ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ವೋದಯ’ದ ನಡಿಗೆಯಲ್ಲಿ ತಿಟ್ಹತ್ತಿ ನಿಂತು...

ಮಾಸದ ಮಾತುಕತೆ
Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ಪ್ರಯೋಗದ ಭಾಗವಾಗಿ ಹುಟ್ಟಿಕೊಂಡ ‘ಸರ್ವೋದಯ ಕರ್ನಾಟಕ’ ಪಕ್ಷಕ್ಕೆ ಈಗ ಹತ್ತು ವರ್ಷ ತುಂಬಿವೆ. ಅದರ ಅಧ್ಯಕ್ಷರಾದ ದೇವನೂರ ಮಹಾದೇವ ಅವರು ಕನ್ನಡದ ಹಿರಿಯ ಲೇಖಕರು ಮಾತ್ರವಲ್ಲ, ಕರ್ನಾಟಕದ ಆತ್ಮಸಾಕ್ಷಿಯ ಹಾಗೆ ಇರುವ ಚಿಂತಕರೂ ಹೌದು. ಚಳವಳಿ ಮತ್ತು ಪರ್ಯಾಯ ರಾಜಕಾರಣ ಕುರಿತ ದೇವನೂರರ ಅನುಭವ ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವ ಈ ವಿಶೇಷ ಸಂದರ್ಶನವನ್ನು ಲೇಖಕ–ಚಿಂತಕ  ರಹಮತ್‌ ತರೀಕೆರೆ ಮಾಡಿದ್ದಾರೆ.

* ದಲಿತ ಚಳವಳಿಯ ನಾಯಕರಾದ ನೀವು, ರೈತರೇ ಪ್ರಮುಖ ಶಕ್ತಿಯಾಗಿರುವ ಪಕ್ಷದ ಅಧ್ಯಕ್ಷರಾಗಿದ್ದೀರಿ. ಈ ಹೊತ್ತಲ್ಲಿ ನೀವು ಹಿಂದೆ ಎಂ.ಡಿ. ನಂಜುಂಡಸ್ವಾಮಿಯವರ ಸಂದರ್ಶನ ಮಾಡುವಾಗ, ದಲಿತ ಮತ್ತು ರೈತಸಂಘಗಳು ಒಟ್ಟಿಗೆ ಹೋಗುವ ಸಾಧ್ಯತೆ ಬಗ್ಗೆ, ಸಮಸ್ಯೆ ಬಗ್ಗೆ ಚರ್ಚಿಸಿದ್ದು ನೆನಪಾಗ್ತಿದೆ. ಆ ಚರ್ಚೆ ಹುಲಿ-ಹುಲ್ಲೆಗಳು ಜತೆಯಲ್ಲಿ ಹೇಗೆ ಹೋಗಬಹುದು ಅನ್ನೋ ಥರ ಇದೆ. ಈಗ ಪರಿಸ್ಥಿತಿ ಯಾವ ತರಹ ಇದೆ?
ಈಗ ನಗರಕ್ಕೆ ಬರ್ತಾ ಇರೋ ಕೂಲಿಕಾರರನ್ನ ನೋಡಿದ್ರೆ, ಅಲ್ಲಿ ಎಲ್ಲಾ ಜಾತಿಯವರೂ ಇದಾರೆ. ಇವತ್ತು ಇಡೀ ಹಳ್ಳೀಗಾಡೇನೇ ಹೆಂಗೆ ತಬ್ಬಲಿ ಆಗಿಬಿಟ್ಟಿದೆಯಲ್ಲ. ಈ ಹಿನ್ನೆಲೆನಲ್ಲಿ ಹೋದ್ರೆ ಬೇರೆ ಥರ ನಾವು ಅರ್ಥಮಾಡ್ಕೊಳಕ್ಕೆ ಸಾಧ್ಯ ಆಗುತ್ತೆ. ಇವತ್ತಂತೂ ಬರೇ ನೂರು ಜನ ಬಂಡವಾಳಿಗರ ಆಸ್ತಿ ಇಡೀ ದೇಶದ ಅರ್ಧ ಭಾಗದಷ್ಟಿದೆಯಂತೆ. ನಾವು ಅವರನ್ನ ಹುಲಿ ಅಂದ್ಕೊತಾನೇ ಇಲ್ಲ ಅಲ್ವಾ? ಇವತ್ತು ಆ ಬಂಡವಾಳಿಗರನ್ನೇ ಎಲ್ಲರೂ ಆರಾಧಿಸುತ್ತಿದ್ದಾರೆ. ಮತ್ತೆ ಮಾಧ್ಯಮ ಕೂಡ ಅವರದೇ ಆಗ್‌ಬಿಡ್ತಾ ಇದೆ. ಬಂಡವಾಳಿಗರೇ ರಾಜಕಾರಣವನ್ನ ನಿಯಂತ್ರಿಸ್ತಾ ಅವರೆ. ಜನತಂತ್ರ ವ್ಯವಸ್ಥೆಯನ್ನ, ಅದರ ಸೋಲು ಗೆಲುವನ್ನ ನಿಯಂತ್ರಿಸ್ತಾ ಅವರೆ. ನೀತಿನಿಯಮಗಳನ್ನ ರೂಪಿಸುವವರೂ ಹೆಚ್ಚುಕಮ್ಮಿ ಅವರೇ ಆಗಿಬಿಟ್ಟಿದ್ದಾರೆ. ನಾವು ಇದನ್ನ ಬಿಟ್ಬಿಟ್ಟು ರೈತರ-ದಲಿತರ ವೈರುಧ್ಯದ ಚರ್ಚೆ ಮಾಡ್ಕೋತ ಕೂತ್‌ಕಂಡ್ರೆ, ಅಲ್ಲಿ ಬಹಳ ನೆಮ್ಮದಿ ಆಗ್ತದೆ ಅವರಿಗೆ. ಇದು ಹೆಂಗಪ್ಪಾ ಅಂದ್ರೆ, ‘ಹೆಡಿಗೇಲಿ ಹೋಗೋದನ್ನ ನೋಡ್ತಾ ಹಡಗಲ್ಲಿ ಹೋಗೋದನ್ನ ಕಾಣಲಿಲ್ಲ’ ಅಂತಾರಲ್ಲಾ ಹಾಗೆ. ಇಂದು ಉಳಿಗಾಲವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ.

* ಸರ್ವೋದಯ ಕರ್ನಾಟಕ ಹುಟ್ಟುಹಾಕುವಾಗ ಯಾವ ಒತ್ತಾಸೆ ಇತ್ತು ನಿಮಗೆ?
ಏನಪ್ಪ ಇದು, ಇಲ್ಲಿ ಒಬ್ಬನೂ ಜನನಾಯಕ ಇಲ್ಲ, ಕೊನೇಪಕ್ಷ ರಾಜಕಾರಣಿಗಳ ಥರದವರು ಸಿಗೋದು ಕೂಡ ಅಪರೂಪವಾಗಿಬಿಟ್ಟಿದೆ, ಹೆಚ್ಚುಕಮ್ಮಿ ಎಲ್ಲಾರೂ ಪುಢಾರಿಗಳು ಮತ್ತು ಡೀಲರ್ಸ್ ಆಗಿದಾರೆ, ಮತ್ತೆ ತಾತ್ವಿಕತೆ ಅನ್ನೋದಂತೂ ನಗೆಪಾಟಲು ಆಗ್‌ಬಿಟ್ಟಿದೆ. ಕನಿಷ್ಠ ಪಕ್ಷ ಈ ದಿಕ್ಕಲ್ಲಿ ಗಮನ ಸೆಳೀಲಿ ಅಥವಾ ಆ ಆಲೋಚನೆ ಬರಲಿ ಅನ್ನೋ ಕಾರಣಕ್ಕಾಗಿ ‘ಸರ್ವೋದಯ ಕರ್ನಾಟಕ’ ಮಾಡಿದ್ದು. ನಿಜ, ಈ ರೈತರು ಮತ್ತು ದಲಿತರದ್ದು ಇದು ಟಫ್ ಕಾಂಬಿನೇಶನ್ನು. ‘ಸಕ’ದಲ್ಲಿ ದಲಿತ ಸಂಘಗಳು ಆರಂಭದಲ್ಲಿ ಇದ್ದವು. ಆದರೆ ಹೆಚ್ಚಾಗಿ ಒಳಬರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರೈತಸಂಘ ಇರುತ್ತಿತ್ತು. ಆದರೆ ತಾನು ‘ಸರ್ವೋದಯ ಕರ್ನಾಟಕ’ ಅಂದ್ಕೊಳ್ಳಲೇ ಇಲ್ಲ. ಆದರೂ  ಇವೆರಡರ ಕೂಡಿಕೆ ರಾಜಕಾರಣ ಒಂದು ಶಕ್ತಿಯೂ ಆಯ್ತು. ಅದೇ ಮಿತಿಯೂ ಆಗೋಯ್ತು. ದಲಿತ-ರೈತ ಅಂದ್ಕೊಂಡು ಹೊಸಮುಖಗಳು ಹೆಚ್ಚು ಮುಕ್ತವಾಗಿ ಒಳ ಬರಲಿಲ್ಲ, ಒಂದು ರಾಜಕೀಯ ಪಕ್ಷ ಅನ್ನಿಸಲೇ ಇಲ್ಲ. ಆದರೆ ತೀರಾ ಇತ್ತೀಚಿಗಷ್ಟೆ ‘ಸಕ’ ಚಿಗುರೊಡೆಯೊ ಲಕ್ಷಣಗಳೂ ಕಾಣಿಸಿಕೊಳ್ತಿವೆ.

* ಈ ದಲಿತ-ರೈತ ಕೂಡಿಕೆ ಒಂದು ಶಕ್ತಿಯಾಗಿದ್ದರೂ ಅದೇ ಮಿತಿಯೂ ಆಗಿದ್ದು ಹೇಗೆ?
ಈಗ, ಏಕಾಏಕಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನ ಎಲ್ಲ ಕಡೆಗೆ ನಿಲ್ಲಿಸಿದರೆ ಶೇಕಡಾವಾರು ಮತ, ರೈತ–ದಲಿತ, ಅಷ್ಟು ಇಷ್ಟು ಕೂಡಿಕೆ ಕಾರಣವಾಗಿ ಸರಾಸರಿ 6-7 ಪರ್ಸೆಂಟ್ ಬಂದ್‌ಬಿಡಬಹುದು. ಯಾವುದೇ ಹೊಸಪಕ್ಷವೊಂದು ಇಷ್ಟೊಂದು ಶೇಕಡಾವಾರು ಮತ ತೆಗೆದುಕೊಳ್ಳೋದು ಸಾಧಾರಣ ಸಂಗತಿಯಲ್ಲ. ಇದೇ ಶಕ್ತಿ. ಮಿತಿ ಏನಂದ್ರೆ– ದಲಿತ ಮತ್ತು ರೈತ ಕೂಡಿಕೆಯ ಕಾರಣವಾಗಿ ‘ಸಕ’ ವಿಸ್ತರಣೆಗೊಳ್ಳಲಿಲ್ಲ ಅಂತಲೂ ಅನಿಸುತ್ತದೆ. ನಾನು ಹಳ್ಳಿಗಾಡಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗ್ತಾ ನೋಡ್ತಿದ್ನಲ್ಲಾ, ರೈತರು-ದಲಿತರು ಅಂತ ಪದೇ ಪದೇ ನಾವು ಹೇಳ್ತಿದ್ವಲ್ಲಾ, ಆಗ ಇದಕ್ಕೆ ಸೇರದ ಇತರ ಸಮುದಾಯದವರು ಏನು ಯೋಚನೆ ಮಾಡ್ತಿರಬಹುದು? ಪಕ್ಷಕ್ಕೆ ದಲಿತ-ರೈತಕ್ಕೆ ಮಿತಮಾಡಿ ಎಲ್ಲರನ್ನೂ ಒಳಗೊಳ್ಳದೆ ನಾವು ತಪ್ ಮಾಡ್ತಾ ಇದ್ದೀವಾ ಅನ್ನೋ ಭಾವನೆ ಬರ್ತಾ ಇತ್ತು ನನಗೆ.

* ಈ ಎರಡೂ ಶಕ್ತಿಗಳು ಕೂಡ್ಕೊಂಡು ರಾಜಕಾರಣ ಮಾಡೋದು ಸಾಧ್ಯವಾಗಲ್ಲ ಅನ್ನಿಸ್ತಾ?
ಆಗಲ್ಲ ಅಂತಲ್ಲ. ರೈತ–ದಲಿತ ಅಲ್ಲದೋರು, ಇದು ನಮ್ದಲ್ಲಾ ಅಂತ ಯೋಚನೆ ಮಾಡ್‌ಬಿಟ್ರೆ ಎಂಬ ಅಳುಕಾಗುತ್ತಿತ್ತು. ಇದರ ನಡುವೆಯೂ ರೈತರು ಮತ್ತು ದಲಿತರ ನಡುವೆ ಒಂದು ಮುಖಾಮುಖಿ ಆಗೋದು, ಒಡನಾಟ ಮಾಡೋದು ಜಾಸ್ತಿ ಆಯ್ತು. ಆದರೆ ಒಂದು ರಹಮತ್, ಬೇರೆಬೇರೆ ಜಾತಿಯವರು ಸಮುದಾಯಗಳು ಆರ್ಥಿಕವಾಗಿ ಒಂದೇ ಸ್ಥಿತೀಲಿ ಇರಬಹುದು,  ಒಂದಾಗೋಲ್ಲ; ಆಮೇಲೆ ಸಾಮಾಜಿಕವಾಗಿ ಒಂದೇ ಸ್ಥಿತಿ ಇರಬಹುದು. ಒಂದಾಗೋದು ಕಷ್ಟ. ಸಾಂಸ್ಕೃತಿಕವಾಗೂ ಕಷ್ಟಾನೇ. ಆದರೆ ರಾಜಕೀಯದಲ್ಲಿ  ಬೇರೆಜಾತಿಯವರೂ ಬೇಕಪ್ಪ ತಾವು ಗೆಲ್ಲೋಕೆ ಅನ್ನೋ ಕಾರಣಕ್ಕಾಗಿಯಾದರೂ ಅಲ್ಲಿ ಒಂದು ಜಿಗಿತ, ಚಲನೆ ಉಂಟಾಗುತ್ತೆ.
ಏನನ್ನಬಹುದು ಇದಕ್ಕೆ?

* ಸೀಮೋಲ್ಲಂಘನೆ?
ಹ್ಞಾಂ, ಸೀಮೋಲ್ಲಂಘನೆ. ರಾಜಕಾರಣದಲ್ಲಿ ಇದು ಹೆಚ್ಚು ಸಾಧ್ಯ. ಇದಕ್ಕೆ ಉದಾಹರಣೆ ಅಂದರೆ ತಮಿಳುನಾಡು. ಪೆರಿಯಾರ್ ಅಲ್ಲಿ ದೈವವಿರೋಧಿ ನಾಸ್ತಿಕ ಆಂದೋಲನ ಮಾಡಿ ಹೆಂಗ್ ದಕ್ಕಿಸಿಕೊಂಡರು? ಬರೇ ದೈವವಿರೋಧಿ ನಾಸ್ತಿಕ ಆಂದೋಲನ ಮಾಡಿದ್ದರೆ ಅವನ ಕೊಲೆ ಅಲ್ವೇನ್ರಿ? ಆ ಚಳವಳಿ ಇವತ್ತು ಏನಾಗಿದೆ ಅದನ್ನ ಬಿಟ್ಬಿಡಿ, ಆದರೆ ಆಗಿನ ಕಾಲಮಾನದಲ್ಲಿಟ್ಟು ನೋಡಿ ನೀವು. ಪೆರಿಯಾರ್ ತಮ್ಮ ನಾಸ್ತಿಕವಾದಕ್ಕೆ ಅಧಿಕಾರದ ಆಕಾಂಕ್ಷೆಯನ್ನು ಕೂಡಿಕೆ ಮಾಡಿದ್ದರಿಂದ ಅಲ್ವಾ ದಕ್ಕಿಸಿಕೊಂಡಿದ್ದು? ನಮ್ಮ ಜಾತಿ ಸಮುದಾಯಗಳ ಜಡ್ಡುಗಟ್ಟಿದ ಸ್ಥಿತಿಗೆ ಹೆಚ್ಚು ಚಲನೆ ಸಿಗೋದು ರಾಜಕಾರಣದಲ್ಲಿ. ಇಲ್ಲಿನದೇ ಉದಾಹರಣೆ ನೋಡೋದಾದರೆ, ನಮ್ಮ ಕುರುಬ ಸಮುದಾಯ ಈ ಹಿಂದೆ ಬೇರೆ ಜಾತಿಯವರೊಡನೆ ಅಷ್ಟಾಗಿ ಬೆರೀತಿರಲಿಲ್ಲ. ಆದರೆ ಯಾವಾಗ ತಮ್ಮವನೊಬ್ಬ ಮುಖ್ಯಮಂತ್ರಿ ಆಗ್ತಾರೆ ಅನ್ನೋ ಭಾವನೆ ಬಂತೋ ಬೇರೆಯವರೊಟ್ಟಿಗೆ ಕೂಡಿ ಒಡನಾಡೊ ಚಲನೆ ಬಂತು.

* ಶಕ್ತಿರಾಜಕಾರಣ ನಮ್ಮ ಸಮುದಾಯಗಳನ್ನು ಛಿದ್ರ ಮಾಡ್ತಿದೆ ಅನ್ನೊ ಜನಪ್ರಿಯ ಗ್ರಹಿಕೆಯಿದೆ. ನೀವು ಹೇಳ್ತಿದೀರಿ, ಅಧಿಕಾರ ರಾಜಕಾರಣ ಸಮುದಾಯಗಳ ಪಾಲಿಗೆ ಪರಸ್ಪರ ಒಳಗೊಳ್ಳುವಿಕೆ ಆಗುತ್ತೆ ಅಂತ?
ಉದಾಹರಣೆಗೆ ಒಂದು ಹಳ್ಳಿ ಇರುತ್ತೆ. ಅದು ಜಾತಿ ಜಾತಿಯಾಗಿ ಬೆರೆಯದೆ ಘನವಾಗಿ ಇರುತ್ತೆ. ಈ ಗ್ರಾಮಪಂಚಾಯ್ತಿ ಚುನಾವಣೆ ಬಂದು ಹಳ್ಳಿ ಒಡೆದೋಯ್ತು ಅಂತಾ ಹೇಳ್ತೀವಿ. ಆದರೆ ಗ್ರಾಮಪಂಚಾಯ್ತಿ ಚುನಾವಣೆ ಪ್ರತಿ ಜಾತಿಗಳನ್ನೂ ನಾಕಾರು ಭಾಗ ಮಾಡಿ, ರಾಜಕೀಯ ಪಕ್ಷಗಳಿಗೆ ತಕ್ಕಂತೆ ಗುಂಪಾಗಿಸುತ್ತೆ. ಘನವಾಗಿದ್ದ ಜಾತಿಗಳು ಪಕ್ಷಗಳಾಗಿ ರಾಜಕಾರಣದ ಕಾರಣವಾಗಿ ಸ್ವಲ್ಪ ತಮ್ಮ ಜಾತಿ ಬಿಟ್ಟು ಇತರ ಜಾತಿಗಳೊಡನೆ ಒಡನಾಡುವಂತೆ ಆಗ್ತದಲ್ಲಾ, ನಾವ್ ಹೆಂಗ್ ನೋಡಬೇಕಿದನ್ನ? ಇದನ್ನ ನಾವು ತಾತ್ಕಾಲಿಕವಾಗಿ ನೋಡೋದ್‌ಬೇಡ, ಒಂದು ಕಾಲಮಾನದಲ್ಲಿ ನಿಂತು ನೋಡ್ದಾಗ ಒಳ್ಳೇದೋ ಕೆಟ್ಟದ್ದೋ? ಭಾರತಕ್ಕೆ ಚಲನೆ ಸಿಗಬೇಕೆಂದರೆ ಇದೆಲ್ಲಾ ಆಗಬೇಕು.

* ಉತ್ತರಪ್ರದೇಶದಲ್ಲಿ ಬ್ರಾಹ್ಮಣರು ಮತ್ತು ದಲಿತರು ಕೂಡಿದ ಬಿಎಸ್‌ಪಿ ರಾಜಕಾರಣ ಹೀಗೇ ಆಯ್ತು ಅಲ್ಲವಾ?
ನಿಜಾನೇ. ಅಲ್ಲಿ ಮೊದಲು ಬಾಹ್ಮಣರದ್ದೇ ಅಧಿಕಾರ ಆಗಿತ್ತು. ಮಧ್ಯಮ ಜಾತಿಗಳು ಆ ಅಧಿಕಾರವನ್ನ ಕಿತ್ತುಕೊಂಡುಬಿಟ್ಟವು. ಅವುಗಳ ಹೊಡ್ತ ಜಾಸ್ತಿ ಆಯ್ತು. ಬ್ರಾಹ್ಮಣ್ರಿಗೆ ತಮ್ಮ ಅಧಿಕಾರ ಕಳೆದೋಯ್ತು ಅನ್ನೋ ನಿರಾಸೆ, ದಲಿತರಿಗೆ ಅಧಿಕಾರ ಪಡೆಯುವ ಆಸೆ, ಇವೆರಡೂ ಸೇರ್ಕೊಂಡು ಆದ ಕೂಡಿಕೆ ಅದು. ರಾಜಕಾರಣದಲ್ಲಿ ಅಲ್ಲದೆ ಬೇರೆ ಕ್ಷೇತ್ರದಲ್ಲಿ ಈ ಪಲ್ಲಟ ಕಾಣಲು ಸಾಧ್ಯವಿತ್ತೇ?

* ಈ ತರಹದ ಸಾಧ್ಯತೆ ಬಿಎಸ್‌ಪಿಗೆ ಕರ್ನಾಟಕದಲ್ಲಿ ಏನಾದರೂ ಬಂದಿತ್ತಾ?
ಒಂದು ಟೈಮಲ್ಲಿ ಬಂದಿತ್ತು. ಆಗ ಸಿದ್ಧರಾಮಯ್ಯನವರನ್ನ ಜೆಡಿಎಸ್‌ನಿಂದ ಕಿತ್ತಾಕ್‌ ಬಿಟ್ಟಿದ್ರು. ಸಿದ್ಧರಾಮಯ್ಯ, ಜಾರಕಿಹೊಳಿ, ಮಾದೇವಪ್ಪ ಈ ಒಂದು ಗುಂಪಿತ್ತಲ್ಲ, ಅದು ಬಿಎಸ್‌ಪಿ ಒಟ್ಟಿಗೆ ಸೇರೋ ಒಂದು ಮಾತುಕತೆ ನಡೆದಿತ್ತು. ನಮ್ಮೊಟ್ಟಿಗಂತೂ ಅವರು ಬರ್ತಿರಲಿಲ್ಲ ಇವರು ಸಪ್ಪೆ ಅಂದ್ಬಿಟ್ಟು (ನಗು). ಸಿದ್ಧರಾಮಯ್ಯ ಸ್ವಲ್ಪ ಹೆದರ್‌ಬಿಟ್ರು ಅವಾಗ, ಎಲ್ಲಪ್ಪ ಆಥರದ್ದು ದುಡ್ಡು-ಕಾಸು ಇದು ತನ್ನ ಮೇಲೇ ಬಂದ್ಬಿಡುತ್ತೆ ಅಂತೇನೋ ಇರಬೇಕು. ಇಲ್ಲದಿದ್ದರೆ ಖಂಡಿತಾ ಬಿಎಸ್‌ಪಿಗೆ ರಾಜ್ಯದಲ್ಲೂ ಒಂದು ಜಿಗಿತ ಸಿಗ್ತಿತ್ತು.

* ನಿಮಗೆ ಸೀಮೋಲ್ಲಂಘನೆ ಮಾಡೊ ಅವಕಾಶಗಳು ಬರಲಿಲ್ವಾ?
ಬರ್ಲಿಲ್ಲಾ ಅಂತಂದ್ರೆ, ನಂಬಿಕೆ ಉಳಿಸಿಕೊಂಡಿದ್ದು ವೃತ್ತಿಪರ ರಾಜಕಾರಣವನ್ನೂ ಮಾಡೊ ಛಾತಿಯ ವ್ಯಕ್ತಿಗಳು ಒಂದಿಷ್ಟು ಜನ ‘ಸಕ’ದೊಳಗೆ ಇದ್ದಿದ್ದರೆ ಸಾಧ್ಯತೆ ಇರ್ತಿತ್ತೇನೋ!

* ಪ್ರಗತಿಪರರ, ಬುದ್ಧಿಜೀವಿಗಳ ಬೆಂಬಲ ಹೇಗಿತ್ತು?
ನಾವು ಪಡ್ಕೋಬಹುದಾದ್ದನ್ನೆಲ್ಲಾ ಪಡ್ಕೊಳ್ಳಲಿಲ್ಲವೇನೋ. ನಾವೇ ಸರಿಯಾದ ಪ್ರಯತ್ನ ಮಾಡಲಿಲ್ಲ ಅಂದ್ಕೋಬೇಕು.

* ಇವತ್ತು ಎಷ್ಟೋ ಜನ ನಿಮ್ಮ ಕಡೆ ನಾಯಕತ್ವಕ್ಕಾಗಿ ನೋಡ್ತಾ ಇದ್ದಾರೆ. ಆದರೆ ನಿಮಗೇ ಇಷ್ಟ ಇದ್ದಂತಿಲ್ಲ.
ಇಷ್ಟ ಇಲ್ಲ ಅಂತ ಅಲ್ಲ, ಸಾಮರ್ಥ್ಯ ಇಲ್ಲ. (ನಗು). ನಾನು ಸರ್ವೋದಯದ ಅಧ್ಯಕ್ಷ ಆದಾಗ  ಬಸಪ್ಪ ಅಂತ ನನ್ನ ಗೆಳೆಯರೊಬ್ಬರು ‘ಏ ನಿಮ್ಮ  ಕೈಲಿ ಇದು ಆಗಲ್ಲ’ ಅಂದ್ರು. ‘ಯಾಕೆ?’ ಅಂದೆ. ‘ರಾಜಕಾರಣಕ್ಕೆ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಬೇಕು. ನಿಮಗದಿಲ್ಲ’ ಅಂದ್ರು.
‘ಎದುರಾಳಿಯನ್ನು ಮುಗಿಸ್ತೀನಿ, ಪಕ್ಷದೊಳಗೆ ಕಾಲೆಳೆಯುವವರನ್ನು ತುಳೀತೀನಿ’ ಎಂಬಂಥ ಈಗ ನಡಿಯೋ ರಾಜಕಾರಣ ನೋಡ್ಕೊಂಡು ಅವರು ಹಂಗೆ ಹೇಳಿರಬಹುದು. ಸ್ವಲ್ಪ ಮಟ್ಟಿಗೆ ಅದು ನಿಜಾನೂ ಇರಬಹುದು. ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಇಲ್ಲದೇ ಇದ್ದರೂನೂ, ಇರೋನ ಥರವಾದರೂ ಆಡಬೇಕಾಗುತ್ತೇನೋ! ಅದೂ ನನಗೆ ಬರಲಿಲ್ಲ.

* ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಪರ್ಯಾಯ ರಾಜಕಾರಣ ವಿಭಿನ್ನವಾದ ವ್ಯಾಕರಣ ಬಯಸ್ತಾ ಇದೆಯಾ ಅಂತ...
ಕರ್ನಾಟಕದಲ್ಲಿ ಉಳಿದೆಡೆ ಹುಡುಕಿದರೂ ಕಾಣದ ಅದ್ಭುತವಾದ ಆಂದೋಲನಗಳಾಗಿವೆ. ಆದರೆ ಏನಾಯ್ತು ಅಂದ್ರೆ, ‘ರಾಜಕಾರಣ ನಿರ್ಣಾಯಕ, ಅದನ್ನ ನಿರಾಕರಣೆ ಮಾಡಕಾಗಲ್ಲ, ಬರೀ ಚಳವಳಿ ಆಂದೋಲನ ಅಂತಿದ್ರೆ ನಾವು ಬರೀ ವಸ್ತುವಾಗ್ಬಿಡ್ತೀವಿ’ ಅಂದ್ಕೊಳ್ಳೊ ಅಷ್ಟರಲ್ಲಿ ನಮಗೆ ವಯಸ್ಸಾಗೋಗಿತ್ತು.

* ಹೊಸ ತಲೆಮಾರಿನ ದಲಿತರು ನಿಮ್ಮ ಜೊತೆ ಗುರುತಿಸಿಕೊಳ್ಳೋದಿಕ್ಕೆ ಹೆಮ್ಮೆ ಪಡ್ತಾರೆ. ಆದರೆ ರಾಜಕೀಯವಾಗಿ ಗುರುತಿಸಿಕೊಳ್ಳೋದಿಕ್ಕೆ ಹಿಂಜರಿತಾರಲ್ಲಾ?
ಹೇಹೇ... ಹಾಗೇನಿಲ್ಲ, ಹಾಗೇನಿಲ್ಲ. ಇದರ ಗುಟ್ಟು ಇಷ್ಟೇನೇ, ಮಾದೇವಗೂ ಮುಖ್ಯಮಂತ್ರಿ ಆಗೋ ಅವಕಾಶ ಇದೆ ಅಂತಾದ್ರೆ ಎಲ್ಲಾ ಖಂಡಿತಾ ಬಂದ್ ಬಿಡ್ತಾರೆ (ನಗು). ರಾಜಕಾರಣದಲ್ಲಿ ಹೆಂಗೆ ಅಂತಂದ್ರೆ ನಾವು ಕಷ್ಟಪಟ್ಟು ಎರಡನೇ ಸ್ಥಾನದಲ್ಲೋ ಮೂರನೇ ಸ್ಥಾನದಲ್ಲೋ ಇದ್ದು, ಗೆಲ್ಲೋ  ಚಾನ್ಸ್ ಇದೆಯಪ್ಪಾ ಅಂತಂದ್ರೆ ಓಟ್‌ಗಳು ಯದ್ವಾತದ್ವಾ ಬೀಳ್ತವೆ. ಇಲ್ದೇ ಇದ್ರೆ ವೇಸ್ಟ್ ಅಂದ್ಬುಟ್ಟು ಬೀಳಲ್ಲ.

* ನಮ್ಮಲ್ಲಿ ರೈತ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿ, ಮಹಿಳಾ ಚಳವಳಿ, ಕೋಮುವಾದಿ ವಿರೋಧಿ ಚಳವಳಿ ಎಲ್ಲ ಇದ್ದವು. ‘ಸರ್ವೋದಯ ಕರ್ನಾಟಕ’ ಕೂಡ ಎರಡು ಚಳವಳಿಗಳು ಕೂಡಿದ ಪಕ್ಷ. ಆದರೆ ಈ ಚಳವಳಿಗಳು ಅಸ್ಸಾಮಿನ ವಿದ್ಯಾರ್ಥಿ ಚಳವಳಿಯಂತೆ ಶಕ್ತಿರಾಜಕಾರಣಕ್ಕೆ ರೂಪಾಂತರವಾಗಲಿಲ್ಲವಲ್ಲ?
ಅಸ್ಸಾಮ್‌ದು ಒಂದು ಟ್ರೆಂಡ್ ಅಷ್ಟೇ. ಚಳವಳಿ ಬೇರೆ, ಟ್ರೆಂಡ್‌ನಿಂದ ಆಗೋದು ಬೇರೆ. ಒಂದು ಅಪಮಾನದ ಮಾತಿಂದ ಕೂಡ ರಾಜಕೀಯ ಆಗುತ್ತೆ– ಎನ್‌ಟಿಆರ್ ಆಂಧ್ರದಲ್ಲಿ ಮಾಡಿದ ಹಾಗೆ. ಆದರೆ ಒಂದು ಚಳವಳಿ ಅಂತ ಹೋದರೆ, ರಚನಾತ್ಮಕ ಕಾರ್ಯ ಅಂತ ಹೋದರೆ, ಒಬ್ಬ ಒಂದು ಜೀವಿತಾವಧಿ ಅದಕ್ಕೇ ನಿಲ್ಲಬೇಕಾಗುವಂಥ ಪರಿಸ್ಥಿತಿ ಬಂದುಬಿಡುತ್ತೆ. ಇನ್ನು ಚಳವಳಿ ಅಂತಂದಾಗ ಅದನ್ನ ಮಾಡ್ತಾ ಮಾಡ್ತಾ ಅದರಲ್ಲೇ ಸುಸ್ತಾಗ್ಬಿಟ್ಟು, ಏಳ್ತಾಬೀಳ್ತಾ ಇರಬೇಕಾಗುತ್ತೆ. ರಾಜಕಾರಣ ಮಾಡ್ತಾ ಹೋದ್ರೆ ಚಳವಳಿ ನಲುಗೋಯ್ತವೆ. ಒಂದು ಹದ ಗೊತ್ತಿಲ್ಲ ನಮಗೆ ಅಂತ ಹೇಳಬಹುದು ಅಷ್ಟೇನೆ.

* ನಿಮಗೆ ಹೋಲಿಸಿದರೆ, ನಾಯಕತ್ವದ ವಿಷಯದಲ್ಲಿ ನಂಜುಂಡಸ್ವಾಮಿ ಅವರಲ್ಲಿ ಧಾಡಸಿತನ ಇತ್ತು. ಕೇಜ್ರಿವಾಲ್‌ಗಿದ್ದ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಕೂಡ ಇತ್ತು. ಆದರೂ ಅವರಿಗೆ ತಮ್ಮ ಪಕ್ಷವನ್ನ ಬಹಳ ಮುಂದಕ್ಕೆ ತಗೊಂಡು ಹೋಗೋಕೆ ಸಾಧ್ಯವಾಗಲಿಲ್ಲ.
ಹಾಗಲ್ಲ! ಒಂದ್ ಕಾಲದಲ್ಲಿ ನಾಕೈದು ಜನ ಗೆದ್ರು. ಅವರ ಪಕ್ಷ ಅದು 50-60 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿತ್ತು ಅನ್ಸುತ್ತೆ. ಹುಡುಗಾಟ ಅಲ್ಲಾ ಅದು. ಆದರೆ ಆಂದೋಳನಗಳು ರಾಜಕಾರಣವನ್ನ ಹುಟ್ಟಾಕಿದ್ರೂವೆ ಅದನ್ನ ನಿರ್ವಹಿಸಿಕೊಂಡು ಹೋಗೋ ಛಾತಿ ಗೊತ್ತಾಗಲ್ಲ. ಆಮೇಲೆ ಇನ್ನೊಂದಂದ್ರೆ– ಅವರವರು ಅಂದ್ಕೊಂಡಿರೋ ಐಡಿಯಾಲಜಿ ಸಮಸ್ಯೆನೋ ಏನೋ ಗೊತ್ತಿಲ್ಲಾ- ಈಗ ತಾವೇ ಅಗಾಧ ಅಂದ್ಕೊಂಡ್ ಬಿಡ್ತಾರೆ. ಅದೂ  ತೊಡಕಾಗುತ್ತೆ. ಇನ್ನೊಂದು ಸಣ್ಣದು ಸೇರೋದ್ ಕೂಡ ತನಗೆ ಅಗತ್ಯ ಅನ್ನೋ ಭಾವನೆ ಬರದ ಹೊರತು ರಾಜಕಾರಣ ಯಶಸ್ಸು ಆಗಲ್ಲ. ಇನ್ನೊಂದಂದ್ರೆ, ನನಗೂ ನಿಮಗೂ ಆಗಲ್ಲಪ್ಪ, ಏನಂತೀಗ? ಇಬ್ರೂ ಒಟ್ಟಿಗೆ ಒಂದ್ ಕೆಲ್ಸ ಮಾಡೋದು ಬಹಳ ಅಗತ್ಯ ಅಂದ್ಕೊಳ್ಳೊ ಪ್ರವೃತ್ತಿ ಇಲ್ಲವಲ್ಲ? ಇದೂ ಒಂದು ನಮ್ಮ ಕೊರತೇನೆ.

* ‘ಪ್ರಗತಿರಂಗ’ ಸ್ಥಾಪನೆ ಮಾಡಿ ಲಂಕೇಶ್ ಕೂಡ ಪರ್ಯಾಯ ರಾಜಕಾರಣದ ಪ್ರಯೋಗ ಮಾಡಿದರು. ಅದಕ್ಕೆ ದೊಡ್ಡ ಸ್ವೀಕಾರ ಸಿಗಲಿಲ್ಲ. ಅದಕ್ಕೆ ಹೋಲಿಸಿದರೆ ‘ಸರ್ವೋದಯ ಕರ್ನಾಟಕ’?
ಅವರದಕ್ಕಿಂತಾ ನಮ್ದು ಬೆಟರ್ ಅನ್ನೋದೊಂದು ಸಮಾಧಾನ ಅಷ್ಟೇ (ನಗು). ನಂಜುಂಡಸ್ವಾಮಿ, ಲಂಕೇಶ್, ಬಿ. ಕೃಷ್ಣಪ್ಪ, ತೇಜಸ್ವಿ, ಕೆ. ರಾಮದಾಸ್ ನಾವೆಲ್ಲಾ ಒಟ್ಟಿಗೆ ಸೇರಬೇಕು ಅಂತ ಆಸೆ ಇಟ್ಕಂಡಿದ್ದೆವು. ಆದರೆ ಎಲ್ಲರೂ ಒಟ್ಟಿಗೆ ಸೇರ್ಕೊಳ್ಳೋಕೆ ಬೇಕಾದ ಮನಸ್ಥಿತಿ ಉಂಟಲ್ಲ, ಆ ತಾಕತ್ತು ನಮಗಿರಲಿಲ್ಲ. ಅದಕ್ಕೊಂದು ಧಾರಣಶಕ್ತಿ ಬೇಕಲ್ಲ, ಅದು ನಮಗಿರಲಿಲ್ಲ.

* ಗಾಂಧೀಜಿ ಬಗ್ಗೆ ನಿಮಗೆ ಬಹಳ ಸೆಳೆತವಿದೆ, ನಿಮ್ಮ ಪಕ್ಷದ ‘ಸರ್ವೋದಯ’ ಎಂಬ ಹೆಸರೂ ಅಲ್ಲಿಂದ ಬಂದಂತಿದೆ. ಆದರೆ ಇದರಿಂದ ಗಾಂಧಿ-ಅಂಬೇಡ್ಕರ್ ಮಾಡಿದ ಚಾರಿತ್ರಿಕ ವಾಗ್ವಾದದಲ್ಲೇ ಸಿಲುಕಿರೊ ಕೆಲವು ದಲಿತರು ನಿಮ್ಮಿಂದ ದೂರ ಹೋಗುವುದಕ್ಕೆ ಕಾರಣ ಅನಿಸಿದೆಯಾ?
ಈ ಪ್ರಶ್ನೆ ಕೇಳೋದರಲ್ಲೇ ದಲಿತರಿಂದ ನನ್ನನ್ನು ದೂರಮಾಡೊ ಸಂಚಿದೆಯಲ್ಲಾ ನಿಮಗೆ! (ನಗು). ಗಾಂಧಿ ಅಂಬೇಡ್ಕರ್‌ರನ್ನ ಅವರ ಸಮಕಾಲೀನ ಕಾಲಮಾನದಲ್ಲಿಟ್ಟು ಅವರುಗಳನ್ನ ದೇಹಗಳು ಅಂತ ಪರಿಗಣಿಸಿ ನೋಡಿದರೆ ಹಿಂಗಾಗುತ್ತೆ. ನಾವು ತರ್ಕವನ್ನು ಕೈಬಿಟ್ಟು ಅವರನ್ನು ಚೈತನ್ಯವಾಗಿಸಿ ಅವರಿಬ್ಬರ ಆಶಯ ಹಿಡ್ಕೊಂಡು ನೋಡಿದರೆ ಈ ಸಮಸ್ಯೆ ಉಂಟಾಗಲ್ಲ. ಈ ಇಬ್ಬರನ್ನು ಸ್ಪಿರಿಟ್‌ಗೆ ಬಟ್ಟಿಯಿಳಿಸಿ ಕಾಕ್‌ಟೇಲ್ ಮಾಡಿದರಂತೂ ಉಂಟಾಗುವ ಕಿಕ್ ಇದೆಯಲ್ಲಾ ಜಗತ್ತನ್ನೇ ಗೆಲ್ಲಬಹುದು. ಬಹಳ ಹಿಂದೆ ನಾನು ಮಣಿಪಾಲ್‌ನಲ್ಲಿ ಗಾಂಧಿ ಬಗ್ಗೆ ಮಾತನಾಡಬೇಕಾಗಿ ಬಂದು, ಜತೆ ಜತೆಗೆ ಅಂಬೇಡ್ಕರರನ್ನೂ ಹೆಣೀತಾ ಹೋದೆ. ಅಲ್ಲಿ ಅದನ್ನ ಕನ್ನಡ ಬಾರದ ಸಭಿಕರಿಗಾಗಿ ಯು.ಆರ್.ಅನಂತಮೂರ್ತಿಯವರು ಇಂಗ್ಲಿಷ್‌ಗೆ ಅನುವಾದಿಸ್ತಾ ಅವರ ಕಣ್ಣುಗಳಲ್ಲಿ ನೀರಾಡತೊಡಗಿತು. ನನ್ನ ಮಾತು ಮುಗಿದಾಗ ಅನಂತಮೂರ್ತಿಯವರು ‘ಅಂಬೇಡ್ಕರ್ ಬಗ್ಗೆ ನನಗೆ ಒಳಗೊಳಗೇ ಸ್ವಲ್ಪ ಕಿರಿಕಿರಿ ಇತ್ತು; ಇವತ್ತು ಅಂಬೇಡ್ಕರ್ ನನ್ನೊಳಕ್ಕೆ ಬಂದುಬಿಟ್ಟರು’ ಎಂದರು. ಇದೇನ್‌ ಹೇಳುತ್ತೆ?

* ಸಂಘಪರಿವಾರದವರು ಈಗ ಅಂಬೇಡ್ಕರ್ ಅವರಿಗೆ ಕೇಸರೀಕರಣ ಮಾಡುತ್ತಿದ್ದಾರೆ?
ನಿಜ ನಿಜ, ಮೊದಲು ತುಳಿದು ಮಟ್ಟ ಹಾಕಲು ನೋಡಿದರು, ಕಪ್ಪು ಬಣ್ಣ ಬಳಿದರು. ಅಂಬೇಡ್ಕರ್ ತುಳಿದಷ್ಟೂ ಜನ ಮಾನಸದಲ್ಲಿ ಚಿಗುರತೊಡಗಿದರು. ಅಸಹಾಯಕರಾದ ಸಂಘಪರಿವಾರದವರು ಈಗ ವೇಷಧಾರಿಗಳಾಗಿ ಕೇಸರಿ ಬಣ್ಣ ಬಳಿಯುತ್ತಿದ್ದಾರೆ, ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಇಂದು ಎಲ್ಲರೂ ಅಂಬೇಡ್ಕರ್‌ರಿಗೆ ತಂತಮ್ಮ ಬಣ್ಣ ಬಳಿಯುವವರೇ. ಬೌದ್ಧರು ಹೆಚ್ಚಾಗಿ ಬಿಳಿಯ ಬಣ್ಣ ಬಳಿಯುತ್ತಿರಬಹುದು, ಸಮಾಜವಾದಿಗಳು ತಮಗಿಷ್ಟವಾದ ಯಾವುದೋ ಬಣ್ಣ. ಹಾಗೇ ಅಂಬೇಡ್ಕರ್‌ರನ್ನು ಪೆಟ್ಟಿ – ಬೂರ್ಶ್ವ ಅನ್ನುತ್ತಿದ್ದ ಕಮ್ಯುನಿಸ್ಟರು ಈಗೀಗ ಕೆಂಪುಬಣ್ಣ ಬಳಿಯುತ್ತಿದ್ದಾರೆ. ಈ ರೀತಿ ಮಾಡುವವರೆಲ್ಲರೂ ಜಾಣರು. ವಕೀಲಿಕೆ ಮಾಡುವವರು. ತಾವು ಗೆಲ್ಲ ಬೇಕೆಂದಿರುವ ಕೇಸಿಗೆ - ಅಂದರೆ ಸಿದ್ಧಾಂತಕ್ಕೆ ಒಂದು ಸಾಕ್ಷ್ಯ ಎಂಬಂತೆ ಅಂಬೇಡ್ಕರ್ ಅವರನ್ನ ಬಳಸಿಕೊಳ್ಳುವವರು. ಒಳಗೇನೆ ವಂಚನೆ ಇದ್ದರೆ ಇದು ಯಾರಿಗೂ ಒಳ್ಳೆಯದಲ್ಲ.

* ನಿಮ್ಮ ರಾಜಕೀಯ ಚಿಂತನಾ ಕ್ರಮದಲ್ಲಿ, ನೀವು ನೆನಪಿಸಿಕೊಳ್ಳೋದು ಗಾಂಧಿ, ಲೋಹಿಯಾ ಮತ್ತು ಅಂಬೇಡ್ಕರ್. ಈ ಪಟ್ಟಿಯಲ್ಲಿ ಮಿಸ್ಸಿಂಗ್ ಅಂದ್ರೆ ಮಾರ್ಕ್ಸ್‌ದು. ಅವನ ಚಿಂತನೆ ಪರ್ಯಾಯ ರಾಜಕಾರಣದಲ್ಲಿ ಒಂದು ಶಕ್ತಿಯಾಗಿ ಸೇರೋದಿಕ್ಕೆ ಸಾಧ್ಯತೆ ಇಲ್ಲವಾ?
ಯಾಕಿಲ್ಲ? ನಾನು ಭಾರತದ ಕಮ್ಯುನಿಸ್ಟರನ್ನ ಜಡಗೊಂಡಿದ್ದಾರೆ ಅಂತ ಹೇಳ್ತಾ ಇದ್ದೀನಿ ಅಷ್ಟೇ. ಇಲ್ಲಿ ಕಮ್ಯೂನಿಸಂ ಭಾರತವನ್ನು ರಕ್ತಗತ ಮಾಡಿಕೊಂಡು ತನ್ನದೇ ನಡೆ ನುಡಿ ಕಂಡುಕೊಳ್ಳಬೇಕು, ಹೌದಲ್ವಾ? ಅದಾಗ್ತಾ ಇಲ್ಲ. ಅದು ಗೂಡ್ಸ್ ಗಾಡಿ ಥರ ಸರಕನ್ನ ಮಾತ್ರ ಸಾಗಿಸ್ತಾ ಇದೆ. ಮಾತಾಡಕ್ ಸ್ಟಾರ್ಟ್ ಮಾಡ್ಬಿಟ್ರೆ, ಒಂದು ಟೇಪ್‌ರೆಕಾರ್ಡರ್ ಥರ ಆಗ್ಬಿಟ್ರೆ ಹೆಂಗ್ರಿ? ಮತ್ತೆ ಜೀವನ ತರ್ಕಕ್ಕೆ ಮೀರಿದ್ದಲ್ವಾ?

* ಭಾರತದ ಸಾಮಾಜಿಕ ಆರ್ಥಿಕ ವಾಸ್ತವಿಕತೆಯ ಹೊಟ್ಟೆಯೊಳಗಿಂದಲೇ ಜನಪರ ರಾಜಕೀಯ ನುಡಿಗಟ್ಟು ಹುಟ್ಟಬೇಕು ಅಂತ ಹೇಳ್ತಿದೀರಾ?
ಒಂದು ಪ್ರಸಂಗ ನೆನಪಿಗೆ ಬರ್ತಾಯಿದೆ– ನಾಯರ್ ಅಂತ ಒಬ್ಬ ನನ್ನ ಕ್ಲಾಸ್‌ಮೇಟ್ ಇದ್ದ, ಕೇರಳದೋನು. ಸಿಪಿಐ ಇರಬೇಕು. ನನ್ನನ್ನ ‘ಲೋಹಿಯಾವಾದಿ’ ಅಂತ ಯಾವಾಗಲೂ ಗೇಲಿ ಮಾಡ್ತಿದ್ದ. ನನಗೆ ಯಾವ ವಾದಾನೂ ಗೊತ್ತಿಲ್ಲರಿ. ನನಗೆ ಒಂಚೂರ್ ಸಾರಾಂಶದ ರೀತಿ  ಗೊತ್ತು. ಅಷ್ಟು ಬಿಟ್ರೆ, ಹಂಗೆ ನಾನು ಓದ್ಕೊಂಡಿದ್ದೇ ಇಲ್ಲ. ಅವನು ಒಂದ್ ದಿನ ನನ್ನನ್ನ ಲೇವಡಿ ಮಾಡಬೇಕು ಅಂದ್ಬಿಟ್ಟು ‘ನಿಮ್ಮ ಲೋಹಿಯಾ ಏನ್ ಗೊತ್ತಾ? ನಮ್ಮ ಮಾರ್ಕ್ಸ್‌ನಿಂದ ತಗೊಂಡು ಬಟ್ಟಿ ಇಳ್ಸಿದ್ದಾನೆ. ನಿಮ್ಮದು ಬಟ್ಟಿ ಅರ್ಯಾಕ್’ ಅಂತ ಹೇಳ್ದ. ಸರಿಯಾದ್ ಪದ ‘ಬಟ್ಟಿ ಇಳಿಸೋದು’. ಇಲ್ಲಿಯ ಪರಿಕರಗಳಿಂದ ಬಟ್ಟಿ ಇಳಿಸೋದು, ಅದೇನೇ ಬೇಕಾಗಿದ್ದು.

* ನಂಜುಂಡಸ್ವಾಮಿ ಮಾರ್ಕ್ಸ್‌ವಾದಿ ಚಿಂತನೆಯನ್ನು ಕ್ರಿಯೇಟಿವ್ ಆಗಿ ಬಳಸ್ತಾ ಇದ್ದರಲ್ಲವಾ?
ಜಾಗತೀಕರಣದ ಪ್ರಶ್ನೆ ಬಂದಾಗ  ಅದಿತ್ತು. ಭಾರತದೊಳಗೆ ಅವರನ್ನ ಲೋಹಿಯಾ ಹೆಚ್ಚು ಪ್ರಭಾವಿಸಿದ್ದರು.

ಈಚೆಗೆ ಭಾರತದ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಗಳಿಗೆ ಹಿನ್ನಡೆ ಆಗಿದೆ. ಕಾರಣ?
ನಮ್ಮ ಹಿನ್ನೆಡೆಗೇನೇ ಕಾರಣ ಹೇಳೋದು ಕಷ್ಟ ಆಗ್ತಿದೆ (ನಗು), ಬೇರೆಯವರದ್ದೇನ್ ಹೇಳದು? ಆದರೆ ಬೇರೆಯವರ ಹಿನ್ನಡೆ ಹೇಳೋದು ಸುಲಭ, ಆದ್ದರಿಂದ ಹೇಳ್ತೀನಿ! ಕನಿಷ್ಟ ಪಕ್ಷ ಸಿಪಿಐ ಮತ್ತು ಸಿಪಿಎಂ ಒಟ್ಟಾಗಬೇಕಪ್ಪ.

* ಪರ್ಯಾಯ ರಾಜಕಾರಣದಲ್ಲಿ ಎಡಪಕ್ಷಗಳು ಹೇಗೆ ಒಂದು ಶಕ್ತಿ ಆಗಬಹುದು?
ಇಂದಿನ ಎಡಪಕ್ಷಗಳ ರಾಜಕಾರಣವನ್ನ, ‘ಪರ್ಯಾಯ ರಾಜಕಾರಣ’ ಅನ್ನೋದಕ್ಕಿಂತ ಹೆಚ್ಚು ನಂಬಬಹುದಾದ ರಾಜಕಾರಣಿಗಳಿರೊ, ನಂಬಬಹುದಾದ ಸಿದ್ಧಾಂತ ಇರೋ ಪಕ್ಷಗಳು ಅನ್ನಬಹುದು. ಆದರೂ ಅವರ ಕೊಡುಗೆ ದೊಡ್ಡದು. ಕಾಂಗ್ರೆಸ್ ಸರ್ಕಾರದಲ್ಲಿ ಕಮ್ಯುನಿಸ್ಟರು ಅಷ್ಟು ಪ್ರಬಲವಾಗಿ ಇಲ್ದೇ ಇದ್ದಿದ್ರೆ, ಸುಮಾರು ಆವಾಗ್ಲೇನೆ ಎಲ್‌ಐಸಿದು, ಬ್ಯಾಂಕ್‌ದು ಎಲ್ಲ ಖಾಸಗೀಕರಣ ಆಗಿಹೋಗೋದು. ಅವರು ತಡೀದೇ ಇದ್ರೆ ಅಮೆರಿಕ ಪಾಪರ್ ಎದ್ದೊಯ್ತಲ್ಲಾ ಅಂಥದ್ದು ನಮಗೂ ಆಗ್ತಿತ್ತೇನೋ. ಅಮೆರಿಕವೇನೋ ಬೇರೆ ದೇಶಗಳ ತಲೆ ಒಡೆದು ಬಚಾವಾಗುತ್ತದೆ. ನಮ್ಮಂಥ ದೇಶಗಳ ಗತಿಯೇನು? ಜಾಗತೀಕರಣದ ಸುಳಿಗೆ ಸಿಲುಕಿ ಅಂತಹ ಗ್ರೀಕ್ ದೇಶವೇ ತತ್ತರಿಸುತ್ತಿದೆ!

* ರಾಜಕಾರಣದಲ್ಲಿ ಪರ್ಯಾಯ ಹುಡುಕಾಟದ ಭಾಗವಾಗಿ ನಕ್ಸಲ್ ಚಳವಳಿಯೂ ಬಂತು. ಆದರೆ ಅದಕ್ಕೆ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ಬೇರುಬಿಡೋಕೆ ಆಗಲಿಲ್ಲ. ಈಗ ಅದರಿಂದ ಕೆಲವು ಸಂಗಾತಿಗಳು ಭಿನ್ನಮತ ಸೂಚಿಸಿ ಹೊರಗೆ ಬಂದಿದ್ದಾರೆ. ಹೊಸ ರಾಜಕಾರಣದ ಪರಿಭಾಷೆಯಲ್ಲಿ ಮಾತಾಡ್ತಾ ಇದಾರೆ.
ಅವರು ಹೆಚ್ಗೆ ಮುಕ್ತ ಆಗಿದಾರೆ, ವಿಸ್ತರಿಸಿಕೊಂಡಿದಾರೆ ಅನಿಸುತ್ತೆ. ಈ ಭೂಮಾಲೀಕ ದಬ್ಬಾಳಿಕೆ ಇದ್ಯಲ್ಲಾ ಅಲ್ಲಿ ಈ ನಕ್ಸಲೈಟ್ ಆಂದೋಲನ ಸ್ವಲ್ಪ ನಡೀತದೆ ಅನ್ಸುತ್ತೆ. ಆಂಧ್ರ ಇರಬಹುದು, ಬಿಹಾರ್ ಇರಬಹುದು, ಛತ್ತೀಸ್‌ಗಢ ಇರಬಹುದು. ಅದೇ ಇಲ್ಲದ ಕಡೆ ಇದೆ ಅಂದ್ಕೊಂಡು ಪ್ರತಿಕ್ರಿಯಿಸಿದರೆ ಆಗುವಂಥದ್ದೂ ಆಗೋದಿಲ್ಲ. ಸಶಸ್ತ್ರ ಹೋರಾಟವನ್ನೇ ಸಿದ್ಧಾಂತ ಮಾಡ್ಕೊಂಡು,   ಹೋಗೋದು ಇದೆಯಲ್ಲಾ, ವೈಯಕ್ತಿಕವಾಗಿ ಅದು ನನಗೆ ಕಷ್ಟ ಆಗುತ್ತೆ.

* ಕಾಡೊಳಗಿದ್ದು ಮಾಡೊ ಹೋರಾಟಕ್ಕಿಂತ ಜನರ ನಡುವಿದ್ದು ಮಾಡೊ ಚಳವಳಿ ಕಷ್ಟದ್ದು ಅಂತಿದೀರಾ?
ತುಂಬಾ ಕಷ್ಟ. ಹೆಣ್ಣುಗಳಿಲ್ಲದ ಕಡೆ ಬ್ರಹ್ಮಚಾರಿ ತನ್ನ ಬ್ರಹ್ಮಚಾರಿತ್ವವನ್ನು ಕಾಪಾಡಿಕೊಳ್ಳೋದು ಸುಲಭ. ಎಲ್ಲೋ ಅಂಡರ್‌ಗ್ರೌಂಡ್‌ನಲ್ಲಿ ಇದ್ಕೊಂಡು ‘ನೊ ಅದರ್ ಗೊ’ ಅಂತ ಇರೋದು ಸುಲಭ. ಆದರೆ ಜನಗಳ ನಡುವೆ ಜಂಜಾಟಗಳ ನಿಭಾಯಿಸೋದು ಇದೆಯಲ್ಲ, ಅದಕ್ಕೆ ದೊಡ್ಡ ಸಾಮರ್ಥ್ಯ ಬೇಕು. ಅಲ್ಲೇನೋ ಇದೆ ಅಂದ್ಕೊಂಡ್ ಹೋಗ್ಬಿಟ್ಟು ಹಿಂದಕ್ ಬರಕ್ಕಾಗದೇ ಇದ್ದಾರೆ ಅಂತಾನೆ ನನಗೆ ಅನ್ಸುತ್ತಪ್ಪ. ಯಾಕೆಂದರೆ ಮನಸು ಆ ಗಳಿಗೆನಲ್ಲಿ ಹಂಗೆ ಇರ್ತದೆ. ಆಮೇಲೆ ಮುಂದಿನ ಗಳಿಗೇನೂ ಹಂಗೇ ಇರುತ್ತಾ? ಗೊತ್ತಿಲ್ಲಾ. ಆದರೆ ಅವರ ಸಮಾನತೆಗಾಗಿನ ತುಡಿತ, ಪ್ರಾಮಾಣಿಕತೆ, ತೀವ್ರತೆ, ನಿಷ್ಠೆಗಳಿಗೆ ನಮ್ಮ ಸಮಾಜ ಕೃತಜ್ಞತೆಯಿಂದಲೇ ನೋಡಬೇಕಾಗುತ್ತದೆ.

* ರಾಜಕಾರಣಕ್ಕೂ ಅಕ್ರಮವಾದ ಹಣಕ್ಕೂ ಅಪವಿತ್ರ ಸಂಬಂಧ ಗಟ್ಟಿಯಾಗ್ತಾ, ಅದು ಸಾರ್ವಜನಿಕ ಒಪ್ಪಿಗೆಯನ್ನೂ ಪಡೆದುಕೊಳ್ಳುತ್ತಿರೊ  ಈ ದಿನಗಳಲ್ಲಿ ಚುನಾವಣಾ ರಾಜಕಾರಣದ ಮೂಲಕವೇ ಪರ್ಯಾಯ ಹುಡುಕಬೇಕು ಅಂದುಕೊಂಡವರ  ಮುಂದಿರುವ ಸವಾಲು ಏನು? 
ಈ ವ್ಯವಸ್ಥೆನಲ್ಲಿ ಬದಲಾವಣೆ ಸಾಧ್ಯ ಇಲ್ಲ ಅನ್ನೋ ದಿಕ್ಕೆಟ್ಟ ಸ್ಥಿತಿಗೆ ತಲುಪಿದಾಗಲೇ, ಆಮ್‌ಆದ್ಮಿ ಒಂದು ಬೆಳಕಿನಂತೆ ಹುಟ್ಟಿ ಬಂತು. ತರ್ಕಕ್ಕೆ ಮೀರಿದ ಅನಿರೀಕ್ಷಿತ ಸಾಧ್ಯತೆಗಳು ಕೂಡ ಸಂಭವಿಸ್ತವೆ.

* ಆಮ್‌ ಆದ್ಮಿ ನಗರಕೇಂದ್ರಿತ ಪಕ್ಷ. ದಲಿತ–ರೈತ ಎರಡೂ ಫೋರ್ಸ್‌ಗಳಿಲ್ಲದೆ ರೂಪುಗೊಂಡಿದ್ದಲ್ಲವಾ? 
ಅದ್ಹೇಳಕಾಗಲ್ಲ ನಮಗೆ. ಹರಿಯಾಣದಲ್ಲಿ ಹೆಂಗೆ ನಮಿಗ್ಗೊತ್ತಿಲ್ಲ. ಪಂಜಾಬ್‌ನಲ್ಲಿ ಹೆಂಗಿದೆ ಅಥವಾ ಯುಪಿನಲ್ಲಿ ಹೆಂಗಿದೆ ನಮಿಗ್ಗೊತ್ತಿಲ್ಲ. ಡೆಲ್ಲಿನಲ್ಲಿ ಹೆಚ್ಗೆ ಆಟೊ ಡ್ರೈವರ್‌ಗಳಿದ್ದಾರೆ, ಸ್ಲಮ್‌ನವರಿದ್ದಾರೆ. ಆಮ್‌ಆದ್ಮಿಗೆ ಬೆಂಬಲ ಕೊಟ್ಟಿದ್ದೇ ಅವರು. ತುಂಬಾನೇ ಕ್ರಿಯೇಟಿವ್ ರಾಜಕಾರಣ ಆಮ್‌ಆದ್ಮಿದು. ಅವರೊಟ್ಟಿಗೆ ಜೊತೆಗೂಡಿದರೆ ಸ್ಥಗಿತಗೊಂಡಿರುವ ನಾವು ಚೇತರಿಸ್ಕೊಳ್ಳಬಹುದೇನೋ ಅಂತ ಆಸೆ ಹುಟ್ಟಿತ್ತು.

* ಆಮ್‌ ಆದ್ಮಿಯ ಈ ಗೆಲುವಿನ ಹಿಂದೆ ಮತ್ತೇನು ಕಾರಣ ಇರಬಹುದು?
ಎಂಥಾ ಕಾಂಬಿನೇಶನ್ ಅಲ್ಲಿತ್ತು ಅಂತಂದ್ರೆ, ಕೇಜ್ರಿವಾಲ್‌ಗೆ ಸಮುದಾಯದೊಟ್ಟಿಗೆ ಕ್ರಿಯಾ ಮುಖಾಂತರ ಸಂವಾದಿಸುವ ರಾಜಕಾರಣದ ಭಾಷೆ ಗೊತ್ತು. ನನಗಿಲ್ಲ ಅದು (ನಗು). ಆದರೆ ಆತನ ಕ್ರಿಯಾ ರಾಜಕಾರಣಕ್ಕೆ ಒಂದು ದೃಷ್ಟಿಕೋನ, ವಿಶನ್ ಕೊಡುವಂಥ ವಿವೇಕ-ವಿವೇಚನೆ ಯೋಗೇಂದ್ರ ಯಾದವ್-ಪ್ರಶಾಂತ್‌ಭೂಷಣ್ ಗುಂಪಿತ್ತಲ್ಲ, ಅದಕ್ಕಿತ್ತು. ಇವೆರಡರ ಕೂಡಿಕೆಯಿಂದಾನೇ ಒಂದು ದೊಡ್ಡ ಭರವಸೆ ಉಂಟುಮಾಡ್ತು ಅದು. ಇಲ್ಲಿ ಯೋಗೇಂದ್ರ ಯಾದವ್ ಮತ್ತು ಗೆಳೆಯರ ಕಾಣ್ಕೆ ದೊಡ್ಡದು. ಅವರ ಪ್ರಣಾಳಿಕೆ ನೋಡಿ. ನಮ್ಮ ಪದಗಳು ಅಲ್ಲಿಲ್ಲ ಅಷ್ಟೆ. ಆದರೆ ನಮ್ಮ ಆಶಯಗಳೆಲ್ಲ ಅಲ್ಲಿವೆ. ಇನ್ನೊಂದಂದ್ರೆ, ನಾವೇನ್ ಹೇಳ್ತಾ ಇದ್ವೋ ಭಾಷಣದಲ್ಲಿ? ಒಳ್ಳೇವ್ರೆಲ್ಲ ರಾಜಕಾರಣದಲ್ಲಿಲ್ಲ, ಇದರಿಂದಲೇ ಈ ಸಮಸ್ಯೆ ಅಂತ. ಆಮ್‌ ಆದ್ಮಿಗೆ ಒಂದು ಹೊಳೆಗೆ ಸೇರೋ ಝರಿಗಳ ಥರ, ಇದುವರೆಗೂ ರಾಜಕಾರಣಕ್ಕೆ ಬರ್ತಿರ್ಲಿಲ್ವಲ್ಲಾ, ಅವರೆಲ್ಲಾ ಸೇರ್ಕೊಂಡ್ ಬಿಟ್ರು. ಒಂದು ಚೈತನ್ಯ ಇದಾಯ್ತು. ಇಲ್ಲಿ ಕೇಜ್ರಿವಾಲ್ ತಾನಷ್ಟೇ ಆಗಿದ್ರೆ, ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಮುಂತಾದವರು ಇಲ್ದೇ ಇದ್ದಿದ್ರೆ,  ಜನಪ್ರಿಯ ಸ್ಟಂಟ್ ನಾಯಕ ಆಗ್ಬಿಡೋರು! ಆ ಅರಿವು ಆತನಿಗೆ ಇರಬೇಕಾಗಿತ್ತು.

* ದಿಲ್ಲಿಯಲ್ಲಿ ಆಮ್‌ ಆದ್ಮಿ ಗೆದ್ದಾಗ ಕರ್ನಾಟಕದ ಪ್ರಗತಿಪರರೆಲ್ಲ ಸಂಭ್ರಮ ಪಟ್ಟಿದ್ದರಲ್ಲಾ?
ಖಂಡಿತಾ, ಖಂಡಿತಾ. ಆದರೆ ಆಮ್‌ ಆದ್ಮಿ ಒಡಕು ಬಂದ ಮೇಲೆ, ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಇವರನೆಲ್ಲ ತೆಗದ್‌ ಹಾಕಿದ್ರಲ್ಲ ಕೇಜ್ರಿವಾಲ್, ತಮ್ಮ ತಲೆಯನ್ನು ಕತ್ತರಿಸಿಕೊಂಡು ದೇಹ ಮಾತ್ರ ಉಳಿಸಿಕೊಂಡಂತೆ ಆಗಿಬಿಟ್ಟರು. ಆಗ ನಂಗೊಂದು ಅನ್ನಿಸ್ತು– ‘ಇಲ್ಲಾ, ಈ ನಮ್ಮ ಪ್ರಗತಿಪರರು, ಸಮಾಜವಾದಿಗಳು, ಸಮತಾವಾದಿಗಳು ಇದಾರಲ್ಲಾ ಇವರು, ಅಧಿಕಾರಕ್ಕೆ ಬರಬಾರದು. ಪ್ರಬಲವಾದ ವಿರೋಧ ಪಕ್ಷವಾಗಿರಬೇಕು’ ಅಂತ. ಇವತ್ತು ಭಾರತದ ರಾಜಕಾರಣದಲ್ಲಿ ವಿರೋಧ ಪಕ್ಷ ಅನ್ನೋವು ಎಲ್ಲಿವೆ? ಕಮ್ಯುನಿಸ್ಟರು ಜಡ ಆಗಿದ್ದಾರೆ. ಇನ್ನು ಸ್ಥಳೀಯ ಪಕ್ಷಗಳು ಮಹಾ ಸ್ವಾರ್ಥ ಕುಟುಂಬ ರಾಜಕಾರಣ ಮಾಡ್ತಿವೆ. ಒಬ್ಬರು ರೂಲಿಂಗಾದರೆ ಇನ್ನೊಬ್ಬರು ವಿರೋಧ ಪಕ್ಷ; ಇವರು ಅಧಿಕಾರಕ್ಕೆ ಬಂದರೆ ಅವರು ವಿರೋಧ ಪಕ್ಷ. ಅವೇ ಮಾಮೂಲಿ ಡೈಲಾಗ್. ಅವೇ ನಾಟಕದ ಪದಗಳು. ಭಾರತದ ರಾಜಕಾರಣದಲ್ಲಿ ಒಂದು ಪ್ರಬಲ ವಿರೋಧಪಕ್ಷವಾಗಿ ಹೆಂಗೆ ತನ್ನ ಛಾತಿ ತೋರಸ್ಬೇಕು ಅನ್ನುವ ರೀತಿ-ರಿವಾಜಿಲ್ಲ ಇವತ್ತು. ಇಂತಹ ಸಂದರ್ಭದಲ್ಲಿ ಆಮ್‌ ಆದ್ಮಿ ಬರೀ 25 ಜನ ಡೆಲ್ಲಿನಲ್ಲಿ ಗೆದ್ದಿದ್ದರು ಅಂತ ಇಟ್ಕೊಳ್ಳಿ, ಆಗ ಆಮ್‌ ಆದ್ಮಿಯ ಆ ಎಲ್ಲರೂ ಕೂಡಿ ಇರುತ್ತಿದ್ದರು. ಆಗ ಈಗ ಹೊರ ಹಾಕಲಲ್ಪಟ್ಟ ಆ ಮೇಧಾವಿ ಚಿಂತನಶೀಲ ಗುಂಪಿನೊಡನೆ ಕೇಜ್ರೀವಾಲರ ಕ್ರಿಯಾಶೀಲ ನಡೆಯ ರಾಜಕಾರಣವೂ ಸೇರಿಕೊಂಡು ಇಡೀ ಭಾರತವನ್ನೇ ಪ್ರಭಾವಿಸುವಂಥ  ವಿರೋಧಪಕ್ಷವೊಂದರ ಒಂದು ಮಾದರಿ ಹುಟ್ಟುತ್ತಿತ್ತೇನೋ...

* ಆಮ್‌ ಆದ್ಮಿ ಸೋಲಬೇಕಾಗಿತ್ತು ಅಂತ ಪ್ರಶಾಂತ್ ಭೂಷಣ್ ಹೇಳಿದ್ದು ಇದೇ ಹಿನ್ನೆಲೆಯಿಂದ ಇರಬೇಕೆ?
ಯಾವ ಕಾರಣಕ್ಕೆ ಅವರು ಇದನ್ನ ಹೇಳಿದ್ದಾರೊ? ಏನಾದ್ರೂ ಇದೇ ಅರ್ಥದಲ್ಲಿ ಹೇಳಿದ್ರೆ, ನಿಜವಾಗ್ಲೂ ಅವರು ದಾರ್ಶನಿಕ ಅನಿಸುತ್ತೆ. ನನಗೆ ಗೊತ್ತಿರೋ ಪ್ರಕಾರ, ಮುಕ್ಕಾಲು ಪಾಲು ಅವರು ಇದನ್ನು ಹೇಳಿರೋದು, ಬೇರೆ ಪಾರ್ಟಿಯಿಂದ ಬಂದ ಕೆಲವು ಅಪಾತ್ರರಿಗೆಲ್ಲ ಮತ್ತೆ ಅಪವಾದ ಇರೋರಿಗೆಲ್ಲ ಚುನಾವಣೆಗೆ ನಿಲ್ಲಲು ಟಿಕೇಟ್ ಕೊಟ್‌ಬಿಟ್ಟಿದ್ದಕ್ಕೆ ಅಪ್‌ಸೆಟ್ ಆಗಿ.

* ಕೇಜ್ರಿವಾಲರದು ಟ್ರೆಂಡೊ ಚಳವಳಿಯಾ?
ಕೇಜ್ರಿವಾಲ್ ಭುಗಿಲೆದ್ದ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಎದ್ದ ಒಂದು ಟ್ರೆಂಡ್‌ಗೆ ರಾಜಕೀಯ ಸ್ವರೂಪಕೊಟ್ಟರು. ಇದು ಸುಲಭ. ಆದರೆ ಯೋಗೆಂದ್ರ ಯಾದವ್ ಏನು ‘ಸ್ವರಾಜ್ ಅಭಿಯಾನ್’ ಅಂತ ಮಾಡ್ತಾ ಇದ್ದಾರೆ ಈವಾಗ, ಇದು ಆಂದೋಲನ. ಇದು ಕಷ್ಟ. ಭಾರತಕ್ಕೆ ಈಗ ಏನು ಅಗತ್ಯ ಅಂತಂದ್ರೆ, ಭಾರತದಲ್ಲಿ ಸ್ಥಳೀಯವಾಗಿರುವ ಎಲ್ಲಾ ಜನಪರ ಆಂದೋಲನಗಳನ್ನು ಕೂಡಿಸೋ ಸಾಮರ್ಥ್ಯವಿರೋ ಒಂದು ಸರಿಯಾದ ನಾಯಕತ್ವ, ರಾಷ್ಟ್ರಮಟ್ಟದಲ್ಲಿ ಒಂದು ಛತ್ರಿ ಹಿಡಿದ ಹಾಗೆ ಸಾಧ್ಯವಾಗಬೇಕು. ಜನಾಂದೋಲನಗಳು ಸ್ಥಳೀಯವಾಗಿ ಕೂಡೋದು ಕಷ್ಟ, ಯಾಕಂದರೆ ಹೆಚ್ಚು ಕಮ್ಮಿ ಎಲ್ಲಾ ಚಳವಳಿಗಳೂ ದಾಯಾದಿ ಗುಣ ಇಟ್ಕೊಂಡಿವೆ. ಯಾವುದೋ ಒಂದು ದೊಡ್ಡ ಹೊಡೆತ ಬಿದ್ದಾಗ ಸೇರಬಹುದು ಅಷ್ಟೇನೇ. ಜೊತೆಗೆ ಸುಮಾರು ಜನಕ್ಕೆ ಚಳವಳಿ ಅರ್ಧ ಉದ್ಯೋಗ ಆಗ್ಬಿಟ್ಟಿರುತ್ತೆ. ಎಲ್ಲಿ ತನ್ನ ಸ್ಥಾನಮಾನಕ್ಕೆ ಹೆಚ್ಚುಕಮ್ಮಿ ಆಗ್ಬಿಡುತ್ತೊ ಅನ್ನೋ ಆತಂಕ ಬಂದ್‌ಬಿಟ್ಟಿರುತ್ತೆ. ರಾಷ್ಟ್ರಮಟ್ಟದಲ್ಲಿ ಒಂದು ದೊಡ್ಡ ನಾಯಕತ್ವ ಸಿಕ್ಬಿಟ್ರೆ ಅಲ್ಲಿ ದಾಯಾದಿ ಸ್ಪರ್ಧೆ ಇರಲ್ಲ. ಇಲ್ಲಿ ಈ ಚಳವಳಿಗಳಿಗೆ ಅವವುಗಳ ಅಸ್ತಿತ್ವಾನೂ ಇರುತ್ತೆ. ಅದೇ ರಾಷ್ಟ್ರಮಟ್ಟದಲ್ಲಿ ಒಕ್ಕೂಟದಂತೂ ಆಗುತ್ತದೆ. ಆ ಥರದ್ದೊಂದು  ಏನೋ ಬೇಕಾಗಿದೆ ಇಂಡಿಯಾಕ್ಕೆ. ಆಗ ಮಾತ್ರವೇ ಜನಾಂದೋಲನಗಳಿಗೆ ಒಂದು ಅಭೂತಪೂರ್ವ ಶಕ್ತಿ ಪ್ರಾಪ್ತಿಯಾಗಿ ಅವುಗಳ ನುಡಿ ಆಶಯಗಳು ಕಾರ್ಯರೂಪಕ್ಕೆ ಬರೋ ಸಾಧ್ಯತೆ ಹೆಚ್ಚುತ್ವೆ. ಇಂದಿನ ಲಗಾಮು ಇಲ್ಲದ ರಾಜಕಾರಣಕ್ಕೆ ಜನಾಂದೋಲನಗಳು ಲಗಾಮಾಗುತ್ತೆ.

* ಯೋಗೇಂದ್ರ ಯಾದವ್ ಅವರ ‘ಸ್ವರಾಜ್ ಸಂವಾದ’ದಲ್ಲಿ ಭಾಗವಹಿಸೋಕೆ ದೆಹಲಿಗೆ ಹೋಗಿದ್ರಿ. ಅದು ನಿಮಗೆ ಭರವಸೆ ಅನಿಸ್ತಾ ಇದೆಯಾ?
ಆಮ್‌ ಆದ್ಮಿ ಥರ, ಕಣ್ಣಿಗೆ ಕೋರೈಸೊ ಥರದ ರಾಜಕಾರಣವನ್ನ ‘ಸ್ವರಾಜ್ ಅಭಿಯಾನ್’ ಮಾಡೋಕೆ ಆಗ್ದೆ ಇರಬಹುದು. ಆದರೆ ‘ಸ್ವರಾಜ್ ಅಭಿಯಾನ್’ ಇಂಡಿಯಾದ ಅಲ್ಲಿ ಇಲ್ಲಿ ಸ್ಥಳೀಯವಾಗಿ ಆಗುತ್ತಿರುವ ಜನಾಂದೋಲನಗಳನ್ನ ಕೂಡಿಸೋಕೆ, ಅದಕ್ಕೆ ಸಮಗ್ರವಾಗಿ ಒಂದು ಧ್ವನಿ ಕೊಡೋಕೆ ಪ್ರಯತ್ನ ಮಾಡ್ತಾ ಇದೆ. ‘ಸ್ವರಾಜ್ ಅಭಿಯಾನ’ದ್ದು ‘ನಿಧಾನಕ್ಕೆ ಗೆಲುವು’ ಅಂತಾರಲ್ಲಾ ಹಾಗೆ. ಇದು ಭಾರತವನ್ನ ಕಾಪಾಡಿಬಿಡಲೂ ಬಹುದು.

* ನಿಮ್ಮನ್ನ ಲೇಖಕರಾಗಿ ಮತ್ತು ಪಬ್ಲಿಕ್ ಇಂಟಲೆಕ್ಚುವಲ್ ಆಗಿ ನಾಡಿನ ಜನ ಬಹಳ ಪ್ರೀತಿಸ್ತಾರೆ. ಗೌರವಿಸ್ತಾರೆ. ಆದರೂ ‘ಸರ್ವೋದಯ ಕರ್ನಾಟಕ’ಕ್ಕೆ ಒಂದು ರಾಜಕೀಯ ಅಸ್ತಿತ್ವ ಸಾಧ್ಯವಾಗಲಿಲ್ಲ.
ಅದಕ್ಕೆ ಅದರ ಅಧ್ಯಕ್ಷರೇ ಕಾರಣ (ನಗು). ಕೇಜ್ರಿವಾಲ್‌ಗೆ ಇರುವ ಕ್ರಿಯಾ ರಾಜಕಾರಣದ ಮುಖಾಂತರ ಸಮುದಾಯವನ್ನ ಮುಟ್ಟೋ ಭಾಷೆ ಇದೆಯಲ್ಲ ಅದರ ಕೊರತೆ ನನ್ನಲ್ಲಿದೆ. ನಾನಂದ್‌ಕೊಂಡಿದ್ದೆ– ‘ಸಕ’ ಒಂದ್ ಟೀಮಾಗುತ್ತೆ, ನಾನೂ ಜೊತೆಗಿರ್ತೀನಿ ಅಂತ. ಆ ಥರ ಆಗಲಿಲ್ಲ.

* ಈಗ ನಿಮ್ಮ ನಡೆ?
ನಾನು ಸರ್ವೋದಯ ಕರ್ನಾಟಕಕ್ಕೆ ಅಧ್ಯಕ್ಷನಾಗಿ ಹತ್ತು ವರ್ಷಗಳಾಗಿಬಿಟ್ಟವು ಎಂದು ನೀವು ನೆನಪಿಸಿದ ಮೇಲೆ ಇನ್ನೇನಿದೆ? ಈಗ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗಿದೆ ಅಷ್ಟೇ! (ನಗು). ‘ಸಕ’ವನ್ನು ಪುನರ್‌ರಚಿಸಬೇಕಾಗಿದೆ ತುರ್ತಾಗಿ. ಈ ದಿಕ್ಕಿನಲ್ಲಿ ಸದ್ಯದಲ್ಲೆ ಹೆಜ್ಜೆಯಿಡಲಿದ್ದೇವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪುನರ್‌ರಚಿಸಲು ಹತ್ತೂ ಜನರ ಚಾಲನಾ ಸಮಿತಿ– ಅದಕ್ಕೊಬ್ಬ ಸಂಚಾಲಕ, ಈ ಥರ ಯೋಚಿಸ್ತಿದೇವೆ. ಹಾಗೇನೇ ದಲಿತ ಸಂಘ, ರೈತಸಂಘದವರು ಸಮಿತೀಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗದಂತೆ ಎಚ್ಚರವಹಿಸುತ್ತೇವೆ. ಈಗ ಬುದ್ಧಿ ಬಂದಿದೆ ಅಂದುಕೊಂಡಿದ್ದೇವೆ. ಅದಕ್ಕಾಗಿ ಆದಷ್ಟೂ ಹೊಸಬರು, ಮಹಿಳೆಯರು, ಯುವಕರಿಗೆ ಆದ್ಯತೆ. ಹಾಗೇ ನಂಬಿಕೆ ಉಳಿಸಿಕೊಂಡಿರುವ ವೃತ್ತಿ ರಾಜಕಾರಣಿಗಳನ್ನೂ ಒಳಗೊಂಡು ಈಗ ಪಕ್ಷ ರೂಪಿಸಬೇಕಾಗಿದೆ. 

* ‘ಸಕ’ದಲ್ಲಿ ಮುಂದೆ ನೀವು?
ವಿಶೇಷ ವಕ್ತಾರ!

* ಕರ್ನಾಟಕದಲ್ಲಿ ಮಾರ್ಕ್ಸ್‌ವಾದ ಮತ್ತು ಇತರೆ ರಾಜಕೀಯ ವಿಮೋಚನ ವಾದಗಳು ಸಂವಾದ ಮಾಡುವ ಬಗೆ ಹೇಗೆ?
ನಾನು ಮಾರ್ಕ್ಸ್‌ನ ಹೆಸರನ್ನ ಹೆಚ್ಚಾಗಿ ಹೇಳದೇ ಇರಬಹುದಾದರೂ. ಆಶಯಗಳಲ್ಲಿ ಮಾರ್ಕ್ಸ್ ಹೇಳೋದಕ್ಕಿಂತಾ ಭಿನ್ನವಾಗಿದ್ದೀನಾ? ಈಗೀಗ ನಾನು ಮಾರ್ಕ್ಸ್‌ ಅನ್ನು ಪ್ರಜ್ಞಾಪೂರ್ವಕವಾಗಿ ಪ್ರಸ್ತಾಪಿಸ್ತಾ ಇದ್ದೀನಿ. ಈಚೆಗೆ ಪಾಂಡವಪುರದಲ್ಲಿ ‘ವಿಶ್ವಮಾನವ ದಿನಾಚರಣೆ’ ಅಂತ ಮಾಡಿದ್ರು ಪುಟ್ಟಣ್ಣಯ್ಯ. ಒಂದ್ ಗಾಡಿನಲ್ಲಿ ಸಂತರ ಫೋಟೋನೆಲ್ಲಾ ಹಾಕಿಸಿ ಮೆರವಣಿಗೆ ಮಾಡ್ಸಿದರು. ಕುವೆಂಪು, ಟಿಪ್ಪು, ಮದರ್ ತೆರೇಸಾ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಕನಕದಾಸ, ಬಸವಣ್ಣ, ವಾಲ್ಮೀಕಿ ಹೀಗೆ ಇನ್ನೂ ಅನೇಕರಿದ್ರು. ಮಾರ್ಕ್ಸ್ ಇರಲಿಲ್ಲ. ಏನ್ ಮಾತಾಡದಪ್ಪ ಅಂತ ತಲೆಕೆಡಿಸ್ಕೊಂಡ್ ಹೋಗಿದ್ದೆ.

ಆಮೇಲೆ ಹೇಳ್ದೆ- ‘ವಿಶ್ವಮಾನವರೆಲ್ಲಾ ಇವತ್ತು ಬೀದೀಲಿ ಮೆರವಣಿಗೆ ಮಾಡಸ್ಕೊಂಡು ಬಿಸಿಲಲ್ಲಿ ಒಣಗಿಕೊಂಡು ದೂಳು ಕುಡಿದು ಬಂದಿದ್ದಾರೆ. ಅವರು ಬದುಕಿದ್ದಾಗ್ಲೂ ಪಾಪ ಹಿಂಗೇ ದಣಿದರು ಅನ್ಸುತ್ತೆ. ಈ ಸಂತರಿದ್ದಾರಲ್ಲಾ ಬಹುತೇಕ ಎಲ್ಲರೂವೆ ತಮ್ಮ ಒಳಗನ್ನ ಹೆಚ್ಗೆ ನೋಡ್ಕೊಂಡವ್ರು. ಭೌತಿಕವಾದ ಜಗತ್ತನ್ನ ಕಮ್ಮಿ ನೋಡ್ದವ್ರು ಅಥವಾ ಒಳಗಲ್ಲೇ ಅದೂ ಇದೆ ಅಂದ್ಕೊಂಡವರು. ಆದ್ರೆ ಭೌತಿಕ ಸಮಾನತೆ ಸಮತ್ವವನ್ನ ಧ್ಯಾನಿಸ್ತಾ ತಪಸ್ ಮಾಡ್ದ ಮಹರ್ಷಿ ಕಾರ್ಲ್‌ಮಾರ್ಕ್ಸ್ ಇಲ್ಲಿ ಕಾಣಲಿಲ್ಲ. ಈ ಮೆರವಣಿಗೆಗೊಂಡ ಸಂತರಿಗೆಲ್ಲರ್ಗೂವೆ ಆಸ್ಪತ್ರೆಗೆ ಸೇರಿಸಿ ಮಾರ್ಕ್ಸ್‌ನ ಒಂದೊಂದ್ ಬಾಟಲ್ ರಕ್ತ ಕೊಡಬೇಕು’ ಅಂತ. ನಮಗೆ ನಿಜವಾಗಿ ಬೇಕಾದ್ದು ವಾದಗ್ರಸ್ತ ಮಾರ್ಕ್ಸ್ ಅಲ್ಲ. ಮಾರ್ಕ್ಸ್‌ನ ರಕ್ತ, ರಕ್ತಗತಮಾಡಿಕೊಳ್ಳೋದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT