನೀಡಿರುವ ಅಂಕಿ–ಅಂಶಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ದುರ್ನಡತೆ, ಅನಧಿಕೃತ ಗೈರು, ಮದ್ಯದ ನಶೆಯಲ್ಲೇ ಶಾಲೆಗೆ ಹಾಜರು, ಬಿಸಿಯೂಟ ವ್ಯವಸ್ಥೆಯಲ್ಲಿ ಅಕ್ರಮ, ಎಸ್‌ಡಿಎಂಸಿ ಜತೆ ತಿಕ್ಕಾಟ, ವಿದ್ಯಾರ್ಥಿಗಳ ಜತೆ ಅನುಚಿತ ವರ್ತನೆ ಸೇರಿದಂತೆ ಕರ್ತವ್ಯಲೋಪ ಇನ್ನಿತರೆ ಕಾರಣಗಳಿಂದ 115 ಶಿಕ್ಷಕರು ಅಮಾನತುಗೊಂಡಿದ್ದಾರೆ.

ದಶಕದ ಅಂಕಿ–ಅಂಶಗಳನ್ನು ಅವ­ಲೋಕಿ­ಸಿದಾಗ ಆರಂಭದ ವರ್ಷಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದ ದುರ್ನಡತೆ ಪ್ರಕರಣಗಳು 2008ರಿಂದ ಏಕಾಏಕಿ ಹೆಚ್ಚಳಗೊಂಡಿವೆ. 2009, 2010, 2011, 2012ನೇ ಸಾಲಿನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಇಲಾಖೆಯಲ್ಲಿ ದಾಖಲಾಗಿವೆ. ನಂತರದ ವರ್ಷಗಳಲ್ಲಿ ದಾಖಲಾ­ಗುವ ಪ್ರಮಾಣ ಇಳಿಮುಖಗೊಂಡಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಕಿ–ಅಂಶ ಆಧಾರದಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಯಂ ಶಿಸ್ತಿನ ಕೊರತೆ: ಸಮಾಜದ ದೃಷ್ಟಿ­ಯಲ್ಲಿ ಇಂದಿಗೂ ಶಿಕ್ಷಕ ಒಬ್ಬ ಮಾರ್ಗ­ದರ್ಶಕ. ಎಲ್ಲರ ಚಿತ್ತವೂ ಆತನತ್ತಲೇ ನೆಟ್ಟಿರುತ್ತದೆ. ಜಿಲ್ಲೆಯಲ್ಲಿ ಇಂದಿಗೂ ಶಿಕ್ಷಕ ಸಮೂಹದ ಮೇಲೆ ಅಪಾರ ಭರವಸೆಯಿದೆ ಎನ್ನುತ್ತಾರೆ ಹೆಸರು ಬಹಿರಂಗಗೊಳಿಸಲು ಇಚ್ಚಿಸದ ಜಿಲ್ಲೆಯ ಶಿಕ್ಷಣ ತಜ್ಞರೊಬ್ಬರು.

ಪ್ರತಿಯೊಬ್ಬ ಶಿಕ್ಷಕನಿಗೂ ಸ್ವಯಂ ಶಿಸ್ತು ಅಗತ್ಯ. ಪ್ರತ್ಯಕ್ಷ–ಪರೋಕ್ಷ ಕಾರಣದಿಂದ ಈ ಶಿಸ್ತು ಶಿಕ್ಷಕ ಸಮೂಹದಿಂದ ಮಾಯವಾಗುತ್ತಿದ್ದು, ದುರ್ನಡತೆ ಪ್ರಕರಣಗಳು ಬೆಳಕಿಗೆ ಬರುತ್ತವೆ ಎನ್ನುತ್ತಾರೆ ಅವರು. ಜಗತ್ತು ಎಷ್ಟೇ ಹೈಟೆಕ್‌ ಯುಗಕ್ಕೆ ಪದಾರ್ಪಣೆ ಮಾಡಿದರೂ ಶಿಕ್ಷಕ ರಹಿತ ತರಗತಿ ನಡೆಸುವುದು ಬಹಳ ಕಷ್ಟ. ಶಿಕ್ಷಕ ಎಂದೆಂದೂ ಅತ್ಯಗತ್ಯ. ಸಮಾಜದ ಮಾರ್ಗದರ್ಶಕ. ದಾರಿದೀಪ. ಭರವಸೆಯ ಬೆಳಕು. ಆಧಾರಸ್ತಂಭ.

ಇಷ್ಟೆಲ್ಲವೂ ಆಗಿರುವ ಶಿಕ್ಷಕ ಸಮೂಹ ಮೈಮರೆಯುತ್ತಿದೆ. ಯಾವೊಬ್ಬ ಶಿಕ್ಷಕನೂ ಮೈಮರೆಯ­ಬಾರದು. ಇದು ನಡೆದಿದ್ದೇ ಆದರೆ ಸಾಮಾಜಿಕ ತಳಹದಿಗೆ ಬಲವಾದ ಪೆಟ್ಟು ನೀಡಿದಂತೆ. ಇನ್ನೂ ಈಚೆಗಿನ ದಿನಗಳಲ್ಲಿ ಶಿಕ್ಷಕನೊಳಗಿನ ‘ನಮ್ಮತನ’ ಕೊರತೆ ಎದುರಾಗಿದೆ. ಇದು ದುರ್ನಡತೆಗೆ ಪ್ರಮುಖ ಕಾರಣವಾಗಿದೆ ಎಂಬ ವಿಶ್ಲೇಷಣೆ ಶಿಕ್ಷಣ ತಜ್ಞರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT