ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಬೋರಿ’ ಮಾತು

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಮ್ಮದೇ ಆದ ದೇಸಿ ಟೈ ಅಂಡ್‌ ಡೈ ಕಲೆಗಳು, ಬ್ಲಾಕ್‌ ಪ್ರಿಂಟ್‌ಗಳು ಮೂಲೆಗುಂಪಾಗುತ್ತಿರುವ ಈ ದಿನಗಳಲ್ಲಿ ಜಪಾನಿನ ಸಾಂಪ್ರದಾಯಿಕ ಟೈ ಅಂಡ್‌ ಡೈ ಕಲೆ ‘ಶಿಬೋರಿ’ ಕಣ್ಣು ಬಿಡಲಾರಂಭಿಸಿದೆ. ಟೈ ಅಂಡ್‌ ಡೈ ವಸ್ತ್ರಗಳ ಬ್ರಾಂಡ್‌ ‘2 ಅಪ್‌ 2 ಡೌನ್‌’ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೆಸರಾಗಿರುವ ನಮ್ರತಾ ಷಾ ಅವರು ಶಿಬೋರಿಯ ಮಟ್ಟಿಗೆ ಅಧಿಕೃತ ವಕ್ತಾರೆ ಇದ್ದಂತೆ. ಬೆಂಗಳೂರಿನಲ್ಲಿ ಶಿಬೋರಿ ವಸ್ತ್ರಗಳಿಗೆ ಹೇಳಿಕೊಳ್ಳುವಂತಹ ಮಾರುಕಟ್ಟೆ ಇಲ್ಲದಿದ್ದರೂ ಇತರ ಮಹಾನಗರಗಳಲ್ಲಿ ಮತ್ತು ಪಟ್ಟಣಗಳಲ್ಲೂ 2ಅಪ್‌ 2ಡೌನ್‌ ಪರಿಚಿತ ಹೆಸರಾಗಿದೆ ಎನ್ನುತ್ತಾರೆ ಅವರು. ಶಿಬೋರಿ ಮತ್ತು ಅವರ ಸಂಸರ್ಗದ ಬಗ್ಗೆ ಅವರೊಂದಿಗೆ ಹರಟೋಣ ಬನ್ನಿ...
**
ಏನಿದು ಶಿಬೋರಿ ಕಲೆ?

ಜಪಾನಿನ ಸಾಂಪ್ರದಾಯಿಕ ಟೈ ಅಂಡ್‌ ಡೈ ಕಲೆ ಶಿಬೋರಿ. ಕಚ್ಚಾ ವಸ್ತು ಅಂದರೆ ಹತ್ತಿ ಅಥವಾ ರೇಷಿಮೆ ದಾರಗಳನ್ನು ಬೈಂಡ್‌ ಮಾಡಿ ಹೊಲಿದು ಮಡಚಿ, ತಿರುಚಿ, ಮುಚ್ಚಿಗೆ ಹಾಕುವ ಹಂತ ಹಂತದ ಪ್ರಕ್ರಿಯೆಗಳನ್ನು ಒಳಗೊಂಡಿರುವ ಟೈ ಅಂಡ್ ಡೈ ಶೈಲಿ ಶಿಬೋರಿ. ಎಂಟನೇ ಶತಮಾನದಿಂದಲೂ ಜಪಾನ್‌ನಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.

ಶಿಬೋರಿಯನ್ನು ನೀವು ಕಲಿತಿದ್ದೆಲ್ಲಿ? ಬೆಂಗಳೂರಿನಲ್ಲಿ ಇದರ ಪರಿಚಯವಿದೆಯೇ?
ನಾನು ನಗರದ ಸೃಷ್ಟಿ ಡಿಸೈನ್‌ ಕಾಲೇಜಿನ ವಿದ್ಯಾರ್ಥಿನಿ. ಪದವಿ ಮುಗಿಯುತ್ತಲೆ ಹಲವಾರು ಬ್ರಾಂಡ್‌ಗಳಿಗೆ ಟೈ ಅಂಡ್‌ ಡೈ ವಿಭಾಗದಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡಿದೆ. ನಂತರ ನನ್ನದೇ ಆದ ಬ್ರಾಂಡ್‌ ‘2 ಅಪ್‌ 2 ಡೌನ್‌’ ಆರಂಭಿಸಿದೆ. ಆಗ ಶಿಬೋರಿ ಬಗ್ಗೆ ಆಸಕ್ತಿ ಬಂತು. ನಾನೇನೂ ಸಾಂಪ್ರದಾಯಿಕವಾಗಿ ಶಿಬೋರಿಯನ್ನು ಕಲಿತವಳಲ್ಲ. ಇಂಟರ್‌ನೆಟ್‌ ಮೂಲಕ ಅದನ್ನು ಪರಿಚಯಿಸಿಕೊಂಡು ಪ್ರಯೋಗ ಮಾಡುತ್ತಾ ಬಂದೆ.

ಸಾಮಾನ್ಯ ಡೈಗಿಂತ ಶಿಬೋರಿ ಹೇಗೆ ಭಿನ್ನ?
ಶಿಬೋರಿಗೆ ನಾಲ್ಕಾರು ಬಗೆಯ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಸಾಮಾನ್ಯ ಟೈ ಅಂಡ್‌ ಡೈ ವಿನ್ಯಾಸಗಳು ವೃತ್ತಾಕಾರವಾಗಿದ್ದರೆ ನಾನು ನನ್ನ ಬ್ರಾಂಡ್‌ ‘2 ಅಪ್‌ 2 ಡೌನ್‌’ನಲ್ಲಿ ನನ್ನದೇ ಆದ ಶೈಲಿಯನ್ನು ರೂಪಿಸಿಕೊಂಡಿದ್ದೇನೆ.

ಮೂಲ ಶಿಬೋರಿ ಶೈಲಿಯಲ್ಲೇ ಟೈ ಅಂಡ್‌ ಡೈ ಮಾಡಿದ ನಂತರ ಫ್ಯಾಬ್ರಿಕ್‌ನಲ್ಲಿ ನಮ್ಮ ದೇಸಿ ಚಿತ್ತಾರ, ಕಸೂತಿ, ಹೆಣಿಗೆಗಳನ್ನು ಹಾಕುವ ಮೂಲಕ ಹೊಸ ಸ್ಪರ್ಶ ನೀಡುವುದು ನನ್ನ ಬ್ರಾಂಡ್‌ನ ವೈಶಿಷ್ಟ್ಯ. ಶಿಬೋರಿಯಲ್ಲಿ ಕೆಲವು ಬಗೆಗಳಿವೆ. ಕನಕೊ ಶಿಬೋರಿ, ಮ್ಯೂರಾ ಶಿಬೋರಿ, ಕ್ಯುಮೊ ಶಿಬೊರಿ, ಆರಷಿ ಶಿಬೋರಿ ಹಾಗೂ ಇಟಜೈಮ್‌ ಶಿಬೋರಿ ಮುಖ್ಯವಾದುವು. 2002ರಿಂದ ಇಲ್ಲಿವರೆಗೂ ಹೊಸ ಹೊಸ ವಿನ್ಯಾಸಗಳನ್ನು ಪ್ರಯೋಗಿಸುತ್ತಾ ಬಂದಿದ್ದೇನೆ.

ಶಿಬೋರಿಗೆ ಪ್ರಚಾರ ನೀಡಲು ನೀವೇನು ಮಾಡುತ್ತೀರಿ?
ವಿಶೇಷವಾದ ಯಾವುದೇ ಕಾರ್ಯಕ್ರಮಗಳನ್ನು ನಾನು ಹಮ್ಮಿಕೊಳ್ಳುವುದಿಲ್ಲ. ಆದರೆ ಏ.19ರಂದು ನಗರದಲ್ಲಿ ‘ಕಮಲಿನಿ’ ಏರ್ಪಡಿಸಿರುವ ಶಿಬೋರಿ ಕುರಿತ ಚರ್ಚೆ ಒಂದು ಉತ್ತಮ ಪ್ರಯತ್ನ. ಶಿಬೋರಿ ಡೈ ವಸ್ತ್ರ ಕರಕುಶಲ ಕಲೆಯಿಂದ ಸಮೃದ್ಧಗೊಂಡು ಮಾರುಕಟ್ಟೆಗೆ ತಲುಪುವ ಹೊತ್ತಿಗೆ ದುಬಾರಿಯಾಗುತ್ತದೆ. ಆದರೆ ಜನ ಅದರ ಬೆಲೆ ನೋಡುತ್ತಾರೆಯೇ ವಿನಾ ಅದರ ಹಿಂದಿರುವ ಶ್ರಮವನ್ನಾಗಲಿ, ಕಸುಬುದಾರಿಕೆಯನ್ನಾಗಲಿ ಪರಿಗಣಿಸುವುದಿಲ್ಲ. ಅಪರೂಪದ ಕಲೆಯನ್ನು ನಾವು ಬೆಲೆಯಿಂದ ಅಳೆಯಬಾರದು ಅಲ್ವೇ?

ಹಾಗಿದ್ದರೆ ಬೇರೆ ಕಡೆ ಗ್ರಾಹಕರ ಸ್ಪಂದನ ಚೆನ್ನಾಗಿದೆ ಅಂತೀರಾ?
ಹೌದು. ಬೆಂಗಳೂರು ಹೊರತುಪಡಿಸಿ ಮುಂಬೈ, ಕೋಲ್ಕತ್ತಾ, ಹೈದರಾಬಾದ್‌, ದೆಹಲಿ ಮಾತ್ರವಲ್ಲ ವಿದೇಶಗಳಲ್ಲೂ ಶಿಬೋರಿಗೆ ಉತ್ತಮ ಬೇಡಿಕೆಯಿದೆ. ಶಿಬೋರಿಯನ್ನು ಬಲ್ಲವರು ನಮ್ಮ ಬ್ರಾಂಡ್‌ನಲ್ಲಿ ನಾವು ಮಾಡಿರುವ ಪ್ರಯೋಗ/ಹೊಸತನವನ್ನು ಗುರುತಿಸುತ್ತಾರೆ. ಇದಕ್ಕಿಂತ ದೊಡ್ಡ ಖುಷಿ ಬೇಕೆ?

‘2 ಅಪ್‌ 2 ಡೌನ್‌’ ಪರಿಕಲ್ಪನೆ ಬಗ್ಗೆ ಹೇಳಿ...
ನಮ್ಮದು 2002ರಲ್ಲಿ ಆರಂಭವಾದ ಬ್ರಾಂಡ್‌. ಸೋಷಿಯೋಪ್ರಿನರ್‌ಷಿಪ್‌ ಅಂತೀವಲ್ಲ ಹಾಗೆ ಸಮಾಜದಿಂದ ಸಮಾಜಕ್ಕಾಗಿ ಎಂಬ ಪರಿಕಲ್ಪನೆಯನ್ನು ನಾನು ನನ್ನ ಬ್ರಾಂಡ್‌ನಲ್ಲಿ ಅನುಷ್ಠಾನಕ್ಕೆ ತಂದಿದ್ದೇನೆ. ಕೃಷಿ ಕೆಲಸವನ್ನು ಬಿಟ್ಟು ಬೇರೇನೂ ತಿಳಿಯದ ರೈತ ಮಹಿಳೆಯರನ್ನು ನಾನು ಟೈ ಅಂಡ್‌ ಡೈ, ಕಸೂತಿ, ಚಿತ್ತಾರ ಮತ್ತು ವಸ್ತ್ರವಿನ್ಯಾಸ ಸಂಬಂಧಿ ಕಸುಬುದಾರಿಕೆಯಲ್ಲಿ ತರಬೇತಿ ನೀಡಿ ಪಳಗಿಸಿದೆ. ಈಗ ಅಂತಹ 13 ಮಂದಿ ಮಹಿಳೆಯರು ನನ್ನೊಂದಿಗಿದ್ದಾರೆ. ಅವರು 2 ಅಪ್‌ 2 ಡೌನ್‌ ಕುಟುಂಬದ ಸದಸ್ಯರು.

ಒಂದು ಸಂವಾದ
ಕರಕುಶಲ ಉತ್ಪನ್ನಗಳ ಮಾರುಕಟ್ಟೆಗೆ ಮೀಸಲಾಗಿರುವ ‘ಕಮಲಿನಿ’ ಕ್ರಾಫ್ಟ್‌ ಸ್ಟೋರ್‌ ಇದೇ 19ರಂದು ಶಿಬೋರಿ ಟೈ ಅಂಡ್‌ ಡೈ ಕಲೆ ಬಗ್ಗೆ ಮಾತುಕತೆಯನ್ನು ಏರ್ಪಡಿಸಿದೆ. ನಮ್ರತಾ ಷಾ ಈ ಕಾರ್ಯಕ್ರಮದಲ್ಲಿ ಶಿಬೋರಿ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಾರೆ.
ವಸ್ತ್ರ ಹಾಗೂ ಫ್ಯಾಷನ್‌ ವಿನ್ಯಾಸ ಕ್ಷೇತ್ರದ ವಿದ್ಯಾರ್ಥಿಗಳು, ವೃತ್ತಿಪರ ವಸ್ತ್ರ ವಿನ್ಯಾಸಕರು, ಕೈಮಗ್ಗ ಮತ್ತು ಕರಕುಶಲ, ಕಸೂತಿ ವಸ್ತ್ರಗಳ ಮೌಲ್ಯ ಅರಿತು ಖರೀದಿಸುವ ಗ್ರಾಹಕರು ಈ ಕಾರ್ಯಕ್ರಮದ ಪ್ರೇಕ್ಷಕರು.

ವಿಳಾಸ: ನಂ. 37, ಶ್ರೀ ಭೂಮಾ, 17ನೇ ಅಡ್ಡರಸ್ತೆ, ಮಲ್ಲೇಶ್ವರ. ಬೆಳಿಗ್ಗೆ 11.30. ಸಂಪರ್ಕಕ್ಕೆ: 080 2356 7470.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT