ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್ ಸಿಟಿ’ ಎಂಬ ಮಾಯಾಮೃಗ

ನಗರಗಳ ನಾನಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ?
Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ಇತ್ತೀಚೆಗೆ ಹೊರಬಿದ್ದ ‘ಸ್ಮಾರ್ಟ್ ಸಿಟಿ’ಗಳ ಪಟ್ಟಿಯಲ್ಲಿ
ಕರಾವಳಿ ಪ್ರದೇಶದ ಮಂಗಳೂರು ನಗರದ ಹೆಸರು ಸೇರಿಲ್ಲ. ಸ್ಮಾರ್ಟ್ ಸಿಟಿಯಾಗಲಿರುವುದರ ಬಗ್ಗೆ ಹೋದ ವರ್ಷ ಬಹಳಷ್ಟು  ಚರ್ಚೆಗಳು ನಡೆದಿದ್ದವು, ಮಾತ್ರವಲ್ಲ ಸಾರ್ವಜನಿಕರಿಂದ ಸಲಹೆಗಳನ್ನು ಕೋರಲಾಗಿತ್ತು. ಜನಪ್ರತಿನಿಧಿಗಳು ತಮ್ಮಿಂದಾಗಿಯೇ ಈ ನಗರ ಇನ್ನೇನು ಸ್ಮಾರ್ಟ್ ಸಿಟಿ ಆಗಿಯೇ ಸಿದ್ಧ, ನಗರದ ಎಲ್ಲಾ ಸಮಸ್ಯೆಗಳಿಗೆ ಕಾಲಮಿತಿಯೊಳಗೆ  ಪರಿಹಾರ ಸಿಗಲಿದೆ ಎಂದೂ ಹೇಳಿಕೆಗಳನ್ನು ನೀಡಿದ್ದರು.

ಕೆಲವು ಮುಖ್ಯ ಪ್ರಶ್ನೆಗಳು ಇಲ್ಲಿ ಏಳುತ್ತವೆ. ಯಾವುದೇ ನಗರದಲ್ಲಿ ಜನಜೀವನ ಸುಗಮವಾಗಲು ಬೇಕಾದ ಸೌಲಭ್ಯಗಳನ್ನು ಒದಗಿಸಲು ಆ ನಗರದ ಅಭಿವೃದ್ಧಿಗೆ ಹೊಸತೊಂದು ಹೆಸರು ಕೊಟ್ಟ ಮಾತ್ರಕ್ಕೆ ಅದು ಸಾಧ್ಯವಾಗುತ್ತದೆಯೇ, ಇದ್ದ ಸಂಪನ್ಮೂಲದಿಂದಲೇ ಅತೀ ಅಗತ್ಯದ ಸೌಕರ್ಯಗಳನ್ನು ದೊರಕಿಸಿಕೊಡಲು ಸಾಧ್ಯವಿಲ್ಲವೇ, ಈ ಜವಾಬ್ದಾರಿ ಯಾರದು?

ಒಂದು ನಗರದಲ್ಲಿ ಉತ್ತಮ ರಸ್ತೆಗಳಷ್ಟೇ ಮುಖ್ಯವಾದವು ಪಾದಚಾರಿಗಳಿಗೆ ನಿರಾತಂಕವಾಗಿ ಸಂಚರಿಸಲು ಅವಕಾಶ; ಪ್ರಯಾಣಿಕರಿಗೆ ಹಿತಾನುಭವ ನೀಡಬಲ್ಲ ಸಾರ್ವಜನಿಕ ಸಂಚಾರ ವ್ಯವಸ್ಥೆ, ಕುಡಿಯಲು ಅಗತ್ಯವಾದ ಶುದ್ಧ ನೀರು, ಸಾರ್ವಜನಿಕರು ಓಡಾಡುವ ವಾಣಿಜ್ಯ ಕಟ್ಟಡಗಳಲ್ಲಿ ಬೆಂಕಿ ಹಾಗೂ ಇತರ ಆಕಸ್ಮಿಕಗಳಾಗದಂತೆ, ಆದಾಗ ಜೀವರಕ್ಷಣೆಗೆ ಅಗತ್ಯವಾದ ಮುಂಜಾಗ್ರತಾ ಕ್ರಮಗಳು ಮತ್ತು ಜನಸಾಮಾನ್ಯರಿಗೂ ಎಟಕುವ ಚಿಕಿತ್ಸಾ ಕೇಂದ್ರಗಳು.

ಕಳೆದ 15 ವರ್ಷಗಳಲ್ಲಿ ನಗರದ ಹೊರವಲಯದಲ್ಲಿ ದೊಡ್ಡ ದೊಡ್ಡ ಕೈಗಾರಿಕಾ ಸ್ಥಾವರಗಳು ಹುಟ್ಟಿವೆ, ವಿಮಾನ ನಿಲ್ದಾಣ ವಿಶಾಲವಾಗಿದೆ, ರೈಲುಗಳು ಹೆಚ್ಚಿವೆ. ಹೊಸ ವೃತ್ತಿಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಬಂದಿವೆ, ನಗರದ ಒಳಗೆ ರಸ್ತೆಗಳು ಅಗಲವಾಗಿವೆ, ಕಾಂಕ್ರಿಟೀಕರಣಗೊಂಡಿವೆ, ಮಾಲ್, ಸೂಪರ್ ಸ್ಟೋರ್ಸ್, ಮಲ್ಟಿಪ್ಲೆಕ್ಸ್‌ಗಳು, ಹೊಸ ಹೋಟೆಲುಗಳು ತುಂಬಿವೆ- ಇವೆಲ್ಲಾ ನಗರಾಭಿವೃದ್ಧಿಯ ಸಂಕೇತಗಳು ಎಂಬುದು ನಿರ್ವಿವಾದ. ಆದರೆ ಈ ಅಭಿವೃದ್ಧಿಯ ಇನ್ನೊಂದು ಮಜಲನ್ನೂ ಗಮನಿಸಬೇಕಾಗುತ್ತದೆ.

ನಗರ ಬೆಳೆದಂತೆ ಪಾದಚಾರಿಗಳಿಗೆ ಮೂಲಸೌಕರ್ಯಗಳಿಲ್ಲದಿರುವುದು ಎದ್ದು ಕಾಣುತ್ತದೆ. ನಗರದ ಹೃದಯಭಾಗದ ಪ್ರಮುಖ ರಸ್ತೆಗಳಲ್ಲಿ ಸುರಕ್ಷಿತ ಕಾಲುದಾರಿಗಳಿಲ್ಲ; ಹೊಸ ರಸ್ತೆಗಳನ್ನು ನಿರ್ಮಿಸುವಾಗ, ಇದ್ದ ರಸ್ತೆಯನ್ನು ಅಗಲಿಸುವಾಗ ಫುಟ್‌ಪಾತಿನ ರಚನೆಗೆ ಗಮನಕೊಟ್ಟಿಲ್ಲ, ಕೊಡುತ್ತಲೂ ಇಲ್ಲ.

ಇರುವ ಫುಟ್‌ಪಾತ್‌ಗಳಲ್ಲಿ ಉಬ್ಬು ತಗ್ಗುಗಳು, ಗುಂಡಿಗಳು, ಸಮತಟ್ಟಿದ್ದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ  ವಾಹನಗಳು, ಟ್ರಾನ್ಸ್‌ಫಾರ್ಮರ್‌ಗಳು, ಕಸದ ತೊಟ್ಟಿಗಳು ಮುಂತಾದ ಅಡೆತಡೆಗಳಿಂದಾಗಿ  ನಿಶ್ಚಿಂತೆಯಿಂದ ನಡೆಯುವಂತಿಲ್ಲ. ಇದು ಅನೇಕ ಒಳರಸ್ತೆಗಳ ಹಣೆಬರಹ ಕೂಡ. 

ರಸ್ತೆ ದಾಟುವುದಕ್ಕೂ ನಗರದ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಟ್ಟಿಲ್ಲ. ಪ್ರಮುಖ ರಸ್ತೆಗಳಲ್ಲಿ ದಾಟಲು ಗುರುತು ಹಾಕಿದ ಜಾಗ (ಝೀಬ್ರಾ ಕ್ರಾಸಿಂಗ್) ಇಲ್ಲ; ಹಂಪನಕಟ್ಟೆಯಂತಹ ಜನನಿಬಿಡ ಮತ್ತು ದಟ್ಟವಾದ ವಾಹನ ಸಂಚಾರವಿರುವ ರಸ್ತೆಯಲ್ಲಿ ವಿಭಜಕ ಬೇಲಿಗಳ ಎಡೆಯಿಂದ ಭಯದಿಂದಲೇ ರಸ್ತೆ ದಾಟಬೇಕು.

ಕ್ರಾಸಿಂಗ್ ಇದ್ದಲ್ಲಿ ವಾಹನ ಚಾಲಕರು ಸಾಮಾನ್ಯವಾಗಿ ಅದರ ಮೇಲೆಯೇ ವಾಹನಗಳನ್ನು ನಿಲ್ಲಿಸಿ, ರಸ್ತೆ ದಾಟುವ ಪಾದಚಾರಿಗಳಿಗೆ ಆತಂಕವನ್ನು ಉಂಟುಮಾಡುತ್ತಾರೆ.

ಸಂಚಾರಿ ಪೊಲೀಸರ ನಿರ್ದೇಶನವನ್ನು ಧಿಕ್ಕರಿಸಿ ಓಡುವ, ಕೆಂಪು ದೀಪ ಬಂದಾಗಲೂ ವೇಗ ಹೆಚ್ಚಿಸಿ ಚಲಾಯಿಸುವ ವಾಹನಗಳು ಸರ್ವೇ ಸಾಮಾನ್ಯ. ನಗರದ ಇತರ ಭಾಗಗಳಲ್ಲಿಯೂ ಇದೇ ಸಮಸ್ಯೆ. ಇನ್ನು ಶಾಲೆಗಳ ಎದುರು ಕ್ರಾಸಿಂಗುಗಳು ಇಲ್ಲ, ಮಾತ್ರವಲ್ಲ, ಬಸ್ಸು ಮತ್ತು ಓಡುವ ಕಾರುಗಳ ಜೋರು ಶಬ್ದ ಏಕಾಗ್ರತೆಗೆ ಭಂಗ ತರುತ್ತದೆ.

ಎರಡನೆಯ ಸಮಸ್ಯೆ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಸಂಬಂಧಿಸಿದ್ದು. ನೇತ್ರಾವತಿ ನದಿ ನೀರನ್ನು ಶುದ್ಧೀಕರಿಸಿ ನಗರಕ್ಕೆ ಒದಗಿಸಲಾಗುತ್ತಿದೆ. ಆದರೆ ನಲ್ಲಿಯ ನೀರನ್ನು ನೇರವಾಗಿ ಕುಡಿಯುವಂತಿಲ್ಲ, ಆಗಾಗ ಕೆಂಪು ನೀರೇ ಬರುತ್ತದೆ.

ಮಳೆಗಾಲ ಮುಗಿದಾಗಲೂ ಕೆಂಪು ನೀರು ಹೇಗೆ ಬರುತ್ತದೆ? ಮನೆಯ ಭೂಅಂತರ್ಗತ ತೊಟ್ಟಿ ಅಥವಾ ತಾರಸಿಯ ತೊಟ್ಟಿಯನ್ನು ಗಮನಿಸಿದಾಗ ಅವುಗಳ ತಳದಲ್ಲಿ ಎಷ್ಟು ದಪ್ಪಕ್ಕೆ ಕೆಸರು ತುಂಬಿರುತ್ತದೆ ಎಂದು ತೊಟ್ಟಿಯನ್ನು ಸ್ವಚ್ಛಗೊಳಿಸುವಾಗ ಸ್ಪಷ್ಟವಾಗುತ್ತದೆ. ಕೆಲವು ಪ್ರದೇಶಗಳಲ್ಲಿ ವಾರದ ನಿರ್ದಿಷ್ಟ ದಿನಗಳಲ್ಲಿ ಮಾತ್ರ ನೀರಿನ ವಿತರಣೆ ಆಗುತ್ತದೆ.

ಮೂರನೆಯ ಸಮಸ್ಯೆ ತ್ಯಾಜ್ಯಕ್ಕೆ ಸಂಬಂಧಿಸಿದ್ದು. ಪ್ರಮುಖ ಪ್ರದೇಶಗಳಲ್ಲಿ, ಜನಸಂಚಾರವಿರುವಲ್ಲಿ, ಕಸ ಎಲ್ಲಾ ಕಡೆ ಚೆಲ್ಲಿರುತ್ತದೆ. ನಾಗರಿಕರು ಇದಕ್ಕೆ ಎಷ್ಟು ಕಾರಣರೋ ನಗರದ ಅಧಿಕಾರಿಗಳೂ ಅಷ್ಟೇ ಕಾರಣರು.

ಅಲ್ಲಲ್ಲಿ ಕಸ ಹಾಕಲು ಡಬ್ಬಿಗಳನ್ನೋ, ತೊಟ್ಟಿಗಳನ್ನೋ ಒದಗಿಸಿ, ‘ನನ್ನನ್ನು ಉಪಯೋಗಿಸಿ’ ಎಂದು ಸೂಚನೆ ನೀಡುವ ಕ್ರಮ ನಮ್ಮಲ್ಲಿ ಇಲ್ಲ. ಜನನಿಬಿಡ ಪ್ರದೇಶಗಳಲ್ಲಿ ನಿರ್ಮಲ ಶೌಚಾಲಯಗಳಿಲ್ಲ; ಮೂತ್ರಬಾಧೆಯನ್ನು ರಸ್ತೆ ಪಕ್ಕದಲ್ಲಿಯೇ ತೀರಿಸಿಕೊಳ್ಳುವ ಅನೇಕ ನಾಗರಿಕರನ್ನು, ವಾಹನ ಚಾಲಕರನ್ನು ನಾವು ಗಮನಿಸಬಹುದು.

ಜಾತ್ರೆ, ಮೆರವಣಿಗೆ, ಸಾರ್ವಜನಿಕ ಸಭೆ, ಬಯಲಾಟ ನಡೆದಲ್ಲಿ ಹಲವು ಪಟ್ಟು ಹೆಚ್ಚು ತ್ಯಾಜ್ಯ ಕಾಣಬಹುದು. ಆ ಸಮಾರಂಭಗಳಿಗೆ ಅಧಿಕಾರಿಗಳು ಒಪ್ಪಿಗೆ ಕೊಡುವಾಗ ಕಟ್ಟುನಿಟ್ಟಾಗಿ ನಿಯಮಗಳನ್ನು ಹೇರುವುದಲ್ಲದೆ, ತಪ್ಪು ಮಾಡಿದ ಸಂಘಟಕರಿಂದ ಜುಲ್ಮಾನೆ ಸಂಗ್ರಹಿಸಬೇಕು.

ಒಳಚರಂಡಿ ವ್ಯವಸ್ಥೆ ಇದ್ದಲ್ಲಿಯೂ ಮನೆಗಳ ತ್ಯಾಜ್ಯವನ್ನು ಮಳೆನೀರಿನ ಸಣ್ಣ ತೋಡುಗಳಿಗೆ ಬಿಡುವುದು ಸಾಮಾನ್ಯ. ಕಟ್ಟಡ ರಚನೆಯ ಪರವಾನಗಿ ನೀಡುವಾಗ ಮಳೆನೀರು ಹೋಗಲು ಅಡ್ಡಿ ಉಂಟುಮಾಡಬಾರದೆಂಬ ನಿಯಮ ಇದ್ದರೂ ನಗರದ ನೈರ್ಮಲ್ಯ ವಿಭಾಗ ಈ ಉಲ್ಲಂಘನೆಗಳನ್ನು ಗಮನಿಸುವುದಿಲ್ಲವೇಕೆ?

ನಾಲ್ಕನೆಯ ಸಮಸ್ಯೆ, ಸಾರ್ವಜನಿಕ ಪ್ರದೇಶಗಳಲ್ಲಿ ಆಕಸ್ಮಿಕಗಳ ಕುರಿತು ಅಧಿಕಾರಿಗಳ ಧೋರಣೆ. ಅನೇಕ ಬಹುಮಹಡಿಯ ಮಾಲ್, ಮಲ್ಟಿಪ್ಲೆಕ್ಸ್, ಸೂಪರ್ ಬಜಾರ್‌ಗಳಲ್ಲಿ ಬೆಂಕಿ ಅವಘಡ ತಡೆಯುವ ಅಗತ್ಯದ ನಿಯಮಗಳನ್ನು ಅನುಸರಿಸಲಾಗಿದೆಯೇ? ಬೆಂಕಿ ಆಕಸ್ಮಿಕವಾದಾಗ ಅಲ್ಲಿಗೆ ಅಗ್ನಿಶಾಮಕ ದಳದ ವಾಹನಗಳು ಬರಲು ಸಾಧ್ಯವೇ? ಒಳಗೆ ಸಿಕ್ಕಿಹಾಕಿಕೊಂಡ ನಾಗರಿಕರಿಗೆ ಹೊರಬರಲು ಆಪತ್ಕಾಲೀನ ಬಾಗಿಲುಗಳಿವೆಯೇ? ದೆಹಲಿಯ ಉಪಹಾರ್ ಚಿತ್ರಮಂದಿರ ಮತ್ತು ಕೋಲ್ಕತ್ತದ ಎಎಂಆರ್‌ಐ ಆಸ್ಪತ್ರೆಯಲ್ಲಿ ಸಂಭವಿಸಿದಂತಹ ಅಗ್ನಿ ದುರಂತಗಳು ಆಗದಂತೆ ನೋಡುತ್ತದೆಯೇ ನಮ್ಮ ನಗರಪಾಲಿಕೆ?
ಇನ್ನೊಂದು ಪ್ರಶ್ನೆ ಚಿಕಿತ್ಸಾ ಸೌಲಭ್ಯಗಳ ಬಗ್ಗೆ.

ವಿಭಿನ್ನ ಸೌಲಭ್ಯಗಳನ್ನೊಳಗೊಂಡ ಬಹುದೊಡ್ಡ ಆಸ್ಪತ್ರೆಗಳೇನೋ ಇವೆ. ಆದರೆ ಕಡಿಮೆ ವರಮಾನ ಹೊಂದಿರುವ  ನಾಗರಿಕರಿಗೆ ಎಟಕುವ ಮೂಲಸೌಕರ್ಯಗಳಿರುವ ನಿರ್ಮಲ ಚಿಕಿತ್ಸಾ ಕೇಂದ್ರಗಳು ನಗರದಲ್ಲಿವೆಯೇ?

ಇನ್ನೂ ಅನೇಕ ಪ್ರಶ್ನೆಗಳು ನಗರವಾಸಿಗಳಲ್ಲಿ ಏಳುತ್ತವೆ. ಈ ಪ್ರಶ್ನೆಗಳು ಎಲ್ಲಾ ಬೆಳೆಯುತ್ತಿರುವ ನಗರ, ಪಟ್ಟಣಗಳಿಗೆ ಅನ್ವಯವಾಗುತ್ತವೆ. ನಗರ ಬೆಳೆಯುತ್ತಿದ್ದಂತೆ ಅಧಿಕಾರಿವರ್ಗವು ದೂರದೃಷ್ಟಿ ಹೊಂದಿ ಸೂಕ್ತವಾದ ಕ್ರಮಗಳನ್ನು ಕೈಗೊಂಡಲ್ಲಿ ಸಮಸ್ಯೆಗಳು ಏಳುವುದಿಲ್ಲ.

ಸಂಪನ್ಮೂಲಗಳ ಕೊರತೆ ಒಂದು ನೆಪ ಮಾತ್ರ. ‘ಸ್ಮಾರ್ಟ್ ಸಿಟಿ’, ನಗರಗಳ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂಬುದು ಮಾಯಾಮೃಗವನ್ನು ಹುಡುಕಿದಂತೆ. ನಗರಾಭಿವೃದ್ಧಿ ಇಲಾಖೆ ಮತ್ತು ಜನಪ್ರತಿನಿಧಿಗಳು ಬದ್ಧತೆಯಿಂದ ಕಾರ್ಯೋನ್ಮುಖರಾದರೆ ಮಾಯಾಮೃಗದ ಹಿಂದೆ ಓಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT