ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ ನನ್ನ ನಾಯಕತ್ವದಲ್ಲಿ ಚುನಾವಣೆ ನಡೆದರೆ ಆಶೀರ್ವದಿಸಿ’

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದೆ ನನ್ನ ನಾಯಕ­ತ್ವದಲ್ಲಿ ಚುನಾವಣೆ ನಡೆದರೆ ಎಲ್ಲರೂ ನನಗೆ ಬೆಂಬಲ ನೀಡುವ ಮೂಲಕ ನನ್ನನ್ನು ಆಶೀರ್ವದಿಸಿ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ರಾಜ್ಯ ಒಕ್ಕಲಿಗರ ಸಂಘವು ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ನಾಡಪ್ರಭು ಕೆಂಪೇ­ಗೌಡರ ಜಯಂತ್ಯುತ್ಸವ ಹಾಗೂ ವಿಚಾರ ಸಂಕಿರಣ’ ಉದ್ಘಾಟನಾ ಕಾರ್ಯಕ್ರಮ­ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ನಿಮ್ಮ ಜತೆಗೆ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತು ನೀಡಿದ್ದೇನೆ. ಹೀಗಾಗಿ ಸದ್ಯ ಅಂತಹ ಯಾವುದೇ ಚಟವಟಿಕೆಗೆ ಕೈ ಹಾಕುವುದಿಲ್ಲ. ಮುಂದೆ ಅವಕಾಶ ತಾನಾಗೇ ಒಲಿದು ಬರಬಹುದು. ನನ್ನನ್ನು  ಸಚಿವ ಸಂಪುಟದಲ್ಲಿ ಒಕ್ಕಲಿಗರ ಪ್ರತಿನಿಧಿ­ಯಾಗಿ ಕಳುಹಿಸಿದ್ದೀರಿ. ಮುಂದೆಯೂ ನಿಮ್ಮ ಸಂಪೂರ್ಣ ಬೆಂಬಲ ನೀಡಿ’ ಎಂದು ಹೇಳಿದರು.

‘ಕುರ್ಚಿಗಾಗಿ ನಾವೆಲ್ಲ ಹೊಡೆದಾಡು­ತ್ತಿದ್ದೇವೆ. ಆದರೆ, ಇಂದಿನ ಹುಡುಗರಿಗೆ ಕುರ್ಚಿಯ ಮಹಿಮೆ ಮತ್ತು ಬೆಲೆ ತಿಳಿದಿಲ್ಲ. ಖಾಲಿ ಕುರ್ಚಿ ಇದ್ದರೂ ಕುಳಿತು­ಕೊಳ್ಳುತ್ತಿಲ್ಲ’ ಎಂದು ಸಭಾಂಗಣದಲ್ಲಿ ನಿಂತವರ ಕುರಿತು ಚಟಾಕಿ ಹಾರಿಸಿದರು.

‘ಕುರ್ಚಿಗಾಗಿ ಇಂದು ಅಪ್ಪ– ಮಗ, ಭಾವ– ಭಾಮೈದ, ಮಾವ– ಅಳಿಯ ಹೀಗೆ ಎಲ್ಲರೂ ಹೊಡೆದಾಡುವವರೇ. ಕುರ್ಚಿಯ ಮಹತ್ವದ ತಿಳಿಯಬೇಕೆಂದರೆ ನಮ್ಮನ್ನು ಕೇಳಿ’ ಎಂದರು.

‘ಲೋಕಸಭಾ ಚುನಾವಣೆ ಮುಗಿ­ದಿದೆ. ಈಗಲಾದರೂ ಒಕ್ಕಲಿಗ ಜನಾಂಗ­ದವರು ಒಗ್ಗಟ್ಟಾಗಿ ಜನಾಂಗದ ಏಳಿಗೆಗೆ ಶ್ರಮಿಸಬೇಕು. ಗುಂಡೂರಾವ್‌ ಕಾಲ­ದಲ್ಲಿ ಸಂಘದ ವೈದ್ಯಕೀಯ ಕಾಲೇಜು ಸ್ಥಾಪನೆಯಾಯಿತು. ಅಂದಿನಿಂದ ಈವರೆಗೂ ಅಂತಹ ಹೇಳಿಕೊಳ್ಳುವಂತಹ ಸಾಧನೆಯೇನೂ ಕಾಲೇಜಿನಲ್ಲಿ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈಗ ನಗರದಲ್ಲಿ ಹೊಸಬರು ಹೊಸ ಹೊಸ ಸಂಸ್ಥೆಗಳನ್ನು ಸ್ಥಾಪನೆ ಮಾಡುತ್ತಿ­ದ್ದಾರೆ. ಮುಂಬರುವ ಐದು ವರ್ಷದಲ್ಲಿ ಸಂಘದಿಂದ ಇನ್ನಷ್ಟು ವೈದ್ಯಕೀಯ ಕಾಲೇಜು ಸ್ಥಾಪಿಸಿ, ಕೇಂದ್ರ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಿ. ಈಗಲೇ ಸ್ಥಾಪನೆ ಮಾಡಲು ಆಗದಿದ್ದರೂ, ಅದಕ್ಕೆ ಬೇಕಾದ ಭೂಮಿಯನ್ನಾದರೂ ಖರೀ­ದಿಸಿ ಇಡಿ. ಅದಕ್ಕೆ ಬೇಕಾದ ಸಹಕಾರ­ವನ್ನು ನಾನು ನೀಡುತ್ತೇನೆ’ ಎಂದು ಹೇಳಿದರು.

‘ನಮ್ಮ ಜನಾಂಗದ ಹೆಣ್ಣುಮಗಳು ಚುನಾವಣೆಗೆ ಸ್ಪರ್ಧಿಸಿದಾಗ ಅವರಿಗೆ ನಮ್ಮವರು ಮತ್ತು ಬೇರೆಯವರು ಚಿತ್ರ ಹಿಂಸೆ ನೀಡಿದರು. ಫಲಿತಾಂಶ ಮುಖ್ಯ­ವಲ್ಲ. ಆದರೆ, ಆ ಹೆಣ್ಣುಮಗಳ ಜತೆ ನಡೆದುಕೊಂಡ ರೀತಿ ಸರಿಯಿಲ್ಲ’ ಎಂದು ಸಂಸದೆ ರಮ್ಯಾ ಹೆಸರು ಪ್ರಸ್ತಾಪಿಸದೆ ಅಸಮಾಧಾನ ವ್ಯಕ್ತಪಡಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಕೆಂಪೇಗೌಡರು ಒಕ್ಕಲಿಗರಿ­ಗಾಗಿ ಮಾತ್ರ ಬೆಂಗಳೂರನ್ನು ಕಟ್ಟಲಿಲ್ಲ. ಒಂದು ಜಾತಿಯ ನಾಶ ಅಥವಾ ಇನ್ನೊಂದು ಜಾತಿಯ ಉಳಿವಿನಿಂದ ಸಮಾಜ ಉದ್ಧಾರವಾಗುವುದಿಲ್ಲ. ಎಲ್ಲ ಜಾತಿಗಳಿಗೂ, ಎಲ್ಲ ಕಸುಬುಗಳಿಗೂ ಮಾನ್ಯತೆ ದೊರೆತಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ’ ಎಂದರು.

‘ಕುವೆಂಪು ಒಕ್ಕಲಿಗರಾಗಿ ಹುಟ್ಟಿದ್ದರೂ ವಿಶ್ವಮಾನವರಾಗಿ ಬೆಳೆದರು. ಎಲ್ಲರೂ ಒಟ್ಟಾಗಿ ಸದೃಢ ಸಮಾಜವನ್ನು ಕಟ್ಟಬೇಕಾಗಿದೆ’ ಎಂದು ಹೇಳಿದರು.

‘ವಿಶ್ವಮಾನವರಾಗುವ ಅಧಿಕಾರಿಗಳು’
ಅಧಿಕಾರಿಗಳನ್ನು ನಾವು ಒಳ್ಳೆಯ ಹುದ್ದೆಗೆ ನಿಯೋಜನೆ ಮಾಡುತ್ತೇವೆ. ಆದರೆ, ಅಧಿಕಾರಿ­ಗಳು ಕುರ್ಚಿಯ ಮೇಲೆ ಕುಳಿತರೆ ವಿಶ್ವಮಾನವರಾಗಿ ಬಿಡುತ್ತಾರೆ. ಕೈಯಲ್ಲಿ ಕಾಗದ, ಪೆನ್ನು ಸಿಕ್ಕ ಮೇಲೆ ಇಲ್ಲಸಲ್ಲದ ಕಾನೂನು ಮಾತಾಡುತ್ತಾರೆ. ಅಂಥ ಅಧಿಕಾರಿ­ಗಳ ಹೆಸರು ಹೇಳಲು ಇಷ್ಟಪಡು­ವುದಿಲ್ಲ. ಅವರವರ ಜನಾಂಗಕ್ಕೆ ಅಧಿಕಾರಿಗಳು ಸಹಾಯ ಮಾಡಬೇಕಾದ್ದು ಅಗತ್ಯ.

–ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT