ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿನಿಮಾಗಳಿಂದಲೇ ಜನಪ್ರಿಯನಾದೆ’

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘3 ಈಡಿಯಟ್ಸ್’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಎದ್ದ ವಿವಾದ ಎಲ್ಲರಿಗೂ ಗೊತ್ತೇ ಇದೆ. ರಾಜ್‌ಕುಮಾರ್‌ ಹಿರಾನಿ ಅವರ ಈ ಚಿತ್ರಕ್ಕೆ ತಮ್ಮದೇ ಕಥೆ ಕದಿಯಲಾಗಿದೆ ಎಂದು ಕಾದಂಬರಿಕಾರ ಚೇತನ್‌ ಭಗತ್‌ ಆರೋಪಿಸಿ ಅದು ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಅದು ಈಗ ಇತಿಹಾಸ. ಆದರೆ ಚೇತನ್‌ ಭಗತ್‌ ಬರೆದ ಐದು ಕಾದಂಬರಿಗಳಲ್ಲಿ ನಾಲ್ಕು ಚಿತ್ರಗಳಿಗೆ ಕಥಾವಸ್ತುಗಳಾಗಿವೆ. ಮೊನ್ನೆ ಬಿಡುಗಡೆಯಾದ ‘2 ಸ್ಟೇಟ್ಸ್‌’  ಕೂಡ ಅವರದ್ದೇ ಕಾದಂಬರಿ (2 ಸ್ಟೇಟ್ಸ್‌: ದಿ ಸ್ಟೋರಿ ಆಫ್‌ ಮೈ ಮ್ಯಾರೇಜ್‌) ಆಧಾರಿತ ಎನ್ನುವುದು ವಿಶೇಷ.

ಚೇತನ್‌ ಅವರ ಪ್ರಕಾರ ಅವರ ಕಥೆಗಳು ಹೆಚ್ಚು ಓದುಗರನ್ನು ತಲುಪಲು ಸಿನಿಮಾಗಳೇ ಕಾರಣ ಎಂದಿದ್ದಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ ತಮ್ಮ ಹಾಗೂ ಬಾಲಿವುಡ್‌ ನಡುವಿನ ಸಂಬಂಧ ಹಾಗೂ ಸಾಹಿತ್ಯದ ಕುರಿತು ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

*ನಿಮ್ಮ ಮತ್ತೊಂದು ಕಥೆ ಈಗ ಚಿತ್ರವಾಗಿದೆ. ಇದು ನಮ್ಮ ನೆಲಕ್ಕೆ ತೀರಾ ಹತ್ತಿರವಾಗಿದೆ. ಇದಕ್ಕೆ ನಿಮ್ಮದೇ ಬದುಕಿನಲ್ಲಿ ನಡೆದ ಘಟನೆ ಪ್ರೇರೇಪಣೆ ಎಂದಿದ್ದೀರಿ. ನೈಜ ಘಟನೆ ಆಧಾರಿತ ಕಥೆಯನ್ನು ಚಿತ್ರಗಳು ಹೇಗೆ ನಿರ್ವಹಿಸಿವೆ?
ನಿಜಕ್ಕೂ, ‘2 ಸ್ಟೇಟ್ಸ್‌’ ಸಿನಿಮಾ ನನ್ನ ಬದುಕಿಗೆ ಬಹಳ ಹತ್ತಿರವಾದದ್ದು. ನನ್ನ ಬದುಕಿನಲ್ಲಿ ನಡೆದ ಒಂದು ಸಣ್ಣ ಘಟನೆಗೆ ಪೂರಕವಾದ ಕಾಲ್ಪನಿಕ ಸನ್ನಿವೇಶಗಳು ಹಾಗೂ ಕಥೆಯ ಓಘಕ್ಕೆ ನಾಟಕೀಯ ಸನ್ನಿವೇಶಗಳನ್ನು ಸೇರಿಸಲಾಗಿದೆ. ಪುಸ್ತಕದಲ್ಲಿರುವ ಕ್ರಿಶ್ ಹಾಗೂ ಅನನ್ಯಾ ಅವರ ಪಾತ್ರವನ್ನು ಚಿತ್ರದಲ್ಲಿ ಉತ್ತಮವಾಗಿ ಹಿಡಿದಿಟ್ಟಿದ್ದಾರೆ.

*ಈ ಚಿತ್ರದಲ್ಲಿ ನಿಮ್ಮ ಪ್ರಣಯ ಹಾಗೂ ವೈವಾಹಿಕ ಜೀವನದ ಘಟನೆಗಳಿವೆಯೇ?
ನನ್ನ ವೈವಾಹಿಕ ಜೀವನದ ಘಟನೆಗಳು ಹೆಚ್ಚೇನೂ ಇಲ್ಲ. ಸಿನಿಮಾದಲ್ಲಿ ಇಬ್ಬರು ಪ್ರೇಮಿಗಳು ಮದುವೆಯಾಗುತ್ತಾರೆ. ಸಿನಿಮಾದಲ್ಲಿ ಪ್ರೇಮಿಗಳಿಬ್ಬರು ತಮ್ಮ ಮನೆಯವರನ್ನು ಹೇಗೆ ಒಪ್ಪಿಸುತ್ತಾರೆ ಎಂಬ ಅಂಶ ಚೆನ್ನಾಗಿ ಮೂಡಿಬಂದಿದೆ.

*ಸಿನಿಮಾ ಪ್ರಚಾರ ಕಾರ್ಯದಲ್ಲಿ ನೀವು ಸಕ್ರಿಯವಾಗಿ ತೊಡಗಿಕೊಂಡಿರಿ. ಕಾದಂಬರಿಯೊಂದು ಸಿನಿಮಾ ಆಗುವ ಹಾದಿಯಲ್ಲಿ ನಿಮ್ಮ ಪಾತ್ರವೇನು?
ನಾನು ಚಿತ್ರಕಥೆಯ ಆರಂಭಿಕ ಹಂತದಲ್ಲಿ ಮಾತ್ರ ಜತೆಗಿದ್ದೆ. ಚಿತ್ರ ತಂಡ ಕಟ್ಟುವಲ್ಲಿ, ನಿರ್ಮಾಪಕರು, ನಿರ್ದೇಶಕರು ಹಾಗೂ ಪಾತ್ರವರ್ಗದ ಆಯ್ಕೆಯವರೆಗೂ ತಂಡದೊಂದಿಗೆ ಸಕ್ರಿಯನಾಗಿದ್ದೆ. ನಂತರ ಅದು ನಿರ್ದೇಶಕ ಅಭಿಷೇಕ್‌ ವರ್ಮನ್‌ ಅವರ ಕೈಯಲ್ಲಿತ್ತು. ಚಿತ್ರದ ಯಶಸ್ಸಿಗೆ ಅವರ ಕೊಡುಗೆಯೇ ಹೆಚ್ಚು. ಹೀಗಾಗಿ ಪ್ರತಿಯೊಂದು ಹೊಗಳಿಕೆಯೂ ಅವರಿಗೇ ಸಲ್ಲಬೇಕು. ಈ ವೇಳೆಗೆ ಕಾದಂಬರಿಯೂ ಹೆಚ್ಚು ಪ್ರಸಿದ್ಧಿಯಾಗಿತ್ತು. ಕಾದಂಬರಿ ಪ್ರಿಯರಿಗೆ ಚಿತ್ರವನ್ನು ಪರಿಚಯಿಸುವುದು ನನ್ನ ಕೆಲಸವಾಗಿತ್ತು. ಅದಕ್ಕಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ.

*ನಿಮ್ಮ ಬಹುತೇಕ ಕಾದಂಬರಿಗಳು ಸಿನಿಮಾಗಳಾಗಿವೆ. ಈ ಬೆಳವಣಿಗೆಯಿಂದ ನಿಮ್ಮ ಮೇಲೆ ಆಗಿರುವ ಪ್ರಭಾವವೇನು? ನಿಮ್ಮ ಕಥೆ ಆಧರಿಸಿ ತಯಾರಾದ ಚಿತ್ರಗಳಲ್ಲಿ ಉತ್ತಮವಾದದ್ದು ಹಾಗೂ ಕಳಪೆಯಾದ ಚಿತ್ರ ಯಾವುದು?
ನಾನು ಹೆಚ್ಚು ಭಾರತೀಯರನ್ನು ತಲುಪಬೇಕು. ಈ ನಿಟ್ಟಿನಲ್ಲಿ ಸಿನಿಮಾ ನನಗೆ ನೆರವಾಗಿದೆ. ಅಭಿಮಾನಿಗಳು ಹೆಚ್ಚಾದಂತೆ ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಸೃಜನೇತರ ಬರವಣಿಗೆ ಕುರಿತು ಆಸಕ್ತಿ ಮೂಡಬಹುದು. ಎಲ್ಲಾ ಚಿತ್ರಗಳು ಉತ್ತಮವಾದವುಗಳೇ. ಅವುಗಳಲ್ಲಿ ಯಾವುದು ಕಳಪೆ ಎಂದು ಹೇಳುವುದು ಕಷ್ಟ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT