ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಧಕರನ್ನು ಸ್ಮರಿಸುವ ಕೆಲಸ ನಡೆಯಬೇಕು’

Last Updated 19 ಅಕ್ಟೋಬರ್ 2014, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ನಾಡು ಹಾಗೂ ಕನ್ನಡ ಮನಸ್ಸುಗಳನ್ನು ಕಟ್ಟಲು ದುಡಿದ ಅದೆಷ್ಟೊ ಸಾಧಕರನ್ನು ನಾವು ಮರೆತ್ತಿದ್ದೇವೆ. ಅವರ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಅಂಥ ಸಾಧಕರನ್ನು ಸ್ಮರಿಸುವ ಕೆಲಸ ನಡೆಯಬೇಕಾಗಿದೆ. ಈ ಮೂಲಕ ಯುವ ಪೀಳಿಗೆಯಲ್ಲಿ ಸ್ಫೂರ್ತಿ ತುಂಬಬೇಕಾಗಿದೆ’ ಎಂದು ಚಿತ್ರ ನಿರ್ದೇ­ಶಕ ಟಿ.ಎಸ್‌.ನಾಗಾಭರಣ ಹೇಳಿದರು.

ನಗರದಲ್ಲಿ ಉದಯಭಾನು ಕಲಾ­ಸಂಘ ಭಾನುವಾರ ಆಯೋಜಿಸಿದ್ದ ಸಮಾ­ರಂಭದಲ್ಲಿ ‘ಸುವರ್ಣ ಪುಸ್ತಕ­ಮಾಲೆ’­ಯ ಐದು ಪುಸ್ತಕಗಳನ್ನು ಬಿಡು­ಗಡೆ ಮಾಡಿ ಅವರು ಮಾತನಾಡಿ­ದರು.

‘ಮರೆತು ಹೋಗಿದ್ದ ಹಲವು ಸಾಧಕ­ರನ್ನು ಅಕ್ಷರ ರೂಪದಲ್ಲಿ ಪರಿಚಯಿಸು­ತ್ತಿರುವ ಉದಯಭಾನು ಕಲಾಸಂಘದ ಕಾರ್ಯ ಶ್ಲಾಘನೀಯ. ಸಾಂಸ್ಕೃತಿಕ, ಸಾಮಾ­ಜಿಕ, ಕ್ರೀಡಾ ಲೋಕಕ್ಕೆ ಸಂಘ ಉತ್ತಮ ಕೊಡುಗೆ ನೀಡಿದೆ’ ಎಂದರು.

ಕೃತಿಗಳನ್ನು ಬಿಡುಗಡೆಗೊಳಿಸಿ ಮಾತ­ನಾಡಿದ ಕನ್ನಡ ಪುಸ್ತಕ ಪ್ರಾಧಿ­ಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌, ‘ಕಷ್ಟದಲ್ಲಿ ಬೆಳೆದು ಸಾಧನೆ ಮಾಡಿದವರು ಸ್ಫೂರ್ತಿಯ ಸೆಲೆಯಾಗುತ್ತಾರೆ. ಅವರ ಶ್ರಮ, ಪ್ರಯತ್ನ, ಸಾಧನೆಗೆ ಕಂಡುಕೊಂಡ ಹಾದಿ ಯುವಪೀಳಿಗೆಗೆ ಮಾರ್ಗದರ್ಶನ­ವಾಗಲಿದೆ. ಇಂಥ ಸಾಧಕರ ಕುರಿತ ಪುಸ್ತಕಗಳನ್ನು ಹೊರ­ತರುವ ಮೂಲಕ ಸಂಘವು ಉತ್ತಮ ಕಾರ್ಯದಲ್ಲಿ ತೊಡಗಿದೆ’ ಎಂದು ಹೇಳಿದರು.

‘ಸರ್ಕಾರ ಮಾಡಬೇಕಿದ್ದ ಕೆಲಸ­ವನ್ನು ಉದಯಭಾನು ಕಲಾ­ಸಂಘ ಕೈಗೆತ್ತಿ­ಕೊಂಡಿದೆ. ಶಾಸ್ತ್ರೀಯ ಕನ್ನಡ­ದಲ್ಲಿ ಸ್ನಾತ­ಕೋತ್ತರ ಡಿಪ್ಲೊಮಾ ಆರಂಭಿ­ಸಿ­ರುವುದು ಅದಕ್ಕೊಂದು ನಿದ­ರ್ಶನ. ಈ ರೀತಿಯ ಕೋರ್ಸ್‌ ಎಲ್ಲೂ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ­ಯವರು ಇತ್ತ ಕಣ್ಣು ಹರಿಸ­ಬೇಕು’ ಎಂದು ಸಾಹಿತಿ ಡಾ.ಪಿ.ವಿ.­ನಾರಾಯಣ ನುಡಿದರು.

ಲೇಖಕರ ಪರವಾಗಿ ಮಾತನಾಡಿದ ಡಾ.ಕೆ.ಸತ್ಯನಾರಾಯಣ, ‘ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಪಾತ್ರರಾದ ಕೈಲಾಶ್‌ ಸತ್ಯಾರ್ಥಿ ಅವರಿಗೆ ಭಾರತ ಸರ್ಕಾರ­­ದಿಂದ ಯಾವುದೇ ಪ್ರಶಸ್ತಿ ಲಭಿಸಿಲ್ಲ. ಶಾಂತಿ ಪುರಸ್ಕಾರಕ್ಕೆ ಭಾಜನ­ರಾದ ಮೇಲೆ ಎಲ್ಲರೂ ಕೈಲಾಶ್‌ ಅವ­ರನ್ನು ಕೊಂಡಾಡುತ್ತಿದ್ದಾರೆ. ಭಾರ­ತದ ಹೆಮ್ಮೆ ಎನ್ನುತ್ತಿದ್ದಾರೆ. ಸಾಧಕರನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಇದೊಂದು ಉದಾಹರಣೆ’ ಎಂದರು.
ಸಂಘದ ಸಂಸ್ಥಾಪಕ ಕಾರ್ಯದರ್ಶಿ ಎಂ.ನರಸಿಂಹ, ಅಧ್ಯಕ್ಷ ಬಿ.ಕೃಷ್ಣ, ಉದಯಭಾನು ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಚ್‌.ಆರ್‌.­ರಾಮಕೃಷ್ಣರಾವ್‌ ಇದ್ದರು.

ಲೋಕಾರ್ಪಣೆಯಾದ ಕೃತಿಗಳು: ಡಾ.ಬಿ.ಕೆ.­ಎಸ್‌.ಅಯ್ಯಂಗಾರ್‌ (ಲೇಖಕ: ಡಾ.ಎಸ್‌.ಎನ್‌.ಓಂಕಾರ್‌), ಎಚ್‌.ವೈ.ಶಾರದಾಪ್ರಸಾದ್‌ (ಲೇಖಕ: ಡಾ.ಕೆ.­ಸತ್ಯನಾರಾಯಣ), ಬೆಳಕಿನ ಮಾಂತ್ರಿಕ ವಿ.ಕೆ.ಮೂರ್ತಿ (ಲೇಖಕ: ಎನ್‌.ಎಸ್‌.ಶ್ರೀಧರ ಮೂರ್ತಿ), ಡಾ.ಬಿ.ಎಸ್‌.ವಿಶ್ವನಾಥ (ಲೇಖಕ: ಎಲೆ ಶಶಿಧರ), ನ.ಭದ್ರಯ್ಯ (ಲೇಖಕ: ಡಾ.ಅರ್ಜುನಪುರಿ ಅಪ್ಪಾಜಿಗೌಡ): ಬೆಲೆ: ₨ 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT