ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಸನಸಭೆಗಳಲ್ಲಿ ವ್ಯಾಪಾರಿಗಳೇ ಹೆಚ್ಚು’

ಡಾ. ನಾಡಗೌಡ ಕುರಿತ ಪುಸ್ತಕ ಬಿಡುಗಡೆ
Last Updated 2 ಮೇ 2016, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂಮಿ, ಮಣ್ಣು ಮತ್ತು ವಿದ್ಯೆಯನ್ನು ಮಾರುವವರೇ ಶಾಸನ ಸಭೆಗಳಲ್ಲಿ ಹೆಚ್ಚಾಗುತ್ತಿದ್ದಾರೆ. ಇಂಥವರ ನಡುವೆ ಸ್ವಂತಿಕೆ ಉಳಿಸಿಕೊಳ್ಳುವುದು ಕಷ್ಟದ ಕೆಲಸ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್. ಶಂಕರ್ ಹೇಳಿದರು.

ಕೆ.ಎಸ್. ನಾಗರಾಜ ಅವರು ಜೆಡಿ(ಯು) ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ. ನಾಡಗೌಡರ ಕುರಿತು ಸಂಪಾದಿಸಿರುವ ‘ಸದನದಲ್ಲಿ ಡಾ.ಎಂ.ಪಿ. ನಾಡಗೌಡ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶಂಕರ್ ಮಾತನಾಡಿದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ₹ 60 ಕೋಟಿ ಖರ್ಚು ಮಾಡಿದ್ದಾರೆ. ಇಷ್ಟು ದುಡ್ಡನ್ನು ಪರಿಷತ್ ಸದಸ್ಯ ಸ್ಥಾನ ಬಳಸಿ ಗಳಿಸಲಾಗದು. ಆದರೆ ಹೀಗೆ ಖರ್ಚು ಮಾಡಿ ಗೆಲ್ಲುವುದು ಕೆಲವರಿಗೆ ಪ್ರತಿಷ್ಠೆಯಾಗಿದೆ ಎಂದು ವಿಷಾದಿಸಿದರು.

‘ಇಂಥ ವ್ಯಕ್ತಿಗಳನ್ನೇ ಶಾಸನ ಸಭೆಗಳ ಸದಸ್ಯತ್ವ ಸ್ಥಾನಕ್ಕೆ ಕಳುಹಿಸುವುದು ರಾಜಕೀಯ ಪಕ್ಷಗಳ ನಾಯಕರ ನಿಲುವಾದರೆ, ಅದನ್ನು ಸಾರ್ವಜನಿಕರು ಪ್ರಶ್ನಿಸಬೇಕಾಗುತ್ತದೆ’ ಎಂದು ಹೇಳಿದರು.

‘ನಾಡಗೌಡರು ಪರಿಷತ್ ಸದಸ್ಯರಾಗಿದ್ದಾಗ ಒಂದು ಅವಧಿಯಲ್ಲಿ ನಾನು ಸಭಾಪತಿಯಾಗಿದ್ದೆ. ಅವರು ಸಭಾಪತಿಯ ಅನುಮತಿ ಪಡೆಯದೆ ಮಾತನಾಡಿದರೂ, ಅದನ್ನು ಕಡತದಿಂದ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಮೌಲಿಕ ಮಾತುಗಳನ್ನು ಅವರು ಆಡುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ರಾಮಕೃಷ್ಣ ಹೆಗಡೆ ಅವರಲ್ಲಿ ಇದ್ದಂತಹ ಸಜ್ಜನಿಕೆ, ಸಂಸ್ಕಾರ ನಾಡಗೌಡರಲ್ಲಿ ಇದೆ. ನಾಡಗೌಡರದ್ದು ಪೂರ್ವಗ್ರಹ ಇಲ್ಲದ ವ್ಯಕ್ತಿತ್ವ’ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಲಿರಲಿ, ಗೆಲುವಿರಲಿ ನಾಡಗೌಡರು ಹೋರಾಡುತ್ತಿರುತ್ತಾರೆ. ಜೆ.ಎಚ್. ಪಟೇಲರನ್ನು ಹೊರತುಪಡಿಸಿದರೆ ಹಾಸ್ಯಪ್ರಜ್ಞೆಯಲ್ಲಿ ರಾಜಕಾರಣಿಗಳ ಪೈಕಿ ನಾಡಗೌಡರೇ ಮುಂದಿದ್ದಾರೆ. ಆದರೆ ಇಂಥವರ ಸಂಖ್ಯೆ ಸದನದಲ್ಲಿ ಕಡಿಮೆಯಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

*
ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದೆ.
ಡಾ.ಎಂ.ಪಿ. ನಾಡಗೌಡ  
ಜೆಡಿಯು ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT