ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಪ್ರತಿಯೊಬ್ಬ ವ್ಯಕ್ತಿಯೂ ರಾಜಕೀಯ ವ್ಯಕ್ತಿಯೇ...

Last Updated 28 ಮೇ 2016, 19:30 IST
ಅಕ್ಷರ ಗಾತ್ರ

* ನಿಮ್ಮ ಮೇಲೆ ಗೋಪಾಲಕೃಷ್ಣ ಗೋಖಲೆ ಅವರ ಪ್ರಭಾವ ಯಾವ ರೀತಿಯದು?
ನನಗೊಬ್ಬನಿಗೇ ಅಂತಲ್ಲ, ಗೋಖಲೆ ಅವರು ಇಡೀ ದೇಶಕ್ಕೆ ಸ್ಫೂರ್ತಿ. ಸಾಧಾರಣ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಯಾರ ಸಹಾಯವೂ ಇಲ್ಲದೇ ತಮ್ಮ ಮೌಲ್ಯ, ಚಿಂತನೆಗಳಿಂದ ರಾಷ್ಟ್ರನಾಯಕನಾಗಿ ಬೆಳೆದಿದ್ದೇ ಒಂದು ಸ್ಫೂರ್ತಿದಾಯಕ ಸಂಗತಿ. ಯುವ ಪೀಳಿಗೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಧುಮುಕಲು ಒಂದು ಆಕರ್ಷಣೆ ಬೇಕಾಗುತ್ತದೆ.

ಗೋಖಲೆ ಅಂಥ ಆಕರ್ಷಣೆಯಾಗಿದ್ದರು. ಈಗಲೂ ಆಗಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ನಮ್ಮ ಕುಟುಂಬದಲ್ಲಿ ಗೋಖಲೆಯವರ ನಂತರದ ಎರಡು ಪೀಳಿಗೆಯವರು ಸಾಮಾಜಿಕವಾಗಿ ಅಷ್ಟೊಂದು ಗುರುತಿಸಿಕೊಂಡಿರಲಿಲ್ಲ. ಇತ್ತೀಚೆಗೆ ನಾನು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ.

* ಗೋಖಲೆ ಅವರ ಯಾವ ಗುಣ ನಿಮಗೆ ಸ್ಫೂರ್ತಿ ನೀಡಿದೆ?
ಈ ಪ್ರಶ್ನೆಗೆ ಉತ್ತರ ಇಲ್ಲಿಂದ ಶುರುವಾಗಿ ಇಲ್ಲಿಗೆ ಮುಗಿಯುತ್ತದೆ ಎಂಬಂತೆ ಪ್ರತ್ಯೇಕಿಸಿ ಹೇಳುವುದು ಕಷ್ಟ. ಬದುಕನ್ನು – ಸಮಾಜವನ್ನು ನೋಡುವ ಇಡೀ ದೃಷ್ಟಿಕೋನವನ್ನೇ ಅವರಿಂದ ಪಡೆದುಕೊಂಡಿದ್ದೇನೆ.

* ಗೋಖಲೆ ಅವರು ಬದುಕಿದ್ದ ಸಮಾಜಕ್ಕೂ ಇಂದಿನ ಸಮಾಜಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಇಂದು ಗೋಖಲೆ ತತ್ವಗಳನ್ನು ಮುನ್ನೆಲೆಗೆ ತರುವ ಅಗತ್ಯವೇನಿದೆ?
ಗೋಖಲೆಯವರ ತತ್ವಗಳು ಈಗಲೂ ಸಮಾಜದಲ್ಲಿ ಮುನ್ನೆಲೆಯಲ್ಲಿಯೇ ಇವೆ. ಇದಕ್ಕಾಗಿ ಹೊಸ ಪ್ರಯತ್ನದ ಅಗತ್ಯವಿಲ್ಲ. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಪ್ರಜಾಪ್ರಭುತ್ವ, ಸಮಾಜವಾದಿ, ಜಾತ್ಯತೀತ ತತ್ವಗಳ ಬಗ್ಗೆ ಅವರು ಮೊದಲೇ ಹೇಳಿದ್ದರು.

ಅವರ ‘ಉದಾರವಾದ’ದ ಪರಿಕಲ್ಪನೆ ಮಹತ್ವವಾದದ್ದು. ದುರದೃಷ್ಟವಶಾತ್‌ ಇಂದು ಆ ಪರಿಕಲ್ಪನೆಗಳು ‘ಹುಸಿ ಉದಾರವಾದ’, ‘ಹುಸಿ ಜಾತ್ಯತೀತವಾದ’, ‘ಹುಸಿ ಪ್ರಜಾಪ್ರಭುತ್ವವಾದ’ದ ಆಯಾಮಗಳನ್ನು ಪಡೆದುಕೊಂಡಿವೆ.

* ಗೋಖಲೆ ಪ್ರಣೀತ ಉದಾರವಾದ ಯಾವ ಬಗೆಯದು?
ಅವರ ಪ್ರಕಾರ ‘ಉದಾರವಾದ’ಕ್ಕೆ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ, ರಾಜಕಾರಣ, ಧಾರ್ಮಿಕತೆ ಎಂಬ ನಾಲ್ಕು ಆಯಾಮಗಳಿವೆ. ಇಲ್ಲಿ ಧರ್ಮ ಎಂದರೆ ನಿರ್ದಿಷ್ಟ ಧರ್ಮವನ್ನು ಅನುಸರಿಸುವುದಲ್ಲ. ಅದು ನಿರ್ದಿಷ್ಟ ತತ್ವಾದರ್ಶಗಳ ಅನುಸರಣೆಯಷ್ಟೆ.

* ಗೋಖಲೆ ಅವರ ಪ್ರಭಾವ ಇಂದಿಗೂ ಇದೆ ಎನ್ನುವಿರಾ?
ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಮಹಮ್ಮದ್‌ ಅಲಿ ಜಿನ್ನಾ ಅವರಂತಹ ನಾಯಕರ ಮೇಲೂ ಗೋಖಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಇಂದು ನೀವು ಗಾಂಧಿ ತತ್ವಗಳನ್ನು ಪಾಲಿಸುತ್ತಿದ್ದೀರಿ ಎಂದರೆ ಪರೋಕ್ಷವಾಗಿ ಗೋಖಲೆಯವರ ತತ್ವಗಳನ್ನು ಪಾಲಿಸುತ್ತಿರುವಿರಿ ಎಂದೇ ಅರ್ಥ. ಗೋಖಲೆ ಇಂದಿಗೂ ಚಿಂತನೆಗಳ ರೂಪದಲ್ಲಿ ನಮ್ಮ ನಡುವೆ ಇದ್ದಾರೆ.

* ‘ಉದಾರವಾದಿ ರಾಷ್ಟ್ರೀಯವಾದ’ ಕುರಿತು ನಿಮಗೆ ವಿಶೇಷ ಕಾಳಜಿ ಇದೆ. ಇದಕ್ಕೂ ‘ರಾಷ್ಟ್ರೀಯವಾದ’ಕ್ಕೂ ಏನು ವ್ಯತ್ಯಾಸ?
ಆರ್ಥ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ರಾಜಕಾರಣ ಮತ್ತು ಧರ್ಮದ ಆಧಾರದ ಮೇಲೆ ರಾಷ್ಟ್ರನಿರ್ಮಾಣ ಆಗಬೇಕು ಎಂದು ಗೋಖಲೆ ಪ್ರತಿಪಾದಿಸಿದ್ದರು. ಈ ಎಲ್ಲ ಅಂಶಗಳೂ ಒಟ್ಟಿಗೆ ಸೇರುವುದೇ ‘ಉದಾರವಾದಿ ರಾಷ್ಟ್ರೀಯವಾದ’. ಉದಾರ ಎಂದರೆ ಸ್ವೇಚ್ಛೆ ಖಂಡಿತ ಅಲ್ಲ. ಭಾರತೀಯ ಸಂವಿಧಾನದಲ್ಲಿಯೇ ಕೆಲವು ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ಸ್ವಾತಂತ್ರ್ಯವೆಂಬುದು ಪುಕ್ಕಟೆ ಬರುವುದಿಲ್ಲ.

ಕೆಲವು ಕರ್ತವ್ಯ ಮತ್ತು ಬಾಧ್ಯತೆಗಳ ಅನುಸರಣೆಯಿಂದ ಅದು ಬರುತ್ತದೆ. ಸಂವಿಧಾನದಲ್ಲಿ ಹೇಳಿರುವ ಕರ್ತವ್ಯ–ಬಾಧ್ಯತೆಗಳನ್ನು ಅನುಸರಿಸಿದರೆ ಇಂದಿನ ‘ಸ್ವಚ್ಛ ಭಾರತ ಅಭಿಯಾನ’ದ ಅವಶ್ಯಕತೆಯೇ ಇರುವುದಿಲ್ಲ. ಆದರೆ ಅದನ್ನು ನಾವ್ಯಾರೂ ಅನುಸರಿಸುತ್ತಿಲ್ಲ. ಆದ್ದರಿಂದಲೇ ‘ಸ್ವಚ್ಛ ಭಾರತ ಅಭಿಯಾನ’ವನ್ನು ಹೇರಬೇಕಾಗಿದೆ.

ದೇಶಕ್ಕಾಗಿ ಕೆಲಸ ಮಾಡುವ ಉತ್ಸುಕತೆಯೇ ರಾಷ್ಟ್ರೀಯವಾದ. ಉದಾರವಾದ ಈ ಕೆಲಸಕ್ಕೊಂದು ಚೌಕಟ್ಟನ್ನು ಒದಗಿಸುತ್ತದೆ. ರಾಷ್ಟ್ರವನ್ನು ಕಟ್ಟಲು ಹಿಟ್ಲರ್‌ ಅಥವಾ ಮುಸೊಲೊನಿಯ ಅವಶ್ಯಕತೆಯಿಲ್ಲ. ಅದು ನಿರ್ಮಾಣ ಆಗಬೇಕಿರುವುದು ಮೌಲ್ಯ ಮತ್ತು ನೀತಿಯ ಅಡಿಪಾಯದ ಮೇಲೆ.

* ಇಂದು ರಾಷ್ಟ್ರೀಯವಾದ ಎನ್ನುವುದೂ ಒಂದು ರಾಜಕೀಯ ದಾಳವಾಗಿದೆ. ಇದರ ಅಪಾಯಗಳೇನು?
ಅದು ಅಪಾಯಕಾರಿ ಅಷ್ಟೇ ಅಲ್ಲ, ದುರದೃಷ್ಟಕರವೂ ಹೌದು. ಅದು ಇಡೀ ದೇಶವನ್ನೇ ಅಸ್ತವ್ಯಸ್ತಗೊಳಿಸುತ್ತಿದೆ. ರಾಷ್ಟ್ರೀಯವಾದ, ದೇಶದ್ರೋಹದ ಚರ್ಚೆ ವಿಶ್ವವಿದ್ಯಾಲಯಗಳ ಆವರಣಗಳಿಂದ ಶುರುವಾಗಿ ಎಲ್ಲೆಡೆ ಹರಡುತ್ತಿದೆ. ಮುಂದಿನ ಪ್ರಜೆಗಳೆನಿಸಿದ ವಿದ್ಯಾರ್ಥಿಗಳು ತಪ್ಪಾಗಿ ಮಾತನಾಡುತ್ತಿದ್ದಾರೆ. ಅದರ ಜ್ವಾಲೆಗಳನ್ನು ವ್ಯವಸ್ಥಿತವಾಗಿ ಎಲ್ಲೆಡೆಗೆ ಹರಡಿಸಲಾಗುತ್ತಿದೆ.

* ದೇಶಪ್ರೇಮ ಎನ್ನುವುದನ್ನು ನೀವು ಹೇಗೆ ವ್ಯಾಖ್ಯಾನಿಸುವಿರಿ?
ಇಂದು ನಾವು ಮೊದಲು ದೇಶದ್ರೋಹಿ ಅಲ್ಲ ಎನ್ನುವುದನ್ನು ಸಾಬೀತುಪಡಿಸಬೇಕು. ನಂತರ ದೇಶಕ್ಕಾಗಿ ಏನು ಕೆಲಸ ಮಾಡಬಹುದು ಎಂಬುದನ್ನು ಯೋಚಿಸಬೇಕು. ಇದು ಇಂದಿನ ಪರಿಸ್ಥಿತಿ. ಅತ್ಯಂತ ನೀಚ ರಾಜಕಾರಣ ಇದು; ಜನರಿಗೆ ಮೋಸ ಮಾಡುವ ರಾಜಕಾರಣ.

* ವಿದ್ಯಾರ್ಥಿಗಳು ರಾಜಕೀಯ ಪ್ರವೇಶಿಸಬಾರದೇ?
ಖಂಡಿತ ಪ್ರವೇಶಿಸಬೇಕು. ರಾಜಕೀಯದ ಬಗ್ಗೆ ಅವರಿಗೆ ಅರಿವು ಇರಲೇಬೇಕು. ಯಾಕೆಂದರೆ ನಮ್ಮ ಬದುಕಿನಿಂದ ರಾಜಕೀಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಾಗೆಂದು ಯಾವುದೋ ಒಂದು ಘೋಷಣೆಯನ್ನು ದೇಶದ್ರೋಹ ಎಂದು ಹೇಳಲು ಸಾಧ್ಯವಿಲ್ಲ. ಅವರಿನ್ನೂ ವಿದ್ಯಾರ್ಥಿಗಳು. ಅವರಿಗೆ ತಿಳಿಹೇಳಿ ತಿದ್ದಬಹುದು. ಅದನ್ನು ಬಿಟ್ಟು ‘ದೇಶಪ್ರೇಮಿಗಳೇ ಅಥವಾ ದೇಶದ್ರೋಹಿಗಳೇ’ ಎಂಬುದನ್ನು ನಿರ್ಧರಿಸಲು ಅವರನ್ನು ಪೊಲೀಸ್ ಠಾಣೆ – ಕೋರ್ಟ್‌ಗಳಿಗೆ ಎಳೆದು ತರುವುದು ಎಷ್ಟು ಸರಿ?

* ರಾಷ್ಟ್ರೀಯವಾದ ಎಂಬುದು ವ್ಯಕ್ತಿಕೇಂದ್ರಿತ – ಧರ್ಮಕೇಂದ್ರಿತ ಆಗುತ್ತಿದೆಯಲ್ಲವೇ?
‘ಹಿಂದೂ ರಾಷ್ಟ್ರೀಯವಾದ’, ‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಿಸಬೇಕು’ ಎಂಬುದನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ನಮ್ಮ ಸಂವಿಧಾನದಲ್ಲಿ ಇಂಥದ್ದಕ್ಕೆ ಅವಕಾಶವಿಲ್ಲ. ನಮ್ಮ ಸಮಾಜದ ವೈವಿಧ್ಯ ಒಪ್ಪಿಕೊಳ್ಳಬೇಕು. ಐವತ್ತು ವರ್ಷಗಳ  ಹಿಂದೆ ಬೆಂಗಳೂರು ಒಂದು ಸಾಂಪ್ರದಾಯಿಕ ನಗರಿಯಾಗಿತ್ತು.

ಕನ್ನಡವೇ ಮುಖ್ಯ ಭಾಷೆಯಾಗಿತ್ತು. ಆದರೆ ಇಂದು ದೊಡ್ಡ ಪ್ರಮಾಣದ ವಲಸೆಯಿಂದ ಪರಿಸ್ಥಿತಿ ಬದಲಾಗಿದೆ. ಎಷ್ಟೆಲ್ಲ ಸಂಸ್ಕೃತಿಯ ಜನರು ಇಲ್ಲಿ ಬದುಕುತ್ತಿದ್ದಾರೆ. ನೀನು ಹಿಂದೂವಾದರೆ ಮಾತ್ರ ಇಲ್ಲಿರಬಹುದು ಅಥವಾ ಸ್ವಾತಂತ್ರ್ಯಾನಂತರ ಭಾರತಕ್ಕೆ ಬಂದ ಎಲ್ಲರನ್ನೂ ಹಿಂದೂ ಎಂದು ಕರೆಯಬೇಕು ಎಂಬ ಮಾತಾಗಲೀ ಖಂಡಿತ ಸಾಧುವಲ್ಲ.

* ಧರ್ಮದಿಂದ ದೇಶ ಒಡೆಯುತ್ತಿದೆ ಎಂದು ಕೆಲವರು ಹೇಳುತ್ತಾರೆ. ನಿಮ್ಮ ಅಭಿಪ್ರಾಯವೇನು?
ನೀನು ಹಿಂದೂವೆ? ನಿನ್ನ ಧರ್ಮವನ್ನು ಮನೆಯಲ್ಲಿಟ್ಟುಕೊ. ಅದನ್ನು ಬೀದಿಗೆ ತರಬೇಡ. ಯಾಕೆಂದರೆ ಧರ್ಮ ಬೀದಿಗೆ ಬಂದರೆ ಎಲ್ಲವೂ ಬೀದಿ ಜಗಳವಾಗಿ ಮಾರ್ಪಡುತ್ತದೆ.

ನೀನು ಯಾವುದೇ ಧರ್ಮಕ್ಕೆ ಸೇರಿರಬಹುದು, ಆದರೆ ಮನೆಯಿಂದ ಒಮ್ಮೆ ಹೊರಗೆ ಬಂದರೆ ನೀನು ಭಾರತೀಯ. ದೇಶದ ಬಗ್ಗೆ ಚಿಂತಿಸು. ಇಂದು ಹಿಂದೂ ರಾಷ್ಟ್ರೀಯವಾದಕ್ಕೆ ಎದುರಾಗಿ ಮುಸ್ಲಿಂ ರಾಷ್ಟ್ರೀಯವಾದ ರೂಪುಗೊಂಡಿದೆ. ನಾಳೆ ಇನ್ಯಾವುದೋ ಧರ್ಮದ ರಾಷ್ಟ್ರೀಯವಾದ ಹುಟ್ಟಬಹುದು. ಇದು ದೇಶವನ್ನು ಒಡೆಯುತ್ತದೆ, ಒಡೆಯುತ್ತದೆ, ಒಡೆಯುತ್ತಲೇ ಹೋಗುತ್ತದೆ.

* ಗೋಖಲೆ ‘ಸ್ವದೇಶಿ’ ಪರಿಕಲ್ಪನೆಗಳನ್ನು ಪ್ರತಿಪಾದಿಸಿದ್ದರು. ಇಂದಿನ ಸ್ಥಿತಿ ನೋಡಿದರೆ ಏನನ್ನಿಸುತ್ತದೆ?
ಸ್ವದೇಶಿ ಚಳವಳಿ ಆರಂಭವಾದ ಕಾಲ–ದೇಶಗಳಿಂದ  ನಾವು ಸಾಕಷ್ಟು ಮುಂದೆ ಬಂದುಬಿಟ್ಟಿದ್ದೇವೆ. ಉಡುಗೆ, ಆಹಾರವಷ್ಟೇ ಅಲ್ಲ, ಚಿಂತನಾಕ್ರಮವೂ ವಿದೇಶಿಯಾಗಿಬಿಟ್ಟಿದೆ.

ಈಗ ಒಮ್ಮಿಂದೊಮ್ಮೆಲೇ ನಾವು ‘ಸ್ವದೇಶಿ’ಗಳಾಗುವುದು ಸಾಧ್ಯವಿಲ್ಲ. ವಿದೇಶಿ ವಸ್ತುಗಳನ್ನು ನಿರಾಕರಿಸುವಾಗ ಅದಕ್ಕೆ ಬದಲಿಯಾದ ವಸ್ತುವನ್ನು ನಾವೇ ಉತ್ಪಾದಿಸಿಕೊಳ್ಳುವಷ್ಟು ಪ್ರಗತಿ ಸಾಧಿಸಿದ್ದೇವೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ‘ಮೇಕ್‌ ಇನ್‌ ಇಂಡಿಯಾ’ ಕುರಿತೂ ಇಂಥದ್ದೇ ಪ್ರಶ್ನೆಗಳನ್ನು ಎತ್ತಬಹುದು.

ಅದರ ಲೋಗೋ ರೂಪಿಸಿರುವುದೇ ಒಂದು ವಿದೇಶಿ ಕಂಪೆನಿ. ಅದನ್ನು ನಾವು ಸ್ವದೇಶಿ ಚಳವಳಿ ಎಂದು ಕರೆಯಲು ಸಾಧ್ಯವೇ? ಅದರ ಹೆಸರಿನಲ್ಲಿರುವ ಇಂಗ್ಲಿಷ್‌ ಸ್ವದೇಶಿ ಭಾಷೆಯೇ? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. ‘ಸ್ವದೇಶಿ’ ಎಂಬುದೊಂದು ಆದರ್ಶ ಸ್ಥಿತಿ. ಆದರೆ ಸಾಬೀತು ಮಾಡಲಾಗದ ಆದರ್ಶ ಸ್ಥಿತಿ.

* ರಾಜಕೀಯದಲ್ಲಿ ಆಧ್ಯಾತ್ಮಿಕತೆ  ಬಗ್ಗೆ ನಿಮ್ಮ ಅನಿಸಿಕೆ ಏನು?
ಪರಿಸ್ಥಿತಿ ತುಂಬ ಬದಲಾಗಿದೆ. ರಾಜಕಾರಣದಲ್ಲಿ ನೈತಿಕತೆ ಎನ್ನುವುದೇ ಇಲ್ಲ. ಕಾಂಗ್ರೆಸ್‌ ಪಕ್ಷದಲ್ಲಿದ್ದ ವ್ಯಕ್ತಿ ಒಮ್ಮಿಂದೊಮ್ಮೆಲೇ ಬಿಜೆಪಿಗೆ ಹೋಗುತ್ತಾನೆ. ನೈತಿಕತೆ ಎಲ್ಲಿದೆ? ಇಂಥ ಪರಿಸ್ಥಿತಿಯಲ್ಲಿ ರಾಜಕೀಯ ಆಧ್ಯಾತ್ಮಿಕತೆ ನಿರೀಕ್ಷಿಸುವುದೇ ಕಷ್ಟ. ಆದರೆ ನಿಧಾನಕ್ಕೆ ಜನರು ಇಂತಹ ನೀಚ ರಾಜಕಾರಣವನ್ನು ತಿರಸ್ಕರಿಸುತ್ತಿದ್ದಾರೆ.

ಗೂಂಡಾ – ಭ್ರಷ್ಟ ರಾಜಕಾರಣದಿಂದ ಅವರು ಬೇಸತ್ತಿದ್ದಾರೆ.  ಅವರು ಪರಿಸ್ಥಿತಿಯನ್ನು ಬದಲಾಯಿಸಲಿದ್ದಾರೆ. ಆ ಸಮಯ ಇನ್ನು ಹೆಚ್ಚು ದೂರವಿಲ್ಲ ಎನ್ನುವುದು ನನ್ನ ಅಭಿಪ್ರಾಯ.

* ರಾಜಕಾರಣ – ರಾಜಕಾರಣಿಗಳೊಂದಿಗೆ ಗುರುತಿಸಿಕೊಳ್ಳುವುದು ತಪ್ಪು ಎಂಬ ಭಾವನೆ ಸಮಾಜದಲ್ಲಿದೆ. ಇದು ಸರಿಯೇ?
ರಾಜಕೀಯ ಎನ್ನುವುದು ಜನರ ಹಕ್ಕಲ್ಲ. ಅದು ನಮ್ಮ ಅಸ್ತಿತ್ವ. ‘ನಾನು ಇದ್ದೇನೆ’ ಎಂದರೆ ರಾಜಕೀಯವಾಗಿದ್ದೇವೆ ಎಂದೇ ಅರ್ಥ. ರಾಜಕೀಯವೆಂಬುದು ‘ಆಯ್ಕೆ’. ಪ್ರತಿ ವ್ಯಕ್ತಿಯೂ ರಾಜಕೀಯ ವ್ಯಕ್ತಿಯೇ. ರಾಜಕೀಯ ಪಕ್ಷಗಳಲ್ಲಿ ಆಯ್ಕೆಯಿರಬಹುದು. ತತ್ವ – ಆದರ್ಶಗಳ ಆಯ್ಕೆಯಲ್ಲಿ ಭಿನ್ನತೆ ಇರಬಹುದು. ಆದರೆ ರಾಜಕೀಯವನ್ನು ನಿರಾಕರಿಸಲು ಆಗುವುದಿಲ್ಲ.

***
‘ಹಿಂದೂ ರಾಷ್ಟ್ರೀಯವಾದ’, ‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಿಸಬೇಕು’ ಎನ್ನುವುದಕ್ಕೆಲ್ಲ ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ನಮ್ಮ ಸಮಾಜದ ವೈವಿಧ್ಯವನ್ನು ನಾವು ಒಪ್ಪಿಕೊಳ್ಳಬೇಕು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT