ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಸಿನಿಮಾ ನನಗೆ ವ್ಯವಹಾರವಲ್ಲ, ಕಲೆ...

Last Updated 5 ಮೇ 2016, 19:30 IST
ಅಕ್ಷರ ಗಾತ್ರ

ಲೊಕಾರ್ನೊ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಮೊದಲ ಬಾರಿಗೆ ಸುದ್ದಿಯಾದ ಚಿತ್ರ ‘ತಿಥಿ’. ಪರಭಾಷೆ–ಪರದೇಶದ ಸಿನಿರಸಿಕರ ಗಮನವನ್ನೂ ಸೆಳೆದಿರುವ ‘ತಿಥಿ’ಯ ಪಯಣ ಇಂದಿನಿಂದ (ಮೇ 6) ಆರಂಭ. ಚಿತ್ರದ ನಿರ್ದೇಶಕ ರಾಮ್ ರೆಡ್ಡಿ ಅವರನ್ನು ಗಣೇಶ ವೈದ್ಯ ಮಾತನಾಡಿಸಿದ್ದಾರೆ.

* ಪ್ರೇಕ್ಷಕ ನೋಡಿ ಮೆಚ್ಚಿದ ಸಿನಿಮಾವನ್ನು ‘ಜನಪ್ರಿಯ’ ಎಂದು ಗುರ್ತಿಸುತ್ತೇವೆ. ‘ತಿಥಿ’ ಬಿಡುಗಡೆಗೂ ಮುನ್ನವೇ ಜನಪ್ರಿಯವಾಗಿದೆಯಲ್ಲ?
ಹೌದು. ಚಿತ್ರೋತ್ಸವಗಳಿಂದ ದೊರೆತ ಜನಪ್ರಿಯತೆ ಇದು. ಹೆಸರಾಂತ ನಾಯಕ, ನಿರ್ದೇಶಕರ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಕುತೂಹಲ ಮೂಡಿಸಿರುತ್ತವೆ. ನಮ್ಮ ಸಿನಿಮಾ ಆ ರೀತಿ ಅಲ್ಲ. ‘ಹಳ್ಳಿಯಲ್ಲಿ ಏನೋ ಒಂದು ಸಿನಿಮಾ ಮಾಡಿದ್ದಾರೆ’ ಎಂದು ಎಲ್ಲರೂ ಕಡೆಗಣಿಸಬಹುದಿತ್ತು.

ಅದಕ್ಕಾಗಿಯೇ ನಾವು ಚಿತ್ರೋತ್ಸವಗಳ ಹಾದಿ ಆಯ್ಕೆ ಮಾಡಿಕೊಂಡೆವು. ಅಲ್ಲಿಂದ ಪ್ರಶಂಸೆ ಬಂದರೆ ಸಹಜವಾಗೇ ಪ್ರಚಾರ ಸಿಗುತ್ತದೆ. ಆ ವಿಚಾರದಲ್ಲಿ ನಾವು ಅದೃಷ್ಟವಂತರು. ಒಂದಲ್ಲ, ಹತ್ತು ಪ್ರಶಸ್ತಿಗಳು ಬಂದವು. ಅದರಿಂದಾಗಿಯೇ ಸಿನಿಮಾ ಹಂಚಿಕೆಗೆ ಸಹಾಯವಾಯಿತು. ನೇರವಾಗಿ ಬಿಡುಗಡೆ ಮಾಡುವುದಾದರೆ ಕಷ್ಟವಾಗುತ್ತಿತ್ತು.

ಪ್ರಸ್ತುತ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಕ್ಕೆ ಹೆಚ್ಚು ಆದ್ಯತೆ ನೀಡಿ, ಅಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಆಧರಿಸಿ ಉಳಿದ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಲಾಗುತ್ತದೆ. ವಿದೇಶಗಳಲ್ಲೂ ಸಿನಿಮಾಕ್ಕೆ ವಿತರಕರು ಸಿಕ್ಕಿದ್ದಾರೆ. ಮುಂದಿನ ಹಂತದಲ್ಲಿ ಹೊರದೇಶಗಳಲ್ಲಿ ‘ತಿಥಿ’ ಪ್ರದರ್ಶನ ಕಾಣಲಿದೆ.

* ‘ತಿಥಿ’ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ನೀವು ಲೆಕ್ಕವಿಲ್ಲದಷ್ಟು ಬಾರಿ ನೋಡಿರುತ್ತೀರಿ. ಈಗ, ಸಿನಿಮಾವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನಿಸುತ್ತದೆಯೇ?
ಖಂಡಿತ. ಪ್ರತಿಬಾರಿ ನೋಡಿದಾಗಲೂ ಹಾಗನ್ನಿಸುತ್ತದೆ. ನಾನೊಂದು ಕಾದಂಬರಿ ಬರೆದಿದ್ದೇನೆ. ಅದನ್ನು ಈಗ ಓದಿದರೂ, ಇಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಇನ್ನೂ ಒಳ್ಳೆಯ ಪರಿಣಾಮ ಬೀರಬಹುದು ಅಂತಲೇ ಅನ್ನಿಸುತ್ತದೆ. ಸಿನಿಮಾ ಕೂಡ ಹಾಗೆಯೇ. ಆ ಗುಣ ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೆಯದು.  ನಾನು ಬೆಳೆದಂತೆ ನನ್ನಲ್ಲಿನ ಕಲೆಯೂ ವಿಕಾಸಗೊಳ್ಳುತ್ತಲೇ ಇರುತ್ತದೆ. ಒಟ್ಟಾರೆಯಾಗಿ ಸಿನಿಮಾ ಬಗ್ಗೆ ತುಂಬಾ ಖುಷಿಯಿದೆ.

* ನೀವು ಓದಿದ್ದು ಅಂತರರಾಷ್ಟ್ರೀಯ ಶಾಲೆಯಲ್ಲಿ. ಸಿನಿಮಾ ತರಬೇತಿ ಪಡೆದದ್ದು ವಿದೇಶದಲ್ಲಿ. ಆದರೂ ಕನ್ನಡ ಚಿತ್ರವನ್ನೇ ಮಾಡುವ ಮನಸಾಗಿದ್ದು ಏಕೆ?
ನಾನು ಕರ್ನಾಟಕದವನು. ನನ್ನ ಕನ್ನಡ ಚೆನ್ನಾಗಿಲ್ಲದಿದ್ದರೂ ಕರ್ನಾಟಕ ಇಷ್ಟ. ನಾನು ಮಂಡ್ಯಕ್ಕೆ ಹೋದಾಗ ಅಲ್ಲಿನ ಭಾಷೆ ಹಿಡಿಸಿತು. ವೇಗವಾಗಿ ಮಾತನಾಡುತ್ತಾರೆ. ಆ ಭಾಷೆಯಲ್ಲಿ ಒಂದು ಸಂಗೀತ ಇದೆ. ಅದು ನನ್ನನ್ನು ಸೆಳೆಯಿತು. ನಾನು ಮತ್ತು ಈರೇಗೌಡ ಸೇರಿ ‘ತಿಥಿ’ಗೆ ದುಡಿದಿದ್ದೇವೆ. ನಮ್ಮಿಬ್ಬರ ಸ್ನೇಹ ಚೆನ್ನಾಗಿದೆ.

* ಕನ್ನಡ ಸಿನಿಮಾಗಳ ಸದ್ಯದ ಟ್ರೆಂಡ್ ಬಗ್ಗೆ?
ನಿಜ ಹೇಳಬೇಕೆಂದರೆ ಈ ಪ್ರಶ್ನೆಗೆ ಉತ್ತರಿಸಲು ನಾನು ಸರಿಯಾದ ವ್ಯಕ್ತಿ ಅಲ್ಲ. ‘ತಿಥಿ’ ಆರಂಭವಾದಾಗಿನಿಂದಲೂ ಬೇರೆ ಸಿನಿಮಾ ನೋಡುವ ಅವಕಾಶವೇ ಆಗಿಲ್ಲ. ನಮ್ಮ ತಂಡ ಚಿಕ್ಕದು. ಅನೇಕ ಕೆಲಸಗಳ ನಡುವೆ ಬಿಡುವು ಸಿಕ್ಕಿಲ್ಲ. ‘ತಿಥಿ’ ಬಿಡುಗಡೆ ನಂತರ ಸಿನಿಮಾ ನೋಡಬಹುದು.

ಡಿಜಿಟಲ್ ತಂತ್ರಜ್ಞಾನದಿಂದಾಗಿ ಸಿನಿಮಾಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ಕಥೆಗಳು ಬರುತ್ತಿವೆ. ನಿರ್ಮಾಪಕರ ಹಿಡಿತ ಕಡಿಮೆ ಆದಂತೆ ಕಡಿಮೆ ಬಜೆಟ್‌ನಲ್ಲೂ ಒಳ್ಳೆಯ ಸಿನಿಮಾ ಮಾಡಬಹುದು. ಈಗ ಕಮರ್ಷಿಯಲ್ ಸಿನಿಮಾಗಳೇ ಹೆಚ್ಚು ಬರುತ್ತಿವೆ. ಕಮರ್ಷಿಯಲ್ ಮತ್ತು ವಸ್ತು ಆಧರಿತ ಸಿನಿಮಾಗಳಲ್ಲಿ ಸಮತೋಲನ ಇರಬೇಕು.

* ಸಿನಿಮಾಗಳ ಡಬ್ಬಿಂಗ್‌ ಕುರಿತ ಚರ್ಚೆ ಚಾಲ್ತಿಯಲ್ಲಿದೆ. ಡಬ್ಬಿಂಗ್ ಕುರಿತು ನಿಮ್ಮ ಅನಿಸಿಕೆ ಏನು?
ಡಬ್ಬಿಂಗ್ ನನಗೆ ಇಷ್ಟವಿಲ್ಲ. ನಾನು ಸಬ್ ಟೈಟಲ್ ಇಷ್ಟಪಡುತ್ತೇನೆ. ಸಬ್ ಟೈಟಲ್ ಸಂಸ್ಕೃತಿ ನಮ್ಮಲ್ಲಿ ಇಲ್ಲ. ಅದನ್ನು ಬೆಳೆಸುವ ಆಸೆ ನನಗಿದೆ. ಆ ರೂಢಿ ಬಂದರೆ ವಿಶ್ವದ ಎಲ್ಲ ಸಿನಿಮಾಗಳನ್ನು ನೋಡಬಹುದು. ಪ್ರತಿ ಸಿನಿಮಾದಲ್ಲೂ ಅದರದೇ ಆದ ಸ್ವಂತಿಕೆ ಇರುತ್ತದೆ. ಹೈಬ್ರೀಡ್‌ಗಿಂತ ಸ್ವಂತಿಕೆಯನ್ನೇ ನಾನು ಮೆಚ್ಚುತ್ತೇನೆ.

ಒಬ್ಬ ನಿರ್ದೇಶಕ ಸಿನಿಮಾದಲ್ಲಿ ಕಲಾವಿದರ ಅಭಿನಯವನ್ನಷ್ಟೇ ನಿರ್ದೇಶಿಸುವುದಿಲ್ಲ. ಅವರ ಧ್ವನಿಯನ್ನೂ ನಿರ್ದೇಶಿಸುತ್ತಿರುತ್ತಾನೆ. ಆ ಧ್ವನಿಯನ್ನು ಇನ್ನೊಬ್ಬನಿಂದ ಹೊರಡಿಸುವುದು ನಕಲು ಮಾಡಿದಂತೆ. ಉದಾಹರಣೆಗೆ, ‘ತಿಥಿ’ಯಲ್ಲಿ ಗಡ್ಡಪ್ಪನ ಪಾತ್ರ ತುಂಬಾ ವಿಭಿನ್ನವಾದದ್ದು. ಅವರ ಮುಖದಷ್ಟೇ ಧ್ವನಿಯೂ ವಿಶೇಷ. ಈ ಪಾತ್ರವನ್ನು ನಾನು ಹೇಗೆ ಡಬ್ ಮಾಡಿಸಲಿ?

* ಮುಂದಿನ ಸಿನಿಮಾ?
ಸುಮಾರು ವಿಚಾರಗಳಿವೆ. ಈಗಲೇ ಏನೂ ನಿರ್ಧಾರ ಮಾಡುವುದಿಲ್ಲ. ಒಂದು ನಿರ್ಧಾರ ಮಾಡಿದರೆ ಗಮನ ಪೂರ್ಣ ಅದರ ಮೇಲೆಯೇ ಇರುತ್ತದೆ. ಆಗ ‘ತಿಥಿ’ ಮೇಲಿನ ಗಮನ ಕಡಿಮೆ ಆಗುತ್ತದೆ. ‘ತಿಥಿ’ಯಲ್ಲಿ ಹೇಗೆ ಮೂಲ ಗುಣಗಳನ್ನು ದುಡಿಸಿಕೊಂಡಿದ್ದೇವೋ ಹಾಗೇ ಮುಂದಿನ ಸಿನಿಮಾವೂ ಇರುತ್ತದೆ. ಆದರೆ ‘ತಿಥಿ’ಗಿಂತ ಭಿನ್ನವಾಗಿರುತ್ತದೆ. ಮುಂದಿನ ಸಿನಿಮಾದಲ್ಲೂ ಬಹುತೇಕ ನನ್ನ ಹಳೆಯ ತಾಂತ್ರಿಕ ತಂಡವೇ ದುಡಿಯುತ್ತದೆ. ಸಿನಿಮಾದ ಗುಣವನ್ನು ಆಧರಿಸಿ ಬದಲಾಗುವ ಸಾಧ್ಯತೆಯೂ ಇದೆ.

* ಕಮರ್ಷಿಯಲ್ ಸಿನಿಮಾ ಮಾಡಬೇಕು ಎನ್ನಿಸುತ್ತಿಲ್ಲವೇ?
ಇಲ್ಲ. ‘ತಿಥಿ’ಯನ್ನೂ ಕಮರ್ಷಿಯಲ್ ಆಗಿ ಮಾಡಬೇಕು ಎನ್ನಿಸಿಲ್ಲ. ಮುಂದೆ ಮಾಡುವ ಸಿನಿಮಾಗಳೂ ಹಾಗೆ ಇರುವುದಿಲ್ಲ. ಸಿನಿಮಾ ನನಗೆ ವ್ಯವಹಾರವಲ್ಲ. ಅದೊಂದು ಕಲೆ.

ಆದರೆ ಇಂಥ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲೂ ಸದ್ದು ಮಾಡಿದರೆ ಅದು ಬೋನಸ್. ಆಗ ಮುಂದಿನ ಸಿನಿಮಾ ಮಾಡುವುದು ಸುಲಭವಾಗುತ್ತದೆ. ಸಿನಿಮಾ ಮಾಡುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರ ವಹಿಸಬೇಕು.

ಸಿನಿಮಾಗಳಿಗೆ ಬಜೆಟ್ ಹೆಚ್ಚಾದಂತೆ ಹೆಚ್ಚು ಕಮರ್ಷಿಯಲ್ ಅಂಶಗಳನ್ನು ತುರುಕಬೇಕಾಗುತ್ತದೆ. ಆಗ ನಿರ್ಮಾಪಕನ ಕೈಗೊಂಬೆಯಾಗುವ ನಿರ್ದೇಶಕ ತನ್ನ ಸೃಜನಶೀಲತೆಯನ್ನೇ ಕಳೆದುಕೊಳ್ಳುತ್ತಾನೆ. ಒಳ್ಳೆಯ ಸಿನಿಮಾ ಮಾಡಿದರೆ ಚಿತ್ರೋತ್ಸವಗಳಿಂದಲೇ ಹೆಸರು–ಹಣ ಎರಡನ್ನೂ ಮಾಡಬಹುದು.

‘ವೆರೈಟಿ’ ಬಣ್ಣನೆ
ಮೊನ್ನೆ ಸ್ಯಾನ್‌ಫ್ರಾನ್ಸಿಸ್ಕೊ ಚಿತ್ರೋತ್ಸವದಲ್ಲಿ ‘ತಿಥಿ’ ಪ್ರದರ್ಶನ ಕಂಡಿದೆ. ಅಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆ ಸ್ಪರ್ಧೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ವಿಶೇಷವೆಂದರೆ, ‘ವೆರೈಟಿ’ ಎಂಬ ಸಿನಿಮಾ ನಿಯತಕಾಲಿಕೆಯು ‘ತಿಥಿ’ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದಿದೆ. ಅದು ಸಿನಿಮಾಕ್ಕೆ ಸಂಬಂಧಿಸಿದ ಅತ್ಯುತ್ತಮ ನಿಯತಕಾಲಿಕೆಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT