ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2ಎ ಪ್ರವರ್ಗದಡಿ ಗಾಣಿಗರಿಗೆ ಮೀಸಲಾತಿ’

ಗಾಣಿಗ ಪೀಠದ ಪಟ್ಟಾಧಿಕಾರ ಮಹೋತ್ಸವದಲ್ಲಿ ಸಚಿವ ಸಿದ್ದೇಶ್ವರ್‌
Last Updated 29 ಜನವರಿ 2015, 6:05 IST
ಅಕ್ಷರ ಗಾತ್ರ

ವಿಜಯಪುರ: ಗಾಣಿಗ ಸಮಾಜಕ್ಕೆ ರಾಜ್ಯದ ಎಲ್ಲ ಕಡೆ  2 ಎ ಮೀಸಲಾತಿ ಲಭ್ಯವಾಗುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ರಾಜ್ಯ ಖಾತೆ ಸಚಿವ ಜಿ.ಎಂ.ಸಿದ್ದೆೇಶ್ವರ್ ಭರವಸೆ ನೀಡಿದರು.

ನಗರದ ವನಶ್ರೀ ಸಂಸ್ಥಾನ ಮಠದ ಆವರಣದಲ್ಲಿ ಬುಧವಾರ ನಡೆದ ರಾಜ್ಯದ ಪ್ರಥಮ ಗಾಣಿಗ ಪೀಠದ ಮೊದಲ ಪೀಠಾಧಿಪತಿ ಜಯಬಸವ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಗಾಣಿಗ ಸಮುದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಸಮಾಜದ ಅಭಿವೃದ್ಧಿಯಲ್ಲಿ ಗಾಣಿಗ ಸಮುದಾಯದ ಪಾತ್ರ ಅನನ್ಯ. ಹೀಗಾಗಿ ಗಾಣಿಗ ಸಮುದಾಯಕ್ಕೆ ವಿಶೇಷ ಸೌಲಭ್ಯಗಳನ್ನು ನೀಡುವ ಮೂಲಕ ಶೈಕ್ಷಣಿಕ, ಸಾಮಾಜಿಕವಾಗಿ ಇನ್ನಷ್ಟು ಪ್ರಗತಿ ಪಥದತ್ತ ಸಾಗಲು ಸಹಕಾರ ನೀಡಬೇಕು ಎಂದರು.
ಯೋಗಗುರು ವಚನಾನಂದ ಸ್ವಾಮೀಜಿ ಮಾತನಾಡಿ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಯೋಗಶಿಬಿರ ಯಶಸ್ವಿಯಾಗಿದೆ.

ಪ್ರಾಣಾಯಾಮ, ವ್ಯಕ್ತಿತ್ವ ವಿಕಸನ, ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿತ್ತು. ಜಯಬಸವ ಸ್ವಾಮೀಜಿ ಶಿಬಿರದುದ್ದಕ್ಕೂ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದು ಮತ್ತಷ್ಟು ಹುರುಪು ನೀಡಿತು ಎಂದರು. ತಾವು ಯೋಗಗುರು ಎನಿಸಿಕೊಳ್ಳಲು ಪ್ರಮುಖವಾಗಿ ಇಲಕಲ್ಲದ ಗುರುಮಹಾಂತ ಸ್ವಾಮೀಜಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಾರಣ. ಸಾಧನೆಗಾಗಿ ಹೆಜ್ಜೆ ಹಾಕುತ್ತಿರುವಾಗ ಮಾರ್ಗದುದ್ದಕ್ಕೂ ಬುತ್ತಿ ಕಟ್ಟಿಕೊಟ್ಟ ಮಹಾನುಭಾವರು ಎಂದರು.

ಮಾಜಿ ಶಾಸಕ ಸೈಟ್ ಬಾಬು ಮಾತನಾಡಿ ವನಶ್ರೀ ಸಂಸ್ಥಾನ ಮಠ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಮಾದರಿಯಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಹಾಗೂ ಊಟದ ಸೌಲಭ್ಯ ಉಚಿತವಾಗಿ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ವಿಶೇಷ ಬ್ಯಾಂಕ್ ಸ್ಥಾಪಿಸಿ ಬಡ್ಡಿ ಹಣದಲ್ಲಿ ಸಹಾಯ ಧನ ಕಲ್ಪಿಸಲಾಗುವುದು. ಈ ಕಾರ್ಯಕ್ಕಾಗಿ ತಮ್ಮ ಆಸ್ತಿಯ ಒಂದು ಭಾಗ ಮೀಸಲಿಡುವುದಾಗಿ ತಿಳಿಸಿದರು.

ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ಚಿತ್ರದುರ್ಗದ ಮುರುಘಾ ಶರಣರು, ಗದಗ–ಡಂಬಳದ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ, ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಇಲಕಲ್ಲದ ವಿಜಯ ಮಹಾಂತ ಸ್ವಾಮೀಜಿ, ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿ, ಬೆಳಗಾವಿಯ ಸಿದ್ಧರಾಮ ಸ್ವಾಮೀಜಿ ಸೇರಿಂದತೆ ನಾಡಿನ ನಾನಾ ಭಾಗಗಳ ಪ್ರಮುಖ ಮಠಾಧೀಶರು ಪಟ್ಟಾಧಿಕಾರ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT