ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಾವತಿ ತೀರದಲ್ಲಿ’ ವಿಕ್ರಮ್

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

‘ಶರಾವತಿ ತೀರದಲ್ಲಿ’ ಚಿತ್ರದ ವಿಕ್ರಮ್ ಭರತ್ ನಾಯಕನಾಗಲು ಪಟ್ಟ ಪಾಡು ಒಂದೆರಡಲ್ಲ. ಅಂದಹಾಗೆ, ಅವರು ಸಿ.ಪಿ. ಯೋಗೇಶ್ವರ್ ಅವರ ಸೋದರಳಿಯ.

ನೋಡುವುದಕ್ಕೆ ಆಜಾನುಬಾಹು. ಅದಕ್ಕೆ ತಕ್ಕ ಮೈಕಟ್ಟು. ಮೊದಲ ನೋಟದಲ್ಲೇ ಸೆಳೆಯುವಂತಹ ರೂಪವಂತ. ಆ್ಯಕ್ಷನ್‌ ಹೀರೊಗೆ ಇರಬೇಕಾದ ಲಕ್ಷಣಗಳು ಮೇಲ್ನೋಟಕ್ಕೆ ಎದ್ದು ಕಾಣುತ್ತವೆ... ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ಈ ಹೊಸ ಪ್ರತಿಭೆ ಹೆಸರು ವಿಕ್ರಮ್ ಭರತ್. ರಾಜಕಾರಣಿ, ನಟ ಹಾಗೂ ನಿರ್ಮಾಪಕರೂ ಆಗಿರುವ ಸಿ.ಪಿ. ಯೋಗೇಶ್ವರ್ ಅವರ ತಂಗಿಯ ಪುತ್ರ ವಿಕ್ರಮ್‌– ‘ಶರಾವತಿ ತೀರದಲ್ಲಿ’ ಚಿತ್ರದ ಮೂಲಕ ಸದ್ದಿಲ್ಲದೆ ಸ್ಯಾಂಡಲ್‌ವುಡ್‌ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ.

ಎಂ.ಟೆಕ್ ಓದಿ ಮೂರು ತಿಂಗಳು ಕೆಲಸದ ಹುಡುಕಾಟದಲ್ಲಿದ್ದ ಭರತ್‌ಗೆ, ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಚಿಗುರೊಡೆಯಿತು. ನಟನೆಗೆ ಮಾವನೇ ಪ್ರೇರಣೆಯಾದರೂ, ಅವರಿಗೆ ತಮ್ಮ ಮನೆಯ ಮಕ್ಕಳು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲವಂತೆ. ಆದರೂ ಭರತ್ ಕೇಳಬೇಕಲ್ಲ.

ಅವಕಾಶಗಳಿಗಾಗಿ ಅಲೆದಾಡುತ್ತಲೇ ನಟನೆಯ ಪೂರ್ವತಯಾರಿ ನಡೆಸತೊಡಗಿದರು. ‘ಸ್ನೇಹಿತನ ಸಲಹೆಯ ಮೇರೆಗೆ ನೀನಾಸಂನಲ್ಲಿದ್ದ ಕೃಷ್ಣಮೂರ್ತಿ ಕವತಾರ್ ಎಂಬ ರಂಗಕರ್ಮಿ ಬಳಿ ನಟನೆ ತರಬೇತಿಗಾಗಿ ಹೋದೆ.

ಒಂದೆರಡು ದಿನ ನನ್ನಲ್ಲಿರುವ ಸಿನಿಮಾ ಹಾಗೂ ನಟನೆಯ ದಾಹವನ್ನು ಅವರು ಗಮನಿಸಿದರು. ಬಳಿಕ ನಿತ್ಯ ಬರುವಂತೆ ಹೇಳಿದರು’ ಎಂದು ಭರತ್ ತಾವು ನಟನೆ ಕಲಿಯಲಾರಂಭಿಸಿದ ಬಗೆಯನ್ನು ಹೇಳುತ್ತಾರೆ.

ಕೈಕೊಟ್ಟ ಮೊದಲ ಸಿನಿಮಾ!
‘ನಟಿಸಲು ನಾನೀಗ ಸಮರ್ಥನಿದ್ದೇನೆ’ ಎಂಬ ನಂಬಿಕೆ ಬಂದ ಬಳಿಕ ಭರತ್, ಸ್ನೇಹಿತರೊಬ್ಬರ ಮೂಲಕ ನಟರೊಬ್ಬರನ್ನು ಭೇಟಿಯಾಗಿ ಅವಕಾಶ ಕೇಳಲು ಹೈದರಾಬಾದ್‌ಗೆ ಹೋಗಿದ್ದರು. ಒಂದೆರಡು ದಿನ ಕಾದ ಭರತ್, ಕಡೆಗೂ ಅವರನ್ನು ಭೇಟಿ ಮಾಡಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.

ಇದೇ ವೇಳೆ ‘ಈಗ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ತಮ್ಮ ಸ್ನೇಹಿತ ಪುನೀತ್ ಶರ್ಮಾನ್ ಎನ್ನುವವರ ಕಣ್ಣಿಗೆ ಬಿದ್ದರು. ಅಂದಹಾಗೆ ಇವರಿಬ್ಬರೂ ಬೆಂಗಳೂರಲ್ಲಿ ಪಿಯುಸಿವರೆಗೆ ಒಟ್ಟಿಗೆ ಓದಿದವರು.

‘ನಾನು ನಟನೆಗಾಗಿ ಅವಕಾಶ ಅರಸಿ ಬಂದಿದ್ದನ್ನು ಕೇಳಿದ ಪುನೀತ್, ನಾವೇ ಯಾಕೆ ಒಂದು ಸಿನಿಮಾ ಮಾಡಬಾರದು ಎಂದರು. ನನಗೂ ಸರಿ ಎನಿಸಿತು. ಕಡೆಗೆ ಪುನೀತ್ ನಿರ್ದೇಶನದಲ್ಲಿ ‘ದಯಾ’ ಎಂಬ ಸಿನಿಮಾವನ್ನು ಕನ್ನಡ–ತೆಲುಗಿನಲ್ಲಿ ಆರಂಭಿಸಿದೆವು.

ಕನ್ನಡದಲ್ಲಿ ನಾನು ಹಾಗೂ ತೆಲುಗಿನಲ್ಲಿ ಎನ್‌ಟಿಆರ್‌ ಕುಟುಂಬದ ನಂದಮೂರಿ ತಾರಕರತ್ನ ನಾಯಕರಾಗಿ ಆಯ್ಕೆಯಾಗಿದ್ದೆವು’ ಎಂದು ತಮ್ಮ ಮೊದಲ ಸಿನಿಮಾ ಪಯಣವನ್ನು ಬಿಚ್ಚಿಡುತ್ತಾರೆ.

‘ಶೂಟಿಂಗ್ ಆರಂಭಿಸಿದ ನಂತರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆವು. ಆಗ ನಾನು ಸಿನಿಮಾ ಹಿಂದೆ ಬಿದ್ದಿರುವುದು ನಮ್ಮ ಮಾವನಿಗೆ ಗೊತ್ತಾಯಿತು. ಅವರು ನನ್ನೊಂದಿಗೆ ಮಾತು ಬಿಟ್ಟರು. ಅದೇ ಸಮಯಕ್ಕೆ ನಿರ್ಮಾಪಕರ ನಿರಾಸಕ್ತಿಯಿಂದಾಗಿ ಚಿತ್ರ ನಿಂತುಹೋಯಿತು.

ಇದರೊಂದಿಗೆ ಸಿನಿಮಾಗೆ ಎಂಟ್ರಿಯಾಗುವ ನನ್ನ ಹಾಗೂ ಪುನೀತ್ ಕನಸುಗಳು ಚೂರಾದವು. ನಂತರ ನಾನು ರಂಗಭೂಮಿಯತ್ತ ಮುಖ ಮಾಡಿದೆ. ನಾಟಕಗಳಲ್ಲಿ ಅಭಿನಯಿಸುತ್ತಲೇ, ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆಯತೊಡಗಿದೆ.

ಸಣ್ಣ ಪುಟ್ಟ ಪಾತ್ರಗಳಿಗಾಗಿ ನಿರ್ದೇಶಕರು ಹಾಗೂ ನಿರ್ಮಾಪಕರ ಬೆನ್ನು ಬಿದ್ದೆ. ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ಅವರುಗಳ ಕಚೇರಿಯಲ್ಲಿ ಕುಳಿತೆ. ಆದರೆ, ಯಾರೂ ಅವಕಾಶ ನೀಡಲಿಲ್ಲ’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಮತ್ತೆ ಚಿಗುರಿದ ಕನಸು
ರಾಜಮೌಳಿ, ರಾಮ್‌ ಗೋಪಾಲ್ ವರ್ಮ ಸೇರಿದಂತೆ ಖ್ಯಾತ ನಿರ್ದೇಶಕರ ಜತೆ ಕೆಲಸ ಮಾಡಿದ್ದ ಪುನೀತ್ ಬೆಂಗಳೂರಿಗೆ ವಾಪಸಾದರು. ಸ್ನೇಹಿತರಲ್ಲಿ ಮತ್ತೆ ಸಿನಿಮಾ ಕನಸು ಚಿಗುರೊಡೆಯಿತು. ಇದಕ್ಕೆ ಕೆಲವು ಸ್ನೇಹಿತರೂ ಕೈ ಜೋಡಿಸಿದರು. ಪುನೀತ್ ಚಿತ್ರಕಥೆ ಬರೆದರು. ‘ಶರಾವತಿ ತೀರದಲ್ಲಿ’ ಎಂಬ ಶೀರ್ಷಿಕೆಯೊಂದಿಗೆ ಶೂಟಿಂಗ್ ಕೂಡ ಆರಂಭಿಸಿದರು. ಈ ಚಿತ್ರಕ್ಕೆ ಭರತ್ ನಾಯಕರಾದರೆ, ಸೋನು ಗೌಡ ನಾಯಕಿ.

‘ಚಿತ್ರದ ಮುಹೂರ್ತಕ್ಕೆ ಇಡೀ ಕುಟುಂಬದವರು ಬಂದರೂ, ಮಾವ ಮಾತ್ರ ಬರಲಿಲ್ಲ’ ಎಂದು ತಮ್ಮ ಮರುಯತದ್ನ ಕುರಿತು ಭರತ್ ಹೇಳುತ್ತಾರೆ. ‘ನಮ್ಮದು ಟ್ರೆಂಡಿ ಸಿನಿಮಾ. ತೆಲುಗು ಮತ್ತು ತಮಿಳಿನಲ್ಲಿ ಕೆಲಸ ಮಾಡಿರುವ ನುರಿತ ತಂತ್ರಜ್ಞರು ತಂಡದಲ್ಲಿದ್ದಾರೆ.

ಪುನೀತ್ ನಿರ್ದೇಶನದಲ್ಲಿ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ. ಚಿತ್ರದ ಬಹುತೇಕ ಕೆಲಸ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ ಭರತ್. 

ಮಾವನ ಮೆಚ್ಚುಗೆ
ಅಳಿಯನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಯೋಗೇಶ್ವರ್‌ ಒಂದು ದಿನ ಪುನೀತ್‌ ಜೊತೆ ಸ್ಟುಡಿಯೋಗೆ ತೆರಳಿ ಚಿತ್ರದ ಶೂಟಿಂಗ್‌ನ ಕಚ್ಚಾ ಕ್ಲಿಪ್‌ಗಳನ್ನು ನೋಡಿದರಂತೆ. ಆನಂತರ, ‘ಚೆನ್ನಾಗಿ ಕೆಲಸ ಮಾಡಿದ್ದೀರಿ. ಏನೇ ಸಹಾಯ ಬೇಕಿದ್ದರೂ ಕೇಳಿ’ ಎಂದು ಭರವಸೆ ನೀಡಿದರಂತೆ.

ಚನ್ನಪಟ್ಟಣದಲ್ಲಿ ಇತ್ತೀಚೆಗೆ ನಡೆದ ಊರಹಬ್ಬದಲ್ಲಿ ಚಿತ್ರದ ಟ್ರೇಲರನ್ನು ಬಿಡುಗಡೆ ಮಾಡಿರುವ ಯೋಗೇಶ್ವರ್, ಅಳಿಯನ ಸಿನಿಮಾವನ್ನು ತೆರೆಗೆ ತರುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT