ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂಗಿನ ಕೊಂಡಿ’ ಕಳಚಲೇ ಇಲ್ಲ!

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮರಾಠ ನೆಲದಲ್ಲಿ ಮೈತ್ರಿ ರಾಜಕಾ­ರಣದ ಕಟ್ಟಲೆಗಳನ್ನು ಮುರಿದು ‘ಪ್ರಯೋಗ’ಕ್ಕೆ ಒಡ್ಡಿಕೊಂಡಿದ್ದ 4ಪ್ರಧಾನ ಪಕ್ಷಗಳ ನೈಜ ಬಲ ಸಾಬೀತಾ­ಗಿದೆ. ಬದಲಾವಣೆಯ ಬಿರುಗಾಳಿ ಕಾಂಗ್ರೆಸ್‌ನ ಭದ್ರ ಕೋಟೆಗಳನ್ನು ಕೆಡವಿ­ಹಾಕಿದೆ. ಬಿಜೆಪಿಗೆ ದೊಡ್ಡ ಜಿಗಿತವನ್ನು ತಂದುಕೊಟ್ಟಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾ­ವಣೆ ಫಲಿತಾಂಶ ನಿರೀಕ್ಷಿತ ದಿಕ್ಕಿನಲ್ಲೇ ಹೊರಹೊಮ್ಮಿದ್ದರೂ  ಸರಳ ಬಹು­ಮತಕ್ಕೆ ಮತ್ತೊಂದು ಪಕ್ಷವನ್ನು ಅವ­ಲಂಬಿಸಬೇಕಾದ ‘ಹಂಗಿನ ಕೊಂಡಿ’ ಕಳಚಲಿ ಎಂಬ ಪ್ರಜ್ಞಾವಂತರ ಹಾರೈಕೆ ಮಾತ್ರ ಫಲಿಸಿಲ್ಲ. ಮತಗಟ್ಟೆ ಸಮೀಕ್ಷೆಗಳ ಭವಿಷ್ಯವೂ ಹುಸಿಯಾಗಿದೆ. 20 ವರ್ಷ­ಗಳಿಂದ ಮೈತ್ರಿ ರಾಜಕಾರಣದ ‘ರಾಜಿ ಸೂತ್ರ’ಕ್ಕೆ ಒಳಪಟ್ಟಿರುವ ರಾಜ್ಯದ ಆಡಳಿತಕ್ಕೆ ಈಗಲೂ ಅದರಿಂದ ಮುಕ್ತಿ ದೊರೆತಿಲ್ಲ.

ಪ್ರಧಾನಿ ಮೋದಿ ಪ್ರಭಾವ ಮತ್ತು ವರ್ಚಸ್ಸು ಬಿಜೆಪಿ­ಯನ್ನು ಮುಖ್ಯ­ಮಂತ್ರಿ ಪಟ್ಟದ ಬಳಿ  ಕೊಂಡೊಯ್ದು ಕೂರಿಸಿದೆ­ಯಾದರೂ ಅದನ್ನು ಹತ್ತಲು  ಸಣ್ಣ ಪೀಠವೊಂದರ ಆಸರೆ ಪಡೆಯ­ಬೇಕಾದ ಅನಿವಾರ್ಯಕ್ಕೆ ಅದನ್ನು ದೂಡಿದೆ. ಅವಲಂಬನೆಯ ‘ಮಿತಿ’ಗೆ ಸಿಲುಕುವ ಅಪಾಯದಿಂದ  ಪಕ್ಷ­ವನ್ನು  ಪಾರು­ಮಾಡ­ಬಹುದಿತ್ತು. ಅತಿ­ಯಾದ ಆತ್ಮ­ವಿಶ್ವಾಸ ಮತ್ತು ಸ್ಥಳೀಯ ನಾಯ­ಕ­ತ್ವದ ಕೊರತೆಯಿಂದ ಅದು ಸಾಧ್ಯವಾಗಿಲ್ಲ.

ಸತತ 15 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ), ಆಡಳಿತ ವಿರೋಧಿ ಅಲೆಗೆ  ತತ್ತರಿಸಿವೆ. ಇದ­ರಿಂದಾಗಿ ಮತ್ತೊಂದು ಪ್ರಮುಖ ರಾಜ್ಯ ಕಾಂಗ್ರೆಸ್‌ ಕೈಜಾರಿದೆ. ವಿಧಾನಸಭೆಯಲ್ಲಿ ಈ ಹಿಂದೆ 82 ಸ್ಥಾನ ಹೊಂದಿದ್ದ ಕಾಂಗ್ರೆಸ್‌ ಬಲ 42ಕ್ಕೆ ಕುಗ್ಗಿದೆ. ಶೇಕಡಾ­ವಾರು ಮತಪ್ರಮಾಣ 21ರಿಂದ 18ಕ್ಕೆ ಕುಸಿದಿದೆ. ಮರಾಠ ಅಸ್ಮಿತೆಯ ಪ್ರಶ್ನೆಯನ್ನು ಮತದಾರರ ಮುಂದಿಟ್ಟಿದ್ದ  ಶಿವಸೇನಾವನ್ನು ಬದಲಾವಣೆಯ ಗಾಳಿ ಒಂದಿಷ್ಟು ಮುಂದಕ್ಕೆ ನೂಕಿ ಕೈಬಿಟ್ಟಿದೆ.   ಬಾಳ ಠಾಕ್ರೆ ಉಪಸ್ಥಿತಿ ಇಲ್ಲದೆ ಸೇನಾ ಎದುರಿ­ಸಿದ ಮೊದಲ ವಿಧಾನಸಭಾ ಚುನಾವಣೆ ಇದು. ಕಳೆದ ಸಲಕ್ಕಿಂತ 19 ಸ್ಥಾನ ಹೆಚ್ಚಿಗೆ ಪಡೆದು ಈ ಪರೀಕ್ಷೆಯಲ್ಲಿ ಅದು ಉತ್ತೀರ್ಣ ಆಗಿದೆ.

ಈ ತೇರ್ಗಡೆಗಿಂತ ಬಿಜೆಪಿ ಓಟವನ್ನು  ಒಂದು ಹಂತಕ್ಕೆ ತಡೆದು ನಿಲ್ಲಿಸಲು ಸಾಧ್ಯವಾಗಿದ್ದು ಹಾಗೂ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ­ನಿರ್ಮಾಣ ಸೇನಾ (ಎಂಎನ್‌ಎಸ್‌) ದೂಳಿಪಟ ಆಗಿ­ರು­ವುದು ಶಿವಸೇನಾಕ್ಕೆ ಹೆಚ್ಚು ಸಂತಸ ತಂದಿರಬಹುದು. ವಿಧಾನಸಭೆಗೆ 2009­ರಲ್ಲಿ ನಡೆದ ಚುನಾವಣೆಯಲ್ಲಿ   ಶಿವ­ಸೇನಾಕ್ಕೆ ಎಂಎನ್ಎಸ್‌ ಮಗ್ಗುಲು ಮುಳ್ಳಾ­ಗಿತ್ತು. ಶೇ 5.71ರಷ್ಟು ಮತ ಪಡೆದು 13 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಈಗ ಅದು ಬರೀ ಒಂದು ಸ್ಥಾನಕ್ಕೆ ಇಳಿದಿದೆ. ತಾನು ನೆಲೆ ಹೊಂದಿದ್ದ ಮುಂಬೈನಲ್ಲಿ ಕೂಡ ಗುಡಿಸಿಕೊಂಡು ಹೋಗಿದೆ.

ಬಿಜೆಪಿಗೆ ರಾಜಕೀಯ ಲಾಭ: ಸೀಟು ಹಂಚಿಕೆ ವೇಳೆ ಶಿವಸೇನಾದ ಒತ್ತಡ ತಂತ್ರಗಳಿಗೆ ಮಣಿಯದೆ, ‘ಸಹಜ ಮಿತ್ರ ಪಕ್ಷ’ದೊಂದಿಗಿನ 25 ವರ್ಷಗಳ ಸುದೀರ್ಘ ಮೈತ್ರಿ ಕಡಿದು­ಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಪಣಕ್ಕೆ ಇಟ್ಟಿದ್ದ ಬಿಜೆಪಿಗೆ ರಾಜಕೀಯವಾಗಿ ದೊಡ್ಡ ಲಾಭ ದೊರೆತಿದೆ.

ಬಿಜೆಪಿಗೆ ಆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೆಲೆ ವಿಸ್ತರಿಸಿ­ಕೊಳ್ಳಲು ಈ ಚುನಾವಣೆ ನೆರವಾಗಿದೆ. ಸೇನಾಕ್ಕೆ ಪಕ್ಕ­ವಾದ್ಯ ನುಡಿಸುವ ಸ್ಥಿತಿಯಿಂದ ಮುನ್ನಡೆ­ಸುವ ಸ್ಥಿತಿಗೆ ನೆಗೆತ ಕಂಡಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ–ಸೇನಾ ಸೇರಿ ಶೇ 30ರಷ್ಟು ಮತ ಪಡೆದಿದ್ದವು. ಈಗ ಬಿಜೆಪಿ ಒಂದೇ ಶೇ 27.80ರಷ್ಟು ಮತ ಗಳಿಸಿ ಉಳಿದ ಪಕ್ಷಗಳಿಂತ ಬಹಳ ಮುಂದಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಇದು­ವರೆಗೆ ಗಳಿಸಿದ್ದ ಅತಿಹೆಚ್ಚು ಸ್ಥಾನ 65. ಈಗ ಅದು 122ಕ್ಕೆ ಜಿಗಿದಿದೆ.  ಕೊಂಕಣ ಪ್ರದೇಶ ಒಂದನ್ನು ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಭಾಗಗಳಲ್ಲೂ ತನ್ನ ಸಾಮರ್ಥ್ಯ ತೋರಿದೆ. ರಾಜಧಾನಿ ಮುಂಬೈಯಲ್ಲಿ ಶಿವಸೇನಾವನ್ನು ಹಿಂದಿ­ಕ್ಕಿದೆ. ಪುಣೆ ನಗರದಲ್ಲಿ ಪ್ರಾಬಲ್ಯ ಮೆರೆ­ದಿದೆ. ಒಟ್ಟು 62 ಕ್ಷೇತ್ರಗಳನ್ನು ಹೊಂದಿ­ರುವ ವಿದರ್ಭದಲ್ಲಿ 42 ಕ್ಷೇತ್ರಗಳಲ್ಲಿ ಗೆಲುವಿನ ಪತಾಕೆ ಹಾರಿಸುವ ಮೂಲಕ ಕಾಂಗ್ರೆಸ್‌ನ ಬೇರುಗಳನ್ನು ಅಲುಗಾಡಿ­ಸಿದೆ.  ಕಳೆದ ಸಲ ಇಲ್ಲಿ ಬರಿ 19 ಸ್ಥಾನ ಪಡೆದಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಒಳಗೊಂಡಂತೆ ತುಸು ಪ್ರಭಾವ ಹೊಂದಿದ ಮುಖಂಡರು ಇಲ್ಲಿ ಬಿಜೆಪಿ ಗೆಲುವಿಗೆ ನೆರವಾಗಿದ್ದಾರೆ. ಬಿಜೆಪಿಯ ಬಲ ಉಳಿದ ಪ್ರದೇಶಗಳಿಗಿಂತ ಇಲ್ಲಿ ಅಧಿಕ ಪ್ರಮಾಣ­ದಲ್ಲಿ ಹೆಚ್ಚಲು ಇದೇ ಅಂಶ ಕಾರಣ ಆಗಿರಬಹುದು.

ಬಿಜೆಪಿ ಉಳಿದೆಡೆಯೂ ಈ ಮಟ್ಟಿಗೆ ಸ್ಥಳೀಯ ನಾಯಕತ್ವ ಹೊಂದಿದ್ದರೆ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಬೇಕಾದ 145ರ ಜಾದೂ ಸಂಖ್ಯೆ ಮುಟ್ಟಬಹುದಿತ್ತೇನೊ? ಕೇಂದ್ರ­ದಲ್ಲಿ ಸಚಿವರಾಗಿದ್ದ ಗೋಪಿನಾಥ ಮುಂಡೆ ಅವರು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೆ ಈಡಾದರು. ಪಕ್ಷದಲ್ಲಿ ನಾಯಕತ್ವದ ಕೊರತೆಗೆ ಇವರ ಅಕಾಲಿಕ ಸಾವು ಕೂಡ ಒಂದು ಕಾರಣವಾಯಿತು.

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಮೋದಿ ಅವರ ಕಾರ್ಯತಂತ್ರಕ್ಕೆ ಒಳ್ಳೆಯ ಫಸಲು ಸಿಕ್ಕಿದೆ. ಮೋದಿ ಅವರು ಇಡೀ ಚುನಾವಣೆಯನ್ನು ತಮ್ಮ ಹೆಗಲಿಗೇರಿಸಿ­ಕೊಂಡು ಪಕ್ಷವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಕಾಂಗ್ರೆಸ್–ಎನ್‌ಸಿಪಿ ಮುಖಂಡರ ಕೈಯಿಂದ ಅಧಿಕಾರದ ದಂಡ ಕಸಿದುಕೊಳ್ಳಲು  ಬೇಕಾದ ಎಲ್ಲ ಕಾರಣಗಳು ಮಹಾರಾಷ್ಟ್ರದ ಜನರ ಮುಂದಿದ್ದವು. ಕೇಂದ್ರದ ಕೃಷಿ ಖಾತೆಯು ಎನ್‌ಸಿಪಿ ಧುರೀಣ ಶರದ್‌ ಪವಾರ್‌ ಅವರ ಕೈಯಲ್ಲೇ  ಇದ್ದಾಗಲೂ ಮಹಾ­ರಾಷ್ಟ್ರದ ಹಿಂದುಳಿದ ವಿದರ್ಭ ಪ್ರಾಂತ್ಯ ರೈತರ ಆತ್ಮಹತ್ಯೆಗಳಿಂದ ಸುದ್ದಿ­ಯಾ­ಯಿತು. ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ನೀರಾವರಿ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರ, ವಿದ್ಯುತ್‌ ಕೊರತೆ, ಮುಖ್ಯಮಂತ್ರಿ ಬದಲಾವಣೆ ನಂತರವೂ ದೃಢ ನಿರ್ಧಾರಗಳಿಲ್ಲದೆ ತೂಕಡಿಸಿದ  ಆಡಳಿತ ಹೀಗೆ ಲೋಪಗಳ ಪಟ್ಟಿ ಬೆಳೆ­ಯು­ತ್ತಲೇ ಹೋಗುತ್ತದೆ. ಸತತ ಮೂರು ಅವಧಿಗೆ ಆಡಳಿತ ನಡೆಸಿದ  ಈ ಪಕ್ಷಗಳನ್ನು ಶಿಕ್ಷಿಸಲು ಜನರಿಗೆ ಇನ್ನೆಷ್ಟು ಕಾರಣಗಳು ಬೇಕು? ಮನೆ ಬಾಗಿಲಿಗೆ ಬಂದ ಅವಕಾಶವನ್ನು ಜನರು ಸರಿ-­ಯಾ­ಗಿಯೇ ಬಳಸಿಕೊಂಡು ಬುದ್ಧಿ ಕಲಿಸಿದ್ದಾರೆ.

ಪವಾರ್‌ಗೆ ತಿರುಮಂತ್ರ: ಕೇಂದ್ರದಲ್ಲಿ ಅಧಿ­ಕಾರದಲ್ಲಿದ್ದ ಪಕ್ಷ ಇಲ್ಲವೇ ಮೈತ್ರಿ­ಕೂಟವೇ ರಾಜ್ಯದ­ಲ್ಲಿಯೂ ಅಧಿಕಾರಕ್ಕೆ ಬರುವುದು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಎಂದು  ಪವಾರ್‌ ಹಿಂದೆಲ್ಲ ಚುನಾವಣಾ ಪ್ರಚಾರ ಸಭೆಗಳಲ್ಲಿ ಪದೇ ಪದೇ ಹೇಳುತ್ತಿದ್ದರಂತೆ. ಮತದಾರರಿಗೆ ಈ ಮರಾಠ ಸರದಾರನ ಮಾತು ಈಗ ನೆನಪಾಗಿರಲಿಕ್ಕೂ ಸಾಕು.

ವೋಟು ಯಂತ್ರದ ಗುಂಡಿಯನ್ನು ಅದೇ ರೀತಿ ಒತ್ತಿ ಎನ್‌ಸಿಪಿ ಚುನಾವಣಾ ಚಿಹ್ನೆಯಾದ ಗಡಿಯಾರದ ಮುಳ್ಳನ್ನು ಹಿಂದಕ್ಕೆ ತಿರುಗಿಸಿದ್ದಾರೆ. ಸಹಕಾರಿ ರಂಗದ ಮೇಲಿನ ಹಿಡಿತವೇ ಈಗಲೂ ಎನ್‌ಸಿಪಿ ಕುಸಿತದ ಪ್ರಮಾಣ­ವನ್ನು ತಗ್ಗಿಸಿರುವುದು. ಪಶ್ಚಿಮ ಮಹಾ­ರಾಷ್ಟ್ರ ಕೈಹಿಡಿದಿರು­ವುದರಿಂದ ಆ ಪಕ್ಷದ ಸಂಖ್ಯೆ 40ರ ಗಡಿ ದಾಟಿದೆ. ಕಳೆದ ಸಲ 62 ಶಾಸಕರನ್ನು ಹೊಂದಿತ್ತು. ಶೇಕಡಾ­ವಾರು ಮತಗಳಿಕೆ ಪ್ರಮಾಣ­ವನ್ನು ತುಸು ಹೆಚ್ಚಿಸಿ­ಕೊಂಡಿದೆ ಎಂಬುದಷ್ಟೇ ಸಮಾ­ಧಾನದ ಸಂಗತಿ. ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರಿಂದ ಇದು ಸಾಧ್ಯವಾಗಿದೆ.  36 ಕ್ಷೇತ್ರಗಳಿರುವ ಮುಂಬೈನಲ್ಲಿ ಪಕ್ಷಕ್ಕೆ ಈ ಸಲ ಒಂದು ಸ್ಥಾನವೂ ಸಿಕ್ಕಿಲ್ಲ ಎಂಬುದು ಚಿಂತೆಗೀಡು ಮಾಡುವ ಸಂಗತಿ. 

ಅಸದುದ್ದೀನ್‌ ಒವೈಸಿ ನೇತೃತ್ವದ, ಹೈದರಾಬಾದ್‌ನಲ್ಲಿ ನೆಲೆ ಹೊಂದಿರುವ ಆಲ್‌ ಇಂಡಿಯಾ ಮಜ್ಲಿಸ್–ಎ– ಇತ್ತೆ­ಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷವು ಔರಂಗಾ­ಬಾದ್‌ ಸೆಂಟ್ರಲ್ ಹಾಗೂ ಮುಂಬೈ ಮಹಾ­ನಗರದ ಬೈಕುಲ್ಲಾ ಕ್ಷೇತ್ರದಲ್ಲಿ ಗೆಲುವು ಪಡೆಯುವ ಮೂಲಕ  ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದೆ. ಅಲ್ಪಸಂಖ್ಯಾತರನ್ನು ಮತಬ್ಯಾಂಕ್‌ ಎಂದು ಪರಿಗಣಿಸಿರುವ ಕಾಂಗ್ರೆಸ್‌ಗೆ ಇದು ಎಚ್ಚರಿಕೆಯ ಗಂಟೆ. ಈ ಚುನಾ­ವಣೆ­ಯಿಂದ ಕಲಿಯಲು ಎಲ್ಲ ಪಕ್ಷ­ಗಳಿಗೂ ಒಂದು ಪಾಠ ಇದೆ.

ಎರಡು ದಶಕಗಳಿಂದ ಮೈತ್ರಿ ರಾಜಕಾರಣಕ್ಕೆ ಒಗ್ಗಿಕೊಂಡಿ­ರುವ ಮಹಾ­ರಾಷ್ಟ್ರದ ನೆಲ,  ಸ್ವಂತ ಬಲದ ಮೇಲೆ ಅಧಿಕಾರ ನಡೆಸಲು ಯಾವು­ದಾದರೂ ಪಕ್ಷಕ್ಕೆ ಅವಕಾಶ ಮಾಡಿ­ಕೊಡುವ ಮಟ್ಟಿಗೆ ಇನ್ನೂ ಹದಗೊಂಡಿಲ್ಲ ಎಂಬುದು ಈ ಫಲಿತಾಂಶದಿಂದ ಮತ್ತೊಮ್ಮೆ ಋಜುವಾತಾಗಿದೆ. ಚುಕ್ಕಾಣಿ ಹಿಡಿಯಲು ಬಿಜೆಪಿ ಜತೆ ಕೈಜೋಡಿಸುವ ಪಕ್ಷ ಯಾವುದು ಮತ್ತು ಮುಖ್ಯಮಂತ್ರಿ ಪಟ್ಟ ಯಾರಿಗೆ ಒಲಿಯ­ಲಿದೆ ಎಂಬುದರ ಕಡೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT