ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಶ್ರಮದ ಜೊತೆಗೆ ಅದೃಷ್ಟವೂ ಬೇಕು...

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಶ್ರಮದ ಜತೆಗೆ ಅದೃಷ್ಟವೂ ನಮ್ಮೊಂದಿಗೆ ಇರಬೇಕು. ಇಲ್ಲದಿದ್ದರೆ ಮುಂದೆ ಹೋಗುವುದು ಕಷ್ಟ. ಸಾಗುವ ದಾರಿಯಲ್ಲಿ ಪ್ರತಿಯೊಬ್ಬರನ್ನೂ ಮೆಚ್ಚಿಸಲಾಗದು. ಎಂತಹ ಅದ್ಭುತ ಕೆಲಸ ಮಾಡಿದರೂ, ಒಂದಲ್ಲ ಒಂದು ರೀತಿಯ ಟೀಕೆ ಬಂದೇಬರುತ್ತದೆ. ಆದರೆ, ನಮ್ಮ ಫೋಕಸ್‌ ಎಂದಿಗೂ ಬದಲಾಗಬಾರದು’ – ಜುಲೈ 29ರಂದು ಬಿಡುಗಡೆಯಾಗುತ್ತಿರುವ ತಮ್ಮ ಬಹುನಿರೀಕ್ಷಿತ ‘ಡೀಲ್‌ರಾಜ’ ಬಿಡುಗಡೆಯ ಸಂಭ್ರಮದಲ್ಲಿರುವ ನಟ ಕೋಮಲ್ ಹೇಳಿದ ಅನುಭವದ ಮಾತುಗಳಿವು.

ಬಿಡುಗಡೆಗೂ ಮುನ್ನವೇ ಹಾಡುಗಳು ವೈರಲ್ ಆಗುವುದು ಕೋಮಲ್ ಚಿತ್ರಗಳ ವಿಶೇಷತೆ. ‘ಡೀಲ್‌ರಾಜ’ನಿಗೂ ಇದು ಹೊರತಲ್ಲ. ಚಿತ್ರದ ‘ನಿನ್ನನ್ನೇ ನಂಬಿರುವೆ ಪದ್ಮಾವತಿ’ ಹಾಡು ಸಂಗೀತ ಪ್ರೇಮಿಗಳು ಗುನುಗುವಂತೆ ಮಾಡಿದೆ. ‘ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಚಿತ್ರದಲ್ಲಿ ಹಾರರ್‌ ಮತ್ತು ಕಾಮಿಡಿ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಕೋಮಲ್ ‘ಡೀಲ್‌ರಾಜ’ನಾಗಿ ಹೇಗೆ ಓಪನಿಂಗ್ ಪಡೆಯುತ್ತಾರೆ ಎಂಬ ಕುತೂಹಲ ಗಾಂಧಿನಗರದಲ್ಲಿ ಮೂಡಿದೆ. ಅಂದಹಾಗೆ, ‘ಡೀಲ್‌ರಾಜ’ ಅವರ ಅಭಿನಯದ 97ನೇ ಚಿತ್ರ.

ಎಲ್ಲವೂ ಇದೆ ಕೋಮಲ್‌ ಎಂದ ತಕ್ಷಣ ನೆನಪಾಗುವುದು ಹಾಸ್ಯ. ಆದರೆ, ಈ ಚಿತ್ರದಲ್ಲಿ ಕೇವಲ ಹಾಸ್ಯವಷ್ಟೇ ಪ್ರಧಾನವಾಗಿಲ್ಲವಂತೆ. ‘ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಡೀಲ್‌ಗಳನ್ನು (ವ್ಯವಹಾರ) ಮಾಡುವ ನಾಯಕ, ಡೀಲ್‌ಗಾಗಿ ಹೆಣೆದ ಖೆಡ್ಡಾದಲ್ಲಿ ಅರಿವಿಲ್ಲದಂತೆ ಸಿಕ್ಕಿಕೊಳ್ಳುತ್ತಾನೆ. ಕಡೆಗೆ ಅದರಿಂದ ಹೇಗೆ ಬಿಡಿಸಿಕೊಂಡು ಹೊರಬರುತ್ತಾನೆ ಎನ್ನುವುದು ಚಿತ್ರದ ತಿರುಳು. ಕಥೆಯೊಳಗೆ ಹಾಸ್ಯದ ಲೇಪದಷ್ಟೇ ಗಂಭೀರತೆಯೂ ಇದ್ದು, ಹಾಡುಗಳು ಮತ್ತು ಆ್ಯಕ್ಷನ್ ಪೂರಕವಾಗಿವೆ’ ಎಂದು ಕೋಮಲ್ ಚಿತ್ರದ ಎಳೆಯನ್ನು ಬಿಚ್ಚಿಡುತ್ತಾರೆ.

‘ಇದು ಪಕ್ಕಾ ಕಮರ್ಷಿಯಲ್ ಚಿತ್ರ. ಮಕ್ಕಳಿಂದ ಹಿಡಿದು ವಯೋವೃದ್ಧರು ಎಂಜಾಯ್ ಮಾಡುತ್ತಾರೆ. ನನ್ನ ಹಿಂದಿನ ಸಿನಿಮಾಗಳಂತೆ ಕೊಟ್ಟ ಕಾಸಿಗೆ ಇಲ್ಲಿ ಮೋಸವಾಗುವುದಿಲ್ಲ. ನಿರ್ಮಾಪಕರ ಶ್ರಮದಿಂದಾಗಿ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಅಭಿಮಾನ್‌ ರಾಯ್ ಅವರ ಸಂಗೀತ ಬಿಡುಗಡೆಗೂ ಮುನ್ನವೇ ಜನರ ಗಮನ ಸೆಳೆದಿದೆ’ ಎನ್ನುತ್ತಾರೆ ಕೋಮಲ್.

ಮೀರುವುದು ಸುಲಭವಲ್ಲ
ಹಾಸ್ಯ ನಟನೊಬ್ಬ ನಾಯಕನಾಗಿ ನೆಲೆಯೂರುವುದು ಅಷ್ಟು ಸುಲಭವಲ್ಲ. ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಹಾಸ್ಯದ ಚಟಾಕಿ ಹಾರಿಸುತ್ತಿದ್ದವರನ್ನು ಪ್ರೇಕ್ಷಕರು ‘ನಾಯಕ’ರಾಗಿ ಒಮ್ಮೆಲೆ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಉತ್ತಮ ಕಥೆ ಸಿಗದಿದ್ದರೆ ಅದೊಂದು ರೀತಿ ‘ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ’ ಆಗುತ್ತದೆ. ಸದ್ಯ ಹಾಸ್ಯದ ಹಿನ್ನೆಲೆಯಿಂದ ಬಂದು ನಾಯಕರಾಗಿ ನೆಲೆ ಕಂಡಿರುವ ಕೆಲವೇ ಮಂದಿಯ ಪೈಕಿ ಕೋಮಲ್ ಕೂಡ ಒಬ್ಬರು.

‘ಜನ ಹಳೆ ಚಹರೆಯನ್ನು ಉಳಿಸಿಕೊಂಡೇ ಚಿತ್ರಗಳನ್ನು ಮಾಡುವುದು ನನ್ನಂತವರಿಗೆ ಅನಿವಾರ್ಯ. ಹಾಸ್ಯದ ಜತೆಜತೆಗೆ ಸಾಗಬೇಕು. ನಮ್ಮನ್ನರಸಿ ಬರುವ ಕಥೆಗಳು ಕೂಡ ಹಾಗೆಯೇ ಇರುತ್ತವೆ. ನನ್ನ ಚಿತ್ರಗಳಲ್ಲಿ ಹಾಸ್ಯದ ಜತೆಗೆ, ಇತರ ಎಲಿಮೆಂಟ್‌ಗಳು ಕೂಡ ಇರುವುದನ್ನು ನೋಡಬಹುದು. ಹಳೆಯ ಶೇಡ್‌ ಮೀರುವ ಆಸೆ ನನಗೂ ಇದೆ. ಅದಕ್ಕೆ ತಯಾರಿಯೂ ನಡೆಯುತ್ತಿದೆ. ಆಗ ನನ್ನಲ್ಲೊಬ್ಬ ಹೊಸ ಕಲಾವಿದನನ್ನು ನೀವು ನೋಡುವಿರಿ. ಬಹುಶಃ ಅದು ನನ್ನ ನೂರನೇ ಚಿತ್ರವಾದರೂ ಆದೀತು’ ಎನ್ನುತ್ತಾರೆ ಕೋಮಲ್.

ಇಳಿದ ತೂಕ
ಆರೇಳು ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ನನ್ನನ್ನು ನೋಡಿದ ವ್ಯಕ್ತಿಯೊಬ್ಬರು, ‘ನಿಮ್ಮದು ನಾರ್ಮಲ್ ಪರ್ಸನಾಲಿಟಿ. ಆದರೆ, ಸ್ಕ್ರೀನ್‌ನಲ್ಲಿ ಯಾಕೆ ಅಷ್ಟು ದಪ್ಪವಾಗಿ ಕಾಣಿಸ್ತೀರಾ?’ ಎಂದು ಕೇಳಿದ್ದರು. ಆ ಮಾತುಗಳನ್ನು ಕೇಳಿದ ಬಳಿಕ ದೇಹದ ತೂಕ ಇಳಿಸಿಕೊಳ್ಳಲು ನಿರ್ಧರಿಸಿದೆ. ಸತತ ಆರು ತಿಂಗಳ ಡಯಟ್‌ ಜತೆಗೆ ಜಿಮ್‌ನಲ್ಲಿ ಬೆವರಿಳಿಸಿದ್ದರಿಂದಾಗಿ 14 ಕೆ.ಜಿ ಕಡಿಮೆಯಾದೆ. ಮುಂದಿನ ಚಿತ್ರಗಳಲ್ಲಿ ಕೋಮಲ್‌ ತೆರೆ ಮೇಲೆ ಸ್ವಲ್ಪ ಭಿನ್ನವಾಗಿ ಕಾಣುತ್ತಾನೆ ಎಂದು ಅವರು ಹೇಳುತ್ತಾರೆ.

‘ಕಲಾವಿದನೊಬ್ಬ ನಟನೆಗೆ ಒಂದಲ್ಲ ಒಂದು ರೀತಯಲ್ಲಿ ತಯಾರಿ ನಡೆಸುತ್ತಲೇ ಇರಬೇಕು. ನಾನು ವಿಶ್ವದ ಎಲ್ಲ ಭಾಷೆಗಳ ಚಿತ್ರಗಳನ್ನೂ ನೋಡುತ್ತೇನೆ. ಮಲಗುವುದಕ್ಕೂ ಮುಂಚೆ ಒಂದು ಚಿತ್ರವನ್ನಾದರೂ ನೋಡುವುದು ನನ್ನ ಹವ್ಯಾಸ. ಬಿಡುವಾದಾಗ ಕಥೆ, ಕಾದಂಬರಿಗಳನ್ನೂ ಓದುತ್ತೇನೆ. ನನ್ನೊಳಗಿನ ನಟನನ್ನು ಸುಧಾರಿಸಿಕೊಳ್ಳಲು ಇವು ಸಹಕಾರಿಯಾಗಿವೆ’ ಎನ್ನುವ ಕೋಮಲ್ ಕೈಯಲ್ಲೀಗ ಎರಡು ಚಿತ್ರಗಳಿವೆ. ತಮಿಳು ಚಿತ್ರವೊಂದರಲ್ಲಿ ಅಭಿನಯಿಸುವ ಕುರಿತು ಮಾತುಕತೆ ನಡೆಯುತ್ತಿದೆ.

ನಟನೆಯ ಜತೆಗೆ ನಿರ್ದೇಶಕನಾಗುವ ಕನಸಿಗೆ ನೀರೆರೆದುಕೊಂಡು ಬಂದಿರುವ ಕೋಮಲ್, ಅದಕ್ಕಾಗಿ ಹಲವು ಕಥೆಗಳನ್ನು ಬರೆದಿಟ್ಟುಕೊಂಡಿದ್ದಾರೆ. ‘ನಿರ್ದೇಶನವೆಂಬುದು ತಪಸ್ಸಿದ್ದಂತೆ. ನಾನು ಆ್ಯಕ್ಷನ್ ಕಟ್ ಹೇಳಲು ಇದು ಸೂಕ್ತ ಸಮಯವಲ್ಲ. ಕಾಲ ಬಂದಾಗ ಪ್ರಯೋಗಶೀಲ ಚಿತ್ರವೊಂದನ್ನು ನಿರ್ಮಿಸುತ್ತೇನೆ’ ಎಂದು ಅವರು ತಮ್ಮ ಕನಸನ್ನು ಹಂಚಿಕೊಳ್ಳುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT