ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಯಿ ಸಂಧ್ಯಾ’ಗೆ ಮೌಲ್ವಿಗಳ ವಿರೋಧ

ಸಾಯಿ ಬಾಬಾ ಕುರಿತ ಶಂಕರಾಚಾರ್ಯ ಹೇಳಿಕೆ ಖಂಡಿಸಿ ಪ್ರತಿಭಟನೆ
Last Updated 24 ಜೂನ್ 2014, 19:30 IST
ಅಕ್ಷರ ಗಾತ್ರ

ಲಖನೌ: ಶಿರಡಿ ಸಾಯಿ ಬಾಬಾ ಕುರಿ­ತಾಗಿ ಶಂಕರಾಚಾರ್ಯ ಸ್ವರೂಪಾ­ನಂದ  ಸರಸ್ವತಿ ಅವರು ವಿವಾದಿತ ಹೇಳಿಕೆ ನೀಡಿದ ಬಳಿಕ ಇದೀಗ ಮುಸ್ಲಿಂ ಧರ್ಮ­ಗುರುಗಳು ‘ಬಾಬಾ ಆರಾಧ­ಕರು ಹಮ್ಮಿ­ಕೊಳ್ಳುವ ಸಾಯಿ ಸಂಧ್ಯಾ (ಸಂಜೆಯ ಪ್ರಾರ್ಥನೆ) ಕಾರ್ಯ­ಕ್ರಮ­ದಲ್ಲಿ ಮುಸ್ಲಿಮರು ಭಾಗವಹಿಸ­ಕೂಡದು’ ಎಂದು ಫರ್ಮಾನು ಹೊರಡಿಸಿದ್ದಾರೆ.

‘ಸಾಯಿ ಸಂಧ್ಯಾ ಕಾರ್ಯಕ್ರಮದಲ್ಲಿ ಅಲ್ಲಾಹುವಿನ ಪ್ರಾರ್ಥನೆ ಮಾಡು­ವುದು ಸೂಕ್ತವಲ್ಲ. ಇದು ಇಸ್ಲಾಂಗೆ ವಿರುದ್ಧವಾದುದು’ ಎಂದು ಉತ್ತರ­ಪ್ರದೇಶದ ದಿಯೋಬಂದ್‌ನ ದಾರುಲ್‌ ಉಲೂಂ ಸಂಸ್ಥೆಯ ಹಿರಿಯ ಮೌಲ್ವಿ ಆರಿಫ್‌ ಕಾಸಿಂ ಹೇಳಿದ್ದಾರೆ. ಕಾಸಿಂ ಅವರ ಅಭಿಪ್ರಾಯಕ್ಕೆ ಇನ್ನೂ ಕೆಲವು ಮೌಲ್ವಿಗಳು ದನಿಗೂಡಿ­ಸಿದ್ದಾರೆ.

ಶಂಕರಾಚಾರ್ಯ ಹೇಳಿಕೆಗೆ ಪ್ರತಿಭಟನೆ: ಶಂಕರಾಚಾರ್ಯ ಅವರ ಹೇಳಿಕೆಯನ್ನು ಖಂಡಿಸಿ ಶಿರಡಿ ಸಾಯಿ ಬಾಬಾ ಅನು­ಯಾಯಿಗಳು ವಾರಾಣಸಿಯಲ್ಲಿ ಮಂಗ­ಳ­ವಾರ ಧರಣಿ ನಡೆಸಿದರು.

‘ಶಿರಡಿ ಸಾಯಿ ಬಾಬಾ ದೇವರೇ ಅಲ್ಲ. ಹಿಂದೂಗಳು ಅವರನ್ನು ಆರಾಧಿಸ­ಬಾರದು’ ಎಂದು ಶಂಕರಾಚಾರ್ಯ ಹೇಳಿದ್ದರು.

‘ಶಂಕರಾಚಾರ್ಯರ ಹೇಳಿಕೆ ಬಾಬಾ ಅನು­ಯಾ­ಯಿಗಳಿಗೆ ನೋವು ತಂದಿದೆ’ ಎಂದು ಲಖನೌದ ನಾದೆಸ­ರ್‌ನಲ್ಲಿರುವ ಸಾಯಿ ಮಂದಿರದ  ಉಸ್ತು­­ವಾರಿ ಅಖಿಲೇಶ್‌ ಸಿಂಗ್‌ ಹೇಳಿದ್ದಾರೆ.

29ರಂದು ಪ್ರತಿಭಟನೆ: ಶಂಕರಾ­ಚಾರ್ಯ ಹೇಳಿಕೆ­ ಖಂಡಿಸಿ ಹರಿದ್ವಾರದ ಗಂಗಾ ತಟದಲ್ಲಿರುವ ‘ಹರ್ಕಿ ಪೈಡಿ’ ಘಟ್ಟದಲ್ಲಿ ಸಾಮೂಹಿಕ ಸ್ನಾನ ಕಾರ್ಯ­ಕ್ರಮ ಹಮ್ಮಿಕೊಳ್ಳ­ಲಾಗಿದೆ ಎಂದು ಉತ್ತರಾಖಂಡ ಮೂಲದ ಸಾಯಿ ಕುಟುಂಬ ಸಮಿತಿ ತಿಳಿಸಿದೆ.

ಎಫ್‌ಐಆರ್‌ ದಾಖಲು
ಶಿರಡಿ, ಮಹಾರಾಷ್ಟ್ರ (ಪಿಟಿಐ):
ಶಿರಡಿ ಸಾಯಿ ಬಾಬಾ ಕುರಿತಾಗಿ ವಿವಾದಿತ ಹೇಳಿಕೆ ನೀಡಿರುವ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 295 (ಎ) (ಧಾರ್ಮಿಕ ಭಾವನೆ­ಗಳಿಗೆ ಧಕ್ಕೆ ತರುವ ಉದ್ದೇಶದ  ಚಿತಾ­ವಣೆ) ಮತ್ತು 298ರ (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡು­ವುದು) ಅಡಿಯಲ್ಲಿ ಪ್ರಕರಣ ದಾಖಲಿಸ­ಲಾಗಿದೆ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ರಾಮ್‌ ಸೂರ್ಯವಂಶಿ ಹೇಳಿದ್ದಾರೆ.

ಸ್ಥಳೀಯರಾದ ನಿತಿನ್‌ ಕೋಟೆ ಎಂಬುವವರು ನೀಡಿದ ದೂರಿನ ಆಧಾರದಲ್ಲಿ  ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT