ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨ 2 ಲಕ್ಷ ಕೋಟಿ ಮೌಲ್ಯದ ಒತ್ತುವರಿ

ನುಂಗಣ್ಣರ ಪಾಲಾದ ಕೆರೆಭೂಮಿ: ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ
Last Updated 25 ಜುಲೈ 2014, 20:17 IST
ಅಕ್ಷರ ಗಾತ್ರ

ಬೆಂಗಳೂರು:  ‘ಕೆರೆಗಳೂ ಸೇರಿದಂತೆ ಬೆಂಗಳೂರು ನಗರದಲ್ಲಿ ಒಟ್ಟು ₨ 2 ಲಕ್ಷ ಕೋಟಿ ಮೌಲ್ಯದ ಭೂಮಿ ಒತ್ತುವರಿಯಾಗಿದ್ದು, ಈ ದೊಡ್ಡ ಹಗರ­ಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರ­ಸ್ವಾಮಿ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ನಗರಾಭಿವೃದ್ಧಿ ಇಲಾಖೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಭೂ ಒತ್ತುವರಿ ಪ್ರಕರ­ಣದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರೂ ಕೇಳಿ ಬಂದಿರುವುದರಿಂದ ರಾಜ್ಯದ ತನಿಖಾ ಸಂಸ್ಥೆಗಳಿಗೆ ಈ ಪ್ರಕರಣವನ್ನು ಯಾವ ಕಾರಣಕ್ಕೂ ಒಪ್ಪಿಸಬಾರದು’ ಎಂದು ಅವರು ಹೇಳಿದರು.

‘ನಿವೃತ್ತ ಐಎಎಸ್‌ ಅಧಿಕಾರಿ ಎನ್‌.ಲಕ್ಷ್ಮಣ­ರಾವ್‌ ನೇತೃತ್ವದ ಸಮಿತಿ 1985ರ ಜೂನ್‌ 26ರಂದು ನೀಡಿದ ವರದಿ ಪ್ರಕಾರ ಬೆಂಗಳೂರು ನಗ­ರದಲ್ಲಿ 390 ಕೆರೆಗಳಿದ್ದವು. ಈಗ ಅಷ್ಟೊಂದು ಕೆರೆಗಳನ್ನು ಎಲ್ಲಿ ಹುಡುಕುವುದು’ ಎಂದು ಅವರು ಪ್ರಶ್ನಿಸಿದರು. ‘ದಾಖಲೆಗಳಲ್ಲಿರುವ ಕೆರೆ­ಗಳ ವಿಸ್ತೀರ್ಣಕ್ಕೂ ವಾಸ್ತವ ಚಿತ್ರಣಕ್ಕೂ ಅಜ ಗಜಾಂ­ತರ. ಉದಾಹರಣೆಗೆ ಮತ್ತಿಕೆರೆ ಅಂಗಳ 41 ಹೆಕ್ಟೇರ್‌ ವಿಸ್ತಾರವಾಗಿದೆ ಎಂಬ ಮಾಹಿತಿ ದಾಖಲೆಯಲ್ಲಿದೆ. ಅಲ್ಲಿ ಖಾಸಗಿ ಬಡಾವಣೆ ನಿರ್ಮಾಣವಾಗಿದೆ’ ಎಂದು ತಿಳಿಸಿದರು.

‘ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶ­ದಲ್ಲಿ 40,950.46 ಎಕರೆ ಸರ್ಕಾರಿ ಭೂಮಿ ಒತ್ತುವರಿ­ಯಾಗಿದೆ ಎಂದು ಎ.ಟಿ. ರಾಮಸ್ವಾಮಿ ಸಮಿತಿ ವರದಿ ನೀಡಿದೆ. ಗೃಹ ನಿರ್ಮಾಣ ಸಹ­ಕಾರ ಸಂಘ­ಗಳು, ಖಾಸಗಿ ಡೆವಲಪರ್‌ಗಳು ಸರ್ಕಾರಿ ಭೂಮಿ­ಯನ್ನು ಒತ್ತುವರಿ ಮಾಡಿಕೊಂ­ಡಿ­­ರುವ ಕುರಿತು ವಿಶೇಷವಾಗಿ ಪ್ರಸ್ತಾಪ ಮಾಡ­ಲಾಗಿದೆ. ಆ ವರದಿಗೆ ಸಂಬಂಧಿಸಿದಂತೆ ಸರ್ಕಾರ ಇದುವರೆಗೆ ಏನು ಕ್ರಮ ಕೈಗೊಂಡಿದೆ’ ಎಂದು ಪ್ರಶ್ನಿಸಿದರು.

‘ಚಾಮರಾಜಪೇಟೆಯಲ್ಲಿ ಧಾರ್ಮಿಕ ದತ್ತಿ ಇಲಾ­ಖೆಯ ₨ 15 ಕೋಟಿ ಮೌಲ್ಯದ ಆಸ್ತಿ­ಯನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗ­ಳಿಗೆ ವರ್ಗಾಯಿಸಲಾಗಿದೆ. ರಾಷ್ಟ್ರೀಯ ಮಾನಸಿಕ ಮತ್ತು ನರರೋಗ ವಿಜ್ಞಾನ ಸಂಸ್ಥೆಯ 100 ಎಕರೆ ಜಾಗವನ್ನು ಬಿಬಿಎಂಪಿ ಅಧಿಕಾರಿ­ಗಳು ಖಾಸಗಿ ಬಿಲ್ಡರ್‌ಗಳ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.

‘ಬೈರಸಂದ್ರ ಕೆರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಮೇಲೂ ಬಿಬಿಎಂಪಿ ಆ ಕೆರೆಯ ಹೆಸರಿನಲ್ಲಿ ₨ 1.20 ಕೋಟಿ ಖರ್ಚು ಮಾಡಿದೆ. ಸಸಿಗಳನ್ನು ನೆಡಲಾಗಿದೆ ಎಂಬ ದಾಖಲೆ ಬಿಬಿಎಂಪಿಯಲ್ಲಿ ಇದ್ದರೂ ಕೆರೆ ದಂಡೆ ಮೇಲೆ ಹಳೆಯ ಮೂರು ಮರಗಳನ್ನು ಬಿಟ್ಟು ಬೇರೊಂ­ದಿಲ್ಲ. ಪಟ್ಟಂದೂರು ಅಗ್ರಹಾರ ಕೆರೆಯನ್ನೂ ಮುನಿ­ವೆಂಕಟಪ್ಪ ಎಂಬುವವರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಈ ಪ್ರಕರಣದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದುವರೆಗೆ 16,000 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿದೆ. ಅದರಲ್ಲಿ ಶೇ 25ರಷ್ಟು ಜಾಗವನ್ನು (4,000 ಎಕರೆ) ಸಾರ್ವ­ಜ­ನಿಕ ಉಪಯೋಗಕ್ಕೆ (ಸಿ.ಎ) ಮೀಸಲಿಡಬೇ­ಕಿತ್ತು. ಆದರೆ, ಸಾವಿರ ಎಕರೆ ಸಹ ಬಿಡಿಎ ಸ್ವಾಧೀನದಲ್ಲಿಲ್ಲ’ ಎಂದು ದೂರಿದರು.

‘ನಗರದಲ್ಲಿ 11 ಕೆರೆಗಳು ಒತ್ತುವರಿಯಾಗಿವೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗ­ಡಗಿ ಅವರೇ ಹೇಳಿಕೆ ನೀಡಿದ್ದಾರೆ. ಬೆಳ್ಳಂ­ದೂರು ಕೆರೆ 16.29 ಎಕರೆ, ವರ್ತೂರು ಕೆರೆ 10.75 ಎಕರೆ, ಹೊರಮಾವು ಕೆರೆ 17 ಎಕರೆ, ರಾಚೇನ­ಹಳ್ಳಿ ಕೆರೆ 11.10 ಎಕರೆ ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದರು. ಆ ಒತ್ತುವರಿ ತೆರವುಗೊಳಿಸಲು ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಕೇಳಿದರು.

‘ಕೆರೆಗಳ ಒತ್ತುವರಿ ತೀವ್ರ ಪ್ರಮಾಣದಲ್ಲಿ ನಡೆದಿದ್ದು, ಅಳಿದುಳಿದ ಕೆರೆಗಳು ಕೊಚ್ಚೆಗುಂ­ಡಿ­ಯಾಗಿವೆ. ಘನತ್ಯಾಜ್ಯವನ್ನೂ ತಂದು ಸುರಿಯ­ಲಾ­­ಗುತ್ತಿದೆ. ನೀರಿನ ಮೂಲಗಳನ್ನೆಲ್ಲ ನಗರ ಕಳೆದು­­ಕೊಳ್ಳುತ್ತಿದೆ. ಒಂದು ಅಂದಾಜಿನ ಪ್ರಕಾರ 1.50 ಲಕ್ಷ ಕೊಳವೆ ಬಾವಿಗಳನ್ನು ನಗರದಲ್ಲಿ ಕೊರೆ­ಯ­ಲಾಗಿದೆ. ಕಾವೇರಿಯಿಂದ 10 ಟಿಎಂಸಿ ಅಡಿ ಹೆಚ್ಚು­ವರಿ ನೀರನ್ನು ನಗರಕ್ಕೆ ಪೂರೈಸಲು ಸಚಿವ ಸಂಪುಟ ತೀರ್ಮಾನಿಸಿದೆ.  ಇದರಿಂದ 1 ಲಕ್ಷ ಎಕರೆ ಕೃಷಿಭೂಮಿಗೆ ನೀರಿನ ಕೊರತೆಯಾ­ಗಲಿದೆ’ ಎಂದು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

‘ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ನೂರಾರು ಕೋಟಿ ವ್ಯಯಿಸಲಾಗಿದ್ದು, ಎಲ್ಲಿಯೂ ಅಭಿವೃದ್ಧಿ ಕೆಲಸ ನಡೆದಿಲ್ಲ. ಹೂಳು ಹಾಗೇ ಇದ್ದು, ಅಂತ­ರ್ಜಲ ಮಟ್ಟ ಮತ್ತಷ್ಟು ಕುಸಿದಿದೆ. ಒತ್ತುವರಿ­ಯನ್ನೂ ತೆರವುಗೊಳಿಸಿಲ್ಲ. ಇದು ಬಿಹಾರದ ಮೇವು ಹಗ­ರಣಕ್ಕಿಂತ ದೊಡ್ಡ ಹಗರಣ, ಸಿಬಿಐ ತನಿಖೆ ನಡೆಸಲೇಬೇಕು’ ಎಂದು ಆಗ್ರಹಿಸಿದರು.

‘ಬೈರಸಂದ್ರ ಕೆರೆ­ಯನ್ನೇ ಇಂಡಿಯನ್‌ ಓವರ­ಸೀಸ್‌ ಬ್ಯಾಂಕ್‌ಗೆ ಒತ್ತೆ­ಯಿಟ್ಟು ರಿಯಲ್‌ ಎಸ್ಟೇಟ್‌ ಉದ್ಯಮಿ­ಗಳು ಸಾಲ ಪಡೆ­ದಿ­ದ್ದರು. ಸಾಲ ವಸೂ­ಲಾ­ತಿ­ಗಾಗಿ ಬ್ಯಾಂಕ್‌ ಕೂಡ ಕೆರೆಯನ್ನೇ ಹರಾಜಿಗೆ ಹಾಕಿತ್ತು. ₨ 6.70 ಕೋಟಿಗೆ ಕೆರೆ ಹರಾಜು ಆಗಿತ್ತು. ಕೆರೆಯನ್ನು ಉಳಿಸಿಕೊ­ಳ್ಳಲು ಸಾರ್ವಜನಿ­ಕರು ಹೈಕೋರ್ಟ್‌ ಮೆಟ್ಟಿಲು ಏರಬೇಕಾಯಿತು’.
- ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT