ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಪ್ಪರಗಿ ಜಲಾಶಯಕ್ಕೆ ಕೃಷ್ಣೆ’

Last Updated 4 ಮೇ 2016, 9:41 IST
ಅಕ್ಷರ ಗಾತ್ರ

ಜಮಖಂಡಿ:  ತಾಲ್ಲೂಕಿನ ಜನರ ಬಾಯಾರಿಕೆ ತಣಿಸಲು ಮಹಾರಾಷ್ಟ್ರ ರಾಜ್ಯದ ಜಲಾಶಯದಿಂದ ಹರಿದು ಬಂದಿರುವ ಕೃಷ್ಣಾ ನದಿ ನೀರು  ಹಿಪ್ಪರಗಿ ಜಲಾಶಯ ತಲುಪಿದೆ.
ಕೃಷ್ಣಾನದಿ ಬತ್ತಿ ಬರಿದಾಗಿ ಕಳೆದ ಸುಮಾರು ಎರಡು ತಿಂಗಳುಗಳಿಂದ ಹಿಪ್ಪರಗಿ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿತ್ತು. ನದಿಗೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ರಾಜು ಪಿಸಾಳ  ಕುಡಿವ ನೀರು ಪೂರೈಕೆ ಪುನರರಾಂಭಕ್ಕೆ ಚಾಲನೆ ನೀಡಿದರು.

ನಗರಸಭೆ ಅಧ್ಯಕ್ಷ ರಾಜು ಪಿಸಾಳ ಮಾತನಾಡಿ,  ಕೇವಲ 1 ಟಿಎಂಸಿ ಅಡಿ ನೀರನ್ನು ಮಾತ್ರ ಮಹಾರಾಷ್ಟ್ರ ಜಲಾಶಯದಿಂದ ಕೃಷ್ಣ ನದಿಗೆ ಹರಿಸಿದ್ದರೆ ನೀರು ಹಿಪ್ಪರಗಿ ಜಲಾಶಯ ತಲುಪುತ್ತಿರಲಿಲ್ಲ. ಇನ್ನೊಂದು ಟಿಎಂಸಿ ಅಡಿ ನೀರನ್ನು ಹರಿಸಿದ್ದರಿಂದ ನೀರು ಹಿಪ್ಪರಗಿ ಜಲಾಶಯ ತಲುಪಿದೆ ಎಂದರು.

ನೀರು ಪೂರೈಸಲು   15 ದಿನಗಳ ವರೆಗೆ ಮಾತ್ರ ಸಾಕಾಗುತ್ತದೆ ಎಂದರು. ಪ್ರತಿ ಮನೆಗೆ ಪ್ರತಿ 4 ದಿನಗಳಿಗೆ ಒಂದು ಸಲದಂತೆ ಕುಡಿಯುವ ನೀರನ್ನು ನಲ್ಲಿಯ ಮೂಲಕ ಪೂರೈಸಲಾಗುವುದು. ಈಗ ಕೃಷ್ಣಾ ನದಿಗೆ ಹರಿದು ಬಂದಿರುವ ನೀರು ನಿಂತ ನೀರಾಗಿದೆ. ಕಾರಣ ಸಾರ್ವಜನಿಕರು ನೀರನ್ನು ಶುದ್ಧೀಕರಿಸಿ ಕಾಯಿಸಿ ಆರಿಸಿ ಕುಡಿಯಬೇಕು. ಇಲ್ಲದಿದ್ದರೆ ಬಳಕೆಗೆ ಮಾತ್ರ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ನಗರದಲ್ಲಿನ ಸಾರ್ವಜನಿಕ ತೆರೆದ ಬಾವಿಗಳ ಹೂಳೆತ್ತುವ ಹಾಗೂ ಅವುಗಳ ಪರಿಸರವನ್ನು ಸ್ವಚ್ಛಗೊಳಿಸಿ ಕಬ್ಬಿಣ ಜಾಳಿಗೆ ಅಳವಡಿಸುವ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಚಿಂತನೆ ನಡೆದಿದೆ ಎಂದರು.

ಕೊಳವೆ ಬಾವಿಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಿದ ಖಾಸಗಿ ವ್ಯಕ್ತಿಗಳನ್ನು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಅಲ್ಲದೆ ಅಂತವರ ವಿದ್ಯುತ್‌ ಬಿಲ್‌ ಅನ್ನು ನಗರಸಭೆಯಿಂದ ಭರಿಸಲಾಗಿದೆ. ಇನ್ನೂ ಯಾರಿಗಾದರೂ ಅಂತಹ ವಿದ್ಯುತ್‌ ಬಿಲ್‌ ಪಾವತಿಸುವುದು ಬಾಕಿ ಇದ್ದರೆ ನಗರಸಭೆ ಬಂದು ಬಿಲ್‌ ಹಣವನ್ನು ಪಡೆಯಬೇಕು ಎಂದರು. ಕೃಷ್ಣಾನದಿಗೆ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ನದಿಯ ಎರಡೂ ದಡಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ನೀರುಣಿಸಲು ಪಂಪ್‌ಸೆಟ್‌ಗಳನ್ನು ಸಿದ್ಧಪಡಿಸಿದ್ದಾರೆ.

ಕಾರಣ ವಿದ್ಯುತ್‌ ಸ್ಥಗಿತಗೊಳಿಸಿ ನದಿಯಿಂದ ರೈತರು ಜಮೀನುಗಳಿಗೆ ನೀರನ್ನು ಎತ್ತದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ನಗರಸಭೆ ಸದಸ್ಯರಾದ ರಾಜು ಮೈಗೂರ, ಬಂದೇನವಾಜ್‌ ಯಲಗಾರ, ರೇವೆಣೆಪ್ಪ ತೆಲಬಕ್ಕನವರ, ರಮೇಶ ಆಲಬಾಳ, ಅಜೀತ ಮೆಂಗಾಣಿ, ಸುರೇಶ ಕಡಕೋಳ, ರಹಿಮತ್‌ಉಲ್ಲಾ ಚೌಧರಿ, ಶ್ರೀನಿವಾಸ ಅಪರಂಜಿ, ಜಂಭುನಾತ ಶಾಸ್ತ್ರಿ, ನಗರಸಭೆ ಆಯುಕ್ತ ಗೋಪಾಲ ಕಾಸೆ, ಆರ್‌.ಆರ್. ಕುಲಕರ್ಣಿ,  ಸಿಬ್ಬಂದಿ ನರಸಪ್ಪನವರ, ಮುನಿಸ್ವಾಮಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT