ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಖ್‌ ಹತ್ಯಾಕಾಂಡ ಏಕತೆಗೆ ಹೊಡೆತ’

ಸರ್ದಾರ್‌ ಪಟೇಲ್‌ ಜನ್ಮದಿನ: ‘ಏಕತೆಗಾಗಿ ಓಟ’
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್):  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದ ಸಿಖ್‌ ಹತ್ಯಾ­ಕಾಂಡ­ವನ್ನು  ‘ದೇಶದ ಏಕತೆಗೆ ಆದ ಕತ್ತಿಯ ಇರಿತ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ಅವರ ೧೩೯ನೇ ಜನ್ಮವರ್ಷಾಚರಣೆಯನ್ನು ದೇಶದಾ­ದ್ಯಂತ  ಶುಕ್ರವಾರ ‘ರಾಷ್ಟ್ರೀಯ ಏಕತಾ ಓಟ’­ವ­ನ್ನಾಗಿ ಆಚರಿಸಿದ ಸಂದರ್ಭದಲ್ಲಿ ಮೋದಿ ಅವರು ಪರೋಕ್ಷ­ವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಈ ರೀತಿ ಚಾಟಿ ಬೀಸಿದರು. ಆದರೆ, ಇಂದಿರಾ ಹತ್ಯೆ ನಂತರ ನಡೆದ ಸಾವಿ­ರಾರು ಸಿಖ್ಖರ ಹತ್ಯೆ ಘಟನೆಯನ್ನು ಅವರು ಎಲ್ಲಿಯೂ ನೇರವಾಗಿ ಉಲ್ಲೇಖಿಸಲಿಲ್ಲ.

‘ಇಂದು ಇಂದಿರಾ ಗಾಂಧಿ ಪುಣ್ಯತಿಥಿ ಕೂಡ ಹೌದು’ ಎಂದಷ್ಟೇ ಹೇಳಿದ ಮೋದಿ ಆ ಬಗ್ಗೆ ಹೆಚ್ಚಿಗೆ ಏನನ್ನೂ ಮಾತನಾಡಿಲ್ಲ.
‘೩೦ ವರ್ಷಗಳ ಹಿಂದೆ ನಮ್ಮವರೇ ಆದ ಜನ ಹತ್ಯೆ­ಯಾದರು. ದೇಶದ ಏಕತೆಗಾಗಿ ತಮ್ಮ ಬದು­ಕನ್ನೇ ಮುಡಿಪಾಗಿಟ್ಟಿದ್ದ ‘ಉಕ್ಕಿನ ಮನುಷ್ಯ’ನ ಜನ್ಮ­ದಿನ­ದಂದೇ ಇಂಥ ಕರಾಳ ಘಟನೆ ನಡೆದಿತ್ತು ಎನ್ನು­ವುದು ದುರದೃಷ್ಟಕರ’ ಎಂದರು. ‘ಅದು ಒಂದು ಸಮು­ದಾ­ಯದ ಮೇಲೆ ನಡೆದ ಆಕ್ರಮಣ­ವಾಗಿರಲಿಲ್ಲ.

ಭಾರ­ತದ ಎದೆಯನ್ನೇ ಬಾಕುವಿ­ನಿಂದ ಇರಿದಂತಾ­ಗಿತ್ತು’  ಎಂದೂ ಮೋದಿ ಹೇಳಿದರು. ಪಟೇಲ್‌ ಜನ್ಮ ವರ್ಷಾ­ಚರಣೆ ಸಂದರ್ಭದಲ್ಲಿ ಹಮ್ಮಿಕೊಂಡ ‘ಏಕತೆಗಾಗಿ ಓಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು,  ‘ರಾಜಕೀಯ ಬದು­ಕಿ­ನಲ್ಲಿ ಎದುರಾದ ಅಡೆತಡೆಗಳ  ನಡು­ವೆಯೂ ಪಟೇಲ್‌ ಅವರು ರಾಷ್ಟ್ರೀಯ ಏಕ­ತೆಯ ಆಶಯ­ದಿಂದ ಹಿಂದೆ ಸರಿದಿರಲಿಲ್ಲ’ ಎಂದರು.

ದೇಶದ ಸಮಗ್ರತೆ ಹಾಗೂ ಏಕತೆಗೆ ಪಟೇಲ್‌ ಕಾಣಿಕೆ­ಯನ್ನು ನೆನಪಿಸಿಕೊಂಡ ಮೋದಿ, ‘ ಇತಿ­ಹಾಸ­­ವನ್ನು ಉಪೇಕ್ಷಿಸುವ ದೇಶವು ಇತಿಹಾಸ­ವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವುದನ್ನು ನಾವು ಮರೆ­ಯ­ಕೂಡದು. ಸಿದ್ಧಾಂತದ ಸೀಮಿತ   ಚೌಕ­ಟ್ಟಿಗೆ ಕಟ್ಟು­ಬಿದ್ದು ಇತಿಹಾಸ ಹಾಗೂ ಪರಂಪರೆ­ಯನ್ನು ಛಿದ್ರ­ಗೊಳಿಸುವ ಕೆಲಸ ಮಾಡಬಾರದು’ ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಚಳವಳಿಗೆ  ಪಟೇಲ್‌ ನೀಡಿದ್ದ ಕೊಡು­ಗೆ­ಗಳನ್ನು ಉಲ್ಲೇಖಿಸಿದ ಮೋದಿ, ‘ಐತಿಹಾಸಿಕ ದಂಡಿ ಯಾತ್ರೆ ರೂಪಿಸುವ ಹೊಣೆ­ಗಾ­ರಿಕೆ­­ಯನ್ನು ಮಹಾತ್ಮ ಗಾಂಧಿ ಅವರು ಪಟೇಲ್‌ ಅವ­ರಿಗೆ ವಹಿಸಿದ್ದರು. ಇದನ್ನು ಪಟೇಲ್‌ ಯಶಸ್ವಿ­ಯಾಗಿ ನಿಭಾಯಿಸಿದ್ದರು’ ಎಂದು ಮೆಲುಕು ಹಾಕಿದರು. ‘ಸ್ವಾಮಿ ವಿವೇಕಾನಂದರನ್ನು ಬಿಟ್ಟು ರಾಮಕೃಷ್ಣ ಪರಮಹಂಸರನ್ನು ಕಲ್ಪಿಸಿಕೊಳ್ಳಲಾಗದು.  ಹಾಗೆಯೇ ಪಟೇಲ್‌ ಅವರಿಲ್ಲದೇ ಮಹಾತ್ಮ ಗಾಂಧಿ ಅವರನ್ನು ಕಲ್ಪಿಸಿಕೊಳ್ಳಲಾಗದು’ ಎಂದರು.

ಪಟೇಲ್‌ ಅವರನ್ನು ಚಾಣಕ್ಯನಿಗೆ ಹೋಲಿಸಿದ ಅವರು, ‘ಶತ ಶತಮಾನಗಳ ಹಿಂದೆ ಸಣ್ಣ ರಾಜ್ಯ­ಗಳನ್ನು ಒಂದುಗೂಡಿಸಿ ಬಲಿಷ್ಠ ಸಾಮ್ರಾಜ್ಯ ನಿರ್ಮಿ­ಸುವ ಪ್ರಯೋಗದಲ್ಲಿ ಚಾಣಕ್ಯ ಯಶ ಕಂಡಿದ್ದ. ಸ್ವಾತಂತ್ರ್ಯ ಬಂದ ಬಳಿಕ  ಪಟೇಲ್‌ ಕೂಡ ಇದೇ ಕೆಲಸ ಮಾಡಿದರು. ತಮ್ಮ ದೇಶಪ್ರೇಮ, ಕೌಶಲ ಹಾಗೂ ಕಲ್ಪನೆಯ ಮೂಲಕ ಈ ದೇಶವನ್ನು ಒಗ್ಗೂಡಿಸಿದರು’ ಎಂದು ಬಣ್ಣಿಸಿದರು.

‘ಏಕತೆಗಾಗಿ ಓಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ  ಮೋದಿ, ರಾಜ್‌ಪಥ್‌ನಲ್ಲಿ ಸ್ವಲ್ಪ ದೂರ ಬಿರುಸಿನ ಹೆಜ್ಜೆಗಳನ್ನು ಹಾಕಿ ನಡೆದರು.
ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿ, ಕ್ರೀಡಾಪಟು­ಗಳಾದ ಸುಶೀಲ್‌ ಕುಮಾರ್‌, ವಿಜೇಂದ್ರ ಸಿಂಗ್‌, ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌ ಮತ್ತಿ­ತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಏಕತೆಗಾಗಿ ಓಟ’ದಲ್ಲಿ ಭಾಗವಹಿಸಿದವರಿಗೆ ಮೋದಿ ಅವರು ಏಕತೆಯ  ಪ್ರತಿಜ್ಞೆ ಬೋಧಿಸಿದರು. ನಂತರ, ಪಟೇಲ್‌ ಚೌಕದಲ್ಲಿರುವ ಸರ್ದಾರ್‌್ ಪಟೇಲ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಮಹಾತ್ಮ ಗಾಂಧಿ ಹಾಗೂ ಪಟೇಲ್‌ ಅವರ ಜನ್ಮದಿನ ಮತ್ತು ಪುಣ್ಯತಿಥಿಯನ್ನು ಮಾತ್ರ ಆಚರಿ­ಸಲು ಇತ್ತೀಚೆಗೆ ಎನ್‌ಡಿಎ ಸರ್ಕಾರ ನಿರ್ಧ­ರಿಸಿತ್ತು. ಇತರ ಮುಖಂಡರ ಸ್ಮರಣೆ ಕಾರ್ಯಕ್ರಮವನ್ನು ಸಂಬಂಧಿಸಿದ ಟ್ರಸ್ಟ್‌ಗಳು ಆಚರಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಇತರ ನೇತಾರರ ಸ್ಮಾರಕಗಳನ್ನು ನಿರ್ಮಿಸದಿರಲು ಕೂಡ ಸರ್ಕಾರ ತೀರ್ಮಾನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT