ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಳ್ಳು ನಗರ’ದಲ್ಲೊಂದು ಸುತ್ತು

Last Updated 28 ಮೇ 2016, 19:30 IST
ಅಕ್ಷರ ಗಾತ್ರ

‘ಸುಳ್ಳು ನಗರ.
ಚಳಿಯ ಇಳಿಸಂಜೆಯ ಕಂದು ದೂಳಿಯ ಕೆಳಗೆ
ಲಂಡನ್ ಸೇತುವೆ ಮೇಲೆ ಹರಿದ ಜನ ಜಂಗುಳಿ, ಅದೆಷ್ಟೋ’
–ಇದು ಎಲಿಯಟ್ ಉದ್ಗಾರ.

ಸಂತ ಮ್ಯಾಗ್ನಸ್ ಮಾರ್ಟಿಯರ್ ಚರ್ಚ್‌ನ ಸನಿಹ ಹಾದು ಹೋಗುವ ಲಂಡನ್ ಸೇತುವೆ, ಜನ ಜಂಗುಳಿ ತುಂಬಿದ ಹಳೆಯ ಮಾರುಕಟ್ಟೆ ಪಕ್ಕದಲ್ಲೇ ಇದೆ. ಎಲಿಯಟ್ ಇದ್ದ ಹಳೆಯ ಲಾಯ್ಡ್ ಬ್ಯಾಂಕ್ ಅಲ್ಲೇ ಹತ್ತಿರ. ಸೇತುವೆಯ ಪಕ್ಕದಲ್ಲೇ ಕೆಳಗೆ ಹಳೆಯ ಮೀನು ಮಾರುಕಟ್ಟೆ. ಮಾರುಕಟ್ಟೆಯ ಸದ್ದು–ಗದ್ದಲ–ದುರ್ವಾಸನೆ ಕಾರಣದಿಂದ ಚರ್ಚ್ ಆ ಕಡೆಗಿದ್ದ ಕಿಟಕಿಯನ್ನು ಅದೆಷ್ಟೋ ಹಿಂದೆ ಬಂದ್ ಮಾಡಿದೆ. ಸಂತೆಯ ನಡುವಿನ ಸಂತನಂತೆ ಎಲಿಯಟ್ ಆ ಚರ್ಚ್‌ನ ಪ್ರಾರ್ಥನೆಯಲ್ಲಿ ನಗರದ ಚಿಂತೆ ಕಳೆಯುತ್ತಿದ್ದ.

ಲಂಡನ್ ಬ್ರಿಜ್ ಅದೆಷ್ಟು ಬಾರಿ ಉರುಳಿ ಬಿದ್ದಿತ್ತೋ? ನೆಗೆದು ಎದ್ದಿತ್ತೋ. ಪ್ರಖ್ಯಾತ ನರ್ಸರಿ ಪದ್ಯ ‘ಲಂಡನ್ ಬ್ರಿಜ್ ಫಾಲಿಂಗ್ ಡೌನ್’ ಎನ್ನುವುದು ಇದನ್ನೇ ಹೇಳುತ್ತದೆ.ಬಹುಶಃ ಎಲಿಯಟ್ ಇವೆಲ್ಲದರಿಂದ ಪ್ರಭಾವಿತನಾಗಿರಬೇಕು ಎನ್ನಿಸುತ್ತದೆ.

‘ಲಂಡನ್ ವಾಕಿಂಗ್ ಟೂರ್’ ಎಲಿಯಟ್ ಕಾರ್ಯಕ್ರಮದ ಭಾಗ. ಕಾವ್ಯದಲ್ಲಿ ಬರುವ ಸ್ಥಳಗಳನ್ನೆಲ್ಲ ಕಣ್ಣುತುಂಬ ನೋಡುವ, ಕಿವಿತುಂಬ ಕೇಳುವ, ಮೂಗು ತುಂಬ ಆಘ್ರಾಣಿಸುವ, ಸ್ಪರ್ಶಿಸುವ, ಆಸ್ವಾದಿಸುವ ಅಪೂರ್ವ ಅವಕಾಶ.

ಇಲ್ಲಿಗೆ ಬರುವ ಮುನ್ನ ಲಂಡನ್ ವಿಶ್ವವಿದ್ಯಾನಿಲಯದಲ್ಲಿ– ‘ಹ್ಯಾವ್ ಎ ನೈಸ್ ಲಂಚ್. ಸೀ ಯೂ ಅಗೇನ್ ಅಟ್ ಸೇಂಟ್ ಮ್ಯಾಗ್ನಸ್ ಮಾರ್ಟಿಯರ್’ ಎಂದು ಹೇಳಿ ನಮ್ಮ ಸೆಮಿನಾರ್ ಟ್ಯೂಟರ್ ವಿಮ್ ವ್ಯಾನ್ ಮಿರ್ಲೋ ಕಣ್ಮರೆಯಾದರು. ಸೆಮಿನಾರಿನಲ್ಲಿದ್ದವರೂ ಕಳಚಿಕೊಂಡರು. ಊಟ ಮುಗಿಸಿ ಹೊರಡಬೇಕೆನ್ನುವಷ್ಟರಲ್ಲಿ ಅಮೆರಿಕದ ಗೆಳೆಯರು ಸಿಕ್ಕರು. ಅವರೆಲ್ಲ ತಮ್ಮ ತಮ್ಮ ಸೆಮಿನಾರ್ ಮುಗಿಸಿ ಊಟ ಮುಗಿಸಿ ಹೊರಡಲು ಅನುವಾಗಿದ್ದರು. ನಾನೂ ಅವರ ಜತೆ ಸೇರಿಕೊಂಡೆ.

‘ರಸ್ಸೆಲ್ ಸ್ಕ್ವೇರ್’ ಬಳಿಯಿಂದ ಬ್ಯಾಂಕ್ ಎಂಬೋ ಸ್ಥಳಕ್ಕೆ ಬಸ್ಸು ಹಿಡಿದು, ಅಲ್ಲಿಂದ ಕಿಂಗ್ ವಿಲಿಯಂ ಬೀದಿಗೆ ಇಳಿದು ಲಂಡನ್ ಬ್ರಿಜ್ ಕಡೆಗೆ ನಮ್ಮ ಪಾದಯಾತ್ರೆ. ಜಂಕ್ಷನ್ ಹತ್ತಿರ ಸಬ್‌ವೇ ಬಳಸಿ ಸಂತ ಮ್ಯಾಗ್ನಸ್ ಮಾರ್ಟಿಯರ್ ಚರ್ಚ್‌ಗೆ ನಮ್ಮ ಹೆಜ್ಜೆ. ಹಾದಿ ಮಧ್ಯೆ ಇಂಡಿಯಾದಿಂದ ತಗೊಂಡು ಹೋಗಿದ್ದ ಗೋಡಂಬಿ–ದ್ರಾಕ್ಷಿ–ಬಾದಾಮಿಗಳು ಅಮೆರಿಕದ ಚಾಕೋಲೆಟ್‌ಗಳ ಜತೆಗೆ ವಿನಿಮಯ.

‘ಸಂತ ಮ್ಯಾಗ್ನಸ್ ಮಾರ್ಟಿಯರ್’ ಅತ್ಯಂತ ಹಳೆಯ ಆಂಗ್ಲೋ ಕೆಥೋಲಿಕ್ ಶೈಲಿಯ ಚರ್ಚ್. ಕ್ರಿಸ್ಟಫರ್ ರೆನ್ ವಾಸ್ತುವಿನ್ಯಾಸಕಾರ. ಲಂಡನ್‌ನ ಬೃಹತ್ ಅಗ್ನಿದುರಂತದ ಹಿನ್ನೆಲೆಯಲ್ಲಿ ನಿರ್ಮಿಸಿದ ಮಾನ್ಯುಮೆಂಟ್ ಅಥವಾ ಸ್ಮಾರಕಕ್ಕೆ ಕೇವಲ ನಡಿಗೆ ದೂರ. ಇಲ್ಲಿಯ ಅರ್ಚಕರಿಗೆ ‘ಕಾರ್ಡಿನಲ್ ರೆಕ್ಟರ್’ ಎಂಬ ಗೌರವ. ಇದು ಮೀನುಗಾರರ ಮತ್ತು ಮಾರಾಟಗಾರರ ಚರ್ಚು. ಹಳೆಯ ಲಂಡನ್ ಬ್ರಿಜ್ ಪಕ್ಕದಲ್ಲಿ ಲಂಡನ್ ಪ್ರವೇಶಿಸುವ ಎಲ್ಲರಿಗೂ ಕಾಣುವಂತೆ ನಿರ್ಮಾಣಗೊಂಡ ಚರ್ಚ್.

ಸಾವಿರ ವರ್ಷಗಳ ತನ್ನ ಇತಿಹಾಸದಲ್ಲಿ ಅದು ಅನೇಕ ಘಟನೆಗಳಿಗೆ ಮೂಕಸಾಕ್ಷಿ. ಈಗಲೂ ಅಲ್ಲಿ ನಿತ್ಯ ಪ್ರಾರ್ಥನೆ ಜರಗುತ್ತಿದೆ. ಲಂಡನ್ ಬ್ರಿಜ್‌ನ ದೊಡ್ಡ ಪ್ರತಿಕೃತಿಯೂ ಅಲ್ಲಿದೆ. ಚಾರ್ಲ್ಸ್ ಡಿಕೆನ್ಸ್‌ನ ‘ಅಲಿವರ್ ಟ್ವಿಸ್ಟ್’, ಟಿ.ಎಸ್. ಎಲಿಯಟ್‌ನ ‘ವೇಸ್ಟ್‌ಲ್ಯಾಂಡ್’ ಕೃತಿಗಳಲ್ಲಿ ಮ್ಯಾಗ್ನಸ್ ಚರ್ಚ್‌ನ ವರ್ಣನೆ ಕಣ್ಣ ಮುಂದೆ ಬಂದು ನಿಲ್ಲುವಂತಿದೆ.

೧೧೧೬ರ ಏಪ್ರಿಲ್ ೧೬ರಲ್ಲಿ ತೀರಿಕೊಂಡ ಮ್ಯಾಗ್ನಸ್‌ಗೆ ಈ ಚರ್ಚ್ ಅರ್ಪಣೆಗೊಂಡಿದೆ. ಮ್ಯಾಗ್ನಸ್‌ನ ರಾಜಕೀಯ ವಿರೋಧಿಯಾಗಿದ್ದ ಬಂಧು ಆತನನ್ನು ಎಜಿಲ್‌ಸೇ ದ್ವೀಪದಲ್ಲಿ ಕೊಂದುಹಾಕುತ್ತಾನೆ. ೧೧೩೭ರಲ್ಲಿ ಮ್ಯಾಗ್ನಸ್‌ನ ಸಹೋದರಿಯ ಮಗ ಸಂತ ರೊನಾಲ್ಡ್ ಕಿರ್ಕ್‌ವಾಲ್‌ನಲ್ಲಿ ಸಂತ ಮ್ಯಾಗ್ನಸ್ ಕೆಥಡ್ರಲ್ ನಿರ್ಮಾಣಕ್ಕೆ ಕ್ರಮಕೈಗೊಳ್ಳುತ್ತಾನೆ.

೨೦ನೆಯ ಶತಮಾನದ ಅಪೆರಾದಲ್ಲಿ ಸಂತ ಮ್ಯಾಗ್ನಸ್ ಕಥೆ ಮರುನಿರೂಪಣೆಗೊಳ್ಳುತ್ತದೆ. ಜಾರ್ಜ್ ಮ್ಯಾಕೆಬ್ರೌನ್‌ನ ಕಾದಂಬರಿ ಮ್ಯಾಗ್ನಸ್ ಆಧಾರದಲ್ಲಿ ಸರ್ ಪೀಟರ್ ಮ್ಯಾಕ್ಸ್‌ವೆಲ್ ಡೇವಿಸ್ ಅಪೆರಾ ಸಿದ್ಧಪಡಿಸುತ್ತಾರೆ. ೧೯೨೬ರಲ್ಲಷ್ಟೇ ಲಂಡನ್‌ನ ಬಿಷಪ್ ಚರ್ಚ್ ಅನ್ನು ಮ್ಯಾಗ್ನಸ್‌ಗೆ ಸಮರ್ಪಣೆಯನ್ನು ಖಾತರಿ ಮಾಡುತ್ತಾರೆ.

ಭಕ್ತರ ಕುಳಿತುಕೊಳ್ಳುವ ಹಳೆಯ ಮಾದರಿಯ ಬೆಂಚು, ಬಲಿಪೀಠ, ಬೃಹತ್ ಆರ್ಗನ್, ಲೇಡಿವಾಲ್‌ಸಿಂಗ್ ಹ್ಯಾಮ್‌ಳ ಪುಟ್ಟ ಗುಡಿಗಳೆಲ್ಲ ಆಕರ್ಷಕ. ೧೭೫೦ರ ವರೆಗೆ ಥೇಮ್ಸ್ ನದಿ ಮೇಲೆ ಇದ್ದದ್ದು ಲಂಡನ್ ಬ್ರಿಜ್ ಮಾತ್ರ. ಮಧ್ಯಕಾಲೀನ ಸ್ಯಾಕ್ಷನ್ ಮತ್ತು ರೋಮನ್ ಕಾಲದ ಮರದ ಸೇತುವೆಯ ಸಾಕ್ಷ್ಯಗಳು ಇಲ್ಲಿವೆ.

‘ಶಾಲಾ ಬಾಲಕನಾಗಿದ್ದಾಗ ಎಲಿಯಟ್’ ಎನ್ನುವ ವಿಷಯದಲ್ಲಿ ಜೇಮಿ ಸ್ಟೇಯರ್ ಮತ್ತು ‘ಧ್ವನಿಗಳು ಮತ್ತು ನಗರ: ವೇಸ್ಟ್‌ಲ್ಯಾಂಡ್: ಒಂದು ಆಲಿಕೆ’ ಕುರಿತು ಹ್ಯೂಗ್ ಹಾಟನ್ ಉಪನ್ಯಾಸ ಮುಗಿದ ನಂತರ, ಮಾರ್ಕ್ ಸ್ಟೋರಿ ನೇತೃತ್ವದಲ್ಲಿ ಲಂಡನ್ ವಾಕಿಂಗ್ ಟೂರ್ ಶುರು.

ಎಲಿಯಟ್ ಚರ್ಚ್ ಅನ್ನು ‘ಇನ್‌ಎಕ್ಸ್‌ಪ್ಲಿಕೇಬಲ್ ಸ್ಪ್ಲೆಂಡರ್ ಆಫ್ ಅಯೋನಿಯನ್ ವೈಟ್ ಅಂಡ್ ಗೋಲ್ಡ್’ ಎಂದು ಉಲ್ಲೇಖಿಸುತ್ತಾನೆ. ಚರ್ಚು, ಬ್ರಿಜ್ಜು, ಮಾರ್ಕೆಟ್ಟುಗಳ ಒಂದು ಅವಿನಾಭಾವ ಸಂಬಂಧ. ಅಶಾಂತ ಮಾರುಕಟ್ಟೆ ಮತ್ತು ಚರ್ಚಿನ ಶಾಂತ ಒಳಾಂಗಣ. ಬೈಬಲ್ ಅನ್ನು ಮೊತ್ತಮೊದಲ ಬಾರಿಗೆ ಇಂಗ್ಲಿಷ್‌ಗೆ ಅನುವಾದಿಸಿದ ಎಕ್ಸ್‌ಟೆರ್‌ನ ಬಿಷಪ್ ಮೊದಲ ರೆಕ್ಟರ್ ಆದರು.

ಮುಂದೆ ಲಂಡನ್ ಬ್ರಿಜ್–ಟವರ್‌ಗಳ ಕಚೇರಿ ಕಟ್ಟಡವಾದ, ೧೯೨೧–೨೫ರಲ್ಲಿ ನಿರ್ಮಾಣಗೊಂಡ ‘ಅಡಿಲೇಡ್ ಹೌಸ್’ ನೋಟ. ಅದು ಆ ಕಾಲದಲ್ಲಿ ಲಂಡನ್‌ನಗರದ ಅತ್ಯಂತ ಎತ್ತರದ ಕಟ್ಟಡ. ಮೊತ್ತಮೊದಲ ಏರ್‌ಕಂಡಿಷನರ್ ಹೊಂದಿದ್ದ, ನ್ಯೂಮಾಟಿಕ್ ಮೆಸ್ಸೆಜಿಂಗ್ ವ್ಯವಸ್ಥೆ ಹೊಂದಿದ್ದ, ಈಜಿಪ್ತ್ ಅಲಂಕಾರ ಹೊಂದಿದ್ದ ಕಟ್ಟಡ.

ಮ್ಯಾಗ್ನಸ್ ಚರ್ಚ್‌ನಿಂದ ಇಳಿದು ಮೇಲಿನ ಥೇಮ್ಸ್ ಬೀದಿಗೆ ತೆರಳುವಲ್ಲಿದೆ ‘ಫಿಶ್‌ಮಾಂಗರ್ ಹಾಲ್’. ಹಳೆಯ ಲಂಡನ್ ಬ್ರಿಜ್‌ಗೆ ಬಳಸಿದ ಹಲಗೆಯಿಂದ ಮಾಡಿದ ಕುರ್ಚಿ ಹಾಲ್‌ನ ಮಧ್ಯದಲ್ಲಿದೆ. ಥೇಮ್ಸ್‌ನ ಕೆಳಗಿನ ಬೀದಿಯಲ್ಲಿ ಚಾಸರ್ ತನ್ನ ಜೀವನ ನಡೆಸಿದ ಎಂಬ ಮಾತೂ ಇದೆ. ಹಳೆಯ ಲಂಡನ್ ಬ್ರಿಜ್, ಬಿಲ್ಲಿಂಗ್‌ಗೇಟ್ ಮಾರ್ಕೆಟ್, ಕಸ್ಟಮ್ ಹೌಸ್ ಮತ್ತು ಕೋಲ್ ಎಕ್ಸ್‌ಚೇಂಜ್‌ಗಳ ನಡುವೆ ಸಣ್ಣದೊಂದು ಕಿರುದಾರಿ ಇದೆ.

ಥೇಮ್ಸ್ ನದಿಯ ದಂಡೆಯ ಬೀದಿಯಲ್ಲಿ ಎಲಿಯಟ್‌ನ ಕಾವ್ಯದ ಮಾತುಗಳು ಕೈ ಹಿಡಿದು ನಡೆಸುತ್ತವೆ. ‘ವೇಸ್ಟ್‌ಲ್ಯಾಂಡ್’ ಕಾವ್ಯ ಶತಮಾನ ಪೂರೈಸುವ ಹೊಸ್ತಿಲಲ್ಲಿದೆ. ಅದರೊಳಗಿನ ಮಾತುಗಳು ಪಾದಯಾತ್ರೆಯ ಪದ ಹೇಳುತ್ತಿವೆ. ‘‘ಓ ನಗರವೇ, ಕೆಲವೊಮ್ಮೆ ನಾನು ಕೆಳಗಿನ ಥೇಮ್ಸ್ ಬೀದಿಯಲ್ಲಿನ ಪಬ್ಲಿಕ್ ಬಾರ್‌ಗಳಲ್ಲದೇ ಸಂತೃಪ್ತ ಮ್ಯಾಂಡೋಲಿನ್‌ನ ನಾದಝರಿಯನ್ನು ಕೇಳುತ್ತೇನೆ. ನದಿಯ ಡೇರೆ ಮುರಿದಿದೆ: ಎಲೆಯ ಕೊನೆ ಬೆರಳುಗಳು ಹಿಡಿದು ಆರ್ದ್ರ ದಂಡೆಯಲ್ಲಿ ಕುಸಿಯುತ್ತವೆ.

ಗಾಳಿ ಕಂದು ಭೂಮಿಯನ್ನು ಹಾಯುತ್ತದೆ, ಸದ್ದಿಲ್ಲದೆಯೆ. ದೇವಕನ್ನಿಕೆಯರು ಹೊರಟು ಹೋಗಿದ್ದಾರೆ. ಮಧುರ ಥೇಮ್ಸ್ ನದಿಯೇ, ಓಡು ನಿಧಾನಕ್ಕೆ, ನಾನು ಹಾಡು ಮುಗಿಸುವವರೆಗೆ. ತಾಳಿಕೊಳ್ಳುವುದಿಲ್ಲ ನದಿ, ಖಾಲಿ ಬಾಟಲಿ, ಸ್ಯಾಂಡ್‌ವಿಚ್ ಕಾಗದ, ರೇಶಿಮೆ ಕರವಸ್ತ್ರ, ಕಾರ್ಡ್‌ಬೋರ್ಡ್ ಪೆಟ್ಟಿಗೆ, ಸಿಗರೇಟು ತುದಿ ಅಥವಾ ಬೇಸಗೆಯ ರಾತ್ರಿಗಳ ಚಹರೆ, ನಗರ ನಿರ್ದೇಶಕರ ಸಂತತಿಯ ಪಹರೆ; ಎಲ್ಲವೂ ಹೊರಟು ಹೋಗಿದೆ, ಯಾವ ವಿಳಾಸವನ್ನೂ ಉಳಿಸದೆಯೇ. ಲೆಮಾನ್‌ನ ನೀರ ಬಳಿ ಕುಳಿತೆ, ಕಣ್ಣೀರ ಸುರಿದೆ’’. ಹೀಗೆ ಎಲಿಯಟ್ ವರ್ಣನೆ ಸಾಗುತ್ತದೆ.

ಕಿಂಗ್‌ವಿಲಿಯಂ ಬೀದಿ
‘ಪ್ರತಿಯೊಬ್ಬನೂ ತನ್ನ ಕಣ್ಣನ್ನು ತನ್ನ ಪಾದಕ್ಕೆ ಕೀಲಿಸಿ ಗುಡ್ಡದ ಮೇಲಕ್ಕೆ ಹರಿದು ಕಿಂಗ್ ವಿಲಿಯಂ ಬೀದಿಗೆ ಇಳಿಯುತ್ತಾನೆ. ಹಳೆಯ ಛಾಯಾಚಿತ್ರಗಳು ವಿಲಿಯಂ ಬೀದಿಯ ದಟ್ಟಣೆಯನ್ನು ಹೇಳುತ್ತವೆ. ‘ಟ್ಯೂಬ್ ಸ್ಟೇಷನ್‌’ವರೆಗೆ ಅಥವಾ ‘ಬ್ಯಾಂಕ್ ಆಫ್ ಇಂಗ್ಲೆಂಡ್‌’ವರೆಗೆ ವಿಲಿಯಂ ಬೀದಿ ಚಾಚಿಕೊಳ್ಳುತ್ತದೆ. ಎಲಿಯಟ್ ತನ್ನ ವೇಸ್ಟ್‌ಲ್ಯಾಂಡ್‌ನಲ್ಲಿ ಹೇಳುವ ಮೂರ್‌ಗೇಟ್, ವಿಲಿಯಂ ಬೀದಿ, ಕೆಳಗಿನ ಥೇಮ್ಸ್ ಬೀದಿ ಎಲ್ಲವೂ ಕೊನೆಗೆ ನದಿಯ ಕಡೆಗೆ ಸರಿಯುತ್ತವೆ.

ಬೀದಿ ಗಡಿಯಾರಗಳು ಲಂಡನ್‌ನಗರದಲ್ಲಿ ಸಾಮಾನ್ಯ ದೃಶ್ಯ. ಬ್ಯಾಂಕಿಂಗ್ ಕೆಲಸಗಾರರ ಸಮಯಪಾಲನೆಗೆ ಆ ಕಾಲದಲ್ಲಿ ಮಾಡಿದ್ದ ವ್ಯವಸ್ಥೆ ಇದು. ‘ಸೇಂಟ್ ಮೇರಿ ವೂಲ್‌ನೋಥ್ ಚರ್ಚ್‌’ನಲ್ಲಿ ಅಂಥದ್ದೊಂದು ಬೀದಿ ಗಡಿಯಾರ ಕಾಣಿಸುತ್ತದೆ. ಈ ಚರ್ಚ್ ಪ್ರದೇಶದಲ್ಲಿ ಕಳೆದ ೨೦೦೦ ವರ್ಷಗಳಿಂದ ಆರಾಧನೆ ನಡೆಯುತ್ತಿದೆ.

ರೋಮನ್, ಆಂಗ್ಲೋ–ಸ್ಯಾಕ್ಷನ್ ಪಳೆಯುಳಿಕೆಗಳು ಇಲ್ಲಿ ಕಾಣಸಿಗುತ್ತವೆ. ನಿಕೊಲಾಸ್ ಹಾವ್‌ಕ್ಸ್‌ಮೂರ್ ವಿನ್ಯಾಸಗೊಳಿಸಿದ ಏಕೈಕ ಚರ್ಚ್ ಇದು. ಬ್ಯಾಂಕ್ ಟ್ಯೂಬ್ ಸ್ಟೇಷನ್ ಬಂದಾಗ ಮ್ಯಾಗ್ನಸ್‌ಚರ್ಚ್ ಅನ್ನು ಮಾಡಿದಂತೆ ಸೇಂಟ್‌ಮೇರಿ ಚರ್ಚ್ ಅನ್ನು ಧರೆಗುರುಳಿಸಲಾಯಿತು. ಇದರ ವಿರುದ್ಧ ಸಾರ್ವಜನಿಕ ಆಕ್ರೋಶ ಮುಗಿಲು ಮುಟ್ಟಿತು.

ಇಲ್ಲೇ ಎಲಿಯಟ್ ಕರ್ತವ್ಯ ನಿರ್ವಹಿಸಿದ್ದ ‘ಲಾಯ್ಡ್‌ ಬ್ಯಾಂಕ್’ ಇದೆ. ಸೇಂಟ್ ಮೇರಿ ಚರ್ಚ್‌ನ ಎದುರು ಬದಿಯಲ್ಲಿದ್ದ ‘ಲಾಯ್ಡ್‌ ಬ್ಯಾಂಕ್’ನ ಕೇಂದ್ರ ಕಚೇರಿಯನ್ನು ೧೯೨೭ರಲ್ಲಿ ಕೆಡವಲಾಗಿತ್ತು. ಎಲಿಯಟ್ ತನ್ನ ೨೯ನೆಯ ವಯಸ್ಸಿನಲ್ಲಿ ಬೆಳಗ್ಗೆ ೯ರಿಂದ ಸಂಜೆ ೫ರ ತನಕ ದುಡಿಯುತ್ತಿದ್ದುದು ಇದೇ ಬ್ಯಾಂಕಿನಲ್ಲೇ. ಅನಂತರ ಈ ಬ್ಯಾಂಕ್ ಕಟ್ಟಡಕ್ಕೆ ಹೊಸ ವಿನ್ಯಾಸದ ಮೆರುಗು. ಇದರ ಪಕ್ಕದಲ್ಲೇ ವಾಸ್ತುಶಾಸ್ತ್ರಜ್ಞ ಜಾನ್ ಸೋನ್ ವಿನ್ಯಾಸಗೊಳಿಸಿದ ‘ಬ್ಯಾಂಕ್ ಆಫ್ ಇಂಗ್ಲೆಂಡ್’ ಇದೆ. 

ಕ್ಯಾನನ್ ಬೀದಿಯನ್ನು ಕತ್ತರಿಸಿಕೊಂಡು ಹೋಗುವ ಕ್ವೀನ್ ವಿಕ್ಟೋರಿಯ ಬೀದಿ ಮುಂದೆ ಕಿಂಗ್ ವಿಲಿಯಮ್ಸ್ ಬೀದಿಗೆ ನುಗ್ಗುತ್ತದೆ. ‘ದಿ ಸ್ಟ್ರಾಂಡ್’ ಎಂಬ ಸ್ಥಳದ ಉಲ್ಲೇಖ ಎಲಿಯಟ್ ಕಾವ್ಯದಲ್ಲಿ ಇದೆ. ಥೇಮ್ಸ್ ನದಿಯ ತೀರದಲ್ಲಿ ಸಂಗೀತದ ಸುಧೆ ಹರಿಸುವ ಸಂಗೀತಗಾರರ ದೊಡ್ಡ ದಂಡು ಆಗಲೂ ಇತ್ತು. ಮೂರ್‌ಗೇಟ್‌ನ ಉತ್ತರದಿಕ್ಕಿನಲ್ಲಿರುವ ಸ್ಮಶಾನದ ಉಲ್ಲೇಖ ಇದೆ.

ಇಲ್ಲಿನ ಸ್ಥಳ ಎಂದರೆ ಟವರ್ ಬ್ರಿಜ್. ಸಾಮಾನ್ಯವಾಗಿ ಟವರ್ ಬ್ರಿಜ್ ಅನ್ನೇ ಲಂಡನ್ ಬ್ರಿಜ್ ಎಂದು ತಪ್ಪಾಗಿ ಭಾವಿಸುತ್ತಾರೆ. ಟವರ್ ಬ್ರಿಜ್ ತುಂಬ ಕಮಾನು ಆಕಾರದ ಅನೇಕ ಗೋಪುರಗಳಿವೆ. ದೂರದಿಂದ ನೋಡಿದರೆ ಪ್ಯಾರಿಸ್‌ನ ‘ಈಫೆಲ್ ಗೋಪುರ’ದ ಅನೇಕ ಪ್ರತಿಗಳನ್ನು ಇಟ್ಟಂತೆ ಭಾಸವಾಗುವ ಬ್ರಿಜ್ ಇದು.

ಜಗತ್‌ಪ್ರಸಿದ್ಧ ಗ್ರೀನ್‌ವಿಚ್ (ಗ್ರೀನ್‌ವಿಚ್ ಮೀನ್ ಟೈಂ) ಇಲ್ಲೇ ಇದೆ. ರೈಲುಗಳು ಸಮಯಕ್ಕೆ ಸರಿಯಾಗಿ ಓಡುವಂತೆ ಮಾಡುವುದಕ್ಕೆ ಇಂಥದ್ದೊಂದು ಸಮಯ ವ್ಯವಸ್ಥೆಯನ್ನು ೧೯ನೆಯ ಶತಮಾನದ ಹೊತ್ತಿಗೆ ಮಾಡಿಕೊಂಡರು. ಎಲಿಯಟ್ ಕಾರ್ಯ ನಿರ್ವಹಿಸುತ್ತಿದ್ದ ‘ಫೇಬರ್ ಅಂಡ್ ಫೇಬರ್ ಪಬ್ಲಿಷಿಂಗ್’ ರಸ್ಸೆಲ್ ಸ್ಕ್ವೇರ್‌ನಲ್ಲೇ ಇದೆ.

೧೯೨೫ರಿಂದ ೧೯೬೫ರ ವರೆಗೆ ಎಂದರೆ ಎಲಿಯಟ್‌ನ ಸಾವಿನ ತನಕ ಈ ಪ್ರಕಾಶನದಲ್ಲಿ ಸಂಪಾದಕನಾಗಿ ದುಡಿದಿದ್ದ. ವರ್ಜಿನಿಯಾ ವೂಲ್ಫ್, ವೆನೆಸ್ಸಾ ಬೆಲ್, ಬರ್ಟ್ರಂಡ್ ರಸ್ಸೆಲ್ ಅವರ ಮನೆಗಳೂ ಇಲ್ಲೇ ಇದ್ದುವು. ರಿಚ್‌ಮಂಡ್ ಮತ್ತು ಕ್ಯೂ ಎಂಬ ಪ್ರಸಿದ್ಧ ಸ್ಥಳಗಳೂ ಇಲ್ಲಿವೆ. ಲಂಡನ್‌ನ ೧೮ನೇ ಕ್ರಾಫರ್ಡ್ ರಸ್ತೆಯಲ್ಲಿ ಎಲಿಯಟ್ ತನ್ನ ಮೊದಲ ಮನೆ ಮಾಡಿಕೊಂಡಿದ್ದ. 

ಥೇಮ್ಸ್ ನದಿಯ ಪಕ್ಕದ ಬೀದಿಯೊಂದನ್ನು ಬಿಟ್ಟರೆ ಉಳಿದೆಲ್ಲ ಕಡೆ ಜನಜಂಗುಳಿ ಸಾಮಾನ್ಯ. ಯಾರು ಯಾರನ್ನೂ ಗಮನಿಸದೆ ಹೋಗುವ ಜನ. ಬೀದಿಗಳಲ್ಲಾಗಲೀ, ಪಾರ್ಕ್‌ಗಳಲ್ಲಾಗಲೀ, ಬಸ್ಸುಗಳಲ್ಲಾಗಲೀ, ಟ್ಯೂಬ್‌ಗಳಲ್ಲಾಗಲೀ ಜನರ ಯಾಂತ್ರಿಕ ಗಮನ–ಆಗಮನ–ನಿರ್ಗಮನ.

ಜನ ಬೈಗುಗಳನ್ನು, ವಾರಾಂತ್ಯಗಳನ್ನು ಪಾರ್ಕ್‌ಗಳಲ್ಲೇ ಹೆಚ್ಚಾಗಿ ಕಳೆಯುತ್ತಾರೆ ಎನ್ನಿಸುತ್ತದೆ. ಇಲ್ಲಿನ ರಿಜೆಂಟ್ ಪಾರ್ಕ್, ಕೆನ್ಸಿಂಗ್‌ಟನ್ ಗಾರ್ಡನ್ಸ್, ಹೈಡ್ ಪಾರ್ಕ್, ಗ್ರೀನ್‌ಪಾರ್ಕ್, ಸೇಂಟ್ ಜೇಮ್ಸ್ ಪಾರ್ಕ್ ಮುಂತಾದ ಕಡೆ ಜನ ಜಾತ್ರೆಯಾಗುತ್ತಾರೆ.

ಹಸಿರು ಹಾಸಿನ ಮೇಲೆ ತಮ್ಮನ್ನೇ ಹಾಸಿಕೊಳ್ಳುತ್ತಾರೆ. ಸೂಟು–ಬೂಟು–ಟೈಗಳನ್ನು ಕಟ್ಟಿಕೊಂಡು ಫಾರ್ಮಲ್ ಆಗಿದ್ದವರೂ ಅದೆಲ್ಲ ಕಳಚಿ ಚಡ್ಡಿ–ಬನಿಯನ್ನುಗಳಲ್ಲೇ ಓಡಾಡುತ್ತಾರೆ. ತೀವ್ರ ಚಳಿ ಮತ್ತು ತೀವ್ರ ಸೆಕೆ ಎನ್ನುವುದೇ ಇಲ್ಲಿನ ಹವಾಮಾನ ವೈಪರೀತ್ಯ. ಹಾಗಾಗಿ ಮುಚ್ಚಮ್ಮನವರೂ, ಬಿಚ್ಚಮ್ಮನವರೂ ಇಲ್ಲಿ ಎದುರಾಗುತ್ತಾರೆ.

‘ರಸ್ಸೆಲ್ ಸ್ಕ್ವೇರ್‌’ನ ಪಾತಾಳದ ಟ್ಯೂಬ್‌ನಿಲ್ದಾಣದಿಂದ ಭೂತಳದಲ್ಲಿ ಆವಿರ್ಭಾವಗೊಂಡು ತಮಾಷೆಗೆಂದು ತರುಣನೊಬ್ಬನಲ್ಲಿ ‘ಪ್ಲೀಸ್ ಹೆಲ್ಪ್ ಮಿ ಟು ಫೈಂಡ್ ಕನ್ನಾಟ್ ಇಂಟರ್‌ನ್ಯಾಷನಲ್’ ಎಂದು ಕೇಳಿದ್ದೆ. ತಕ್ಷಣ ಆತ ಮೊಬೈಲ್ ತೆಗೆದುಕೊಂಡು ಗೂಗಲ್ ಮ್ಯಾಪ್ ಸರ್ಚ್ ಮಾಡಿ ದಿಕ್ಕು ಹೇಳತೊಡಗಿದ್ದ. ‘ಥ್ಯಾಂಕ್ಸ್’ ಹೇಳಿ ಮುಂದುವರಿದೆ.

ಲಂಡನ್ ವಾಸಿಗಳಾದರೆ ಇಲ್ಲಿ ದಿಕ್ಕು ಹೇಳುತ್ತಾರೆ. ನನ್ನಂತೆಯೇ ಪರದೇಸಿಗಳಾದರೆ ‘ಸ್ಸಾರಿ, ಡೋಂಟ್ ನೋ’ ಎಂದು ಮುಂದುವರೆಯುತ್ತಾರೆ. ಇಂಗ್ಲಿಷ್ ಬಾರದ ಫ್ರೆಂಚರು, ಸ್ಪಾನಿಶ್ಶರು ಇಲ್ಲಿ ಸಾಕಷ್ಟು ಮಂದಿ ಇದ್ದಾರೆ. ಲಂಡನ್ ಕಾಸ್ಮೋಪಾಲಿಟನ್ ನಗರ. ಇಲ್ಲಿನ ಪ್ರತಿಯೊಂದು ಬಸ್ಸು ನಿಲ್ದಾಣವೂ ಅಚ್ಚುಕಟ್ಟಾಗಿದೆ. ಅಲ್ಲೆಲ್ಲ ಆಯಾಯ ಬೀದಿಯ ನಕಾಶೆಗಳೂ, ಮುಖ್ಯರಸ್ತೆ, ಅಡ್ಡರಸ್ತೆಗಳ ಮಾಹಿತಿಗಳು ಇವೆ. ಜನ ಟ್ಯೂಬ್‌ಗಳನ್ನೇ ಹೆಚ್ಚಾಗಿ ಬಳಸುವುದರಿಂದ ರಸ್ತೆಯ ಮೇಲಿನ ದಟ್ಟಣೆ ಕಡಿಮೆ.

ಆಗ ನೆನಪಿಗೆ ಬಂದದ್ದು ಹೊಸಂಗಡಿಯೆಂಬೋ ಗ್ರಾಮೀಣ ಪ್ರದೇಶದಿಂದ ಬೆಂಗಳೂರೆಂಬೋ ಪಟ್ಟಣಕ್ಕೆ ಬಂದಾಗ ಅನುಭವಿಸಿದ ಪಾಡು-ಫಜೀತಿ.  ಪ್ರಜಾವಾಣಿ ಪತ್ರಿಕೆ ಸೇರಿದ ಹೊಸದರಲ್ಲಿ ಅಂದರೆ ಹೊಸ ಶತಮಾನದ ಹೊಸ ದಶಕದಲ್ಲಿ, ಬೆಂಗಳೂರಿನ ಬಸ್ಸು ನಿಲ್ದಾಣಗಳಲ್ಲೇಕೆ ಸ್ಥಳನಾಮಗಳಿಲ್ಲ ಎಂಬ ಪ್ರಶ್ನೆ ಮುಂದಿಟ್ಟು ವರದಿ ಮಾಡಹೊರಟಿದ್ದು ನೆನಪಾಯಿತು.

ಆ ವರದಿಯೇನೊ ‘ಪ್ರಜಾವಾಣಿ’ಯ ‘ಕರ್ನಾಟಕ ದರ್ಶನ’ ಪುರವಣಿಯಲ್ಲಿ ಪ್ರಕಟವಾಯಿತು. ಆದರೆ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಎಷ್ಟೋ ಕಡೆ ಬಸ್‌ ಷೆಲ್ಟರ್‌ಗಳೇ ಇಲ್ಲ ಎಂದಮೇಲೆ, ನಾಮಫಲಕಗಳ ಪ್ರಶ್ನೆಯಾದರೂ ಎಲ್ಲಿ?

ಬೆಂಗಳೂರು ಈಗ ಕುಂಟುತ್ತಾ–ಎಡವುತ್ತಾ ಮೆಟ್ರೋ ಏರುತ್ತಿದ್ದರೆ, ಲಂಡನ್ ಒಂದೂವರೆ ಶತಮಾನದ ಹಿಂದೆಯೇ ಟ್ಯೂಬ್‌ನೊಳಗೆ ಇಳಿದಾಗಿತ್ತು. ಹದ್ದುಗಳಂತೆ ಆಕಾಶದಲ್ಲೇ ಹಾರುವ ಮೆಟ್ರೋ ರೈಲಿಗೂ, ಹಾವುಗಳಂತೆ ನೆಲದ ಒಳಗೇ ಸಾಗುವ ಟ್ಯೂಬ್‌ಗೂ ಎಷ್ಟೊಂದು ವ್ಯತ್ಯಾಸ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT