ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಭಿಮಾನಿ ದಿನ’ ಆಚರಣೆಗೆ ಶ್ರೀಗಳ ಆಗ್ರಹ

Last Updated 30 ಅಕ್ಟೋಬರ್ 2014, 10:01 IST
ಅಕ್ಷರ ಗಾತ್ರ

ವಿಜಾಪುರ: ‘ಕಿತ್ತೂರ ವೀರರಾಣಿ ಚನ್ನಮ್ಮ ಅವರು ಬ್ರಿಟಿಷ್‌ ಸೈನ್ಯದ ವಿರುದ್ಧ ಸಾಧಿಸಿದ ವಿಜಯೋತ್ಸವದ ದಿನ ಅಕ್ಟೋಬರ್ 23ರನ್ನು ರಾಜ್ಯ ಸರ್ಕಾರ ‘ಸ್ವಾಭಿಮಾನಿ ದಿನ’ವನ್ನಾಗಿ ಆಚರಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ವೀರರಾಣಿ ಕಿತ್ತೂರ ಚನ್ನಮ್ಮ ದೇಶಾಭಿ­ಮಾನ, ಸಾಹಸ, ಸ್ವಾಭಿಮಾನದ ಪ್ರತೀಕವಾಗಿ­ದ್ದಾರೆ. ಅವರ ಆದರ್ಶಗಳನ್ನು, ದೇಶಾಭಿಮಾನ­ವನ್ನು ಪರಿಚಯಿಸಿ, ಪ್ರತಿಯೊಬ್ಬರಲ್ಲಿ ಸ್ವಾಭಿ­ಮಾನದ ಭಾವನೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಕಿತ್ತೂರ ರಾಣಿ ಚನ್ನಮ್ಮ ಅವರ ವಿಜಯೋತ್ಸವ ದಿನವನ್ನು ಸ್ವಾಭಿಮಾನ ದಿನವನ್ನಾಗಿ ಆಚರಿಸ­ಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿ­ಯಲ್ಲಿ ಒತ್ತಾಯಿಸಿದರು.

‘ಸ್ವಾಭಿಮಾನಿ ದಿನದಂದು ಸರ್ಕಾರ ರಜೆ ಘೋಷಿಸದೆ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ಕಾರ್ಯಾಲಯಗಳಲ್ಲಿ, ಶಾಲಾ ಕಾಲೇಜು­ಗಳಲ್ಲಿ, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಆಚರಿಸಬೇಕು. ಚನ್ನಮ್ಮ ಅವರ ಸಾಹಸಗಾಥೆ­ಯನ್ನು ತಿಳಿಸುವ ಕೆಲಸ ನಡೆಸಬೇಕು’ ಎಂದರು.

ವೀರರಾಣಿ ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಸೇರಿದಂತೆ ಹಲ ಮಹನೀಯರು ದೇಶಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಮಹಾತ್ಮರನ್ನು ಜಾತಿ ಚೌಕಟ್ಟಿನಲ್ಲಿ ಸಿಮೀತಗೊಳಿಸುವುದು ತಪ್ಪು, ಆದರೆ ಮುಂದಿನ ದಿನಗಳಲ್ಲಾದರೂ ಕಿತ್ತೂರ ರಾಣಿ ಚೆನ್ನಮ್ಮ ವಿಜಯೋತ್ಸವವನ್ನು ಸರ್ಕಾರಿ ಕಾರ್ಯಕ್ರಮ­ವನ್ನಾಗಿ ಆಚರಿಸಲು ಗಮನ ಸೆಳೆಯುವ ಉದ್ದೇಶದಿಂದ ಸಮಾಜದ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

ಬೆಳಗಾವಿಯಲ್ಲಿರುವ ಸುವರ್ಣಸೌಧದ ಮುಂಭಾಗದಲ್ಲಿ ವೀರ ರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಪ್ರತಿಷ್ಠಾಪಿ­ಸ­ಬೇಕು ಎಂದು ಇದೇ ಸಂದರ್ಭ ಒತ್ತಾಯಿಸಿದರು.

ವಿಮಾನ ನಿಲ್ದಾಣಕ್ಕೆ ಚನ್ನಮ್ಮ ಹೆಸರಿಡಿ
‘ಬೆಳಗಾವಿಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮ ಹೆಸರಿಡಬೇಕು’ ಎಂದು
ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿಜಾಪುರ ಅಥವಾ ಗುಲ್ಬರ್ಗದಲ್ಲಿ ನಿರ್ಮಾಣಗೊಳ್ಳಲಿರುವ ವಿಮಾನ ನಿಲ್ದಾಣಗಳಿಗೆ ಕ್ರಾಂತಿಯೋಗಿ ಬಸವೇ­ಶ್ವರರ ಹೆಸರು ಇಡಬೇಕು ಎಂದ ಸ್ವಾಮೀಜಿ, ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರು ಇಡಬೇಕು ಎಂದು ಆಗ್ರಹಿಸಿದರು.

ವೀರರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಖಡ್ಗಗಳು ಲಂಡನ್‌ನ ಮ್ಯೂಸಿಯಂನಲ್ಲಿವೆ, ಈ ಖಡ್ಗಗಳು ಸ್ವಾಭಿಮಾನದ ದ್ಯೋತಕಗಳಾಗಿದ್ದು, ಅವು­ಗಳನ್ನು ಮರಳಿ ಭಾರತಕ್ಕೆ ತರುವ ಪ್ರಯತ್ನವನ್ನು ಕೇಂದ್ರ–ರಾಜ್ಯ ಸರ್ಕಾರಗಳು ಮಾಡಬೇಕು ಎಂದು ಒತ್ತಾಯಿಸಿದರು.

‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿ ಸಾಧ್ಯ ಎಂಬ ಭ್ರಮೆಗಿಂತ ಅಭಿವೃದ್ಧಿಯ ಕೂಗು ಹೆಚ್ಚಬೇಕು. ತಾರತಮ್ಯ ನಿವಾರಣೆಗೆ ವಿಜಾಪುರ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಈ ಭಾಗದ ಪ್ರಮುಖ ನಗರಗಳಿಗೆ ಸರ್ಕಾರದ ಅರ್ಧದಷ್ಟು ಇಲಾಖೆಗಳು ಕೇಂದ್ರ ಕಚೇರಿಗಳು ಸ್ಥಳಾಂತರಗೊಳ್ಳಬೇಕು. ನೃತ್ಯ, ಸಂಗೀತ, ನಾಟಕ ಅಕಾಡೆಮಿಗಳು ಸೇರಿದಂತೆ ಇನ್ನಿತರ ಅಕಾಡೆಮಿಗಳು ಉತ್ತರ ಕರ್ನಾಟಕ­ದಲ್ಲಿ ಸ್ಥಾಪನೆಯಾಗಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಅಧಿಕಾರ ವಿಕೇಂದ್ರೀಕರಣ­ಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಈಗಿನ ಪೀಠಾಧಿಪತಿಗಳೇ ಪೀಠದಲ್ಲಿ ಮುಂದುವರೆಯುವುದು ಒಳಿತು ಎಂದು ಹೇಳಿದರು.


ಕಿತ್ತೂರು ಚನ್ನಮ್ಮ ವಿಜಯೋತ್ಸವ ಆಚರಣೆ ನ.2ಕ್ಕೆ
ವಿಜಾಪುರ:
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ನವೆಂಬರ್ 2 ರಂದು ನಗರದ ಸಿದ್ಧೇಶ್ವರ ಕಲಾಭವನದಲ್ಲಿ ವೀರಮಾತೆ ಕಿತ್ತೂರ ರಾಣಿ ಚನ್ನಮ್ಮ ಅವರ 191ನೇ ವಿಜಯೋತ್ಸವ, ಪಂಚಮಸಾಲಿ ಸಂಘದ ನಗರ ಘಟಕದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಸಮಾರಂಭಕ್ಕೂ ಮುನ್ನ ವಿಜಯೋತ್ಸವದ ಭವ್ಯ ಮೆರವಣಿಗೆ ನಡೆಯಲಿದೆ. ಶಂಕರಲಿಂಗ ದೇವಾಲಯದಿಂದ ಆರಂಭಗೊಳ್ಳುವ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಸಿದ್ದೇಶ್ವರ ಕಲಾ ಭವನ ತಲುಪಲಿದೆ. ಯುವ ಮುಖಂಡ ವಿಜಯಕುಮಾರ ಪಾಟೀಲ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಲಾ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಂಚಮಸಾಲಿ ಸಮಾಜ ಸಂಘದ ನಗರ ಘಟಕವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಉಮೇಶ ಕೋಳಕೂರ, ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್, ಉಪ ಮೇಯರ್ ಆನಂದ ಧುಮಾಳೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಮಹಾದೇವ ಮುರಡಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ನಗರದ ಕೇಂದ್ರ ಬಸ್‌ ನಿಲ್ದಾಣ ಸಮೀಪದ ವೃತ್ತಕ್ಕೆ ಈ ಹಿಂದಿನ ನಗರಸಭೆಯಲ್ಲಿ ಠರಾವು ಪಾಸು ಮಾಡಿದಂತೆ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ ಎಂದು ಹೆಸರಿಡಬೇಕು ಎಂದು  ಆಗ್ರಹಿಸಿದರು.

ಮಹಾಂತಗೌಡ ಪಾಟೀಲ, ಚಂದ್ರಶೇಖರ ಪತಂಗಿ, ರೇವಣಸಿದ್ಧ ಮುಳಸಾವಳಗಿ, ಸಂಗನಗೌಡ ಪಾಟೀಲ, ಸೋಮಶೇಖರ ಬೀಳೂರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT