ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೋಷಿತರ ಧ್ವನಿ ನಾನೇ ಕೇಳಬೇಕು’

Last Updated 18 ಜುಲೈ 2014, 19:30 IST
ಅಕ್ಷರ ಗಾತ್ರ

‘ಹೆಣ್ಣುಮಕ್ಕಳಿಗೆ ಪ್ರೀತಿಸುವ ಭರದಲ್ಲಿ ಸಮರ್ಪಿಸಿಕೊಳ್ಳುವಾಗ ಎಚ್ಚರವಿರಬೇಕು. ಆಗ ಆಯೋಗ, ಪೊಲೀಸು ಎಂದು ಅಲೆಯುವ ಸ್ಥಿತಿಯೇ ಬರುವುದಿಲ್ಲ. ಒಂದು ಮೊಬೈಲು, ಒಂದಿಷ್ಟು ಕಾಸಿದ್ದರೆ ಸಾಕು. ಪ್ರೀತಿ ಪ್ರೇಮ ಎಂದು ಎಡವಟ್ಟು ಮಾಡಿಕೊಳ್ಳುತ್ತೀರಿ’ ಆಕ್ಷೇಪಿಸುತ್ತಲೇ ಬುದ್ಧಿ ಹೇಳುತ್ತಿದ್ದರು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ. 

ಆ ಯುವತಿ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಮನೆಯವರಿಗೆ ಗೊತ್ತಿಲ್ಲ. ಇಬ್ಬರೂ ಮೈಸೂರಿನವರು. ಆಕೆ ಗರ್ಭಿಣಿ. ಗರ್ಭ ತೆಗೆಸಬೇಕು ಎಂಬುದು ಆತನ ಹಟ. ಬೆಂಗಳೂರಿನ ಕ್ಲಿನಿಕ್‌ಗೆ ಹೋಗುವ ಮುನ್ನ ಆಯೋಗಕ್ಕೆ ಬಂದು ಕಷ್ಟ ಹೇಳಿಕೊಂಡಿದ್ದಾಳೆ, ಇದು ಆಯೋಗದ ವ್ಯಾಪ್ತಿಗೆ ಸೇರದ ಕೆಲಸ. ಆದರೂ ಮಂಜುಳಾ ಪಕ್ಕದ ಪೊಲೀಸ್‌ ಠಾಣೆಗೆ ಕರೆ ಮಾಡಿ ಮಫ್ತಿಯಲ್ಲಿ ಇಬ್ಬರು ಪೊಲೀಸರನ್ನು ಕರೆಸಿ, ಯುವತಿಯ ಜೊತೆ ಕಳಿಸಿದ್ದಾರೆ. ಅರ್ಧ ಗಂಟೆಯೊಳಗೆ ಆಯೋಗದ ಅಧ್ಯಕ್ಷರ ಮುಂದೆ ಆತನನ್ನು ತಂದು ನಿಲ್ಲಿಸಲಾಗಿತ್ತು. ಆತನ ಮನ ಒಲಿಸಿ ಮದುವೆಗೆ ಒಪ್ಪಿಸುವುದು ಅವರ ಉದ್ದೇಶ.

ಇದರ ನಡುವೆ ಮಂಡ್ಯದಲ್ಲಿ ಕೆಲ ದಿನಗಳ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹದಿನೆಂಟರ ಯುವತಿಯ ಯೋಗಕ್ಷೇಮ ವಿಚಾರಿಸುತ್ತಾ ಕಣ್ಣಂಚು ಒರೆಸಿಕೊಳ್ಳುತ್ತಿದ್ದರು. ಇದು ತಿಂಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ಕಾರ್ಯವೈಖರಿಯ ಪರಿ.  ಎಷ್ಟೇ ಕರೆ ಬಂದರೂ ಅವರೇ ಸ್ವೀಕರಿಸುತ್ತಾರೆ. ‘ಶೋಷಿತರ ಧ್ವನಿ ಮೊದಲು ನಾನೇ ಕೇಳಬೇಕು. ಅತ್ತ ಮಾತನಾಡುವ ಹೆಣ್ಣಿಗೆ ಆ ಕ್ಷಣ ಸಾಂತ್ವನದ ಜೊತೆಗೆ ಭರವಸೆಯೂ ಸಿಗಬೇಕು. ಸಾಧ್ಯವಿದ್ದಷ್ಟೂ ಕರೆಗಳನ್ನು ನಾನೇ ಸ್ವೀಕರಿಸುತ್ತೇನೆ. ಅದಕ್ಕಾಗಿ ಸಹಾಯಕರನ್ನು ಇಟ್ಟುಕೊಂಡಿಲ್ಲ’ ಎನ್ನುತ್ತಾರೆ ಅವರು.

ಮೈಸೂರಿನ ಮಂಜುಳಾ ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘಟನೆಗಳಲ್ಲಿ ತೊಡಗಿದ್ದವರು. 1994ರಲ್ಲಿ ದಟ್ಟಗಳ್ಳಿ ಗ್ರಾಮ ಪಂಚಾಯತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ರಾಜ್ಯ ಗ್ರಾಹಕರ ಹಿತರಕ್ಷಣಾ ವೇದಿಕೆ, ಮಹಿಳಾ ಸಮಾಜ ಅಧ್ಯಕ್ಷೆ, ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕಿನ ನಿರ್ದೇಶಕಿ, ವಕೀಲರ ಸಂಘದ ನಿರ್ದೇಶಕಿ, ಮೈಸೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯ­ದರ್ಶಿ, ಮಹಾನಗರ ಪಾಲಿಕೆಯ ಸದಸ್ಯೆ ಮುಂತಾದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಮಹಿಳಾ ಆಯೋಗದ ಕಾರ್ಯಯೋಜನೆ ಬಗ್ಗೆ ಅವರು ಹೇಳುವುದು ಹೀಗೆ...  ‘ಹದಿನಾಲ್ಕು ವರ್ಷ ವಕೀಲಿ ವೃತ್ತಿ ಮಾಡಿದ್ದೇನೆ. ಕರೆ ಮಾಡಿದವರ ಧ್ವನಿ ಕೇಳಿದರೆ ಸಾಕು ಪರಿಸ್ಥಿತಿ ಅರ್ಥಮಾಡಿಕೊಳ್ಳಬಲ್ಲೆ. ಕಾನೂನಿನ ಸ್ಪಷ್ಟ ಜ್ಞಾನದ ಜೊತೆಗೆ ಶೋಷಿತ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂಬ ಉದ್ದೇಶ ಇರದಿದ್ದರೆ ಇಲ್ಲಿ ಬರುವ ಪ್ರಕರಣಗಳನ್ನು ಅರ್ಥಮಾಡಿಕೊಳ್ಳುವುದೂ ಅಸಾಧ್ಯ.

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಮಾಧ್ಯಮಗಳೂ ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ. ಪ್ರತಿದಿನವೂ ಶೋಷಣೆಯ ವಿರುದ್ಧ ಸಂವೇದನಾಶೀಲರಾಗಿಸುವ ಕಾರ್ಯಕ್ರಮ ಪ್ರಸಾರ ಮಾಡುವಂತಾಗಬೇಕು. ದೌರ್ಜನ್ಯ ನಡೆದಾಗ ಅಷ್ಟೇ ವರದಿ ಮಾಡುವುದಲ್ಲ. 

ಮಹಿಳಾ ಆಯೋಗ ತನ್ನ ಯೋಜನೆಗಳಿಗಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವ ಯೋಚನೆ ಇದೆ. ಒಂದು ಮನೆಯಿಂದ ನೂರು ರೂಪಾಯಿ ದೇಣಿಗೆ ನೀಡಿದರೂ ಶೋಷಿತ ಹೆಣ್ಣುಮಕ್ಕಳಿಗೆ ಬದುಕು, ಶಿಕ್ಷಣ, ಪುನರ್ವಸತಿ ನೀಡುವುದು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಜಾಗೃತಿ ಮೂಡಿಸಬೇಕು. ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸುವ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸುವ ಯೋಜನೆಯೂ ಇದೆ. ಇದಕ್ಕಾಗಿ ಒಂದಿಬ್ಬರು ನಿರ್ದೇಶಕಿಯರು ಮುಂದೆ ಬಂದಿದ್ದಾರೆ.

ಮುಂದಿರುವ ಸವಾಲುಗಳು...
ಆದರೆ ಅಂದುಕೊಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಆಯೋಗದ ವ್ಯವಸ್ಥೆಯನ್ನೇ ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯ ಇದೆ. ಆಯೋಗದ ಅಧ್ಯಕ್ಷಸ್ಥಾನ ಒಂದೂವರೆ ವರ್ಷದಲ್ಲಿ ಖಾಲಿ ಇದ್ದ ಕಾರಣವೋ ಏನೋ ವ್ಯಾಪ್ತಿಗೂ ಮೀರಿದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅವುಗಳನ್ನು ಪ್ರತ್ಯೇಕಿಸಿ ಸಂಬಂಧಪಟ್ಟ ಠಾಣೆ, ಇಲಾಖೆಗಳಿಗೆ ಕಳುಹಿಸುವ ಕೆಲಸವಾಗಬೇಕು. ನಂತರವಷ್ಟೇ ನಿಜವಾದ ದೌರ್ಜನ್ಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದು ಸಾಧ್ಯ.

ಪ್ರಕರಣಗಳ ಇತಿಹಾಸ, ಸ್ಥಿತಿಗತಿ ತಿಳಿಸುವ ಕಡತಗಳಿಗೂ ಇಲ್ಲಿ ತಡಕಾಡಬೇಕಿದೆ. ಇಲ್ಲಿನ ಆಂತರಿಕ ವ್ಯವಸ್ಥೆಯನ್ನೇ ಸರಿದಾರಿಗೆ ತರುವ ಕೆಲಸ ಆಗಬೇಕಿದೆ. ಕಾನೂನು–ಕಾಯ್ದೆಗಳಿಗೆ ಸಂಬಂಧಿಸಿದ ಪುಸ್ತಕಗಳ ಕೊರತೆಯೂ ಇದೆ. ಆಯೋಗದಲ್ಲಿ ಕೆಲಸ ಮಾಡುವ ಎಲ್ಲರಿಗೂ ಕಾನೂನಿನ ಪರಿಧಿಯ ಅರಿವಿರಬೇಕು. ಯಾಕೆಂದರೆ, ಆಯೋಗ ಕಾನೂನಿನ ಅಡಿಯಲ್ಲಿಯೇ ಕೆಲಸಮಾಡುವ ಸಂಸ್ಥೆ.

ಎಂತಹ ದೂರು ನೀಡಬಹುದು
ಮಹಿಳಾ ಆಯೋಗ ಎಂದ ತಕ್ಷಣ ಮಹಿಳೆಯರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಅಥವಾ ನೀಡುತ್ತದೆ ಎಂದು ಸಾಮಾನ್ಯ ಜನ ನಂಬಿದ್ದಾರೆ. ಆದರೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಕೊಲೆ, ಕೆಲಸದ ಜಾಗದಲ್ಲಿ ಲೈಂಗಿಕ ಕಿರುಕುಳ ಮುಂತಾದ ಘಟನೆಗಳು ನಡೆದಾಗ ಮಹಿಳಾ ಆಯೋಗಕ್ಕೆ ದೂರು ನೀಡಬಹುದು. ಶೋಷಿತರಿಂದ ದೂರು ಬಾರದಿದ್ದರೂ ಮಾಧ್ಯಮಗಳ ವರದಿ, ಅಥವಾ ಮೂರನೇ ವ್ಯಕ್ತಿಗಳು ದೂರು ನೀಡಿದಾಗಲೂ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುತ್ತದೆ.

ಕೆಲವು ಪ್ರಕರಣಗಳು ವ್ಯಾಪ್ತಿಗೆ ಮೀರಿದ್ದಾದರೂ ಮಾನವೀಯ ದೃಷ್ಟಿಯಿಂದ ಸಹಾಯ ಮಾಡಬೇಕಾಗಿದೆ. ಅನೇಕ ಮಹಿಳೆಯರಿಗೆ ಕಾನೂನಿನ ಜ್ಞಾನ ಇರುವುದಿಲ್ಲ. ಹಾಗಾಗಿ ನೇರವಾಗಿ ಮಹಿಳಾ ಆಯೋಗಕ್ಕೆ ದೂರು ನೀಡುತ್ತಾರೆ. ಆಯೋಗ ಸಮಸ್ಯೆಗೆ ಸ್ಪಂದಿಸುತ್ತದೆ ಎಂಬ  ಭರವಸೆ ಅವರಲ್ಲಿರುತ್ತದೆ. ಅಂಥ ಕೆಲವು ಪ್ರಕರಣಗಳಲ್ಲಿ ಆಪ್ತ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಲಾಗುತ್ತದೆ.

‘ಕೆಲ ಹೆಣ್ಣುಮಕ್ಕಳು ಪ್ರೀತಿಸಿದವನು ಮೋಸ ಮಾಡಿದ್ದಾನೆ. ಅವನೊಂದಿಗೆ ಮದುವೆ ಮಾಡಿಸಿ’ ಎಂದು ಆಯೋಗದ ಮುಂದೆ ಬರುವವರಿದ್ದಾರೆ. ಅವರ ಅಸಹಾಯಕತೆಗೂ ಆಯೋಗ ಸ್ಪಂದಿಸುತ್ತದೆ. ಆದರೆ ಆಸ್ತಿ ಜಗಳ, ಆಸ್ತಿ ಭಾಗ ಇವೆಲ್ಲ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ.  ಮಹಿಳಾ ಆಯೋಗದ ಕಚೇರಿ ದೂರವಾಣಿ ಸಂಖ್ಯೆ: 080–22216485.  ಮಂಜುಳಾ ಮಾನಸ ಅವರ ಸಂಖ್ಯೆ. 9448448397

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT