ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಮಕ್ಕಳ ಸಾಹಿತ್ಯದಲ್ಲಿ ಹೊಸತು ಸೃಷ್ಟಿಯಾಗುತ್ತಿಲ್ಲ...

Last Updated 15 ನವೆಂಬರ್ 2014, 19:30 IST
ಅಕ್ಷರ ಗಾತ್ರ

*ಮಕ್ಕಳ ಲೇಖಕರಾಗಿ ಮಕ್ಕಳ ಮನಸ್ಥಿತಿಯಲ್ಲಿನ ಬದಲಾವಣೆಯನ್ನು ಹೇಗೆ ವಿಶ್ಲೇಷಿಸುವಿರಿ
ಹಿಂದಿನ ಮಕ್ಕಳು ಮುಗ್ಧರು. ಇಂದು ಆಧುನಿಕತೆಯ ಭರಾಟೆಯಲ್ಲಿ ಮಕ್ಕಳಲ್ಲಿನ ಮುಗ್ಧತೆಯೇ ಮಾಯವಾಗಿದೆ. ಪಾಲಕರ ಒತ್ತಡದಿಂದ ಬಾಲ್ಯಸಹಜ ಭಾವನೆಗಳು ಮಾಯವಾಗಿವೆ. ವಿಜ್ಞಾನ–ತಂತ್ರಜ್ಞಾನ– ಇಂಗ್ಲಿಷ್ ವ್ಯಾಮೋಹ ಶತ್ರುಗಳಂತೆ ಕಾಡುತ್ತಿವೆ. ಭಾಷೆಯ ಬಗ್ಗೆ ಅಭಿರುಚಿಯಿಲ್ಲ. ಮಕ್ಕಳಿಗೆ ಆಟವಾಡಲು ಅವಕಾಶವಿಲ್ಲವಾಗಿದೆ. ಶಾಲೆ, ಮನೆಪಾಠ, ಹೋಮ್‌ವರ್ಕ್‌ಗೆ ಬಾಲ ಜಗತ್ತು ಸೀಮಿತವಾಗುತ್ತಿದೆ. ಮಾನಸಿಕ ಒತ್ತಡ ಹೆಚ್ಚಿ ಭಾವುಕತೆ ಕಣ್ಮರೆಯಾಗಿದೆ.

*ಸಾಹಿತ್ಯ–ಸಾಹಿತಿ ಹೇಗಿರಬೇಕು?
ಭಾವನಾತ್ಮಕವಾಗಿರಬೇಕು. ಹಾಡುಗಾರಿಕೆಯಿಂದ ಕೂಡಿರಬೇಕು. ಅರ್ಥವಂತಿಕೆಯ ಬದಲು ಪ್ರಾಸಾನುಪ್ರಾಸ ಇರಬೇಕು. ಅಂತ್ಯಪ್ರಾಸ ಹೆಚ್ಚಿರಬೇಕು. ಮಕ್ಕಳ ಸಹಜ ಗುಣ ಮಾನವೀಕರಣ. ನಿರ್ಜೀವ ವಸ್ತುಗಳ ಜತೆಯೂ ಮಾತನಾಡುವ ಮಕ್ಕಳ ಪ್ರಪಂಚ ಕಲ್ಪನಾತೀತವಾದುದು. ಕಲ್ಲು–ಮಣ್ಣಿಗೂ ಸ್ಪಂದಿಸುವ ಗುಣ ಅವರದ್ದು. ಆಯಾ ಪ್ರಸಂಗಗಳಿಗೆ ತಕ್ಕಂತೆ ಅವರ ಮನಮಿಡಿಯುತ್ತದೆ. ಮಕ್ಕಳ ಸಾಹಿತ್ಯ ಓದುವ ಮುದುಕರ ಮನಸ್ಸು ಮಗುವಿನಂತೆ ಸ್ಪಂದಿಸಬೇಕು. ‘ಶಿಕ್ಷಕ ಸಾಹಿತಿ’ಗಳೇ ಮಕ್ಕಳ ಸಾಹಿತ್ಯ ಹುಟ್ಟು ಹಾಕಿದವರು, ಬೆಳೆಸಿದವರು. ಮಕ್ಕಳ ಒಡನಾಟದ ಜತೆಗೆ ತಮ್ಮ ಬಾಲ್ಯದ ನೆನಪಿನಂಗಳದಲ್ಲಿ ಬರೆದಾಗ ಮಾತ್ರ ಸ್ಪಂದನ ಸಿಗುತ್ತದೆ. ತೀ.ನಂ.ಶ್ರೀ ಅವರು ಹೇಳುವಂತೆ ‘ಬಾಲ್ಯ ಜೀವನದ ನೆನಪು ಉಳಿಸಿಕೊಂಡವರು ಮಾತ್ರ ಮಕ್ಕಳ ಸಾಹಿತಿ ಆಗಲು ಸಾಧ್ಯ’.

*ಮಕ್ಕಳ ಸಾಹಿತ್ಯ ಅವಗಣನೆಗೆ ಒಳಗಾಗಿರುವ ಕ್ಷೇತ್ರವೇ?
ಸಾಹಿತ್ಯ ಕ್ಷೇತ್ರದಲ್ಲಿ ಕಡೆಗಣನೆಯಾಗಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಜೀವಂತಿಕೆಯಿಂದಿದೆ. ಬಹುತೇಕ ಸಾಹಿತಿಗಳು, ಕವಿಗಳು ಆರಂಭದಲ್ಲಿ ಮಕ್ಕಳ ಸಾಹಿತ್ಯ ರಚಿಸಿದವರೇ. ಆದರೆ, ನಂತರದ ದಿನಗಳಲ್ಲಿ ಪ್ರೌಢಸಾಹಿತ್ಯ ರಚಿಸಿ, ಮಕ್ಕಳ ಸಾಹಿತ್ಯ ಕಡೆಗಣಿಸಿದವರೇ ಹೆಚ್ಚು. ಜಿ.ಪಿ. ರಾಜರತ್ನಂ ಮಾತ್ರ ಕೊನೆ ಕ್ಷಣದ ತನಕ ಮಕ್ಕಳ ಸಾಹಿತ್ಯ ಪ್ರೀತಿಸಿದರು, ಮಕ್ಕಳಿಗಾಗಿ ಬರೆದರು.

*ಮಕ್ಕಳ ಸಾಹಿತ್ಯದ ಬೆಳವಣಿಗೆಗೆ ಏನು ಮಾಡಬೇಕು?
ಮಕ್ಕಳ ಸಾಹಿತ್ಯಕ್ಕಾಗಿ ಚಿಂತನ–ಮಂಥನ, ಕಮ್ಮಟಗಳು ನಿರಂತರವಾಗಿ ನಡೆಯಬೇಕು. ಸಿದ್ದಯ್ಯ ಪುರಾಣಿಕರು ಸರ್ಕಾರದ ನೆರವಿನೊಂದಿಗೆ ನಂಜನಗೂಡು, ಬೆಂಗಳೂರಿನಲ್ಲಿ ನಡೆಸಿದ ಕಮ್ಮಟಕ್ಕೆ ವಿಜಯಪುರ ಜಿಲ್ಲೆಯಿಂದ ಆಯ್ಕೆಯಾಗಿದ್ದ ಶಂ.ಗು. ಬಿರಾದಾರ, ಶಿ.ಶು. ಸಂಗಮೇಶ, ಈಶ್ವರಚಂದ್ರ ಚಿಂತಾಮಣಿ ನಂತರದ ದಿನಗಳಲ್ಲಿ ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ನಡೆಸಿ ಖ್ಯಾತನಾಮರಾದರು. ಮೈಸೂರಿನಲ್ಲಿ ನಡೆದ 21 ದಿನದ ಕಮ್ಮಟಕ್ಕೆ ಆಯ್ಕೆಯಾದ ನಾನು ಅಲ್ಲೇ ಶಿಶುಪ್ರಾಸಗಳ ‘ಗುಡುಗುಡು ಗುಂಡ’ ಕವನ ಸಂಕಲನ ಬರೆದೆ. ಧಾರವಾಡದ ‘ಮಕ್ಕಳ ಮನೆ’ ನಡೆಸಿದ್ದ ಕಮ್ಮಟದಿಂದ ಮೂರನೇ ತಲೆಮಾರಿನ 60 ಮಕ್ಕಳ ಸಾಹಿತಿಗಳು ಹೊರಬಂದರು. ಇಂಥ ಕಮ್ಮಟಗಳು ಹೆಚ್ಚಾಗಬೇಕು.

*ಮಕ್ಕಳ ಸಾಹಿತ್ಯ ಹೇರಿಕೆಯಾಗದೆ ಮಕ್ಕಳನ್ನು ತಲುಪುವ ಬಗೆ?
ಶಿಶುಪ್ರಾಸ, ಪಠ್ಯಗಳ ಮೂಲಕ ಮಕ್ಕಳನ್ನು ತಲುಪಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ವಾಚನಾಲಯಗಳು ಚಟುವಟಿಕೆಯಿಂದಿರಬೇಕು. ಆದರೆ ಇವು ಚಾಲ್ತಿಯಲಿಲ್ಲ. ಮಕ್ಕಳಿಗೆ ಮುಕ್ತವಾಗಿ ಪುಸ್ತಕ ಕೊಟ್ಟು ಓದಿಸುವ ಹವ್ಯಾಸ ಬೆಳೆಸಬೇಕು. ಆದರೆ ಎಲ್ಲೂ ಇದು ನಡೆಯುತ್ತಿಲ್ಲ. ಮಕ್ಕಳ ಸಾಹಿತ್ಯ ನೀತಿಕಥೆಗೆ ಸೀಮಿತವಾಗಿದೆ. ವನ ವಿಹಾರ, ಬನದೂಟ, ಪ್ರವಾಸ ಕಥನ ಪತ್ರಿಕೆಗಳಿಗೆ ಸೀಮಿತವಾಗಿವೆ. ವಿದೇಶಗಳಲ್ಲಿರುವಂತೆ ಹೋಮ್‌ ಲೈಬ್ರರಿ ಆರಂಭವಾಗಬೇಕು. ಆದರೆ ನಮ್ಮಲ್ಲಿ ಇದೆಲ್ಲ ತುಸು ಕಷ್ಟ.
ಕುವೆಂಪು ಬಾಲ್ಯದಲ್ಲೇ ರಚಿಸಿದ ಬೊಮ್ಮನಹಳ್ಳಿ ಕಿಂದರಜೋಗಿ ಮಕ್ಕಳ ಸಾಹಿತ್ಯದ ಶ್ರೇಷ್ಠ ಕೃತಿ. ಅನುವಾದ ಕೃತಿ ಎಂದು ಹೇಳಿದರೂ ಅದರಲ್ಲಿನ ಸೃಜನಾತ್ಮಕತೆ ಮಕ್ಕಳನ್ನು ತಲುಪಿದೆ. ಇಂಥ ಕೃತಿಗಳು ಮನೋರಂಜನೆ ಜತೆ ಮನೋವಿಕಾಸಕ್ಕೂ ಅವಕಾಶ ನೀಡಿವೆ.

*ಮಕ್ಕಳ ಸಾಹಿತ್ಯ ಕುರಿತಂತೆ ಏನಾದರೂ ಬದಲಾವಣೆ ಕಾಣಿಸುತ್ತಿದೆಯೇ?
ಕಿಂಚಿತ್ತೂ ಬದಲಾವಣೆ ಇಲ್ಲ. ಪ್ರೌಢ ಸಾಹಿತ್ಯದಲ್ಲಿ ಹತ್ತಾರು ಪ್ರಕಾರ ರಚನೆಯಾದರೂ, ಇಲ್ಲಿ ಕವಿತೆ ಬಿಟ್ಟು ಬೇರೆ ಪ್ರಕಾರ ರಚನೆಯಾಗುತ್ತಿಲ್ಲ. ಕೃತಿಚೌರ್ಯ ಹೆಚ್ಚಿದೆ. ನಾಲ್ಕು ಸಾಲಿನ ಕವಿತೆಗೆ ಸೀಮಿತ. ಹಿಂದಿನವರ ಕಥೆ, ಕವನಗಳೇ ಬೇರೊಂದು ರೂಪದಲ್ಲಿ ಬರುತ್ತಿವೆ. ಸ್ವಂತ ಬರವಣಿಗೆ ನಡೆಯುತ್ತಿಲ್ಲ. ನವ್ಯವನ್ನು ಮಕ್ಕಳ ಸಾಹಿತ್ಯಕ್ಕೆ ತರುವ ಯತ್ನವನ್ನು ಕೆಲವರು ಮಾಡಿದರು. ಪ್ರೌಢ ಸಾಹಿತ್ಯದ ನವ್ಯವೇ ಸಾಮಾನ್ಯರಿಗಿರಲಿ, ಸಾಹಿತಿಗಳಿಗೇ ಅರ್ಥವಾಗಲಿಲ್ಲ. ಇನ್ನು ಮಕ್ಕಳ ಸಾಹಿತ್ಯದಲ್ಲಿ ನವ್ಯ ಯಶಸ್ಸು ಕಾಣುತ್ತದೆಯೇ?

*‘ಬಾಲ ವಿಕಾಸ ಅಕಾಡೆಮಿ’ಯಿಂದ ಮಕ್ಕಳ ಸಾಹಿತ್ಯಕ್ಕೆ ಏನಾದರೂ ಉಪಯೋಗ ಇದೆಯೇ?
ಮಕ್ಕಳಿಗಂತೂ ಪ್ರಯೋಜನವಿಲ್ಲ. ಅಧ್ಯಕ್ಷರು, ಸದಸ್ಯರಿಗೂ ಬಾಲ ವಿಕಾಸ ಅಕಾಡೆಮಿಗೂ ಒಂದಕ್ಕೊಂದು ನಂಟಿಲ್ಲ. ಇದು ರಾಜಕೀಯ ನಿರಾಶ್ರಿತರ ತಾಣವಾಗಿದೆ.

ಕಂಚ್ಯಾಣಿ ಶರಣಪ್ಪ
ಹುಟ್ಟೂರು ಮುದ್ದೇಬಿಹಾಳ ತಾಲ್ಲೂಕಿನ ಸರೂರ. ತಂದೆ ಶಿವಸಂಗಪ್ಪ ಕಂಚ್ಯಾಣಿ. ತಾಯಿ ರುದ್ರಮ್ಮ. ಜನನ ಜನವರಿ 3, 1930. ಪತ್ನಿ ಬಸವಂತೆಮ್ಮ ಶರಣಪ್ಪ ಕಂಚ್ಯಾಣಿ. ಐವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, 27 ಮೊಮ್ಮಕ್ಕಳು, 33 ಮರಿಮಕ್ಕಳ ಸಂಸಾರ.

ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರು. ಮಕ್ಕಳು ಪದವಿ ಪಡೆದ ನಂತರ ದೂರ ಶಿಕ್ಷಣ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮಕ್ಕಳ ಕವನ, ಕಥೆ ಪುಸ್ತಕ ಪ್ರಕಟಗೊಂಡ ಬಳಿಕ ಶರಣಪ್ಪ ಅವರ ಪುಸ್ತಕಗಳು ಪ್ರಕಟ. 85ರ ಹರೆಯದಲ್ಲೂ ಶರಣಜ್ಜನದು ಬತ್ತದ ಉತ್ಸಾಹ. ಇದುವರೆಗೆ, ಕಂಚ್ಯಾಣಿ ಶರಣಪ್ಪ ಕಾವ್ಯನಾಮದಲ್ಲಿ 22 ಕೃತಿ ಪ್ರಕಟಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರ ಸಾಹಿತ್ಯ ಸೇವೆಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT