ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨ 23 ಲಕ್ಷ ಅವ್ಯವಹಾರ ಆರೋಪ

ವರಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ: ರೈತರ ಹೆಸರಲ್ಲಿ ಸಾಲ ಪಡೆದು ವಂಚನೆ
Last Updated 24 ಜುಲೈ 2015, 6:24 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ವರಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಹೆಸರಿನಲ್ಲಿ ಸಾಲ ಪಡೆದು  ₨ 23 ಲಕ್ಷ ವಂಚಿಸಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.

ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಆರ್.ಅಜ್ಜನಗೌಡ ಜುಲೈ 12 ರಂದು ನಿಧನ ಹೊಂದಿದ್ದು, ಅಧಿಕಾರ ವಹಿಸಿಕೊಂಡ ಜಿ.ಎಚ್. ಕೊಟ್ರೇಶ್, ಸಾಲ ಪಡೆದಿರುವ ರೈತರ ಹೆಸರು ಮತ್ತು ಸಾಲದ ಮೊತ್ತದ ಮಾಹಿತಿಯನ್ನು ಬುಧ ವಾರ ನೋಟಿಸ್‌ ಬೋರ್ಡಿನಲ್ಲಿ ಪ್ರಕಟಿಸಿ ದರು. ಸಹಕಾರ ಸಂಘದಲ್ಲಿ ಭಾರಿ ಅವ್ಯವ ಹಾರ ನಡೆದಿರುವುದು ಇದರಿಂದ ಬಯಲಾಗಿದೆ.

ಸಂಘದ ಕಚೇರಿ ಬಳಿ ಜಮಾಯಿಸಿದ ರೈತರು ತಮ್ಮ ಹೆಸರಿನಲ್ಲಿ ದುಪ್ಪಟ್ಟು ಸಾಲ ನಮೂದಾಗಿರುವುದನ್ನು ಕಂಡು ದಿಗ್ಭ್ರಮೆ ವ್ಯಕ್ತಪಡಿಸಿದರು. ‘ಪಡೆದ ಸಾಲಕ್ಕಷ್ಟೇ ನಾವು ಜವಾಬ್ದಾರರು. ನಮ್ಮ ಹೆಸರಲ್ಲಿ ಹೆಚ್ಚುವರಿ ಸಾಲ ಪಡೆದವರಿಂದಲೇ ಮರುಪಾವತಿ ಮಾಡಿಸಿಕೊಳ್ಳಬೇಕು’ ಎಂದು ರೈತರು ಆಗ್ರಹಿಸಿದರು.

ವರಕನಹಳ್ಳಿ, ಅಡವಿಮಲ್ಲನಕೆರೆ, ಅಡವಿಮಲ್ಲನಕೆರೆ ತಾಂಡಾ, ಗೋವಿಂದಪುರ ತಾಂಡಾ–1  ಮತ್ತು 2 ಸೇರಿ ಐದು ಹಳ್ಳಿಗಳ  ವ್ಯಾಪ್ತಿ ಹೊಂದಿರುವ ಇಲ್ಲಿನ ಸಹಕಾರ ಸಂಘದಿಂದ 2014ನೇ ಸಾಲಿನಲ್ಲಿ 327 ರೈತರಿಗೆ ₨1.72 ಕೋಟಿಯನ್ನು ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲವನ್ನಾಗಿ ನೀಡಲಾಗಿದೆ. ಈ ಪೈಕಿ 188 ರೈತರಿಗೆ ಮಂಜೂರಾದ ಸಾಲದ ಮೊತ್ತ ನೀಡದೇ ಕಡಿಮೆ ಹಣ ನೀಡಿ ವಂಚಿಸಲಾಗಿದೆ. ರೈತ ಎಚ್.ರಾಮಪ್ಪ ಅವರಿಗೆ  ₨55 ಸಾವಿರ ಸಾಲ ನೀಡಿ, ₨ 75 ಸಾವಿರ ಸಾಲದ ಹೊರೆ ಹೊರಿಸಲಾಗಿದೆ. ವರಕನಹಳ್ಳಿಯ ರೈತ ಶಾಂತಪ್ಪ ಯಾವುದೇ ಸಾಲ ಪಡೆಯದಿದ್ದರೂ ಸಾಲಗಾರರಾಗಿದ್ದಾರೆ’ ಎಂದು ಕನ್ನಿಹಳ್ಳಿ ಕೊಟ್ರೇಶ್, ರಾಘವೇಂದ್ರ ದೂರಿದರು.

‘ಸಂಘದ ಹಿಂದಿನ ಮುಖ್ಯ ಕಾರ್ಯನಿರ್ವಾಹಕರು ಸಹಕಾರ ಸಂಘ ದಲ್ಲಿ ನೈಜ ಸಾಲ ಮತ್ತು ಬೋಗಸ್ ಸಾಲದ ಎರಡು ಪ್ರತ್ಯೇಕ ಖಾತೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಅವ್ಯವಹಾರ ಬಯಲಿಗೆ ಬಾರದಂತೆ ನೋಡಿಕೊಂಡಿ ದ್ದಾರೆ. ಈ ಸಹಕಾರ ಸಂಘ ಬಿಡಿಸಿಸಿ ಬ್ಯಾಂಕಿನ ಅಧೀನ ಸಂಸ್ಥೆಯಾಗಿರು ವುದರಿಂದ ಬ್ಯಾಂಕಿಗೆ ನೈಜ ಖಾತೆಯ ಲೆಕ್ಕಪತ್ರ ಒಪ್ಪಿಸಿರುವುದಕ್ಕೆ ಕಚೇರಿಯಲ್ಲಿ ದೊರೆತ ಅಸಲಿ ಮತ್ತು ನಕಲಿ ರಸೀದಿ ಪುಸ್ತಕಗಳು ಸಾಕ್ಷಿಯಾಗಿವೆ’ ಎಂದು ಅವರು ಹೇಳಿದರು.

ಆತಂಕ ಬೇಡ: ‘ನಾನು ಸಹಕಾರ ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕನಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಅಸಲಿ ಮತ್ತು ನಕಲಿ ರಸೀದಿ ಪುಸ್ತಕ ದೊರೆತವು. ಅವನ್ನು ಪರಿಶೀಲಿಸಿದಾಗ ₨18.39 ಲಕ್ಷ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂತು. ಬಿಡಿಸಿಸಿ ಬ್ಯಾಂಕ್ ಮತ್ತು ಸೊಸೈಟಿಯ ಲೆಕ್ಕಪತ್ರಗಳು  ಸರಿಯಾಗಿ ಯೇ ಇವೆ. ಆದರೆ, ರೈತರಿಗೆ ಮುಂಜೂ ರಾದ ಸಾಲ ನೀಡುವಾಗ ಕಡಿಮೆ ಹಣ ನೀಡಿದ್ದಾರೆ. ಇಲ್ಲಿನ ಅವ್ಯವಹಾರ ಕುರಿತು ಬಿಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿಗೆ ವರದಿ ಸಲ್ಲಿಸಿದ್ದೇನೆ.

ಅವರು ಸಹಕಾರ ಇಲಾಖೆಯ ಉಪ ನಿಬಂಧಕರು ಹಾಗೂ ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೂ ತಿಳಿಸಿ ದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದ ರಿಂದ ರೈತರು ಆತಂಕಪಡುವ ಅಗತ್ಯ ವಿಲ್ಲ’ ಎಂದು ಕೊಟ್ರೇಶ್ ತಿಳಿಸಿದರು.

ನನಗೆ ಸಾಲ ನೀಡಿರುವುದು ಬರೀ ₨80 ಸಾವಿರ. ಆದರೆ ನೋಟಿಸ್ ಬೋರ್ಡಿನಲ್ಲಿರುವ ಪಟ್ಟಿಯಲ್ಲಿ  ₨1.40 ಲಕ್ಷ ಸಾಲ ನೀಡಲಾಗಿದೆ ಎಂದಿದೆ.  -ಪಾರ್ವತಮ್ಮ, ನಿರ್ದೇಶಕಿ, ಸಹಕಾರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT