ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨ 18 ಸಾವಿರದಲ್ಲಿ ಬಡವರಿಗೆ ಮನೆ

ಡಿಸೆಂಬರ್ ವೇಳೆಗೆ ಉಚಿತವಾಗಿ 10 ಮನೆ ವಿತರಣೆ
Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪದೇ ಪದೇ ಭೂಕಂಪ ಹಾಗೂ ಪ್ರವಾಹ ಸಂಭವಿಸುವಂಥ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವರಿ­ಗಾಗಿ ಕಡಿಮೆ ವೆಚ್ಚದಲ್ಲಿ

ಸುರಕ್ಷಿತ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಉತ್ತರಾಖಂಡ­ದಲ್ಲಿ ನಡೆಸಿರುವ ಪ್ರಯೋಗ ಯಶಸ್ವಿ­ಯಾಗಿದೆ’ ಎಂದು ಯುವ ವಾಸ್ತುಶಿಲ್ಪಿ ಅಲೋಕ್‌ ಶೆಟ್ಟಿ ತಿಳಿಸಿದರು.

ಅಮೆರಿಕದ ‘ಟೈಮ್‌’ ನಿಯತಕಾಲಿಕೆ­ಯಿಂದ ‘ನಾಳಿನ ಯುವ ನಾಯಕ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ‘ಈ ಯೋಜನೆಗಾಗಿ ಸೂಕ್ಷ್ಮ ಸ್ಥಳಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಭೀಕರ ಪ್ರವಾಹಕ್ಕೆ ಒಳಗಾಗಿದ್ದ ಉತ್ತ­ರಾ­ಖಂಡದ ಹಳ್ಳಿಯೊಂದರಲ್ಲಿ ಈಗಾ­ಗಲೇ ಶಾಲೆ ನಿರ್ಮಿಸಿದ್ದೇವೆ. ಅಲ್ಲಿನ ಯಶಸ್ಸು ಮುಂದಿನ ಯೋಜನೆಗೆ ಪ್ರೇರಣೆ ನೀಡಿದೆ’ ಎಂದರು.

‘ಬಡವರು ಹಾಗೂ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವವರಿಗಾಗಿ ಕಡಿಮೆ ವೆಚ್ಚದಲ್ಲಿ 200 ಮನೆ ನಿರ್ಮಿ­ಸುವ ಯೋಜನೆ ಹೊಂದಿದ್ದೇನೆ. 2015ರ ಮೇನಲ್ಲಿ ಈ ಕಾರ್ಯ ಪೂರ್ಣ­ಗೊಳ್ಳಲಿದೆ. ₨ 18 ಸಾವಿರ ದಲ್ಲಿ ಮನೆ ನಿರ್ಮಿಸಿ­ಕೊಡಲಾಗು­ವುದು. ಕಡಿಮೆ ಸಮಯ­ದಲ್ಲಿ ಬಿದಿರು, ಮರ ಹಾಗೂ ಇನ್ನಿತರ ಸಾಮಗ್ರಿ ಉಪಯೋಗಿಸಿ ನಿರ್ಮಿಸಬ­ಹುದು. ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಈ ಯೋಜನೆಗೆ ಹೊಸ ಸ್ವರೂಪ ಕೊಡುವ ಉದ್ದೇಶವಿದೆ’ ಎಂದು ತಿಳಿಸಿದರು.

‘ಈ ವರ್ಷದ ಡಿಸೆಂಬರ್ ವೇಳೆಗೆ 10 ಮನೆಗಳನ್ನು ನಿರ್ಮಿಸಿ ಬಡವರಿಗೆ ಉಚಿತವಾಗಿ ನೀಡುವ ಯೋಜನೆ ಹೊಂದಿದ್ದೇನೆ. ಸ್ವಯಂ ಸೇವಾ ಸಂಸ್ಥೆ ‘ಪರಿಣಾಮ ಪ್ರತಿಷ್ಠಾನ’ ಮೂಲಕ 10 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆ ಕುಟುಂಬಗಳಿಗೆ ಈ ಮನೆಗಳನ್ನು ನೀಡಲಾಗುವುದು’ ಎಂದು ಹೇಳಿದರು.

ರೈಲಿನ ಬೋಗಿಯಲ್ಲಿ ಆಸ್ಪತ್ರೆ..!
‘ದೇಶದಲ್ಲಿನ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಎಂದರೆ ರೈಲು ಸಂಚಾರ. ಹಾಗಾಗಿ ರೈಲಿನ ಬೋಗಿಗಳ ಮೂಲ­ಕವೇ ಆಸ್ಪತ್ರೆ ತೆರೆಯುವ ಯೋಜನೆ ರೂಪಿಸಲಾಗುತ್ತಿದೆ. ಯಾವುದೇ ವ್ಯವಸ್ಥೆ ಇಲ್ಲದ ಹಳ್ಳಿಯ ಹಾದಿಯಲ್ಲಿ ತೆರಳುವ ರೈಲಿಗೆ ಆಸ್ಪತ್ರೆ ವ್ಯವಸ್ಥೆ ಇರುವ ಬೋಗಿಯನ್ನು ಜೋಡಿಸಲಾಗುವುದು. ಬೋಗಿಯನ್ನು ಆ ಹಳ್ಳಿಯಲ್ಲಿ ಬಿಟ್ಟು ರೈಲು ಮುಂದೆ ಹೋಗುತ್ತದೆ’.

‘ಹಳ್ಳಿಯ ಜನರು ಈ ಯೋಜನೆಯ ಸದುಪ­ಯೋಗ ಪಡೆಯಬಹುದು. ನಂತರ ಬರುವ ರೈಲಿಗೆ ಆ ಬೋಗಿ ಜೋಡಿಸ­ಲಾಗುವುದು. ಇದನ್ನು ಸಂಚಾರಿ ಆಸ್ಪತ್ರೆ ಎಂದೂ ಕರೆಯಬಹುದು. ಇದಕ್ಕೆ ನಾವಿಟ್ಟಿರುವ ಹೆಸರು ‘ಬ್ಲ್ಯಾಕ್‌ ಬಾಕ್ಸ್‌ ಥಿಯೇಟರ್‌’. ಈ ಯೋಜನೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದೇ ಯೋಜನೆಯಡಿ ಸಂಚಾರಿ ಶಾಲೆ­ಗಳನ್ನೂ ನಿರ್ಮಿಸಲು ಚಿಂತಿಸಲಾಗು­ತ್ತಿದೆ’ ಎಂದು ವಿವರಿಸಿದರು.


ಕುಂದಾಪುರ ಮೂಲದ ಅಲೋಕ್‌ ಅವರು ಬೆಂಗಳೂರಿನಲ್ಲಿ ‘ಭೂಮಿಪುತ್ರ’ ಎಂಬ ವಾಸ್ತು ವಿನ್ಯಾಸ ಸಂಸ್ಥೆ ನಡೆಸುತ್ತಿದ್ದಾರೆ. 10 ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಊಟದ ಸೌಲಭ್ಯ ಒದಗಿಸಿದ್ದಾರೆ. ‘ವಾಸ್ತು ವಿನ್ಯಾಸದಿಂದ ಬರುವ ಆದಾಯದಿಂದ ಈ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. 12ನೇ ತರಗತಿ ವರೆಗೆ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇವೆ.

ಜೊತೆಗೆ ಅವರ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲಾಗಿದೆ. ಅದಕ್ಕೆ ಪ್ರತಿ ವರ್ಷ ಹಣ ಜಮೆ ಮಾಡಲಾಗುತ್ತದೆ. ಈ ಹಣದಿಂದ ಅವರು ಶಿಕ್ಷಣ ಮುಂದುವರಿಸಬಹುದು. ಇಲ್ಲವೇ ಉದ್ಯೋಗದಲ್ಲಿ ತೊಡಗಬಹುದು’ ಎಂದು 28 ವರ್ಷ ವಯಸ್ಸಿನ ಅಲೋಕ್‌ ಹೇಳಿದರು. ‘ಈ ಕುಟುಂಬಗಳ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಚಿಕ್ಕಂದಿನಿಂದಲೂ ಈ ಬಗ್ಗೆ ನನ್ನ ಮನಸ್ಸು ತುಡಿಯುತ್ತಿತ್ತು. ಏಕೆಂದರೆ ಬದುಕು ಸಾಗಿಸಲು ಕೆಲವರಿಗೆ ಒಂದು ಸಣ್ಣ ಸೂರು ಕೂಡ ಇಲ್ಲ. ಹೀಗಾಗಿ ಅವರಿಗೆ ಸಹಾಯ ಮಾಡಲು ಮುಂದಾದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT