ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಎಲ್ಲವೂ ಗಾಸಿಪ್‌ ಗಾಸಿಪ್‌...

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಗುಳಿ ಕೆನ್ನೆಯ ಚೆಲುವೆ ದೀಪಾ ಸನ್ನಿಧಿ ‘ಚಕ್ರವರ್ತಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಬಿಡುವು ಹಾಗೂ ಗಾಸಿಪ್‌ಗಳ ಬಗ್ಗೆ ಅವರು ಡಿ.ಎಂ.ಕುರ್ಕೆ ಪ್ರಶಾಂತ ಅವರೊಂದಿಗೆ ಮಾತನಾಡಿದ್ದಾರೆ.

* ‘ಚಕ್ರವರ್ತಿ’ ಸಿನಿಮಾ ಮೂಲಕ ಎರಡು ವರ್ಷಗಳ ನಂತರ ಕನ್ನಡಕ್ಕೆ ಮರಳಿದ್ದೀರಿ. ತಮಿಳು ಸಿನಿಮಾಗಳಲ್ಲಿ ತೊಡಗಿದ್ದ ಕಾರಣದಿಂದ ಚಂದನವನದಿಂದ ದೂರ ಉಳಿಯಬೇಕಾಯಿತೇ?
‘ಚಕ್ರವರ್ತಿ’ಗೂ ಮುನ್ನ ‘ಚೌಕ’ ಕನ್ನಡ ಚಿತ್ರದಲ್ಲಿ ನಟಿಸಿದ್ದೆ. ತಮಿಳಿನಲ್ಲಿ ಎರಡು ಸಿನಿಮಾ ಮಾಡಿದ್ದೇನೆ. ಈ ನಡುವೆ ಚಿತ್ರಕಥೆ ಇಷ್ಟವಾಗದ ಕಾರಣದಿಂದಲೂ ಅವಕಾಶಗಳನ್ನು ಬಿಟ್ಟಿರುವೆ. ವಿದ್ಯಾಭ್ಯಾಸದ ಕಡೆಯೂ ಗಮನ ನೀಡಿದ್ದೆ. ಸಿನಿಮಾ ಜತೆಗೆ ನಾನು ಬೇರೆ ಯಾವ ಆಯಾಮದಲ್ಲಿ ತೊಡಗಿಸಿಕೊಳ್ಳಬಹುದು ಎನ್ನುವ ಚಿಂತನೆಯೂ ನನ್ನಲ್ಲಿ ಇತ್ತು.

* ಕನ್ನಡ ಚಿತ್ರಗಳಲ್ಲಿ ನೀವು ನಟಿಸುವುದಿಲ್ಲ ಎನ್ನುವ ಸುದ್ದಿ ಹರಡಿತ್ತು?
ಈ ಗಾಸಿಪ್ ಹೇಗೆ ಹುಟ್ಟಿತು ಎನ್ನುವುದು ಈಗಲೂ ತಿಳಿಯುತ್ತಿಲ್ಲ. ‘ದೀಪಾ ತಮಿಳಿಗೆ ಹೋಗಿದ್ದಾರೆ. ಇನ್ನು ಮುಂದೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದರು. ಅದೆಲ್ಲವೂ ಗಾಸಿಪ್‌, ಗಾಸಿಪ್.

* ಇಂಥ ಗಾಸಿಪ್‌ಗಳು ಹುಟ್ಟಲು ಕಾರಣವೇನು. ನೀವು ಮಾಧ್ಯಮಗಳಿಂದಲೂ ದೂರವಂತೆ?
ನಾನಾಯಿತು ನನ್ನ ಕೆಲಸವಾಯಿತು ಎನ್ನುವ ಸ್ವಭಾವ ನನ್ನದು. ಸುಮ್ಮನೆ ಪ್ರಚಾರ ಪಡೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರ ಅಗತ್ಯ, ಉಪಯೋಗವಿಲ್ಲ ಎಂದಲ್ಲ. ಆದರೆ ನನ್ನನ್ನು ನಾನು ಪ್ರಮೋಟ್ ಮಾಡಿಕೊಳ್ಳುವ ವಿಷಯದಲ್ಲಿ ತುಂಬಾ ದೂರ.

‘ಕೆಲವರು ದೀಪಾ, ಕನ್ನಡದ ಸಿನಿಮಾ ಮಾಡುವುದಿಲ್ಲ’ ಎಂದು ಮಾತನಾಡಿದರು. ಅದು ಸುದ್ದಿಯಾಯಿತು. ಈಗ ‘ಚಕ್ರವರ್ತಿ’ ಸಿನಿಮಾ ಕೆಲಸಗಳು ನಡೆಯುತ್ತಿದೆ, ಮಾತನಾಡಬಹುದು. ಕೆಲಸ ಇದ್ದಾಗ ಮಾತ್ರ ಮಾತನಾಡಬೇಕು ಅಲ್ಲವೇ. ಇಲ್ಲಿ ಗಾಸಿಪ್‌ಗಳು ಇದ್ದಿದ್ದೇ. ಆ ಕ್ಷಣಕ್ಕೆ ಕೆಲವರಿಗೆ ಏನು ಊಹೆಗೆ ನಿಲುಕುತ್ತದೆಯೋ ಅದು ಗಾಸಿಪ್ ಆಗುತ್ತದೆ.

* ‘ಚಕ್ರವರ್ತಿ’ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?
‘ಚಕ್ರವರ್ತಿ’ ನಾನು ಮತ್ತು ದರ್ಶನ್ ನಟಿಸುತ್ತಿರುವ ಎರಡನೇ ಸಿನಿಮಾ. ಇದು 80ರ ದಶಕದಲ್ಲಿ ನಡೆಯುವ ಭೂಗತ ಲೋಕದ ಕಥೆ. ಪೂರ್ಣವಾಗಿ ಹಳೆಯ ಲುಕ್ ನನಗಿದೆ. ಪ್ರಬುದ್ದ ಪಾತ್ರ. ಅಭಿನಯಕ್ಕೆ ಪ್ರಾಮುಖ್ಯವಿದೆ. ತುಂಬಾ ಸಂಪ್ರದಾಯಸ್ಥ ಹುಡುಗಿ.

ಇಡೀ ಸಿನಿಮಾದಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುವೆ. ಇಲ್ಲಿಯವರೆಗೂ ಗ್ಲಾಮರ್ ಪಾತ್ರದಲ್ಲಿ ನಟಿಸಿದ್ದ ನನಗೆ, ಇದು ಪೂರ್ಣ ತದ್ವಿರುದ್ಧವಾದ ಪಾತ್ರ. ಈ ಸಿನಿಮಾದ ನಂತರ ನಿರ್ದೇಶಕರು ನನ್ನನ್ನು ನೋಡುವ ದೃಷ್ಟಿ ಬದಲಾಗುತ್ತದೆ. ನಾನು ಎಲ್ಲ ರೀತಿಯ ಪಾತ್ರಗಳಿಗೂ ಒಗ್ಗುತ್ತೇನೆ ಎನ್ನುವ ವಿಶ್ವಾಸ ನಿರ್ದೇಶಕರಿಗೆ ಮೂಡುತ್ತದೆ.

* ಕನ್ನಡದಲ್ಲಿ ಆರಂಭದಲ್ಲಿಯೇ ತಾರಾ ವರ್ಚಸ್ಸಿನ ನಟರ ಜತೆ ತೆರೆ ಹಂಚಿಕೊಂಡವರು ನೀವು. ತಮಿಳು ಪ್ರವೇಶಕ್ಕೆ ಇದು ಮೆಟ್ಟಿಲಾಯಿತೇ?
ಖಂಡಿತಾ ಇಲ್ಲ. ನಾನು ತಮಿಳಿನಲ್ಲಿಯೂ ಆಡಿಷನ್ ಎದುರಿಸಿಯೇ ಆಯ್ಕೆಯಾಗಿದ್ದು. ತಮಿಳಿನಲ್ಲಿ ನಟಿಸಿದ ಎರಡೂ ಚಿತ್ರಗಳು ಪರವಾಗಿಲ್ಲ ಎನ್ನುವಂತೆ ಹೆಸರು ಮಾಡಿವೆ. ಆ ಎರಡೂ ಪಾತ್ರಗಳು ಸಂತೋಷ ನೀಡಿವೆ. ತಮಿಳು ಪ್ರವೇಶ ನನ್ನ ದೃಷ್ಟಿಕೋನಗಳ ಬೆಳವಣಿಗೆಗೂ ನೆರವಾಯಿತು.

* ‘ನಾನು ಸಿನಿಮಾಗಳಿಂದ ದೂರ ಉಳಿದಿದ್ದು ನನಗೆ ವೈಯಕ್ತಿಕವಾಗಿ ಸಹಾಯವಾಯಿತು’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದೀರಿ. ಅದು ಯಾವ ರೀತಿ? 
ಭವಿಷ್ಯದಲ್ಲಿ ಏನು ಮಾಡಬೇಕು ಎಂದು ಆಲೋಚಿಸಲು ಮತ್ತು ನನ್ನ ಸೃಜನಶೀಲ ಆಸಕ್ತಿಯನ್ನು ಪೋಷಿಸಲು ನನಗೆ ಆ ಸಮಯ ನೆರವಾಯಿತು. ಕೆಲವು ವರ್ಷಗಳ ನಂತರ ನಟನೆ ನಿಲ್ಲಿಸಬೇಕು ಎಂದುಕೊಂಡಿದ್ದೇನೆ. ನನಗೆ ಇಲ್ಲಿ ದೀರ್ಘವಾಗಿ ಮುಂದುವರಿಯುವ ಆಲೋಚನೆ ಇಲ್ಲ. ಸೃಜನಶೀಲವಾಗಿ ಕೆಲಸಮಾಡಬೇಕು ಎನ್ನುವ ಮನಸ್ಥಿತಿ ಇದೆ.

ಆದರೆ ಸಿನಿಮಾದಲ್ಲಿ ತೊಡಗಿದ್ದಾಗ ಶೇ 100ರಷ್ಟು ಅಲ್ಲಿಯೇ ಪೂರ್ಣವಾಗಿ ಗಮನ ಕೇಂದ್ರೀಕರಿಸುವೆ.
ಖುಷಿ ಎಂದರೆ ಈಗಲೂ ಹಲವರು ‘ಕನ್ನಡದಲ್ಲಿ ಏಕೆ ನಟಿಸುತ್ತಿಲ್ಲ’ ಎಂದು ಕೇಳುತ್ತಾರೆ. ಎರಡು ವರ್ಷ ಕನ್ನಡದಿಂದ ದೂರವಿದ್ದರೂ ಜನರು ನನ್ನ ಮರೆತಿಲ್ಲ. ಆಂಗ್ಲ ಸಾಹಿತ್ಯವನ್ನು ಓದುತ್ತಿದ್ದೇನೆ. ಪದ್ಯಗಳನ್ನು ಬರೆಯುವೆ. ನನ್ನ ವೈಯಕ್ತಿಕ ಹವ್ಯಾಸಗಳಿಗೆ ಸಮಯ ಮೀಸಲಿಡುವೆ. ಸಿನಿಮಾ ಬದುಕಿನ ನಡುವೆಯೇ ನನಗೆ ವಿರಾಮ ಬೇಕು, ಅದು ವೈಯಕ್ತಿಕ ಹವ್ಯಾಸಕ್ಕಾಗಿ, ಸೃಜನಶೀಲವಾಗಿ ತೊಡಗಲು.

* ಹಾಗಿದ್ದರೆ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಿಯೇ ಇದೆ...
ನಾನು ವ್ಯಾಸಂಗ ಮಾಡುತ್ತಿರುವುದೇ ಇಂಗ್ಲಿಷ್ ಸಾಹಿತ್ಯವನ್ನು. ಇಂಗ್ಲಿಷ್ ಪದ್ಯ ಬರೆಯುವುದು ನನ್ನ ಹವ್ಯಾಸ. ಕೆಲವು ದಿನ ಫೋಟೊಗ್ರಫಿ ಸಹ ಮಾಡಿದೆ. ಸೃಜನಶೀಲ ಹುಡುಕಾಟದಲ್ಲಿ ತೊಡಗುವುದು ನನಗೆ ಇಷ್ಟ.

* ತಮಿಳು ಚಿತ್ರರಂಗದಲ್ಲಿ ಭಾಷಾ ಸಮಸ್ಯೆ ಎದುರಿಸಿದ್ದೀರಾ?
ತಮಿಳು ನನಗೆ ಹೊಸ ಭಾಷೆ. ಕಲಿಕೆಗೆ ಸಮಯ ಬೇಕಾಯಿತು. ಆದರೆ ಬೇರೆಯವರ ಧ್ವನಿ ನೀಡುವುದು ಇಷ್ಟವಿಲ್ಲ. ಮೊದಲನೇ ಚಿತ್ರ ರೀಮೇಕ್ ಆದ ಕಾರಣ ಹೆಚ್ಚಿನ ಸಮಸ್ಯೆಯಾಗಲಿಲ್ಲ. ಅಷ್ಟರಲ್ಲಿ ತಮಿಳನ್ನು ಕಲಿತ್ತಿದ್ದೆ. ಎರಡು ಚಿತ್ರದಲ್ಲಿ ನಟಿಸುವ ಮೂಲಕ ಜನರಿಗೆ ಪರಿಚಿತಳಾಗಿದ್ದೇನೆ. ಅಲ್ಲಿ ಮನ್ನಣೆ ಸಿಕ್ಕಿದೆ.

* ‘ಚಕ್ರವರ್ತಿ’ ಜೊತೆಗೆ ಬೇರೆ ಅವಕಾಶಗಳು ಬಂದಿವೆಯಾ?
ಒಂದು ಮಾತನ್ನು ಸ್ಪಷ್ಟವಾಗಿ ಹೇಳುವೆ. ನನಗೆ ಚಿಕ್ಕ–ದೊಡ್ಡ ಸಿನಿಮಾ ಎನ್ನುವ ನಂಬಿಕೆ ಇಲ್ಲ. ಹೊಸಬರ ಚಿತ್ರವಾದರೂ ಮಾಡುತ್ತೇನೆ. ಹೊಸ ಮತ್ತು ಯುವ ನಿರ್ದೇಶಕರು ಒಳ್ಳೆಯ ಕಥೆಗಳ ಜತೆ ಬರುತ್ತಿದ್ದಾರೆ. ಅವರ ಜತೆ ಕೆಲಸ ಮಾಡಲು ಇಷ್ಟಪಡುವೆ. ಕನ್ನಡದಲ್ಲಿ ನಟಿಸುತ್ತಿದ್ದೇನೆ ಎನ್ನುವುದು ಹಲವರಿಗೆ ಈಗ ತಿಳಿದಿದೆ. ಹೊಸ ಅವಕಾಶಗಳು ದೊರೆಯುತ್ತವೆ ಎನ್ನುವ ನಿರೀಕ್ಷೆ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT