ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ ಖಚಿತ’

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಪ್ರಕರಣ
Last Updated 6 ಮೇ 2016, 19:45 IST
ಅಕ್ಷರ ಗಾತ್ರ

ಹೊಸೂರು (ತಮಿಳುನಾಡು):  ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಭಾಗಿಯಾದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ತಮಿಳುನಾಡಿನ ವಿಧಾನಸಭಾ ಚುನಾವಣೆ ಸಲುವಾಗಿ ಶುಕ್ರವಾರ  ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಟಲಿಯಲ್ಲಿ ನಿಮಗೆ ಯಾರಾದರೂ ಸಂಬಂಧಿಕರು ಇದ್ದಾರೆಯೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಸಭಿಕರು ‘ಇಲ್ಲ’ ಎಂದು ಒಕ್ಕೊರಲಿನಿಂದ ಪ್ರತಿಕ್ರಿಯಿಸಿದರು. 

‘ನನಗೂ ಇಟಲಿಯಲ್ಲಿ ಯಾರೂ ಸಂಬಂಧಿಕರಿಲ್ಲ. ನಾನು ಇಟಲಿಯನ್ನು ನೋಡಿಲ್ಲ. ಅಲ್ಲಿಯ ಯಾರೂ ನನಗೆ ಗೊತ್ತಿಲ್ಲ.  ಅಲ್ಲಿನ ನ್ಯಾಯಾಲಯ ಹೆಲಿಕಾಪ್ಟರ್‌ ಖರೀದಿಯಲ್ಲಿ  ಲಂಚ ಪಡೆದ ಬಗ್ಗೆ ಆರೋಪ ಮಾಡಿದರೆ ನಾನು ಏನು ಮಾಡಬೇಕು?’ ಎಂದು  ಪ್ರಶ್ನಿಸಿದರು.

‘ಈ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ಅವರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಅವರಿಗೆ ಶಿಕ್ಷೆ ಖಚಿತ’ ಎಂದರು. 
‘ರಾಜ್ಯದ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದು ಮುಖ್ಯವಲ್ಲ. ಭ್ರಷ್ಟಾಚಾರದ ಕಪಿಮುಷ್ಠಿಯಿಂದ ರಾಜ್ಯವನ್ನು ರಕ್ಷಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬುದೇ ಮುಖ್ಯ ವಿಷಯ’ ಎಂದರು.

‘ಈ ಚುನಾವಣೆಯಲ್ಲಿ ತಮಿಳುನಾಡಿನ ಜನತೆಯ ಮುಂದೆ ಎರಡೇ ಆಯ್ಕೆಗಳಿವೆ.  ಒಂದೋ ಬಾವಿಗೆ ಬೀಳಬೇಕು ಅಥವಾ ಕಣಿವೆಗೆ ಜಿಗಿಯಬೇಕು’ ಎಂದು ಹೇಳುವ ಮೂಲಕ ಎಐಡಿಎಂಕೆ ಹಾಗೂ ಡಿಎಂಕೆ ಪಕ್ಷಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯವನ್ನು ಗೇಲಿ ಮಾಡಿದರು.
‘ಈ ಪಕ್ಷಗಳಿಗೆ ಪರ್ಯಾಯವಾಗಿ ಈ ಬಾರಿ ಬಿಜೆಪಿಯನ್ನು ಆಯ್ಕೆ ಮಾಡುವ ಅವಕಾಶವೂ ಇದೆ’ ಎಂದರು. 

‘ತಮಿಳುನಾಡು ಹಿಂದೊಮ್ಮೆ ದೇಶದ ಆರ್ಥಿಕ ಕೇಂದ್ರವಾಗಿತ್ತು. ಆದರೆ, ಭ್ರಷ್ಟಾಚಾರದಿಂದಾಗಿ ಅವನತಿಯತ್ತ ಮುಖ ಮಾಡಿದೆ’ ಎಂದರು.
‘ಯುಪಿಎ ಅವಧಿಯಲ್ಲಿ ನಡೆದ 2ಜಿ ಸ್ಪೆಕ್ಟ್ರಂನಂತಹ ಅನೇಕ ಹಗರಣಗಳಲ್ಲಿ ಡಿಎಂಕೆಯ ಭಾರಿ ಕುಳಗಳ ಕೈವಾಡಗಳಿವೆ’ ಎಂದು ಹೆಸರನ್ನು ಉಲ್ಲೇಖಿಸದೆಯೇ ಆರೋಪಿಸಿದರು.

ಕೇಂದ್ರ ಸರ್ಕಾರ ಎರಡು ವರ್ಷಗಳಲ್ಲಿ  ಜಾರಿಗೆ ತಂದ  ವಿವಿಧ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ‘ರೈತರು ಯೂರಿಯಾ ಖರೀದಿಸಲು ಎರಡು ದಿನ ಸಾಲುಗಟ್ಟಿ ನಿಲ್ಲಬೇಕಾಗಿತ್ತು. ಈಗ ರೈತರು ತಮಗೆ ಬೇಕಾದಷ್ಟು ಪ್ರಮಾಣದ ಯೂರಿಯಾವನ್ನು ಯಾವಾಗ ಬೇಕಾದರೂ ಖರೀದಿಸಬಹುದು. 

ಹಿಂದಿನ ಸರ್ಕಾರ ₹1.76 ಲಕ್ಷ ಕೋಟಿ ಮೌಲ್ಯದ ಕಲ್ಲಿದ್ದಲು ಲೂಟಿ  ಮಾಡಿತ್ತು.  ನಾವು ಕಲ್ಲಿದ್ದಲು ಹರಾಜು ಹಾಕುವ ಮೂಲಕ, ಅದರಿಂದ ಬಂದ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಿದ್ದೇವೆ’ ಎಂದರು.

‘ಮೇ 16ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದರೆ  ಎನ್‌ಡಿಎ ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವುದು ಸುಲಭವಾಗಲಿದೆ’ ಎಂದರು.

*
ತಮಿಳುನಾಡಿನ ಜನತೆಯ ಮುಂದೆ ಎರಡೇ ಆಯ್ಕೆಗಳಿವೆ.  ಒಂದೋ ಬಾವಿಗೆ ಬೀಳಬೇಕು ಅಥವಾ ಕಣಿವೆಗೆ ಜಿಗಿಯಬೇಕು
ನರೇಂದ್ರ ಮೋದಿ
ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT