ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ಸೇವೆ’ಯ ಹಿಂದೆ...

ಶಿಕ್ಷಣ ಕ್ಷೇತ್ರದ ಗ್ಯಾಟ್‌್ಸ ನಿಯಮಗಳಿಗೆ ಭಾರತ ಸಹಿ ಹಾಕುವುದೇ?
Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಡಬ್ಲ್ಯು.ಟಿ.ಒ. ಎನ್ನುವ ಬಹುಭುಜ ಮತ್ತು ಬಹುಮುಖಗಳ ಅಂತರ ರಾಷ್ಟ್ರೀಯ ಸಂಸ್ಥೆ ದಶಕಗಳಿಂದ ‘ಜಾಗತಿಕ ಮಾರುಕಟ್ಟೆ’ ಎನ್ನುವ ವಹಿವಾಟಿನ ಹೆಸರಿನಲ್ಲಿ ತನ್ನ ಸದಸ್ಯ ದೇಶಗಳಲ್ಲಿ ವ್ಯಾಪಾರ ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಡಬ್ಲ್ಯು.ಟಿ.ಒ.ನ ಬಹು ಮುಖ್ಯ ಒಪ್ಪಂದವಾದ ಗ್ಯಾಟ್ಸ್ (General Agreement on Trade in Services) ಎನ್ನುವ ಒಡಂಬಡಿಕೆ ಇಂದು ಜಾಗತಿಕವಾಗಿ ಶಿಕ್ಷಣ ಕ್ಷೇತ್ರಕ್ಕೆ ದಾಳಿಯಿಟ್ಟಿದೆ. ಡಬ್ಲ್ಯು.ಟಿ.ಒ.ಗೆ ಸೇರಿದ 160 ಸದಸ್ಯ ರಾಷ್ಟ್ರಗಳ ಪೈಕಿ ಭಾರತವೂ ಒಂದು.

ಕಳೆದ ಎರಡು ದಶಕಗಳ ಜಾಗತೀಕರಣದ ಭರಾಟೆಗೆ ಸಿಲುಕಿ ನಜ್ಜುಗುಜ್ಜಾಗುತ್ತಿರುವ ಪ್ರಮುಖ ವಲಯಗಳೆಂದರೆ ಶಿಕ್ಷಣ, ಕೃಷಿ ಮತ್ತು ಆರೋಗ್ಯ. ದೇಶದ ಇಂದಿನ ಮುಕ್ತ ಮಾರುಕಟ್ಟೆಯ ನವ ಉದಾರೀಕರಣದ ಕಾಲದಲ್ಲಿ ಶಿಕ್ಷಣ ಕ್ಷೇತ್ರವು ಭಾಗಶಃ ತಳ ಒಡೆದ ದೋಣಿಯಂತಾಗಿದೆ. ಜಾಗತೀಕರಣದ ಶಕ್ತಿಗಳಾದ ರಾಜಕೀಯ, ಸಾಂಸ್ಕೃತಿಕ, ಆರ್ಥಿಕತೆಗಳು ದೇಶದ ಶಿಕ್ಷಣ ನೀತಿಯನ್ನು ನಿಯಂತ್ರಿಸುವ ಹಂತಕ್ಕೆ ಬಂದು ತಲುಪಿವೆ.

ಆರಂಭದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಆಧುನಿಕ ಶಿಕ್ಷಣವನ್ನು ನೀಡುವ ಮಹಾವೃಕ್ಷಗಳು ಎನ್ನುವ ಮರೆಮೋಸದ ನುಡಿಕಟ್ಟುಗಳ ಮೂಲಕ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಿದ ಈ ಜಾಗತೀಕರಣದ ಶಕ್ತಿಗಳು, ಇಂದು ಪ್ರತಿಗಾಮಿ ಪಾಶವೀಶಕ್ತಿಗಳಾಗಿ ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆ ಇಟ್ಟಿವೆ. ಈ ಪಾಶವೀಶಕ್ತಿಗಳ ಬೀಜರೂಪವು ಇಂದು ನವ ಉದಾರೀಕರಣದಲ್ಲಿ ಅಡಗಿ ಕುಳಿತಿದೆ. ಒ.ಇ.ಸಿ.ಡಿ. (Organisation for Economic Co– operation and Development) ಎನ್ನುವ ಜಾಗತಿಕ ಆರ್ಥಿಕ ನಿರ್ವಹಣಾ ಶಾಸ್ತ್ರವು ದೇಶದ ಶಿಕ್ಷಣ ನೀತಿ, ಪಠ್ಯಕ್ರಮ, ಪಠ್ಯಪುಸ್ತಕಗಳು, ಬೋಧನಾ ಕ್ರಮ, ವೃತ್ತಿಪರತೆ, ಶಿಕ್ಷಣ ಶಾಸ್ತ್ರದ ಮೇಲೆ ಆಕ್ರಮಣ ನಡೆಸುತ್ತಾ ಅಪಾಯಕಾರಿ ಪರಿಣಾಮಗಳನ್ನು ಉಂಟು ಮಾಡುತ್ತ್ತಿದೆ.

ಒ.ಇ.ಸಿ.ಡಿ.ಯ ಪ್ರಮುಖ ಯೋಜನೆಗಳೆಂದರೆ ವಿದ್ಯಾರ್ಥಿಗಳ ಬುದ್ಧಿಮಟ್ಟ ಪರೀಕ್ಷೆ, ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನದ ಗತಿವಿಧಾನದ ಒಲವುಗಳ  ಅವಲೋಕನ ಮತ್ತು ಅಧ್ಯಯನ, ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ಪೂರಕವಾಗುವಂತೆ ಶಿಕ್ಷಣದ ನೀತಿ ನಿಯಮಗಳನ್ನು ರೂಪಿಸುವುದು ಇತ್ಯಾದಿ.  ಒ.ಇ.ಸಿ.ಡಿ. ಎನ್ನುವ ಈ ಜಾಗತಿಕ ಆರ್ಥಿಕ ನಿರ್ವಹಣಾ ಸಂಸ್ಥೆಯು ಡಬ್ಲ್ಯು.ಟಿ.ಒ. ನೆರವಿನಿಂದ ಭಾರತದ ಶಿಕ್ಷಣ ಕ್ಷೇತ್ರದ ಉದ್ದಗಲಕ್ಕೂ ಮೇಲ್ಮುಖದಿಂದ ಕೆಳಮುಖದವರೆಗೆ ಪ್ರಭಾವ ಬೀರುತ್ತದೆ ಮತ್ತು ಇಂದು ಈ ಬಂಡವಾಳಶಾಹಿಗಳ ಅಚ್ಚುಮೆಚ್ಚಿನ  ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಶಿಕ್ಷಣ ನೀತಿಯನ್ನು ಖಾಸಗೀಕರಣಗೊಳಿಸಲು ತವಕದಿಂದಿರುವವರು ಅಧಿಕಾರದಲ್ಲಿ ಇರುವಾಗ ಡಬ್ಲ್ಯು.ಟಿ.ಒ.ದ ಎಲ್ಲ ಪ್ರತಿಗಾಮಿ ನೀತಿಗಳು ಕ್ರಮಬದ್ಧವಾಗಿ ಅನುಷ್ಠಾನಗೊಳ್ಳಲು ಬಹಳ ಸಮಯ ಬೇಕಾಗುವುದಿಲ್ಲ.

ಶಿಕ್ಷಣ ಸೇವೆಯ ಹೆಸರಿನಲ್ಲಿ ಗ್ಯಾಟ್ಸ್ ಒಡಂಬಡಿಕೆ 5 ಉಪ ವಲಯಗಳನ್ನು ಗುರುತಿಸಿದೆ. ಅವು ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ, ಉನ್ನತ ಶಿಕ್ಷಣ, ವಯಸ್ಕರ ಶಿಕ್ಷಣ, ಇತರ ಶಿಕ್ಷಣ. ಇದರ ಸದಸ್ಯ ರಾಷ್ಟ್ರವಾದ ನಮ್ಮ ಸರ್ಕಾರ ‘ಉನ್ನತ ಶಿಕ್ಷಣ’ದ ಉಪ ವಲಯಕ್ಕೆ ತನ್ನ ಆಯ್ಕೆಯನ್ನು ಮುಂದಿಟ್ಟಿದೆ. ಇನ್ನು ಗ್ಯಾಟ್ಸ್ ಎಲ್ಲ ವಲಯಗಳ ಸೇವೆಯಲ್ಲಿ ವ್ಯವಹಾರ ನಡೆಸಲು 4 ನಿಯಮಗಳನ್ನು ರೂಪಿಸಿದೆ. ಅವುಗಳೆಂದರೆ:

ಹೊರದೇಶದಿಂದ ಕಲಿಕೆ: ಭಾರತದ ವಿದ್ಯಾರ್ಥಿಗಳು ಸೇವಾ ಶುಲ್ಕ ಪಾವತಿಸಿ ವಿದೇಶದ ಪೂರೈಕೆದಾರರಿಂದ ದೂರ ಸಂಪರ್ಕ ಶಿಕ್ಷಣವನ್ನು ಪಡೆಯುವುದು.

ವಿದೇಶದಲ್ಲಿ ಕಲಿಕೆ: ವಿದೇಶಕ್ಕೆ ಹೋಗಿ ನಿಗದಿತ ಶುಲ್ಕವನ್ನು ಪಾವತಿಸಿ ಶಿಕ್ಷಣವನ್ನು ಪಡೆಯುವುದು

ವಾಣಿಜ್ಯ ಉಪಸ್ಥಿತಿ: ವಿದೇಶಿ ಪೂರೈಕೆದಾರರು ಭಾರತದಲ್ಲಿ ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಸೇವೆ ಕೊಟ್ಟು ಅದಕ್ಕೆ ಶುಲ್ಕ ಸಂಗ್ರಹಿಸುವುದು

ಅರ್ಹ ಶಿಕ್ಷಕರ ಉಪಸ್ಥಿತಿ: ವಿದೇಶಿ ಶಿಕ್ಷಕರು ಭಾರತದ ಸಂಸ್ಥೆಗಳಿಗೆ ಬಂದು ಬೋಧಿಸಿ ಶುಲ್ಕ ಪಡೆಯುವುದು. ಬರುವ ಡಿಸೆಂಬರ್‌ನಲ್ಲಿ ನೈರೋಬಿಯಲ್ಲಿ ನಡೆಯಲಿರುವ ಡಬ್ಲ್ಯು.ಟಿ.ಒ./ ಗ್ಯಾಟ್ಸ್    ಸಮಾವೇಶದಲ್ಲಿ ಭಾರತವೂ ಪಾಲ್ಗೊಳ್ಳಲಿದೆ. ಬಹುಶಃ ಈ ಮೇಲಿನ ಒಡಂಬಡಿಕೆಗೆ ಆಗ ಸಹಿ ಹಾಕಲೂಬಹುದು. ಹಾಗೇನಾದರೂ ಆದರೆ, ಶಿಕ್ಷಣ ಕ್ಷೇತ್ರದ ಮೂಲಕ ನವ ವಸಾಹತುಶಾಹಿ ಸಾಮ್ರಾಜ್ಯವನ್ನು ಕಟ್ಟಲು ಭಾರತದ ಹೆಬ್ಬಾಗಿಲು ತೆರೆದಂತೆ ಆಗುತ್ತದೆ. ಅದರಲ್ಲೂ ಮೇಲಿನವುಗಳಲ್ಲಿ ಮೂರನೇ ನಿಯಮದ ದುಷ್ಪರಿಣಾಮಗಳು ಊಹೆಗೂ ನಿಲುಕದಷ್ಟು ಅಪಾಯಕಾರಿಯಾಗಿವೆ.

ನಮ್ಮ ಸ್ವಾಯತ್ತತೆ, ವಿಕೇಂದ್ರೀಕರಣ, ದೇಸಿತನ, ಸಾಮಾಜಿಕ ನ್ಯಾಯದ ತತ್ವಗಳನ್ನು ನಾಶ ಮಾಡುವ ಎಲ್ಲ ಶಕ್ತಿ ಆ ನಿಯಮಕ್ಕೆ ಇದೆ. ಅಷ್ಟಕ್ಕೂ ಈ ವಸಾಹತುಶಾಹಿ ಸಾಮ್ರಾಜ್ಯಕ್ಕೆ ‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದ ಭಾರತ’ವನ್ನು ಕಂಡರೆ ಮೊದಲಿನಿಂದಲೂ ಅಕ್ಕರೆ, ಪ್ರೀತಿ ಜಾಸ್ತಿ.  ಭಾರತದ ಶಿಕ್ಷಣ ನೀತಿಯನ್ನು ಜೀವಂತ ಹೆಡೆಮುರಿಗೆ ಕಟ್ಟಿ ಸಮಾನ ಶಿಕ್ಷಣ, ಶಿಕ್ಷಣದ ಹಕ್ಕು, ಸಾರ್ವಜನಿಕ ಶಿಕ್ಷಣ, ಸಮಾನ ಶಾಲಾ ವ್ಯವಸ್ಥೆ, ಬಹುರೂಪಿ ಶಿಕ್ಷಣ ಎನ್ನುವ ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ತತ್ವಗಳು ಕ್ರಮೇಣ ಕೊನೆಯುಸಿರೆಳೆಯಲು ಅನುವಾಗುವಂತೆ, ಗ್ಯಾಟ್ಸ್ ಎನ್ನುವ ಒಡಂಬಡಿಕೆ ಮೂಲಕ ‘ಶಿಕ್ಷಣದ ಸೇವೆ’ ಎನ್ನುವ ಬೋನಿನೊಳಗೆ ಕೆಡವಲು ಡಬ್ಲ್ಯು.ಟಿ.ಒ. ಎಲ್ಲ ಸಿದ್ಧತೆ ನಡೆಸುತ್ತಿದೆ.

ಈ ನಾಡಿನ ಪ್ರಜ್ಞಾವಂತರು, ಅದರಲ್ಲೂ ಮುಖ್ಯವಾಗಿ ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು ಕೂಡಲೇ ಈ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆ, ಸಂವಾದಗಳನ್ನು ನಡೆಸಬೇಕಾಗಿದೆ. ಮುಂದಿನ ದಾರಿಯ ಹುಡುಕಾಟಕ್ಕಾಗಿ ಅಡಿಯಿಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT