ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂತಕದ ಮನೆ’ಗೆ ಹಾವು, ಮಹಿಳೆಯರು ಬೀದಿಗೆ

ಬವಣೆ ಸಾಕಾಗಿದೆ; ಬದಲಾವಣೆ ಬೇಕಾಗಿದೆ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಡಿ.ಹೊಸಹಳ್ಳಿ ಗೊಲ್ಲರ­ಹಟ್ಟಿಯಲ್ಲಿ ಮಹಿಳೆಯರು ಮುಟ್ಟಿನ ದಿನ ಕಳೆಯುವ ‘ಸೂತಕದ ಮನೆ’ಗೆ ಹಾವು ನುಗ್ಗಿದ್ದರಿಂದ ಗುರು­ವಾರ ಮೂವರು ಮಹಿಳೆಯರು ಅಕ್ಷರಶಃ ಬೀದಿ ಪಾಲಾಗಿದ್ದರು. ‘ಹಾವು ಬಂದಿದೆ, ದಯವಿಟ್ಟು ಯಾರಾದರೂ ಬಂದು ಅದನ್ನು ಓಡಿಸಿ’ ಎಂದು ಮಹಿಳೆಯರು ಗೋಗ­ರೆ­ದರೂ ಗ್ರಾಮದ ಪುರುಷರು, ಮೈಲಿ­ಗೆ­ಯಾ­ಗುವ ಹೆದರಿಕೆಯಿಂದ ಹತ್ತಿರ ಸುಳಿಯಲಿಲ್ಲ.

ಗೊಲ್ಲರಹಟ್ಟಿಯಲ್ಲಿ ೨೩೦ ಮನೆ­ಗಳಿದ್ದು, ೨೫೦ಕ್ಕೂ ಹೆಚ್ಚು ಮಹಿಳೆಯ­ರಿದ್ದಾರೆ. ಸಂಪ್ರದಾಯದಂತೆ ಮುಟ್ಟಿನ ದಿನಗಳಲ್ಲಿ ಹಟ್ಟಿಯಿಂದ ದೂರ ಇರುವ ಸೂತಕದ ಮನೆಯಲ್ಲಿ ೫ ದಿನ ಇರಬೇಕು. ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸೂತಕದ ಮನೆಗೆ ಯಾವುದೇ ಮೂಲ ಸೌಕರ್ಯ­ವಿಲ್ಲ. ಕಟ್ಟಡವು ಶಿಥಿಲಗೊಂಡಿದೆ. ಹೊಲಕ್ಕೆ ಹೊಂದಿಕೊಂಡಂತಿ­ರುವುದ­ರಿಂದ ಹಾವು ಮತ್ತಿತರ  ಹುಳು­ಹುಪ್ಪಟೆ­ಗಳ ಕಾಟ ಸಾಮಾನ್ಯ ಎನಿಸಿದೆ.

ತಮ್ಮ ಸ್ಥಿತಿ ವಿವರಿಸಿದ ಊರ ಸೊಸೆ­ಯಾಗಿ ಗ್ರಾಮಕ್ಕೆ ಬಂದಿರುವ ಎಂಎಸ್‌ಡಬ್ಲ್ಯು ಪದವೀಧರೆ ಪವಿತ್ರಾ, ‘ಸಂಪ್ರದಾಯದ ಹೆಸರಿನಲ್ಲಿ ನಮ್ಮ ಮೇಲೆ ಶೋಷಣೆ ನಡೆಯುತ್ತಿದೆ. ಬವಣೆ ಸಾಕಾಗಿದೆ; ಬದಲಾವಣೆ ಬೇಕಾ­ಗಿದೆ’ ಎಂದರು.

‘ಮುಟ್ಟಾದ ಮಹಿಳೆಯರಿಗೆ ಗಾಳಿ– ಬೆಳಕಿರುವ ಕೊಠಡಿಯಲ್ಲಿ ವಾಸಿಸುವ ಹಕ್ಕೂ ಇಲ್ಲವೇ. ‘ಆ ದಿನ’ಗಳಲ್ಲಿ ಮನೆಯವರ ಜೊತೆಗೆ ಇರುವ ಅವ­ಕಾಶ­­ವನ್ನು ಮಹಿಳೆಯರು ಬಯ­ಸುತ್ತಿ­ದ್ದಾರೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು’ ಎಂದು ಅವರು ಪ್ರಶ್ನಿಸಿದರು.

ಹಾವಿಗೆ ಹೆದರಿ ಬೀದಿಯಲ್ಲಿ ಕುಳಿ­ತಿದ್ದ ಮಹಿಳೆಯರೊಂದಿಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಮಾತ­­ನಾಡಿ, ‘ತಿಂಗಳಲ್ಲಿ ೫ ದಿನ ಕಾಲೇಜಿಗೂ ಹೋಗುವಂತಿಲ್ಲ. ಕತ್ತಲ ಕೋಣೆಯಲ್ಲಿ ಕೊಳೆಯಬೇಕು. ಇದು ನಮ್ಮ ದೌರ್ಭಾಗ್ಯ’ ಎಂದರು.

ಅದೇ ಗುಂಪಿನಲ್ಲಿದ್ದ ಚಿಕ್ಕಮ್ಮ ಮಾತ್ರ, ‘ನಾವು ಕಾಡು ಗೊಲ್ಲರು, ಕಾಡಿ­ನಲ್ಲಿ ಇದ್ದು ಜೀವಿಸಬೇಕಾದ­ವರು. ಇಂಥ ಸಂಪ್ರದಾಯಗಳಿಂದ ಮಾನಸಿಕ ಧೈರ್ಯ ಉಂಟಾಗುತ್ತದೆ. ಬದಲಾವಣೆ ಬೇಕಾ­ಗಿಲ್ಲ’ ಎಂದು ಖಂಡತುಂಡವಾಗಿ ನುಡಿದರು.

ಹೊತ್ತು ಇಳಿಯುತ್ತಾ ಬಂದರೂ ಹಾವು ಮಾತ್ರ ಸೂತಕದ ಮನೆಯಿಂದ ಹೊರಬರಲಿಲ್ಲ. ಆತಂಕಕ್ಕೊಳಗಾದ ಮಹಿಳೆಯರು ಸರ್ಕಾರಿ ಪ್ರೌಢ­ಶಾಲೆಯ ಕಟ್ಟಡದಲ್ಲಿ ರಾತ್ರಿ ಕಳೆ­ಯಲು ನಿರ್ಧರಿಸಿ, ಕತ್ತಲಾಗುವುದನ್ನು ಕಾಯುತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT