ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘21’ರ ಮಹಾತ್ಮೆ!

ಪಂಚರಂಗಿ
Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಸಂಕೇತ ಹಾಗೂ ಸಂಖ್ಯೆಯ ಆಟಗಳು ಜೋರಾಗಿವೆ. ‘6–5=2’, ‘101 ನಾಟ್‌ಔಟ್’, ‘143’, ‘54321’, ‘123’ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಇದರಲ್ಲಿ ಬಿಡುಗಡೆಯಾಗಿ ಹೆಸರು ಮಾಡಿದ ಚಿತ್ರಗಳು, ಇನ್ನೂ ಬಿಡುಗಡೆಯಾಗಬೇಕಿರುವ ಚಿತ್ರಗಳು ಎಲ್ಲವೂ ಸೇರಿವೆ. ಸದ್ಯ ಈ ಪಟ್ಟಿಗೆ ಹೊಸ ಸೇರ್ಪಡೆ ‘21’. ‘21’ ಚಿತ್ರ ಸದ್ಯದಲ್ಲೇ ಬಿಡುಗಡೆಯ ಭಾಗ್ಯ ಕಾಣುವ ಹಂತದಲ್ಲಿದೆ.

ಲೋಹಿತ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘21’ ಚಿತ್ರದ ಕಥೆ ದರೋಡೆ! ವಿದೇಶದಿಂದ ಭಾರತಕ್ಕೆ ವಾಪಸಾಗುವ ಶ್ರೀಮಂತ – ವಿವಾಹಿತ ಮಹಿಳೆಯೊಬ್ಬಳ ಮನೆಯಲ್ಲಿ ನಡೆಯುವ ಕಳ್ಳತನದ ಸುತ್ತ ಕಥೆ ಸುತ್ತಿಕೊಂಡಿದೆ. ‘ದರೋಡೆಕೋರರು ಇಪ್ಪತ್ತು ದಿನಗಳಲ್ಲಿ ಇಪ್ಪತ್ತು ಮನೆಗಳಿಗೆ ಯಶಸ್ವಿಯಾಗಿ ಕನ್ನ ಹಾಕಿರುತ್ತಾರೆ. ಆದರೆ ಇಪ್ಪತ್ತೊಂದನೇ ದಿನ ಇಪ್ಪತ್ತೊಂದನೇ ಮನೆಗೆ ಕನ್ನ ಹಾಕುವಾಗ ಪೊಲೀಸರು ಇವರನ್ನು ಬೆನ್ನು ಹತ್ತುತ್ತಾರೆ. ಮುಂದೆ ನಡೆಯುವ ಕಳ್ಳ–ಪೊಲೀಸ್ ಆಟವನ್ನು ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ ನಿರ್ದೇಶಕರು.

ವಿದೇಶದಿಂದ ವಾಪಸಾಗುವ ನಾಯಕಿಯ ಪಾತ್ರದಲ್ಲಿ ಮಮತಾ ರಾವುತ್ ನಟಿಸಿದ್ದಾರೆ. ಈ ‘21’ಕ್ಕೂ ಹಾಗೂ ಮಮತಾಗೂ ಒಂದು ಸಂಬಂಧವಿದೆಯಂತೆ. ಮಮತಾ ಅವರ ಹುಟ್ಟಿದ ದಿನಾಂಕ 21; ಅವರ ಕಾರಿನ ಎಲ್ಲ ಸಂಖ್ಯೆಗಳನ್ನು ಸೇರಿಸಿದರೆ ಬರುವ ಮೊತ್ತವೂ 21. ಅವರಿಗೆ ಜೋಡಿಯಾಗಿ ಅರುಣ್ ಕಾಣಿಸಿಕೊಂಡಿದ್ದಾರೆ. ಪೂಜಾ ಚಿತ್ರದ ಮತ್ತೊಬ್ಬ ನಾಯಕಿಯಾಗಿ ರಂಜಿಸಲಿದ್ದಾರೆ.

ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಹರಿಕೃಷ್ಣ ಅವರ ಇಪ್ಪತ್ತು ವರ್ಷಗಳ ಚಿತ್ರ ನಿರ್ಮಾಣದ ಕನಸು ‘21’ರಿಂದ ಈಡೇರುತ್ತಿದೆ. ಇದಕ್ಕಾಗಿ ಅವರು ತಮ್ಮ ಉದ್ಯೋಗವನ್ನೇ ತ್ಯಜಿಸಿ ಬಂದಿದ್ದಾರೆ. ಕಳ್ಳರ ತಂಡದಲ್ಲಿ ರೂಪೇಶ್, ರಾಘವ್, ಪ್ರಶಾಂತ ಸಿದ್ದಿ ಮುಂತಾದವರು ಇದ್ದರೆ, ವಿಜಯ್ ಹಿರೇಗೌಡರ್, ಸುದರ್ಶನ್, ಅಚ್ಯುತ್‌ಕುಮಾರ್‌ ತಾರಾಬಳಗ ಚಿತ್ರದಲ್ಲಿದೆ.

‘21’ರ ಮತ್ತೊಂದು ವಿಶೇಷವೆಂದರೆ, ಇಪ್ಪತ್ತೊಂದು ದಿನಗಳಲ್ಲಿ ಚಿತ್ರೀಕರಣ ಮುಗಿಸಿರುವುದು. ಇಪ್ಪತ್ತೊಂದು ಗಂಟೆಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪೂರ್ಣಗೊಳಿಸುವ ಯೋಜನೆ ಹೊಂದಿರುವ ಚಿತ್ರತಂಡ, ನವೆಂಬರ್ 21ಕ್ಕೆ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆಸಿದೆ. ಒಟ್ಟಾರೆಯಾಗಿ ಇಂದಿನ ಕಾಲದಲ್ಲಿ ಸಾರ್ವಜನಿಕರು ಕಳ್ಳರಿಗಿಂತ ಚತುರರಾಗಿರಬೇಕು ಎಂದು ಹೇಳುವುದೇ ಚಿತ್ರದ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT