ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ ಕೋರ್ಟ್ ಮೊರೆ’

ವಾಲ್ಮೀಕಿ ಸಮಾಜಕ್ಕೆ ಹೆಚ್ಚಿನ ಮೀಸಲಾತಿ
Last Updated 15 ಸೆಪ್ಟೆಂಬರ್ 2014, 8:55 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸರ್ಕಾರದ ಮೇಲೆ ಅವಲಂಬಿತರಾಗದೆ ವಾಲ್ಮೀಕಿ ಸಮಾಜಕ್ಕೆ ಶೇ 3ರಷ್ಟಿದ್ದ ಮೀಸಲಾತಿಯನ್ನು  ಶೇ 7.5ರಷ್ಟು ದೊರಕಿಸಿಕೊಳ್ಳಬೇಕಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ನ್ಯಾಯಾಲಯ ಖರ್ಚು ವೆಚ್ಚ ಭರಿಸುವುದಕ್ಕಾಗಿ ಈಗಾಗಲೇ ₨ 60ಲಕ್ಷ ಸಂಗ್ರಹಿಸಲಾಗಿದೆ’ ಎಂದು ಅಬಕಾರಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನವನಗರದ ಕಲಾಭವನದಲ್ಲಿ ಭಾನುವಾರ ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ವಾಲ್ಮೀಕಿ ನೌಕರರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಲ್ಮೀಕಿ ಸಮಾಜಕ್ಕೆ ಈಗಾಗಲೇ ಕೆಲವೊಂದು ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಾದರಿಯಲ್ಲೇ ಮೀಸಲಾತಿ ಇದ್ದು ಕರ್ನಾಟಕದಲ್ಲಿ ಮಾತ್ರ ಮೀಸಲಾತಿ ಕಡಿಮೆ ಇರಲು ನಮಲ್ಲಿಯ ತಿಳಿವಳಿಕೆ ಕಡಿಮೆ ಇರುವ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಬೇಡಿಕೆ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಸ್ಸಿ–ಎಸ್ಟಿ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮಕ್ಕೆ ತಲಾ ₨ 50 ಸಾವಿರದಂತೆ ಎರಡು ಸಮುದಾಯಗಳಿಗೆ ಪ್ರತಿವರ್ಷ ವೈಯಕ್ತಿಕವಾಗಿ ನೀಡಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಜಾ ಪರಿವರ್ತನಾ ವೇದಿಕೆಯಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಎಲ್ಲೇ ಮೀರಿದ ಧಾರ್ಮಿಕತೆ ಹಾಗೂ ಮೂಢನಂಬಿಕೆಗಳ ಆಚರಣೆಯಿಂದ ಹೊರ ಬಂದು ಶಿಕ್ಷಣವಂತರಾಗಿ ಅಭಿವೃದ್ಧಿ ಹೊಂದಬೇಕು. ಸ್ಥಿತಿವಂತರು ಹಾಗೂ ನೌಕರರು ಸಮಾಜದ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದುಕೊಂಡು ಶಿಕ್ಷಣದ ವೆಚ್ಚ ಭರಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಶ್ರಮಿಸಬೇಕು ಎಂದು ಹೇಳಿದರು.

ಬುದ್ಧ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಂಡು ಮಂದಿರ, ಸಮುದಾಯ ಭವನ ಕಟ್ಟಲು ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಬದಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಪ್ರತಿಯೊಬ್ಬರು ಕೈ ಜೋಡಿಸಬೇಕು. ಶಿಕ್ಷಣ ಸಂಸ್ಥೆಯನ್ನು ಜಿಲ್ಲೆಯಲ್ಲಿ ಆರಂಭಿಸಿದರೆ ಸಹಕಾರ ನೀಡುವುದಾಗಿ ಹೇಳಿದರು.

ನಕಲಿ ಜಾತಿ ಪ್ರಮಾಣ ಪಡೆದುಕೊಂಡು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುವವರ ವಿರುದ್ಧ ಸಮಾಜದವರೇ ಬೀದಿಗಿಳಿದು ಪ್ರತಿಭಟನೆ  ನಡೆಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಎಚ್.ವೈ.ಮೇಟಿ ಮಾತನಾಡಿ, ಈಗಾಗಲೇ ನವನಗರದಲ್ಲಿ ವಾಲ್ಮೀಕಿ ಸಮಾಜ ಭವನ ನಿರ್ಮಾಣ ಮಾಡಲು ಜಾಗ ನೀಡಲಾಗಿದೆ. ಇನ್ನೂ ಹೆಚ್ಚಿನ ಜಾಗವನ್ನು ನೀಡಲು ಬಿಟಿಡಿಎ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಉಪನ್ಯಾಸಕ ಎಂ.ಜಿ.ದಾಸರ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಮಹಾಂತೇಶ ಕೌಜಲಗಿ, ಜಿಲ್ಲಾ ಪಂಚಾಯ್ತಿ ಸದಸ್ಯ ಪಾಂಡು ಪೊಲೀಸ್, ತಹಶೀಲ್ದಾರ್ ಚಾಮರಾಜ ಪಾಟೀಲ, ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಶಂಭುಗೌಡ ಪಾಟೀಲ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶಾಂತಕುಮಾರ ಸುರಪೂರ, ರಾಷ್ಟ್ರಪತಿ ಸೇವಾ ಪದಕ ಪುರಸ್ಕೃತ ಹರ್ತಿಕೋಟೆ ವೀರೇಂದ್ರಸಿಂಹ, ರಾಜು ನಾಯ್ಕರ, ಜಿಲ್ಲಾ ಮಹರ್ಷಿ ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಜಿ.ಸನ್ನಿ,ಉಪಾಧ್ಯಕ್ಷ ಆರ್.ಬಿ. ಗೋಗೇರಿ, ಡಿ.ಬಿ. ಹಡಗಲಿ, ಎಸ್.ಆರ್. ಅಂಟೀನ್, ಎಚ್.ಎಸ್. ರಾಜನಾಳ, ಎನ್.ಬಿ. ಯಳ್ಳಿಗುತ್ತಿ, ವಿ.ಜೆ. ಗಿಡ್ಡಿ, ಡಿ.ಎಚ್. ತಳವಾರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಪ್ರತಿಭೆ ಯಾರ ಸ್ವತ್ತು ಅಲ್ಲ’
ಭಾಷಾತೀತ, ಜಾತ್ಯಾತೀತ ಮತ್ತು ಧರ್ಮಾತೀತವಾಗಿರುವ ಪ್ರತಿಭೆ ಯಾರ ಸ್ವತ್ತು ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಜನಮುಖಿ, ಸಮಾಜಮುಖಿ, ಮನುಷ್ಯಮುಖಿ ಮತ್ತು ಶೋಚನೀಯ ಸ್ಥಿತಿಯಲ್ಲಿರುವಂತವರ ಪರ ಕೆಲಸ ಮಾಡುವುದನ್ನು ಸಂಘಟನೆಗಳು ಮೈಗೂಡಿಸಿಕೊಂಡು ಸಮಾಜದ ಬಡ ಹಾಗೂ ಅಶಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪಾಲಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT