ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತತ ಪ್ರಯತ್ನವೇ ಸಾಧನೆಯ ರಹಸ್ಯ’

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ವಿಜಾಪುರದ ರವೀಂದ್ರ ಈರಣ್ಣ ಹತ್ತಳ್ಳಿ ಅವರ ಯಶೋಗಾಥೆ ಇದು. ಎಂಜಿನಿಯರಿಂಗ್‌ ಪದವಿ ಓದುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ಬೆಳೆದಿತ್ತು. ಆದರೆ ಪದವಿ ಮುಗಿದೊಡನೆ ಕೆಲಸಕ್ಕಾಗಿ ಮನೆಯ ಕಷ್ಟಗಳಿಗೆ ಸ್ಪಂದಿಸುವ ಮನಸು. ಸಾಧನೆಯತ್ತ ಸಾಗುವ ಹಟ.

ಈ ಇಬ್ಬಂದಿಯಿಂದ ಆಚೆ ಬಂದು ಗುರಿಯತ್ತ ಸಾಗುವಂತೆ ಪ್ರೇರಣೆ ನೀಡಿದ್ದು ಅಪ್ಪ–ಅಮ್ಮ. ಹಣ ಸಂಪಾದನೆಗೆ ಜೀವನವಿಡೀ ಅವಕಾಶ ವಿರುತ್ತದೆ. ಪರೀಕ್ಷೆ ಬರೆಯಲು ಹೆಚ್ಚು ಅವಕಾಶಗಳಿಲ್ಲ. ಏನಿದ್ದರೂ ಮೊದಲು ಓದು ಎಂದು ಬೆಂಬಲಿಸಿ ನಿಂತರು. ರವೀಂದ್ರ ದೆಹಲಿಯತ್ತ ತರಬೇತಿಗಾಗಿ ಪಯಣ ಬೆಳೆಸಿದರು.

ಯತ್ನಿಸಿದ ಮಾತ್ರಕ್ಕೆ ಗೆಲುವು ಕಟ್ಟಿಟ್ಟ ಬುತ್ತಿಯಾಗುವುದಿಲ್ಲ ಎನ್ನುವಂತೆ, ಮೊದಲ ಪ್ರಯತ್ನದಲ್ಲಿ ನಿರಾಸೆ ಕಾದಿತ್ತು. ಅದೂ ಕೇವಲ ನಾಲ್ಕು ಅಂಕಗಳಿಂದ ವಂಚಿತರಾಗಿದ್ದರು ರವೀಂದ್ರ.

ಈ ವೈಫಲ್ಯದಿಂದ ಕುಗ್ಗಿದರೂ ಕುಟುಂಬದವರು ಬಿಡಲಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಹುರಿದುಂಬಿಸಿದರು. ಈಗ 364ನೇ
ರ್‌್ಯಾಂಕ್‌. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಅವರಿಗೆ ಅರಸಿ ಬಂದಿದೆ.

ಎಂಜಿನಿಯರಿಂಗ್‌ ಪದವಿ ಪಡೆದರೂ; ನಾಗರಿಕ ಸೇವೆಗಳತ್ತ ಒಲವು ಬೆಳೆಸಿಕೊಂಡಿದ್ದ ರವೀಂದ್ರ ಮುಖ್ಯ ಪರೀಕ್ಷೆಯಲ್ಲಿ ‘ಕನ್ನಡ ಸಾಹಿತ್ಯ’ವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಐಎಎಸ್‌ ಪರೀಕ್ಷೆ ನಿಲುಕದ ನಕ್ಷತ್ರವೇನಲ್ಲ ಎನ್ನುವ ಅವರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

*ಐಎಎಸ್‌ ಕಬ್ಬಿಣದ ಕಡಲೆಯಾ ?
ನಾನೇನೂ ಮೊದಲಿನಿಂದಲೂ ಪ್ರತಿಭಾವಂತನಲ್ಲ. ಅಪ್ಪಟ ಗ್ರಾಮೀಣ ಪರಿಸರದ ಹುಡುಗ. ನನಗೂ ಎಲ್ಲರಂತೆ ಐಎಎಸ್‌ ಭಯವಿತ್ತು. ಯಶಸ್ಸಿನ ಚಿಂತೆ ಬಿಟ್ಟೆ. ಪ್ರಯತ್ನಗಳಲ್ಲಿ ನಂಬಿಕೆ ಇರಿಸಿದೆ. ಇದು, ಶ್ರದ್ಧೆಯಿದ್ದರೆ ಮಾತ್ರ ಸರಳ. ಇಲ್ಲದಿದ್ದರೆ ಕಠಿಣ.

*ಸಾಧನೆಗೆ ಪ್ರೇರಣೆ...
ನಾಗರಿಕ ಸೇವಾ ಹುದ್ದೆಗಳು ಹೆಚ್ಚಿನ ಅಧಿಕಾರ, ಜವಾಬ್ದಾರಿ ಹಾಗೂ ಅವಕಾಶಗಳನ್ನು ಒದಗಿಸುತ್ತವೆ. ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುವ ಅವಕಾಶ ನೀಡುತ್ತವೆ. ವಶೀಲಿ ಇಲ್ಲದೆ  ಜಾಣ್ಮೆಗೆ ಮತ್ತು ಅರ್ಹತೆಗೆ ಮಾತ್ರ ದೊರೆಯುವ ಅವಕಾಶ ಆಗಿರುವುದರಿಂದ ಗಮನ ಸೆಳೆಯಿತು. ಜನ ಸೇವೆಯ ಆಕಾಂಕ್ಷೆಯೇ ಪ್ರೇರಣೆ ನೀಡಿತು. 

*ಸೋಲುಗಳನ್ನು ಎದುರಿಸಲು ಸ್ಫೂರ್ತಿ ನೀಡಿದ್ದು ಯಾರು?
ಆರಂಭದಲ್ಲಿ ಭಯ, ಆತ್ಮವಿಶ್ವಾಸದ ಕೊರತೆ ಇತ್ತು. ಮನೆಯ ಆರ್ಥಿಕ ಸ್ಥಿತಿಯೂ ಅಷ್ಟಕಷ್ಟೇ. ಕೆಲಸಕ್ಕೆ ಸೇರುವುದೇ ಹಿತ ಎಂದು ಬುದ್ಧಿ ನುಡಿದರೆ, ಕನಸು ನನಸಾಗಿಸು ಎಂದು ಮನಸು ಹೇಳುತ್ತಿತ್ತು. ಹೆತ್ತವರು, ಒಡ ಹುಟ್ಟಿದವರು ಮನಸಿನ ಮಾತು ಕೇಳು ಎಂದು ಬುದ್ಧಿ ಹೇಳಿದರು. ದ್ವಂದ್ವ ತಿಳಿಯಾಯಿತು. ಅಮ್ಮ, ಅಕ್ಕ, ಅಪ್ಪನ ಬೆಂಬಲದಿಂದ ಈ ಕನಸಿನ ರೆಕ್ಕೆ ಗರಿಗೆದರಿತು.

*ಸಿದ್ಧತೆ ಹೇಗಿತ್ತು?
ಪದವಿ ಕೊನೆ ವರ್ಷದಲ್ಲೇ ಐಎಎಸ್‌ ಪರೀಕ್ಷೆ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದೆ. ತಯಾರಿ ನಡೆದಿದ್ದು ಪದವಿ ನಂತರ. ದೆಹಲಿಯಲ್ಲಿ ತರಬೇತಿ. ಸರಳ ಗ್ರಹಿಕೆಗೆ ಒತ್ತು. ಸ್ನೇಹಿತರ ವಲಯದಲ್ಲಿ ಚರ್ಚೆ. ಒತ್ತಡದಲ್ಲಿ ಓದಲಿಲ್ಲ. ಓದನ್ನು ಆನಂದಿಸಿದೆ. ಪ್ರತಿ ಓದು ಹೊಸತನ್ನು ನೀಡಿತು. ನಿತ್ಯ 8 ಗಂಟೆ ಓದಿದೆ. ಪರೀಕ್ಷೆ ಸಮೀಪಿಸಿದಾಗ 10ರಿಂದ 12 ಗಂಟೆ ಓದಿದೆ. ಇಲ್ಲಿ ಸಮಯ ಮುಖ್ಯವಲ್ಲ. ಗುಣಮಟ್ಟದ ಓದು ಮತ್ತು ಅದನ್ನು ಅರ್ಥೈಸಿಕೊಳ್ಳುವುದು ಮುಖ್ಯ.

*ಕಿವಿಮಾತು...
ಪೂರ್ವಭಾವಿ ಪರೀಕ್ಷೆ ವಿಶಾಲ ದೃಷ್ಟಿಕೋನದ ಅಧ್ಯಯನ ಬಯಸುತ್ತದೆ. ಮುಖ್ಯ ಪರೀಕ್ಷೆ ವಿಷಯಕ್ಕೆ ಸೀಮಿತಗೊಳಿಸಿ ಆಳವಾದ ಪುನರಾವರ್ತಿತ ಅಧ್ಯಯನ ಬೇಡುತ್ತದೆ. ಇದಕ್ಕೆ ತಕ್ಕಂತೆ ಸಿದ್ಧತೆಯಿರಲಿ.

ಗುಣಮಟ್ಟದ ಪುಸ್ತಕ ಓದಿ. ನೋಟ್ಸ್‌ ಆಯ್ಕೆಯಲ್ಲಿ ಜಾಣ್ಮೆ ತೋರಿ. ಯಶಸ್ಸು ಗಳಿಸಿದವರ ಸಲಹೆ, ಶಿಕ್ಷಕರ ಮಾರ್ಗದರ್ಶನವಿರಲಿ. ಅಂತರ್ಜಾಲವೂ ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ. ಪತ್ರಿಕೆಗಳನ್ನು ವಿಷಯವಾಗಿ ಓದಿ.

ಎಲ್ಲದಕ್ಕಿಂತ ತಾಳ್ಮೆ ಮುಖ್ಯ. ಅವಸರ, ಆತಂಕ ಬೇಡ. ತೃಪ್ತಿಯ ಓದು ಸಾಗಲಿ. ತೊಂದರೆ ಬದಿಗೊತ್ತಿ ನಿರಂತರ ಪ್ರಯತ್ನ ನಡೆಸಿ. ಸ್ನೇಹಿತರ ಸ್ಟಡಿ ಗ್ರೂಪ್‌ ಇದ್ದರೆ ಒಳ್ಳೆಯದು. ಜ್ಞಾನ ಹಂಚಿಕೊಳ್ಳಿ. ಇದು ಎಲ್ಲರಿಗೂ ಲಾಭ. ಜತೆಗೆ ವಿಷಯದ ಮೇಲೆ ಹಿಡಿತ ಹೆಚ್ಚುತ್ತದೆ. ಆದರೆ ಎಂದಿಗೂ ಸ್ನೇಹಿತರೊಳಗೆ ಸ್ಪರ್ಧೆ ಸುಳಿಯಬಾರದು.

*ಆಡಳಿತದ ದೃಷ್ಟಿಕೋನ...
ಪಾರದಶರ್ಕ ವ್ಯವಸ್ಥೆಗೆ ಮೊದಲ ಆದ್ಯತೆ. ಸರಳ ಆಡಳಿತಕ್ಕೆ ಮನ್ನಣೆ. ಕಾನೂನಿನ ಚೌಕಟ್ಟಿನಲ್ಲಿ ಸಮಾಜದ ಕೊನೆ ವ್ಯಕ್ತಿಗೂ ನ್ಯಾಯ, ಸೌಲಭ್ಯ ದೊರೆಯಬೇಕು.. ಎಲ್ಲೆಡೆ ಗುಣಮಟ್ಟದ ಸೇವೆಯೇ ಗುರಿಯಾಗಿದೆ.

ರವೀಂದ್ರ ಅವರನ್ನು ಸಂಪರ್ಕಿಸಲು ಇಷ್ಟ ಪಡುವವರು:   ravindra.i.h87@gmail.com  ಮೇಲ್‌ ಮಾಡಬಹುದು. ಅಥವಾ 8904363580 ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT