ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂ ಶಬ್ದ ಮಹ­ಮ್ಮದೀಯ­ರ ಕೊಡುಗೆ’

ಮುರುಘಾ ಶರಣರ ಕೃತಿ ಬಿಡುಗಡೆ ವೇಳೆ ಮೊಯಿಲಿ ಪ್ರತಿಪಾದನೆ
Last Updated 21 ಸೆಪ್ಟೆಂಬರ್ 2014, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದೂ ಎಂಬ ಶಬ್ದ ಭಾರತದ ಮಣ್ಣಿನಲ್ಲಿ ಹುಟ್ಟಿದ್ದಲ್ಲ. ಯಾವುದೇ ಉಪನಿಷತ್‌ಗಳಲ್ಲೂ ಈ ದ ಬಳಕೆ ಇಲ್ಲ. ಇದು ಮಹ­ಮ್ಮದೀಯ­ರಿಂದ ಭಾರತಕ್ಕೆ ಬಂದಿದೆ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ಭಾನುವಾರ ಇಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ‘ಪ್ರಚಲಿತ’, ‘ಮುನ್ನೋಟ’ ಹಾಗೂ ‘ವಚನ ವಿವೇಕ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ‘ನಾವು ಶಬ್ದಗಳ ಅಪಭ್ರಂಶವನ್ನೂ ಇತಿಹಾಸ ಎಂದೇ ನಂಬುವ ದೊಡ್ಡ ತಪ್ಪು ಮಾಡುತ್ತೇವೆ. ಆದ್ದರಿಂದ ಹಿಂದೂ ಎಂದು ಹೆಮ್ಮೆಯಿಂದ ಹೇಳಿ­ಕೊಳ್ಳುವ ಭಾರತೀಯರು ಇಂತಹ ಸತ್ಯಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ಇತಿಹಾಸವನ್ನು ಹೊಗಳುವ ಪ್ರವೃತ್ತಿ ನಮ್ಮಲ್ಲಿ ಬಹಳಷ್ಟು ಇದೆ. ಸಮಾಜದ ಬದಲಾ­ವಣೆ ಮಾಡ­ಹೊರಟ­ವರನ್ನು ಅವತಾರ ಪುರುಷ­ರ­ನ್ನಾಗಿ ಮಾಡಿದ ಜನರು ನಾವು. ಈ ಮನಸ್ಥಿತಿ­ಯಿಂದ ಒಂದು ಸಿದ್ಧಾಂತದ ವರ್ಚಸ್ಸು, ಹೋರಾಟ ವ್ಯರ್ಥವಾಗು­ತ್ತದೆ’ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ಸಂತಾನ: ಶಿವಮೂರ್ತಿ ಶರಣರು ಮಾತ­ನಾಡಿ, ‘ನನ್ನಂತಹ ಸನ್ಯಾಸಿಗಳಿಗೆ ಪುಸ್ತಕಗಳೇ ಸಂತಾನ’ ಎಂದು ತಿಳಿಸಿದರು.
‘ಶರಣರ ವೈಚಾರಿಕ ಸಾಹಿತ್ಯ’ ಕುರಿತು ಸಾಹಿತಿ ಡಾ. ಪ್ರಹ್ಲಾದ ಅಗಸನ­ಕಟ್ಟೆ ಹಾಗೂ ಶರಣರ ‘ಕಾವ್ಯ’ಗಳ ಕುರಿತು ಕಾಲೇಜು ಶಿಕ್ಷಣ ಇಲಾಖೆ ಸಮನ್ವಯಾ­ಧಿಕಾರಿ ಡಾ. ರಾಜಶೇಖರ ಮಠಪತಿ ಮಾತನಾಡಿದರು.

‘ಗಾಂಧಿಯ ಹಾದಿಯಲ್ಲಿ’: ‘ಬದುಕಿನ ಒಳ ಮತ್ತು ಹೊರಗನ್ನು ಶುದ್ಧ­ಗೊಳಿಸಿ ಮುನ್ನಡೆದ ಗಾಂಧೀಜಿ ಪ್ರಯ­ತ್ನ­ಗಳನ್ನು ಶಿವಮೂರ್ತಿ ಶರಣರ­ಲ್ಲಿಯೂ ಕಾಣ­ಬಹುದು’ ಎಂದು ಸಾಹಿತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್‌ ವ್ಯಾಖ್ಯಾನಿಸಿದರು. ಶರಣರ ಕೃತಿಗಳ ವಿಚಾರಣ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಅಂತ­ರಂಗ ಮತ್ತು ಬಹಿರಂಗ ಲೋಕದ ಪರಿ­ಯನ್ನು ಶುದ್ಧಗೊಳಿಸಿಕೊಂಡು ಶರಣರು ಬದು­­­ಕಿ­ನಲ್ಲಿ ಸಾಕಷ್ಟು ಸಮನ್ವಯ ಸಾಧಿಸಿ­ದ್ದಾರೆ. ಅನೇಕ ಸಂದರ್ಭಗಳಲ್ಲಿ ತಮ್ಮನ್ನು ತಾವೇ ಪ್ರಯೋಗಕ್ಕೆ ಒಡ್ಡಿಕೊಂಡು ಸ್ವಾಮಿತ್ವಕ್ಕೆ  ಅಪವಾದವಾಗಿ ಬದುಕುತ್ತಿದ್ದಾರೆ’ ಎಂದು ತಿಳಿಸಿದರು.

ಪುರೋಹಿತರು ದೇಶಕ್ಕೆ ಕಂಟಕ
ಸಮಾರಂಭವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ದೇ.ಜವರೇಗೌಡ ಅವರು, ‘ಎಲ್ಲಿಯವರೆಗೂ ಈ ದೇಶದಲ್ಲಿ ಪುರೋಹಿತರು ಇರುತ್ತಾರೋ ಅಲ್ಲಿಯ­ವರೆಗೂ ಶಾಂತಿ ಕ್ಷೇಮ ಇಲ್ಲ ಎಂಬ ಕುವೆಂಪು ಅವರ ನುಡಿ ಇಂದಿಗೂ ಪ್ರಸ್ತುತ’ ಎಂದು ಹೇಳಿದರು. ‘ಒಂದು ವೇಳೆ ರಾಮಾಯಾಣ, ಮಹಾ­ಭಾರತ­ಗಳು ಇಲ್ಲದಿದ್ದರೆ ಈ ದೇಶ ಏನಾಗು­ತ್ತಿತ್ತೋ ಗೊತ್ತಿಲ್ಲ. ಸಾಹಿತ್ಯದ ಓದು ಮನು­ಷ್ಯನಿಗೆ ಸಹಸ್ರ ಶಕ್ತಿ ನೀಡುತ್ತದೆ’ ಎಂದರು.

‘ಜಾತಿ ಅಭಿಮಾನ ಅನಿವಾರ್ಯ’
‘ನಮ್ಮ ಬೇರು ಇರುವುದು ಜಾತಿಯ ಆಧಾ­ರದ ಮೇಲೆ. ನಮ್ಮ ದೇಶ, ಜಾತಿ, ನೀರಿನ ಬಗ್ಗೆ ಅಭಿಮಾನ ಇರಬೇಕು. ಆದರೆ ಅದರಿಂದ ಇತರರಿಗೆ ತೊಂದರೆ ಆಗ­ಬಾ­ರದು’ ಎಂದು ಹಿರಿಯ ಸಾಹಿತಿ ಪ್ರೊ.ಕಮಲಾ ಹಂಪನಾ ಅವರು ಸಮಾ­ರೋಪ ಸಮಾರಂಭದಲ್ಲಿ ಪ್ರತಿಪಾದಿಸಿದರು. ಹಿರಿಯ ಸಾಹಿತಿ ಪ್ರೊ. ಹಂಪ ನಾಗ­ರಾಜಯ್ಯ ಮಾತನಾಡಿ, ದೇಶದಲ್ಲಿ ಶಿಕ್ಷಣ ಪ್ರಸರಣಕ್ಕೆ ಮೊದಲು ಭೂಮಿಕೆ ಸಿದ್ಧಪಡಿಸಿದ­ವರು ಜೈನರು ಹಾಗೂ ಬೌದ್ಧರು. ಜಿನಾಲ-­ಯಗಳು ಹಾಗೂ ಬೌದ್ಧ ವಿಹಾರಗಳ ಮೂಲಕ ಅವರು ಈ ಕೆಲಸ ಮಾಡಿದರು. ಬಳಿಕ ಕ್ರೈಸ್ತರು ಈ ಕೆಲಸವನ್ನು ಮುಂದುವರಿಸಿದರು. ಕರ್ನಾಟಕದಲ್ಲಿ ಶರಣರು ಎಲ್ಲ ಜನಾಂಗದ ಜನರಿಗೆ ಶಿಕ್ಷಣದ ಬಾಗಿಲು ತೆರೆದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT