ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾನಿ ಮಾಡಿ ದೂರು ನೀಡುವ ಅತಿಕ್ರಮ ವಾಸಿಗಳು’

ವಿದ್ಯಾರ್ಥಿನಿಲಯ ಅವ್ಯವಸ್ಥೆ: ಕುಲಪತಿ ಅಸಹಾಯಕತೆ
Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳಲ್ಲಿ ಅನಧಿಕೃತವಾಗಿ ಠಿಕಾಣಿ ಹೂಡಿರುವ ವಿದ್ಯಾರ್ಥಿಗಳೇ ಶೇ 50ರಷ್ಟು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ನಿಲಯದ ಸ್ವತ್ತುಗಳಿಗೆ ಹಾನಿ ಮಾಡಿ ಮತ್ತೆ ಅವರೇ ದೂರು ನೀಡುತ್ತಾರೆ’ ಎಂದು ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅಸಹಾಯಕತೆ ವ್ಯಕ್ತಪಡಿಸಿದರು.

ಸೆಂಟ್ರಲ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶೇಷ ಸಿಂಡಿಕೇಟ್‌ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ವಿದ್ಯಾರ್ಥಿ ನಿಲಯದ ನಿರ್ವಹಣೆಯಲ್ಲಿ ವಿವಿ ಕಡೆಯಿಂದಲೂ ಲೋಪ ಆಗಿದೆ. ಆದರೆ, ದುರಸ್ತಿ ಮಾಡಿದ ಕೂಡಲೇ ಹಾಳುಗೆಡವಲಾಗುತ್ತದೆ. ನೀರಿನ ಪೈಪ್‌ಗಳನ್ನು, ಶೌಚಾಲಯಗಳಿಗೆ ಹಾನಿ ಮಾಡಲಾಗುತ್ತಿದೆ. ಗೋದಿ ಹಿಟ್ಟು, ಕಡಲೆ ಹಿಟ್ಟು ಹಾಕಿ ಒಳಚರಂಡಿ ಮಾರ್ಗಗಳ ಬ್ಲಾಕ್‌ ಮಾಡುವ ಕುಕೃತ್ಯವೂ ನಡೆಯುತ್ತಿದೆ. ಇಂತಹ ಕೆಲಸ ಮಾಡಿದವರೇ ಮತ್ತೆ ವಿವಿ ವ್ಯವಸ್ಥೆ ಬಗ್ಗೆ ದೂರು ನೀಡುತ್ತಾರೆ’ ಎಂದು ಅವರು ದೂರಿದರು.

‘ವಿದ್ಯಾರ್ಥಿ ನಿಲಯದಲ್ಲಿ ಪ್ರತಿ ವಿದ್ಯಾರ್ಥಿಯ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ರೂ.820 ಬರುತ್ತದೆ. ವಿವಿ ರೂ.2,500 ಖರ್ಚು ಮಾಡುತ್ತದೆ. ಇದು ದೊಡ್ಡ ಹೊರೆ. ಇನ್ನೊಂದೆಡೆ ಡಿಪ್ಲೊಮಾ ಸೇರಿದಂತೆ ಅತಿಕ್ರಮ ವಿದ್ಯಾರ್ಥಿಗಳಿಂದ ಸಮಸ್ಯೆ ಆಗುತ್ತಿದೆ. ಅವರನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ಒಪ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಇದೇ 27ರಂದು ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.

‘ವಿವಿಯ ಪುರುಷರ ಮೂರು ವಿದ್ಯಾರ್ಥಿ ನಿಲಯಗಳ ದುರಸ್ತಿಗೆ ರೂ.2.20 ಕೋಟಿ ಬೇಕು. ಒಂದೇ ಸಲ ಈ ಮೊತ್ತ ಭರಿಸುವುದು ಕಷ್ಟ. ಹೀಗಾಗಿ ಆದ್ಯತೆಯ ಮೇರೆಗೆ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಕುಲಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಬುಧವಾರ ವರದಿ ಸಲ್ಲಿಸಲಾಗಿದೆ. ಈ ವರದಿಯ ಆಧಾರದಲ್ಲಿ ಟೆಂಡರ್‌ ಕರೆಯಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
‘ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ 250 ವಿದ್ಯಾರ್ಥಿನಿಯರು ಇರಲು ಅವಕಾಶವಿದೆ. ಆದರೀಗ 700 ವಿದ್ಯಾರ್ಥಿನಿಯರು ಇದ್ದಾರೆ.

ಹೀಗಾಗಿ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಸದ್ಯ ವಿದ್ಯಾರ್ಥಿ ನಿಲಯದ ದುರಸ್ತಿಗೆ ರೂ.30 ಲಕ್ಷ ವೆಚ್ಚ ಮಾಡಲಾಗುವುದು. ರೂ.58 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ 9 ಕೊಠಡಿಗಳನ್ನು ನಿರ್ಮಿಸಲಾಗುವುದು’ ಎಂದು ಅವರು ತಿಳಿಸಿದರು.
‘ಜ್ಞಾನಭಾರತಿಯಲ್ಲಿರುವ ಆಡಳಿತ ವಿಭಾಗವನ್ನು ರೂ.1.48 ಕೋಟಿ ವೆಚ್ಚದಲ್ಲಿ   ದುರಸ್ತಿ ಮಾಡಲಾಗುವುದು. ರೂ.65 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ದುರಸ್ತಿಪಡಿಸಲಾಗುವುದು. ರೂ.78 ಲಕ್ಷ ಬಳಸಿ 240 ಕೆ.ವಿ. ಸಾಮರ್ಥ್ಯದ ಐದು ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಿ ವಿವಿಯ ವಿದ್ಯುತ್‌ ಸಮಸ್ಯೆಯನ್ನು ಸರಿಪಡಿಸಲಾಗುವುದು. ಈ ಎಲ್ಲ ಕಾರ್ಯಕ್ಕಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗದ 12ನೇ ಯೋಜನೆಯ ರೂ.2.50 ಕೋಟಿ ಅನುದಾನವನ್ನು ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವೈ ಫೈ ಹಾಕುವ ಕಾರ್ಯ ಆರಂಭವಾಗಿದೆ. ಇದಕ್ಕೆ ರೂ.2 ಕೋಟಿ ವೆಚ್ಚ ಮಾಡಲಾಗುವುದು. ಅದೇ ಸಮಯದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಹಾಕಲಾಗುವುದು. ಈ ಪ್ರಕ್ರಿಯೆ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದರು.
ಕುಲಸಚಿವರಾದ ಪ್ರೊ.ಕೆ.ಕೆ. ಸೀತಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT