ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಳಿ’ಯ ಹಿತದೊಳಗೆ...

Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಚಿತ್ರಮಂದಿರಗಳ ಹೊಸ್ತಿಲಲ್ಲಿರುವ (ಇಂದು ತೆರೆಗೆ) ‘ಸುಳಿ’ ಚಿತ್ರದ ಬುಡೇನ್‌ ಸಾಬ್‌ ಪಾತ್ರ ಶ್ರೀನಾಥ್‌ ಅವರನ್ನು ಆವರಿಸಿಕೊಂಡಿದೆ. ಈ ಪಾತ್ರ ಅವರೊಳಗಿನ ನಿರ್ದೇಶನದ ಕನಸಿಗೂ ನೀರೆರೆದಿದೆ.

* ‘ಮಾನಸ ಸರೋವರ’ದ ಬಳಿಕ ಮತ್ತೊಂದು ಅಂಥದೇ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಪದೇ ಪದೇ ಹೇಳುತ್ತಿದ್ದಿರಿ. ಈಗ ನಿಮ್ಮ ಆಸೆ ಈಡೇರಿದಂತಿದೆ?
ಒಬ್ಬ ಕಲಾವಿದನಾಗಿ ನನ್ನಲ್ಲಿದ್ದ ತುಡಿತ ಅದು. ನೂರಾರು ಚಿತ್ರಗಳನ್ನು ಮೆಚ್ಚುವ ಮೂಲಕ ಜನರು ನನಗೆ ಪ್ರೀತಿ, ವಿಶ್ವಾಸ, ಹೆಸರು ಕೊಟ್ಟಿದ್ದಾರೆ. ಆದರೆ ಇನ್ನೂ ಒಂದಷ್ಟು ಸಾಧನೆ ಮಾಡುವ ಆಸೆ ಕಾಡುತ್ತಿತ್ತು. ನನ್ನ ವೃತ್ತಿ ಜೀವನದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದೇನೆ.

ಆದರೆ ನನ್ನೊಳಗಿದ್ದ ಕಲಾವಿದನಿಗೆ ಏನೋ ಒಂದು ಆಸೆಯಿತ್ತು. ಆಗ ಅನೇಕ ಯೋಚನೆಗಳು ಬಂದವು. ನನ್ನ ಪತ್ನಿ ಗೀತಾ ಹಾಗೂ ಸ್ನೇಹಿತ ಸತ್ಯನಾರಾಯಣ ಅವರಿಗೆ ಹೇಳಿದೆ. ‘ನಿಮಗೆ ಯಾವುದು ಇಷ್ಟವೋ ಆ ಕಥೆಯನ್ನು ಒಪ್ಪಿಕೊಳ್ಳಿ’ ಎಂದರು. ನಿರ್ದೇಶನಕ್ಕೆ ಮುಂದಾಗಬಾರದೇಕೆ ಎಂಬ ಪ್ರಶ್ನೆಯೂ ಒಮ್ಮೆ ಸುಳಿದುಹೋಯಿತು. ಆದರೆ ಒಳ್ಳೆಯ ಕಥೆ ಬೇಕಲ್ಲ? ಆಗ ಸಿಕ್ಕಿದ್ದೇ ‘ಸುಳಿ’ ಚಿತ್ರದ ಪಾತ್ರ.

* ನಿಮ್ಮನ್ನು ಅಷ್ಟೊಂದು ಸೆಳೆಯುವಂಥದು ಏನಿತ್ತು ಆ ಪಾತ್ರದಲ್ಲಿ?
ನಿರ್ದೇಶಕ ಪಿ.ಎಚ್. ವಿಶ್ವನಾಥ್ ಮನೆಗೆ ಬಂದು ‘ಸುಳಿ’ ಕಥೆ ಹೇಳಿದಾಗ ಮನಸ್ಸಿಗೆ ಖುಷಿಯಾಯಿತು. ಹೊಸ ಶ್ರೀನಾಥ್ ಆಗಿ ನಾನು ತೆರೆಯ ಮೇಲೆ ಬರಲು ಈ ಕಥೆ ಪೂರಕವಾಗಿದೆ ಅನಿಸಿತು. ಇದನ್ನೇ ಸಿನಿಮಾ ಮಾಡಲು ಸತ್ಯನಾರಾಯಣ ಹಾಗೂ ಗೀತಾ ಒಪ್ಪಿದರು. ‘ಸುಳಿ’ ಸೆಟ್ಟೇರುತ್ತಿದ್ದಂತೆ ಅದರಲ್ಲಿನ ಪ್ರಮುಖ ಪಾತ್ರ ಬುಡೇನ್ ಸಾಬ್ ನನ್ನನ್ನು ಆವರಿಸಿಕೊಳ್ಳಲು ಶುರುಮಾಡಿದ.

ಆ ಪಾತ್ರ ಮಾಡಿದ್ದರಿಂದ ಮನಸ್ಸಿಗೆ ಎಷ್ಟೊಂದು ಆನಂದ ಸಿಕ್ಕಿದೆ ಎಂದರೆ, ‘ಮಾನಸ ಸರೋವರ’ದ ಬಳಿಕ ನನ್ನಲ್ಲಿದ್ದ ತುಡಿತ ಶಮನ ಆಯಿತು. ಈಗ ‘ಸುಳಿ’ ತೆರೆ ಕಾಣುತ್ತಿರುವ ಸಂದರ್ಭದಲ್ಲಿ ಇನ್ನೊಂದು ಬಗೆಯ ಆಸೆ ಶುರುವಾಗಿದೆ. ಇನ್ನೇನು ಮಾಡಬಹುದು? ಮತ್ತೇನು ಬಾಕಿ ಉಳಿದಿದೆ? ನಿರ್ದೇಶನ? ಇನ್ನೊಂದು ಒಳ್ಳೆಯ ಪಾತ್ರ? ಒಟ್ಟಾರೆಯಾಗಿ ಹೇಳಬೇಕೆಂದರೆ, ಈ ತುಡಿತ ಕಲಾವಿದನನ್ನು ಜೀವಂತವಾಗಿ ಇಡುತ್ತದೆ.

* ಬುಡೇನ್ ಸಾಬ್ ಪಾತ್ರದಲ್ಲಿ ನಿಮಗೆ ಇಷ್ಟವಾಗಿದ್ದು ಏನು?
ಸಂಸಾರ, ಪತ್ನಿ, ಮಕ್ಕಳಷ್ಟೇ ತನ್ನೂರಿನ ಜನರು ಕೂಡ ಮುಖ್ಯ ಎಂದು ತಿಳಿದವನು ಆತ. ಮುಸ್ಲಿಮನಾಗಿರುವ ಆತ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಜತೆಗೆ ಭೇದಭಾವವಿಲ್ಲದೇ ಬಾಳುತ್ತಾನೆ. ಸಮಾಜ ಹಾಗೂ ಪ್ರಕೃತಿ ಜತೆಗಿನ ಆತನ ಒಡನಾಟವನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಅದು ನನಗೆ ಹೆಚ್ಚು ಇಷ್ಟವಾಯಿತು. ಪಾತ್ರವನ್ನು ನಾನು ನಿರ್ವಹಿಸಿದ್ದೇನೆ ಎಂಬುದಕ್ಕಿಂತ ನಾನೇ ಬುಡೇನ್ ಸಾಬ್ ಆಗಿದ್ದೇನೆ ಎಂದರೆ ಹೆಚ್ಚು ಸೂಕ್ತವೇನೋ?!

* ಸಿನಿಮಾಗಳಲ್ಲಿ ಈಗಾಗಲೇ ಹಳ್ಳಿ ಚಿತ್ರಣಗಳು ಬಹಳಷ್ಟು ಸಲ ಬಂದು ಹೋಗಿವೆ. ಅವೆಲ್ಲಕ್ಕಿಂತ ‘ಸುಳಿ’ ಹೇಗೆ ಭಿನ್ನ?
ಇದು ವರ್ತಮಾನದ ದಿನಗಳನ್ನು ಆಧರಿಸಿದ ಕಥೆ. ಭವಿಷ್ಯದಲ್ಲಿ ನಾವೆಲ್ಲ ಹೇಗೆ ಬದುಕಬೇಕೆಂಬುದನ್ನು ಸೂಚ್ಯವಾಗಿ ತಿಳಿಸುತ್ತದೆ. ದೂರದ ಬೆಟ್ಟ, ಅದರ ಮಧ್ಯೆ ಒಂದು ಹಳ್ಳಿ. ಅಲ್ಲೊಂದು ಇಲ್ಲೊಂದು ಕಾಣುವ ಮನೆ. ಅಲ್ಲಿ ಜನರು ಬೇರೆಯಾಗಿದ್ದರೂ ಒಂದೇ ಮನೋಭಾವದವರು. ಅವರ ಮಧ್ಯೆ ಯಾವತ್ತೂ ವೈಮನಸ್ಯ ಇರುವುದಿಲ್ಲ.

ಅವರನ್ನು ತನ್ನ ವಹಿವಾಟಿನ ಮೂಲಕ ನಿತ್ಯ ಭೇಟಿ ಮಾಡುವ ಬುಡೇನ್ ಸಾಬ್, ಮಾನವೀಯ ಗುಣಗಳ ಸಾಮಾನ್ಯ ವ್ಯಕ್ತಿ. ಆತನ ಕುಟುಂಬದಲ್ಲಿ ಧುತ್ತನೇ ಎದುರಾಗುವ ‘ಸುಳಿ’ ಏನೇನೆಲ್ಲ ಮಾಡುತ್ತದೆ ಎಂಬುದೇ ಈ ಹಳ್ಳಿ ಬದುಕಿನ ಚಿತ್ರದ ವಿಶೇಷ.

* ನಿಮ್ಮ ಮತ್ತು ಪಿ.ಎಚ್. ವಿಶ್ವನಾಥ್ ಸ್ನೇಹ ಎಷ್ಟು ಪುರಾತನವಾದುದು?
ವಿಶ್ವನಾಥ್ ನನ್ನ ತಮ್ಮನಿದ್ದ ಹಾಗೆ ಎಂಬುದನ್ನು ಮೊದಲಿಗೆ ಹೇಳಿಬಿಡುತ್ತೇನೆ. ‘ಧರ್ಮಸೆರೆ’ ಸಮಯದಲ್ಲಿ ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕನಾಗಿ ಸೇರಿಕೊಂಡರು. ಆಮೇಲೆ ‘ಮಾನಸ ಸರೋವರ’, ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲೆಲ್ಲ ನಾವು ಜತೆಯಾಗಿ ಇದ್ದವರು. ಪುಟ್ಟಣ್ಣ ಅವರ ಮನೆಯೆಂದರೆ ಒಂದರ್ಥದಲ್ಲಿ ಗುರುಕುಲ ಇದ್ದಂತೆ.

ಗುರುಗಳಿಗೆ ಆತ ನಿಜವಾದ ಶಿಷ್ಯನಾದ. ಆತ ನಡೆದ ಹಾದಿ ಇದೆಯಲ್ಲ? ಅದು ಥೇಟ್ ಕಣಗಾಲ್ ಅವರ ದಾರಿಯೇ. ಅವರಂತೆಯೇ ಸಿನಿಮಾ ಮಾಡಿದ; ಹೆಸರು ಗಳಿಸಿದ.ಯಾವತ್ತೂ ಒಂದು ವಿಷಯ ಒಪ್ಪಿದರೆ ಅದರ ಬಗ್ಗೆಯೇ ಚಿಂತಿಸುವವನು. ಆತ ಸಿನಿಮಾ ಮಾಡುವಾಗ ನನ್ನನ್ನು ನಾನೇ ಆತನಿಗೆ ಒಪ್ಪಿಸಿಕೊಂಡೆ. ಗುರುಗಳ ಇನ್ನೊಂದು ರೂಪ ಈ ವಿಶ್ವನಾಥ್ ಅನಿಸಿತು.

* ಗುಡ್ಡ – ಬೆಟ್ಟದ ಮಧ್ಯೆಯೇ ಸಂಪೂರ್ಣವಾಗಿ ನಡೆದ ಚಿತ್ರೀಕರಣದ ಅನುಭವಗಳ ಬಗ್ಗೆ ಒಂದಷ್ಟು ಹೇಳಿ?
ಕಳಸ, ಬಲ್ಲಾಳರಾಯನ ಕೊಪ್ಪಲು ಇತರೆಡೆ ನಡೆಸಿದ ಚಿತ್ರೀಕರಣದ ಅನುಭವ ನಮ್ಮಲ್ಲಿನ್ನೂ ಹಸಿರಾಗಿದೆ. ನಯನಮನೋಹರ ಪ್ರಕೃತಿ ಮಧ್ಯೆ ನಡೆದ ಚಿತ್ರೀಕರಣವನ್ನು ಮರೆಯಲು ಸಾಧ್ಯವಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ನಮ್ಮ ದಿನನಿತ್ಯದ ಬದುಕು ಅದೇ ಪರಿಸರ ಆಗಿತ್ತು. ಗುಡ್ಡ–ಬೆಟ್ಟ ಓಡಾಡಿ, ಪೇಟೆಗೆ ಹೋಗಬೇಕಿತ್ತು. ಅಲ್ಲಿನ ಸುತ್ತಲಿನ ಜನರು ನೀಡಿದ ಸಹಾಯವನ್ನು ಈಗಲೂ ನೆನಪಿಸಿಕೊಳ್ಳುತ್ತೇವೆ.

ಕಲಾವಿದರು ಬರೀ ಅಭಿನಯವನ್ನಷ್ಟೇ ಮಾಡದೇ ಉಳಿದ ತಾಂತ್ರಿಕ ಕೆಲಸಗಳತ್ತ ಗಮನಹರಿಸುತ್ತಿದ್ದರು. ಅಲ್ಲೆಲ್ಲ ಓಡಾಡುವುದು ಸ್ವಲ್ಪ ಕಷ್ಟ ಅನ್ನಿಸುವುದು ಉಂಟು. ಆದರೆ ಕಥೆ ನಮ್ಮನ್ನು ಸೆಳೆದಿದ್ದರಿಂದ ಯಾವತ್ತೂ ಅದು ಕಠಿಣ ಅನಿಸಲಿಲ್ಲ.

* ನಾಲ್ಕೈದು ದಶಕಗಳಿಂದ ಚಿತ್ರರಂಗದಲ್ಲಿ ಇದ್ದವರು ನೀವು. ಇತ್ತೀಚಿನ ಚಿತ್ರಗಳ ಬಗ್ಗೆ ಏನನ್ನಿಸುತ್ತದೆ?
ಕಾಲಕ್ಕೆ ತಕ್ಕ ಹಾಗೆ ಸಿನಿಮಾ ಬರುತ್ತಿವೆ. ಯುವಕರು ಹೊಸ ಕಥೆಗಳನ್ನು ಚಿತ್ರವನ್ನಾಗಿ ಮಾಡುತ್ತಿದ್ದಾಲ್ಲ, ಭೇಷ್! ತಂತ್ರಜ್ಞಾನವೂ ಈಗ ಮೊದಲಿಗಿಂತ ಸುಲಭವಾಗಿದೆ.ಅಷ್ಟಾದರೂ ನನಗೆ ಅನಿಸುವುದು ಏನೆಂದರೆ, ಈ ಪ್ರತಿಭೆಗಳು ಕಥೆಯ ಬಗ್ಗೆ ಇನ್ನೂ ಒಂಚೂರು ಯೋಚಿಸಿದರೆ ಅತ್ಯದ್ಭುತ ಸಿನಿಮಾಗಳನ್ನೇ ಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT