ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುರಕ್ಷತೆ ಇಲ್ಲದ ಶಾಲಾ ವಾಹನ ಜಪ್ತಿ’

ಶಾಲಾ ಆಡಳಿತ ಮಂಡಳಿಗಳಿಗೆ ಸಾರಿಗೆ ಇಲಾಖೆ ಎಚ್ಚರಿಕೆ
Last Updated 23 ಜುಲೈ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಮುಂಜಾ­ಗ್ರತಾ ಕ್ರಮಗಳನ್ನು ಕೈಗೊಳ್ಳು­ವಂತೆ ಎಲ್ಲ ಶಾಲಾ ಆಡಳಿತ ಮಂಡಳಿ­ಗೂ ಸೂಚಿಸಿರುವ ಸಾರಿಗೆ ಇಲಾಖೆ ಆಯುಕ್ತರು, ನಿಯಮ ಪಾಲಿಸದ ವಾಹನಗಳನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಕ್ಕಳನ್ನು ಶಾಲೆಗೆ ಕೊಂಡೊ­ಯ್ಯುವ ಹಾಗೂ ಮನೆಗೆ ಬಿಟ್ಟು ಬರುವ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಆಡಳಿತ ಮಂಡಳಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಖಾಸಗಿ ವಾಹನಗಳ ಮಾಲೀಕರಿಗೆ ನೀಡಿತ್ತು.

ಕೆಲ ಶಾಲಾ ಸಿಬ್ಬಂದಿಯ ಜತೆ ಬುಧ­ವಾರ ಸಭೆ ನಡೆಸಿದ ಸಾರಿಗೆ ಇಲಾಖೆ ಆಯುಕ್ತ ಕೆ.ಅಮರ­ನಾರಾಯಣ, ಮಾರ್ಗ­ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚನೆ ನೀಡಿದರು.  ಇದೇ ವೇಳೆ ಸುರಕ್ಷತಾ ಕ್ರಮಗಳಿಲ್ಲದ ಶಾಲಾ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (ಆರ್‌ಟಿಒ) ಹೇಳಿದರು.

‘ಪ್ರತಿ ಶಾಲೆಯಲ್ಲೂ ಶಾಲಾ ವಾಹನ ಸುರಕ್ಷತಾ ಸಮಿತಿಯನ್ನು ರಚಿಸ­ಬೇಕು. ಪೋಷಕರು, ಶಿಕ್ಷಕರು ಮತ್ತು ವಾಹನಗಳ ಮಾಲೀಕರನ್ನು ಸಮಿತಿಯ ಸದಸ್ಯರನ್ನಾಗಿ ಮಾಡ­ಬೇಕು. ಕಾಲ ಕಾಲಕ್ಕೆ ಆ ಸಮಿತಿ ಸದಸ್ಯರ ಸಭೆ ಕರೆದು, ಮಕ್ಕಳ ಸುರಕ್ಷತೆ ಬಗ್ಗೆ ಚರ್ಚಿಸಬೇಕು’ ಎಂದು ಸಾರಿಗೆ ಆಯುಕ್ತರು ಸಭೆಯಲ್ಲಿ ಹೇಳಿದ್ದಾರೆ.

‘ವಾಹನದಲ್ಲಿ ಮಕ್ಕಳ ಹೆಸರು, ತರಗತಿ, ಮನೆ ವಿಳಾಸ, ದೂರವಾಣಿ ಸಂಖ್ಯೆ, ರಕ್ತದ ಗುಂಪು, ಮಾರ್ಗದ ವಿವರ ಇತ್ಯಾದಿ ಪಟ್ಟಿಯನ್ನು ಇಟ್ಟಿರ­ಬೇಕು. ಶಾಲಾ ವಾಹನವು ಗಟ್ಟಿ­ಮುಟ್ಟಾದ ಮೇಲ್ಛಾವಣಿ ಹೊಂದಿರ­ಬೇಕು. ಶಿಕ್ಷಕರೊಬ್ಬರು ಮಗುವನ್ನು ವಾಹನದವರೆಗೆ ಬಿಟ್ಟು ಬರಬೇಕು’ ಎಂದು ಸೂಚಿಸಿದ್ದಾರೆ.

‘ವಾಹನದ ಆಸನ ಸಾಮರ್ಥ್ಯ 12+1 ಮೀರದಂತಿರಬೇಕು. ವೇಗಮಿತಿ 40 ಕಿ.ಮೀಗೆ ನಿಯಂತ್ರಿತವಾಗಿರಬೇಕು. ವಾಹನವು ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು. ವಾಹ­ನಕ್ಕೆ ಸಂಪೂರ್ಣ ಹಳದಿ ಬಣ್ಣ ಬಳಿದು, ಹೊರ ಭಾಗದ ಮಧ್ಯದಲ್ಲಿ ಸುತ್ತಲೂ 150 ಮಿಲಿಮೀಟರ್ ಅಳತೆಯ ಹಸಿರು ಬಣ್ಣದ ಪಟ್ಟಿ ಹಾಕಿರಬೇಕು. ಆ ಹಸಿರು ಪಟ್ಟಿ ಮೇಲೆ ವಾಹನದ ನಾಲ್ಕು ಭಾಗಗಳಲ್ಲೂ ‘ಶಾಲಾ ವಾಹನ’ ಎಂದು ಬರೆಸಿರಬೇಕು’ ಎಂದು ತಿಳಿಸಿದ್ದಾರೆ.

‘ವಾಹನಕ್ಕೆ ಎಲ್‌ಪಿಜಿ ಇಂಧನ ಕಿಟ್ ಅಳವಡಿಸಿದ್ದಲ್ಲಿ, ಅದರ ಮೇಲೆ ಆಸನ ಹಾಕಿರಬಾರದು. ವಾಹನಗಳ ಗಾಜು­ಗಳು ಪಾರದರ್ಶಕವಾಗಿರಬೇಕು. ಬಾಗಿ­ಲು­ಗಳಿಗೆ ಸುರಕ್ಷಿತ ಲಾಕಿಂಗ್ ವ್ಯವಸ್ಥೆ ಇರಬೇಕು. ಚಾಲನೆಯಲ್ಲಿ ಕನಿಷ್ಠ ನಾಲ್ಕು ವರ್ಷ ಅನುಭವವಿರುವ ಚಾಲ­ಕ­ರನ್ನು ನೇಮಿಸಿರಬೇಕು. ಚಾಲಕರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳನ್ನು ವಾಹ­ನದ ಹೊರ ಭಾಗದಲ್ಲಿ ಬರೆಸಿರಬೇಕು ಅಥವಾ ವಿವರಗಳ ಪಟ್ಟಿಯನ್ನು ಅಳವಡಿಸಿರಬೇಕು’ ಎಂದು ಹೇಳಿದ್ದಾರೆ.

‘ಈ ವರ್ಷದ ಮೊದಲ ಆರು ತಿಂಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ 50 ಶಾಲಾ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆ ನಡೆಸಲಾಗುವುದು’ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT