ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇನಾ’ ಬಲ ಕಳೆದುಕೊಂಡ ಎಂಇಎಸ್‌!

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿರುವ ಬಿಜೆಪಿ
Last Updated 20 ಅಕ್ಟೋಬರ್ 2014, 6:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 288 ಸ್ಥಾನಗಳ ಪೈಕಿ 12೨ರಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸರ್ಕಾರ ರಚಿಸಲಿ­ರುವುದರಿಂದ ಬೆಳಗಾವಿಯ ಮಹಾರಾಷ್ಟ್ರ ಏಕೀರಣ ಸಮಿತಿಯ (ಎಂಇಎಸ್‌) ಬಲ ಕುಗ್ಗಿದಂತಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರಕ್ಕೆ ಬರಲಿದೆ. ಅದು ಬೆಳಗಾವಿಯ ಮರಾಠಿಗರ ಪರ ಧ್ವನಿ ಎತ್ತಲಿದೆ ಎಂದು ಎಂಇಎಸ್‌ ನಾಯಕರು ‘ಹಗಲು ಕನಸು’ ಕಾಣುತ್ತಿದ್ದರು. ಆದರೆ, ನಿರೀಕ್ಷಿಸಿದ್ದ ‘ಸೇನಾ’ ಬಲ ಎಂಇಎಸ್‌ಗೆ ಸಿಗಲಿಲ್ಲ. ಚುನಾವಣಾ ಫಲಿತಾಂಶವು ಎಂಇಎಸ್‌ ನಾಯ­ಕರ ಪಾಲಿಗೆ ‘ಬಿಸಿ ತುಪ್ಪ’ವಾಗಿ ಪರಿಣಮಿಸಿತು.

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 1980ರಿಂದಲೂ ಶಿವಸೇನೆ ಸದಾ ಕ್ಯಾತೆ ತೆಗೆಯುತ್ತಿತ್ತು. ಬಾಳಾಸಾಹೇಬ ಠಾಕರೆ ತಮ್ಮ ಜೀವಿತದ ಕೊನೆಯ ದಿನದವರೆಗೂ ಎಂಇಎಸ್‌ ಬೆಂಬಲಕ್ಕೆ ನಿಂತಿದ್ದರು. ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಅವರು 1986ರ ಜೂನ್‌ 1ರಂದು ಬೆಳಗಾವಿಗೆ ಬಂದು ‘ಸೀಮಾ ಲಡಾಯಿ’ ನಡೆಸುವ ಮೂಲಕ ರಾಜಕೀಯವಾಗಿ ಬೆಳೆದು ನಿಂತಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೆ ಅಧಿಕಾರ ಹಂಚಿಕೊಂಡಿದ್ದ ಎನ್‌ಸಿಪಿ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಚುನಾವಣಾ ಪೂರ್ವದಲ್ಲಿ ಸೀಟು ಹಂಚಿಕೆ ವಿಷಯವಾಗಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಹಾಗೂ ಶಿವಸೇನೆ ನಡುವಿನ 25 ವರ್ಷಗಳ ಬಾಂಧವ್ಯದಲ್ಲಿ ಬಿರುಕು ಮೂಡಿದೆ. ರಾಜಕೀಯ ಲೆಕ್ಕಾಚಾರದಲ್ಲಿ ಶಿವಸೇನೆ ಪ್ರತಿಪಕ್ಷವಾಗಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ!

‘ಕರ್ನಾಟಕ ಸರ್ಕಾರ ಉತ್ತಮ ಸೌಲಭ್ಯ ನೀಡುತ್ತಿರುವುರಿಂದ ಬೆಳಗಾವಿ ಮರಾಠಿಗರು ಅಲ್ಲಿಯೇ ನೆಲೆಸುವುದು ಒಳ್ಳೆಯದು.
ಮಹಾರಾಷ್ಟ್ರಕ್ಕೆ ಬಂದರೆ ನಿಮಗೆ ಆ ರೀತಿಯ ಸೌಲಭ್ಯ ಸಿಗುವುದಿಲ್ಲ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕರೆ ಅವರು ಎಂಇಎಸ್‌ ನಾಯಕರಿಗೆ ಇತ್ತೀಚೆಗಷ್ಟೇ ಕಿವಿಮಾತು ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸಹಜವಾಗಿಯೇ ‘ಬೆಳಗಾವಿ’ ವಿಷಯದಲ್ಲಿ ಎಂಇಎಸ್‌ ನಾಯಕರ ಒತ್ತಡಕ್ಕೆ ಮಣಿಯದೇ ‘ಸಮಯೋಚಿತ’ ನಿರ್ಧಾರ ಕೈಗೊಳ್ಳಲಿದೆ. ಮಹಾರಾಷ್ಟ್ರದ ರಾಜಕೀಯ ಬದಲಾವಣೆಯಿಂದಾಗಿ ಎಂಇಎಸ್‌ ನಾಯಕರು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಕೀಯ ಆಶ್ರಯ ಇಲ್ಲ: ‘ಬೆಳಗಾವಿಯಲ್ಲಿ ಗಡಿ ಕುರಿತು ಹೋರಾಟ ನಡೆಸುತ್ತಿರುವ ಎಂಇಎಸ್‌ ನಾಯಕರಿಗೆ ಮೊದಲಿನಿಂದಲೂ ಮಹಾರಾಷ್ಟ್ರದಲ್ಲಿ ‘ರಾಜಕೀಯ ಆಶ್ರಯ’ ಸಿಗುತ್ತಿತ್ತು. ಆದರೆ, ಇದೀಗ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಅಲ್ಲಿ ಸರ್ಕಾರ ರಚಿಸಲಿದೆ. ಬಿಜೆಪಿಯು ಸಹಜವಾಗಿಯ ಮಹಾರಾಷ್ಟ್ರ– ಕರ್ನಾಟಕದ ಗಡಿ ವಿವಾದ ವಿಷಯಕ್ಕೆ ಮಹತ್ವ ನೀಡುವುದಿಲ್ಲ. ಹೀಗಾಗಿ ಎಂಇಎಸ್‌ಗೆ ರಾಜಕೀಯ ಆಶ್ರಯವೇ ಇಲ್ಲದಂತಾಗಲಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿವಸೇನೆ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷವು (ಎನ್‌ಸಿಪಿ) ಇಲ್ಲಿನ ಎಂಇಎಸ್‌ ನಾಯಕರ ಬೆಂಬಲಕ್ಕೆ ಮೊದಲಿನಿಂದಲೂ ನಿಲ್ಲುತ್ತಿತ್ತು. ಮಹಾರಾಷ್ಟ್ರದಲ್ಲಿ ಹಿಂದಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಎನ್‌ಸಿಪಿ ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ ಇಲ್ಲಿನ ನಾಯಕರು ಮೇಲಿಂದ ಮೇಲೆ ಮಹಾರಾಷ್ಟ್ರ ಸರ್ಕಾರದ ಸಚಿವರ ಬಳಿಗೆ ನಿಯೋಗ ಒಯ್ಯುತ್ತಿದ್ದರು. ಅಲ್ಲಿನ ನಾಯಕರೂ ಇವರಿಗೆ ಭರವಸೆ ನೀಡಿ ಕಳುಹಿಸುತ್ತಿದ್ದರು. ಆದರೆ, ಈ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಗಡಿ ವಿಷಯದಲ್ಲಿ ಎಂಇಎಸ್‌ ನಾಯಕರಿಗೆ ಮೊದಲಿನಿಂದಲೂ ಅಲ್ಲಿನ ಬಿಜೆಪಿ ನಾಯಕರು ಬೆಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಈಗ ಎಂಇಎಸ್‌ಗೆ ಮಹಾರಾಷ್ಟ್ರ ಸರ್ಕಾರದಿಂದ ಮೊದಲಿನಂತೆ ಬೆಂ‘ಬಲ’ ಸಿಗುವುದಿಲ್ಲ’ ಎಂದು ಚಂದರಗಿ ಅಭಿಪ್ರಾಯಪಟ್ಟರು.

ಶಿವಸೇನೆ ಧ್ವನಿಯಾಗಲಿದೆ: ‘ಬೆಳಗಾವಿಯ ಮರಾ­ಠಿಗರ ಪರವಾದ ಹೋರಾ­­ಟಕ್ಕೆ ಬಿಜೆಪಿಯ ಕೆಲವು ನಾಯಕರೂ ಈ ಹಿಂದೆ ಬೆಂಬಲ ಸೂಚಿಸಿದ್ದರು. ಬಾಳಾಸಾಹೇಬ ಠಾಕರೆ ಕಾಲದಿಂದಲೂ ನಮ್ಮ ಹೋರಾಟಕ್ಕೆ ಶಿವಸೇನೆ ಬೆಂಬಲ ನೀಡುತ್ತ ಬಂದಿದೆ. ಬಿಜೆಪಿ ಇತರ ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸಿದರೂ ಶಿವಸೇನೆ ಪ್ರತಿಪಕ್ಷವಾಗಲಿದೆ. ಶಿವಸೇನೆಯು ಬೆಳಗಾವಿ ಗಡಿ ವಿಷಯ ಕುರಿತು ಆದ್ಯತೆ ನೀಡಿ ನಮ್ಮ ಪರ ಧ್ವನಿ ಎತ್ತಲಿದೆ’ ಎಂದು ಎಂಇಎಸ್‌ ಮುಖಂಡ ಹಾಗೂ ಮಾಜಿ ಶಾಸಕ ಮನೋಹರ ಕಿಣೇಕರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸುಪ್ರೀಂ ಕೋರ್ಟ್‌ನಲ್ಲಿರುವ ಗಡಿ ವಿವಾದ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನೂ ಕಕ್ಷಿದಾರರನ್ನಾಗಿ ಮಾಡಲಾಗಿದೆ. ಇನ್ನು ಮುಂದೆ ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವೇ ಇರಲಿದೆ. ಹೀಗಿದ್ದರೂ ಗಡಿ ವಿಷಯದಲ್ಲಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ತನ್ನ ನಿಲುವನ್ನು ಬದಲಾಯಿಸುವುದಿಲ್ಲ ಎಂಬ ವಿಶ್ವಾಸ ನಮಗೆ ಇದೆ. ಮಹಾರಾಷ್ಟ್ರದ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ’ ಎಂದು ಮನೋಹರ ಕಿಣೇಕರ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT