ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈಲೆಂಟ್’ ಟರ್ನ್‌ನಲ್ಲಿ ಬೆಂಕಿ–ಬಿರುಗಾಳಿ

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಭೂಗತ ಜಗತ್ತಿನ ಮತ್ತೊಂದು ಕಥೆಯನ್ನು ಸಿದ್ಧಪಡಿಸಿ, ಸೈಲೆಂಟಾಗಿ ಚಿತ್ರರೂಪಕ್ಕೆ ತರುವ ಪ್ರಯತ್ನವನ್ನು ಅಗ್ನಿ ಶ್ರೀಧರ್ ನಡೆಸಿದ್ದಾರೆ. ಅಂದಹಾಗೆ, ಇದು ಕಾಲ್ಪನಿಕ ಕಥೆಯಲ್ಲ; ನೈಜ ಕಥೆ. ಸದ್ದಿಲ್ಲದೇ ಒಂದು ಹಂತದ ಚಿತ್ರೀಕರಣವನ್ನು ಪೂರೈಸಿ, ಟ್ರೇಲರ್‌ನೊಂದಿಗೆ ಚಿತ್ರತಂಡ ಕಳೆದ ವಾರ ಪತ್ರಕರ್ತರೆದುರು ಹಾಜರಾಯಿತು. ಚಿತ್ರದ ಹೆಸರು ‘ಸೈಲೆಂಟ್ ಸುನೀಲ’.

‘ಎದೆಗಾರಿಕೆ’ ಬಳಿಕ ಶ್ರೀಧರ್ ಕೈಗೆತ್ತಿಕೊಂಡಿರುವ ಸಿನಿಮಾ ಇದು. ಪ್ರಮುಖವಾಗಿ ಇದರಲ್ಲಿ ಕಾಣುವುದು ಬಿಂಬ ಹಾಗೂ ಬಿಂಬಿತನ ನಡುವಿನ ವ್ಯತ್ಯಾಸ. ಈ ಚಿತ್ರ ಆರಂಭವಾದ ಬಗೆಯೂ ಕುತೂಹಲಕರ.

ಏಳೆಂಟು ತಿಂಗಳ ಹಿಂದೆ ನಿರ್ಮಾಪಕ ಶ್ರೀಕಾಂತ ಅವರು ಸುನೀಲ ಹಾಗೂ ರೋಹಿತ್ ಎಂಬಿಬ್ಬರನ್ನು ಕರೆದುಕೊಂಡು ಶ್ರೀಧರ್ ಬಳಿ ಬಂದಿದ್ದರು. ಭಯದಲ್ಲೇ ದಿನ ದೂಡುತ್ತಿದ್ದ ಅವರ ಬದುಕು ಶ್ರೀಧರ್ ಗಮನ ಸೆಳೆಯಿತು. ಯಾವುದೋ ಅಪರಾಧ ಪ್ರಕರಣದಲ್ಲಿ ಅವರ ಹೆಸರನ್ನು ಪೊಲೀಸರು ಸೇರಿಸಿದ್ದರಂತೆ. ಪರಾರಿಯಾಗುವ ಯತ್ನದಲ್ಲಿರುವ ಸುನೀಲನನ್ನು ಪೊಲೀಸರು ಎನ್‌ಕೌಂಟರ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಅವಧಿಯನ್ನು ಆತಂಕದಿಂದ ಕಳೆಯುವ ಸುನೀಲನ ಬದುಕು ದೃಶ್ಯರೂಪಕ್ಕೆ ಬರಲಿದೆ.

‘ತನ್ನದಲ್ಲದ ಜಗತ್ತಿಗೆ ಹೋದಾಗ ಎಂಥ ಧೈರ್ಯವಂತನೂ ಮೌನವಾಗಿ ಬಿಡುತ್ತಾನೆ. ಅಂಥದೇ ಮೌನ ಇದರಲ್ಲಿ ಕಾಣಿಸುತ್ತದೆ’ ಎನ್ನುವ ಶ್ರೀಧರ್, ಭೂಗತ ಲೋಕದಲ್ಲಿ ತಾವು ಅಂಥ ಸಂದರ್ಭವನ್ನು ಎದುರಿಸಿದ್ದರಿಂದಲೇ ಸುನೀಲನ ಮೌನ ತಮಗೆ ಅರ್ಥವಾಗುತ್ತದೆ ಎನ್ನುತ್ತಾರೆ. ಅಷ್ಟಕ್ಕೂ ಸುನೀಲನಿಗೆ ಸೈಲೆಂಟ್ ಸುನೀಲ ಎಂಬ ಹೆಸರು ಹೇಗೆ ಅಂಟಿಕೊಂಡಿತು? ಶ್ರೀಧರ್ ಪ್ರಕಾರ, ‘ಇನ್ನೊಬ್ಬರು ಹೇಳುವುದನ್ನು ತಾಸುಗಟ್ಟಲೇ ಕೇಳಿಸಿಕೊಂಡು ಒಂದೂ ಮಾತಾಡದೇ ಸುಮ್ಮನೇ ಕುಳಿತುಕೊಳ್ಳುವ ಸುನೀಲನ ಸ್ವಭಾವ ಅದಕ್ಕೆ ಕಾರಣವಾಗಿರಬಹುದು’.

ಚಿತ್ರಕಥೆ ಹೆಣೆದ ಬಳಿಕ ಅದನ್ನು ನಿರ್ದೇಶನ ಮಾಡಲು ಶ್ರೀಧರ್ ಅವರು ಸುಮನಾ ಕಿತ್ತೂರು ಅವರಿಗೆ ಸೂಚಿಸಿದರು. ಆದರೆ ಸುಮನಾ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ಸಿದ್ಧತೆಯಲ್ಲಿ ಇದ್ದುದರಿಂದ ಸಾಧ್ಯವಾಗಲಿಲ್ಲ. ಆಗ ಸೂರಿ ಅವರಿಗೆ ನಿರ್ದೇಶನದ ಹೊಣೆಯನ್ನು ವಹಿಸಲಾಯಿತು.

‘ಇದು ನನಗೆ ಚಾಲೆಂಜ್ ಅನಿಸುವ ಚಿತ್ರಕಥೆ’ ಎನ್ನುತ್ತಾರೆ ಸೂರಿ. ಶ್ರೀಧರ್ ಅವರ ‘ತೊಟ್ಟಿಕ್ಕಲೇ ಇದೆ ನೆತ್ತರು’ ಕೃತಿಯನ್ನು ಸಿನಿಮಾಕ್ಕೆ ಅಳವಡಿಸುವ ಆಸೆ ಅವರದಾಗಿತ್ತು. ಆದರೆ ಅದನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಕಪ್ಪು ಹಾಗೂ ಬಿಳುಪು ಮಧ್ಯೆ ಕಂದು ಬಣ್ಣದ ಛಾಯೆಯೊಂದಿರುತ್ತದೆ. ಅದನ್ನು ಇಳಿಸಂಜೆಗೆ ಹೋಲಿಸಬಹುದು. ಅಂಥ ಶೇಡ್ ಈ ಕಥೆಯಲ್ಲಿದೆ ಎನ್ನುವ ಸೂರಿ, ‘ನೈಜ ಕಥೆಯನ್ನು ಬೇರೊಂದು ಬಗೆಯಲ್ಲಿ ಪ್ರಸ್ತುತಪಡಿಸುವ ಆಸೆ ನನ್ನಲ್ಲಿತ್ತು. ಅದಕ್ಕೆ ಸೈಲೆಂಟ್ ಸುನೀಲ ಅವಕಾಶ ಕೊಟ್ಟಿದೆ’ ಎಂದು ಖುಷಿ ಹಂಚಿಕೊಂಡರು.

ನಾಯಕ ನಾನೇ ನನ್ನ ಕಥೆಗೆ...
ಚಿತ್ರದ ಸಿದ್ಧತೆಗಳು ಅಂತಿಮಗೊಂಡಾಗ, ನಾಯಕ ಪಾತ್ರಕ್ಕೆ ಯಾರು ಎಂಬ ಪ್ರಶ್ನೆ ಮೂಡಿತು. ಶ್ರೀಧರ್ ಮನಸ್ಸಿನಲ್ಲಿ ಪುನೀತ್ ಅಥವಾ ಸುದೀಪ್ ಹೆಸರುಗಳು ನೆನಪಿಗೆ ಬಂದವು. ಇದೇ ಸಮಯದಲ್ಲಿ ಸುನೀಲನನ್ನು ಸೂರಿ ಭೇಟಿ ಮಾಡಿದಾಗ, ಆ ಪಾತ್ರಕ್ಕೆ ಆತನೇ ಸೂಕ್ತ ಎಂಬುದು ಮನದಟ್ಟಾಯಿತಂತೆ. ಪದೇ ಪದೇ ಸುನೀಲನ ಜತೆ ಮಾತಾಡಿದ ಸೂರಿ, ಕೊನೆಗೂ ಆತನ ಮನವೊಲಿಸಿದರಂತೆ!

‘ನನಗೆ ಇದೆಲ್ಲ ಹೊಸ ಅನುಭವ’ ಎಂದ ಸುನೀಲ, ತಮ್ಮ ಮನಸ್ಸು ಸದ್ಯಕ್ಕೆ ಪೂರ್ಣ ಖಾಲಿ ಖಾಲಿ ಎಂದು ನಿಗೂಢವಾಗಿ ಮಾತಾಡಿದರು. ‘ನನಗೆ ಆ್ಯಕ್ಟಿಂಗ್ ಬರೋದಿಲ್ಲ. ಡೈರೆಕ್ಟ್ರು ನನ್ನಿಂದ ಆ್ಯಕ್ಟಿಂಗ್ ಮಾಡಿಸ್ತಾ ಇದ್ದಾರೆ’ ಎಂದರು. ‘ಸೈಲೆಂಟ್ ಎಂಬ ಪದ ಸೇರಿಕೊಂಡಿದ್ದು ಹೇಗೆ’ ಎಂಬ ಪ್ರಶ್ನೆಗೆ, ‘ಪತ್ರಿಕೆಯವರೇ ಅದನ್ನು ಕೊಟ್ಟಿದ್ದು... ಅವರನ್ನೇ ಕೇಳಿ’ ಎಂದರು!

‘ಸೈಲೆಂಟ್ ಸುನೀಲ’ ಚಿತ್ರದ ಛಾಯಾಗ್ರಹಣ ಸತ್ಯ ಹೆಗಡೆ ಅವರದು. ಸಂಗೀತ ನಿರ್ದೇಶಕ ಹಾಗೂ ನಾಯಕಿ ಇನ್ನೂ ಯಾರೆಂಬುದು ಖಚಿತವಾಗಿಲ್ಲ. ಕಾಲಘಟ್ಟ ಸೂಚಿಸುವ ಕಥೆಯಾಗಿರುವುದರಿಂದ, ಘಟನೆ ನಡೆದ ಸ್ಥಳಗಳಲ್ಲೇ ಚಿತ್ರೀಕರಣ ನಡೆಸುವ ಯೋಚನೆಯಿದೆ. ಕೆಲವು ರೌಡಿಗಳೂ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆಯಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT