ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಿಷ್ಣುತೆ ಮಾಫಿಯಾ’ಗೆ ಮಣಿದು ವಿಕ್ರಂ ಹೊರಕ್ಕೆ

ಬೆಂಗಳೂರು ಸಾಹಿತ್ಯ ಹಬ್ಬದಿಂದ ಹಿಂದೆ ಸರಿದ ಸಂಘಟಕ
Last Updated 28 ನವೆಂಬರ್ 2015, 19:37 IST
ಅಕ್ಷರ ಗಾತ್ರ

ಬೆಂಗಳೂರು: ಡಿಸೆಂಬರ್‌ 5 ಮತ್ತು 6ರಂದು ನಗರದಲ್ಲಿ ನಡೆಯಲಿರುವ ‘ಬೆಂಗಳೂರು ಸಾಹಿತ್ಯ ಹಬ್ಬ – 2015’ರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕೆಲ ಸಾಹಿತಿಗಳು, ವಿಮರ್ಶಕರು ಪತ್ರ ಬರೆದ ನಂತರ, ‘ಸಾಹಿತ್ಯ ಹಬ್ಬ ಆಯೋಜನೆ ಕಾರ್ಯದಿಂದ ನಾನೇ ಹೊರಬರುತ್ತಿದ್ದೇನೆ’ ಎಂದು ಕಾರ್ಯಕ್ರಮದ ನಿರ್ದೇಶಕ ವಿಕ್ರಂ ಸಂಪತ್ ಹೇಳಿದ್ದಾರೆ.

‘ನಾನು ಆರಂಭಿಸಿದ ಸಾಹಿತ್ಯ ಹಬ್ಬದಿಂದ ಹೊರಬರುವ ನೋವಿನ ತೀರ್ಮಾನ ಕೈಗೊಂಡಿದ್ದೇನೆ. ಇದಕ್ಕೆ ಸಹಿಷ್ಣುತೆ ಮಾಫಿಯಾ ಕಾರಣ’ ಎಂದು ವಿಕ್ರಂ ಟ್ವೀಟ್‌ ಮಾಡಿದ್ದಾರೆ.

ಪ್ರಶಸ್ತಿಗಳನ್ನು ಹಿಂದಿರುಗಿಸುವ ಚಳವಳಿ ಕುರಿತು ವಿಕ್ರಂ ಅವರು, ‘ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಗಳನ್ನು ನಾನಂತೂ ಹಿಂದಿರುಗಿಸುವುದಿಲ್ಲ’ ಎಂದು ಇಂಗ್ಲಿಷ್‌ ದೈನಿಕವೊಂದರಲ್ಲಿ ಲೇಖನ ಬರೆದಿದ್ದರು. ‘ಈ ಲೇಖನ ನಮಗೆ ಸರಿ ಕಾಣುತ್ತಿಲ್ಲ. ಇನ್ನೂ ಕೆಲವು ವಿಚಾರಗಳಲ್ಲಿ ಅಭಿಪ್ರಾಯ ಭೇದ ನಮಗಿದೆ’ ಎಂದು ಹೇಳಿ ಕನ್ನಡದ ಮೂವರು ಸಾಹಿತಿಗಳು ಸಾಹಿತ್ಯ ಹಬ್ಬ ಬಹಿಷ್ಕರಿಸುವ ತೀರ್ಮಾನ ಕೈಗೊಂಡಿದ್ದರು.

‘ನಾನು ಹೊಂದಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಕಾರ್ಯಕ್ರಮದ ಯಶಸ್ಸಿಗೆ ಅಡ್ಡಿ ಬರುತ್ತಿದೆ. ನಾನು ಬರೆದ ಲೇಖನಗಳನ್ನು ಸಂದರ್ಭರಾಹಿತ್ಯವಾಗಿ ನೋಡಿ, ತೀರ್ಮಾನಕ್ಕೆ ಬರಲಾಗುತ್ತಿದೆ. ನಾನು ಹಿಂದೆ ಮಾಡಿರುವ ಕೆಲಸಗಳನ್ನು ಗಮನಿಸದೆಯೇ ನನಗೆ ಹಣೆಪಟ್ಟಿ ಅಂಟಿಸಲಾಗುತ್ತಿದೆ’ ಎಂದು ವಿಕ್ರಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ನಾನು ಬರೆದಿರುವ ಲೇಖನಗಳ ಬಗ್ಗೆ ನನ್ನಲ್ಲಿ ಬೇಸರವಿಲ್ಲ. ನನ್ನ ಅನಿಸಿಕೆ ವ್ಯಕ್ತಪಡಿಸಲು ದೇಶ ನನಗೆ ನೀಡಿರುವ ಸ್ವಾತಂತ್ರ್ಯದ ಬಗ್ಗೆ ಅಭಿಮಾನವಿದೆ’ ಎಂದೂ ಅವರು ಹೇಳಿದ್ದಾರೆ.

‘ನನ್ನ ವೈಯಕ್ತಿಕ ನಿಲುವಿನ ಕಾರಣಕ್ಕೆ ನಾನು ರೂಪಿಸಿದ ಕಾರ್ಯಕ್ರಮವನ್ನು ಗುರಿ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ನನ್ನ ಉಪಸ್ಥಿತಿ ಬಗ್ಗೆ ಕೆಲವು ಲೇಖಕರಿಗೆ ತಕರಾರು ಇದೆ. ನಾನೇ ಕಾರ್ಯಕ್ರಮ ಆಯೋಜನೆಯಿಂದ ಹಿಂದೆ ಸರಿದಿರುವ ಕಾರಣ, ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮಸ್ಯೆಯಾಗದು’ ಎಂದು ನಂಬಿದ್ದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT