ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಕ್ಕ ಕಡತಗಳು ಬಿಜೆಪಿ ವ್ಯಕ್ತಿಗಳಿಗೆ ಸೇರಿದ್ದು’

Last Updated 20 ಏಪ್ರಿಲ್ 2015, 20:41 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಮನೆಯಲ್ಲಿ ಸಿಕ್ಕ ಬಿಬಿಎಂಪಿ ಕಡತಗಳಲ್ಲಿ 600ಕ್ಕೂ ಅಧಿಕ ದಾಖಲೆಗಳು ಬಿಜೆಪಿ ಮುಖಂಡರ ವಾರ್ಡ್‌ಗಳಿಗೆ ಸೇರಿವೆ’ ಎಂದು ಕಾಂಗ್ರೆಸ್‌ ಶಾಸಕ ಮುನಿರತ್ನ ದೂರಿದರು.

ವಿಧಾನಸಭೆಯಲ್ಲಿ ಸೋಮವಾರ ಬಿಬಿಎಂಪಿ ವಿಭಜನೆ ಕುರಿತಂತೆ ಚರ್ಚೆ ನಡೆಯುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಅವರು ಈ ರೀತಿ ಹೇಳಿದರು.

‘ಲೋಕಾಯುಕ್ತ ಪೊಲೀಸರು ನನ್ನ ಮನೆಯಲ್ಲಿ ವಶಪಡಿಸಿಕೊಂಡ ಕಡತಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರು ನನ್ನ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಸಿದ್ದಾರೆ. ಬಿಜೆಪಿಯ ಮಾಜಿ ಶಾಸಕರೊಬ್ಬರಿಗೆ ಸಂಬಂಧಿಸಿದ ಕಡತಗಳೇ ಅಲ್ಲಿ ಹೆಚ್ಚಾಗಿದ್ದವು. ನನಗೆ ಮಾತನಾಡಲು ಅವಕಾಶ ನೀಡಿದರೆ ಆ ವಿವರವನ್ನು ಬಹಿರಂಗಗೊಳಿಸಲು ಸಿದ್ಧ’ ಎಂದು ಹೇಳಿದರು.

‘ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿನಗರದಲ್ಲಿ ನಡೆದ ₨ 1,536 ಕೋಟಿ ಹಗರಣವನ್ನು ಬೆಳಕಿಗೆ ತಂದಿದ್ದೇ ನಾನು. ರಾತ್ರಿ ಟೆಂಡರ್‌ ಅವ್ಯವಹಾರವನ್ನೂ ನಾನೇ ಬಯಲಿಗೆ ಎಳೆದಿದ್ದೇನೆ. ಅದರ ದಾಖಲೆಗಳನ್ನು ಆಗ ಸಿ.ಎಂ ಆಗಿದ್ದಾಗ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದೇನೆ’ ಎಂದು ತಿಳಿಸಿದರು.

ಬಿಬಿಎಂಪಿ ಅವ್ಯವಹಾರಗಳ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ‘ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ ಇದೆಯಾ ವೆಂಡನ್‌ ಅವರ ಹೆಸರು ಹಲವು ಹಗರಣಗಳಲ್ಲಿ ಪ್ರಸ್ತಾಪವಾಗಿತ್ತು. ಅಂತಹ ವ್ಯಕ್ತಿಯನ್ನು ಮೂಲೆಯಲ್ಲಿ ಕೂರಿಸುವುದು ಬಿಟ್ಟು, ಪ್ರಮುಖ ಹುದ್ದೆ ಕೊಟ್ಟಿದ್ದೇಕೆ’ ಎಂದು ಪ್ರಶ್ನಿಸಿದರು.

‘ಮುನಿರತ್ನ ಅವರ ಮನೆಯಲ್ಲಿ ಕಡತಗಳ ಜತೆ ಸಿಕ್ಕಿಬಿದ್ದ ವ್ಯಕ್ತಿಯೂ ಅದೇ ಇದೆಯಾ ವೆಂಡನ್‌. ಆ ವ್ಯಕ್ತಿಯನ್ನು ವಿಚಾರಿಸಿದರೆ ಎಲ್ಲ ಹಗರಣಗಳ ವಿವರವೂ ಬೆಳಕಿಗೆ ಬರುತ್ತದೆ’ ಎಂದು ತಿಳಿಸಿದರು.

ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಬಿಜೆಪಿಯ ಸಿ.ಟಿ. ರವಿ, ‘ಇದೆಯಾ ವೆಂಡನ್‌ ಏಕೆ, ಶಾಸಕ ಮುನಿರತ್ನ ಅವರನ್ನು ಕೇಳಿದರೆ ಎಲ್ಲವೂ ಗೊತ್ತಾಗುತ್ತದೆ. ಇಲ್ಲದಿದ್ದರೆ ಹಗರಣಗಳ ತನಿಖೆಗೆ ಅವರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಬಹುದು. ಹೇಗೂ ಬಿಬಿಎಂಪಿ ಕಡತಗಳು ಅವರ ಮನೆಯಲ್ಲೇ ಇರುತ್ತವೆ’ ಎಂದು ಹೇಳಿದರು. ರವಿ ಅವರ ಈ ಪ್ರತಿಕ್ರಿಯೆ ಮುನಿರತ್ನ ಅವರನ್ನು ಎದ್ದು ನಿಲ್ಲುವಂತೆ ಮಾಡಿತು.

‘ಆ ಇದೆಯಾ ವೆಂಡನ್‌ಗೆ ಬಂಗಾರದ ಪದಕ ಸಿಗುವುದು ಹೇಗೆ’ ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕೇಳಿದಾಗ ಸದನ ನಗೆಗಡಲಲ್ಲಿ ತೇಲಿತು.

ಈಗ ಜ್ಞಾನೋದಯ: ‘ಬಿಬಿಎಂಪಿ ಕುರಿತು ಎರಡು ವರ್ಷ ಏನೂ ಯೋಚಿಸದೆ ಸುಮ್ಮನೆ ಕುಳಿತಿದ್ದ ಸರ್ಕಾರಕ್ಕೆ ಈಗ ಇದ್ದಕ್ಕಿದ್ದಂತೆ ಜ್ಞಾನೋದಯ ಆಗಿದೆ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ವ್ಯಂಗ್ಯವಾಡಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪಾಲಿಕೆಯಲ್ಲಿ ಇದುವರೆಗೆ ಭ್ರಷ್ಟಾಚಾರ ಹಾಗೂ ಅವ್ಯವಹಾರ ತುಂಬಿ ತುಳುಕುತ್ತಿತ್ತು. ಬಿಜೆಪಿ ಎಲ್ಲವನ್ನೂ ನುಂಗಿ ನೀರು ಕುಡಿದಿದೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅದನ್ನು ಸರಿದಾರಿಗೆ ತರುವ ಉದ್ದೇಶದಿಂದಲೇ ಈ ಮಸೂದೆ ತರಲಾಗಿದೆ’ ಎಂದು ತಿರುಗೇಟು ನೀಡಿದರು.

ಮಸೂದೆ ಮಂಡಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ‘ಮಿತಿಮೀರಿದ ಭ್ರಷ್ಟಾಚಾರ, ನಗರವೇ ಕೊಳತು ನಾರುವಂತಾದ ಕಸ ವಿಲೇವಾರಿ ಸಮಸ್ಯೆ, ವಾರ್ಡ್‌ಗಳ ಅಸಮರ್ಪಕ ವಿಂಗಡಣೆ, ಸೃಷ್ಟಿಯಾಗದ ಮೂಲಸೌಕರ್ಯ, ಸಾಲದ ಹೊರೆ, ಗುಣಮಟ್ಟವಿಲ್ಲದ ಕಾಮಗಾರಿ ಮೊದಲಾದ ಸಮಸ್ಯೆಗಳಿಗೆ ಬಿಬಿಎಂಪಿ ವಿಭಜನೆಯಲ್ಲೇ ಪರಿಹಾರವಿದೆ’ ಎಂದು ಪ್ರತಿಪಾದಿಸಿದರು.

‘ನಗರದಲ್ಲಿ 25 ಲಕ್ಷ ಆಸ್ತಿಗಳಿವೆ. ಆದರೆ, ಕೇವಲ 14 ಲಕ್ಷ ಆಸ್ತಿಗಳಿಂದ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ತನ್ನ ವೆಚ್ಚಕ್ಕೆ ಬೇಕಾದಷ್ಟು ಸಂಪನ್ಮೂಲ ಕ್ರೋಡೀಕರಿಸುವ ಅವಕಾಶ ಪಾಲಿಕೆಗೆ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ರಾಜ್ಯ ಸರ್ಕಾರ ಅದಕ್ಕೆ ದೊಡ್ಡ ಪ್ರಮಾಣದಲ್ಲೇ ಅನುದಾನ ನೀಡಿದೆ. ಹೀಗಿದ್ದೂ ಸಾಲ ಹಾಗೂ ಗುತ್ತಿಗೆದಾರರ ಬಾಕಿ ಸೇರಿದಂತೆ ₨ 9 ಸಾವಿರ ಕೋಟಿ ಹೊರೆ ಬಿದ್ದಿದೆ. 5 ವರ್ಷಗಳಲ್ಲಿ ಬಜೆಟ್‌ ಗುರಿ ಸಾಧಿಸಲು ಒಮ್ಮೆಯೂ ಆಗಿಲ್ಲ. ಬಿಬಿಎಪಿಯಲ್ಲಿದ್ದ ಇಂತಹ ಆರ್ಥಿಕ ಅಶಿಸ್ತು ಹೋಗಲಾಡಿಸಲು ಸಣ್ಣಗಾತ್ರದ ಪಾಲಿಕೆ ಅಗತ್ಯವಿದೆ’ ಎಂದು ವಿವರಿಸಿದರು.
*
ಆರೋಪ–ಪ್ರತ್ಯಾರೋಪಗಳ ಅಬ್ಬರ
 ‘ಕಡ್ಡಾಯವಾಗಿ ಕಲಾಪದಲ್ಲಿ ಭಾಗವಹಿಸಬೇಕು’ ಎನ್ನುವ ಸಂದೇಶ ಕಾಂಗ್ರೆಸ್‌ ಶಾಸಕರಿಗೆ ಮೊದಲೇ ರವಾನೆಯಾಗಿದ್ದರಿಂದ ಆಡಳಿತ ಪಕ್ಷದ ಆಸನಗಳೆಲ್ಲ ಭರ್ತಿಯಾಗಿದ್ದವು. ಕಲಾಪದ ಉದ್ದಕ್ಕೂ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಬಿರುಸಿನ ವಾಗ್ವಾದಗಳು ನಡೆದವು. ಆರೋಪ–ಪ್ರತ್ಯಾರೋಪಗಳ ಅಬ್ಬರವೂ ಜೋರಾಗಿತ್ತು.

‘ನಗರದ ವಿಭಜನೆ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಅಗೌ ರವ ತೋರಲಾಗಿದೆ’ ಎಂದು ಬಿಜೆಪಿ ಶಾಸಕರು ದೂರಿದರೆ, ‘ನಗರದ ಗತವೈಭವವನ್ನು ಮತ್ತೆ ಪ್ರತಿಷ್ಠಾಪಿಸಿ ಕೆಂಪೇಗೌಡರಿಗೆ ನೈಜ ಗೌರವ ಸಲ್ಲಿಸಲಾಗುತ್ತದೆ’ ಎಂದು ಕಾಂಗ್ರೆಸ್‌ ಸದಸ್ಯರು ಮಾರುತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT